ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮುಡುಗೇರಿಸಿಕೊಂಡ ಬಹುಮುಖ ಪ್ರತಿಭೆ ಎಮ್. ಡಿ. ಹರಿಕಾಂತ

“ಪ್ರತಿಭೆ”ಎಂಬುದು ಯಾರ ಸ್ವತ್ತಲ್ಲ. ಸತತ ಪರಿಶ್ರಮ, ಸತ್ವಪೂರ್ಣ ಕಾರ್ಯ ಮಾಡುತ್ತ, ತಾನು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ಯಾರು ಪ್ರಾಮಾಣಿಕವಾಗಿ,ಸೇವಾ ಮನೋಭಾವನೆಯಿಂದ ದುಡಿಯುತ್ತಾರೋ ಅಂತಹ ವ್ಯಕ್ತಿಗಳಿಗೆ ಆ ಕಾರ್ಯಕ್ಷೇತ್ರದಲ್ಲಿ ಗುರುತಿಸಿ ಗೌರವಿಸುತ್ತಾರೆ ಎನ್ನುವುದಕ್ಕೆ ನಮ್ಮೊಳಗಿನ ಎಂ.ಡಿ. ಹರಿಕಾಂತರವರೆ ಸಾಕ್ಷಿ. ತನ್ನ ಪ್ರತಿಭೆ ಪರಿಶ್ರಮಗಳ ಮೂಲಕ ಆ ಕ್ಷೇತ್ರ ವ್ಯಾಪ್ತಿಯ ವಿಸ್ತಾರದ ಭಾಗವಾಗಿ ಓರ್ವ ಶಿಕ್ಷಕ ತನ್ನ ಶಾಲಾ ಪರಿಸರದ ಜೊತೆ ಜೊತೆಯಲಿ ಸಾಮಾಜಿಕ ಚಿಂತನೆಯ ಮೂಲಕ ಬದುಕನ್ನು ಕಟ್ಟಿಕೊಂಡು ಸಮಾಜಮುಖಿ, ಸಮಾಜಸಖಿ ವ್ಯಕ್ತಿಯಾಗಿ ರಾಜ್ಯ ಕಂಡ ಅಪರೂಪದ ಸಾಧಕರಾಗಿರುತ್ತಾರೆ.

“ಮನೆಯನ್ನು ಗೆದ್ದು, ಮಾರನ್ನು ಗೆಲ್ಲು” ಎಂಬುದೊಂದು ಮಾತಿದೆ. ಆರ್ಥಿಕವಾಗಿ ತೀರಾ ಬಡ ಮೀನುಗಾರರ ಕುಟುಂಬದಲ್ಲಿ ಜನಿಸಿದ ಇವರಿಗೆ ಮನೆಯನ್ನು,ಮಾರನ್ನು ಗೆಲ್ಲುವುದು ಸವಾಲಿನ ಕೆಲಸವಾದರೂ,ತನ್ನ ಬೆವರಿನ ಪ್ರತಿಯೊಂದು ಹನಿಯನ್ನು ವಿನಯೋಗಿಸಿ ಸಾರ್ಥಕತೆ ಕಂಡವರು.

ಹೋರಾಟದಲ್ಲೆ ನಿಜವಾದ ಗೆಲುವು
ಹೋರಾಡಿ ಹೋರಾಡಿ ಸೋತರು ಚೆಲುವು- ದೇಸಾಯಿ ಯವರು ನಂಬಿದ ಬದುಕಿನಂತೆ, ಬದುಕಿನಲ್ಲಿ ಎದುರಾದ ಎಲ್ಲಾ ಸಮಸ್ಯೆಗಳನ್ನು, ಸವಾಲುಗಳನ್ನಾಗಿ ಸ್ವೀಕರಿಸಿ ಕಡಲಿನಲ್ಲಿರುವ ಮುತ್ತನ್ನು ಆರಿಸುವ ಬದಲು, ಮುತ್ತು ಬಿತ್ತುವ ಕನಸು ಕಂಡ ಸಾಮಾಜಿಕ ಹೋರಾಟಗಾರರು ಕೂಡ.

ಒಳಿತು ಮಾಡಿದರೆ ಅದು ಪುಣ್ಯಗಳ ರಾಶಿ
ಕೆಡಕು ಮಾಡಿದರೆ ಅದು ಪಾಪ ಬಿಕನಾಶಿ
ಯಾವ ದೇವರ ಪೂಜೆ ಮಾಡಿದರು ವ್ಯರ್ಥ
ಜನಸೇವೆಯೇ ಪೂಜೆ ಅದುವೇ ಪುರುಷಾರ್ಥ
ದಿನಕರರ ಈ ಚೌಪದಿ ಸಾಲು ಎಂ. ಡಿ. ಯವರ ಬದುಕಿಗೆ ಪ್ರೇರಣೆ ನೀಡಿ, ಶಾಲಾ ದಿನದ ಕರ್ತವ್ಯದ ಜೊತೆ ಜೊತೆಯಲಿ ಸಮಾಜಮುಖಿ ಚಿಂತನೆಯ ಮೂಲಕ “ಮೇಘಶ್ರೀ ಸೇವಾ ಸಂಸ್ಥೆ” ಪ್ರಾರಂಭಿಸಿ ಅನಾಥ, ಅಂಗವಿಕಲ ಹಾಗೂ ವಯೋವೃದ್ದರ ಸೇವೆ ಮಾಡುತ್ತ ಬದುಕಿನ ಸಾರ್ಥಕತೆಯ ಕಡೆಗೆ ಹೆಜ್ಜೆ ಹಾಕಿ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.

“ಯಾವ ಬಣ್ಣ ಬದಲಾದರೂ ಒಲುಮೆಯ ಬಣ್ಣ ಬದಲಾಗದು” ಎಂಬ ಹಿರಿಯರ ಮಾತಿನಂತೆ ಯಾವುದೇ ವ್ಯಕ್ತಿಯ ಬಣ್ಣ ಬದಲಾಗುವುದು ಭೌತಿಕ ಸ್ಥಿತಿಯಿಂದಲ್ಲ. ಆಡುವ ಮಾತಿನಿಂದಲ್ಲ. ಅಂತರಂಗದ ಅಪ್ಪಟ ಮಾನವೀಯ ಮೌಲ್ಯಗಳಿಂದ ಬದುಕು ಕಟ್ಟಿಕೊಂಡ ಎಂ.ಡಿ.ಯವರ ಒಲುಮೆಯ ಬಣ್ಣ ಬದಲಾಗಲೇ ಇಲ್ಲ .ದಿನದಿಂದ ದಿನಕ್ಕೆ ತನ್ನ ಅಂತರ್ ಶಕ್ತಿಯನ್ನು ಹೆಚ್ಚಿಸಿಕೊಂಡು ಇನ್ನೊಬ್ಬರಿಗೆ ಸ್ಪೂರ್ತಿ ತುಂಬುವ ಕೆಲಸಕ್ಕೆ ಪ್ರೇರಣೆಯಾದರು. ತಮ್ಮ ಪ್ರಭಾವಶಾಲಿ ವ್ಯಕ್ತಿತ್ವದ ಮೂಲಕ ಒಬ್ಬ ಸಮಾಜಮುಖಿ ಶಿಕ್ಷಕರಾಗಿ ಹೊರಹೊಮ್ಮಿದರು. ಬದುಕು ಮತ್ತು ಬರಹಗಳಲ್ಲಿ ಯಾವ ದ್ವಂದ್ವವಿಲ್ಲದೇ ಅವೆರಡರಲ್ಲಿ ಸಮಾನತೆ ಸಾಧಿಸಿಕೊಂಡ ಇವರು ಅನೇಕ ಶಿಷ್ಯ ಬಳಗವನ್ನು ಹೊಂದಿರುತ್ತಾರೆ.

“ಯಕ್ಷ ರತ್ನ ಶ್ರೀ ಜಲವಳ್ಳಿ ವೆಂಕಟೇಶರಾವ್”ಜೀವನ ಚರಿತ್ರೆ ಬರೆದ ಎಂ. ಡಿ. ಯವರು ಕಲಾವಿದರ ಬದುಕನ್ನು ಕೇವಲ ಆರಾಧನಾ ಭಾವದಿಂದ ನೋಡದೆ,ಅವರ ವಿಶಿಷ್ಟ ವ್ಯಕ್ತಿತ್ವವನ್ನು ಯಥಾವತ್ತಾಗಿ ದಾಖಲಿಸುವ ಕಾರ್ಯಕ್ಕೂ ಮುಂದಾಗಿರುತ್ತಾರೆ. ಕೃತಿಯ ಕುರಿತು ಡಾ. ಶ್ರೀಪಾದ ಶೆಟ್ಟಿಯವರು ಬರಹಗಾರ, ಜೀವನ ಪ್ರೀತಿಯ ಶಿಕ್ಷಕ ಹಾಗೂ ಸದಾ ಸ್ನೇಹದ ಎಂ. ಡಿ. ಹರಿಕಾಂತರವರು ರಚಿಸಿದ ಕೃತಿ ವಿವಿಧ ಆಯಾಮಗಳನ್ನು, ಅಪರೂಪದ ಛಾಯಾಚಿತ್ರ ಹಾಗೂ ದಾಖಲೆಗಳೊಂದಿಗೆ ಆಪ್ತವಾಗಿ ನಿರೂಪಿಸಿರುತ್ತಾರೆ ಎಂದು ಬಣ್ಣಿಸಿರುತ್ತಾರೆ. ಸಾಹಿತ್ಯ, ಸಮಾಜ ಸೇವೆ ಹಾಗೂ ರಂಗಭೂಮಿಯ ಸೇವೆಗಾಗಿ ಬಾಗಲಕೋಟೆ ಕನ್ನಡ ಪ್ರತಿಷ್ಠಾನ ಸಂಸ್ಥೆಯು ನೀಡಿದ ಸುವರ್ಣ ಕನ್ನಡಿಗ ಎಂಬ ರಾಜ್ಯ ಮಟ್ಟದ ಪ್ರಶಸ್ತಿ ಪಡೆದಾಗಲು ಆಗದ ಸಂತೋಷ ಈ ಕೃತಿ ಪ್ರಕಟಣೆಯಿಂದ ಆಗಿದೆ ಎಂದು ಸ್ವತಃ ಲೇಖಕರು ಹೇಳಿಕೊಳ್ಳುವಾಗ ಕಲೆ ಮತ್ತು ಕಲಾವಿದರ ಬಗ್ಗೆ ಅವರಿಗಿರುವ ಆಗಾದ ಪ್ರೀತಿ ವ್ಯಕ್ತವಾಗಿದೆ. ಶ್ರೀ ಕ್ಷೇತ್ರ ಜಿನ್ನೋಡ ಮಹಿಮೆ, ಶ್ರೀ ಕ್ಷೇತ್ರ ನೀಲ್ಕೋಡ ಎಂಬ ಯಕ್ಷಪ್ರಸಂಗ ರಚಿಸಿ ಪ್ರಸಂಗ ಕರ್ತರಾಗಿಯೂ ಇವರ ಕಲಾಕ್ಷೇತ್ರ ತುಂಬಾ ವಿಸ್ತಾರವಾಗಿದೆ.

ತಂದೆ ದುರ್ಗು ಹರಿಕಾಂತ, ತಾಯಿ ಮಾಸ್ತಿಯವರ ಮುದ್ದಿನ ಮಗನಾಗಿ ಮಂಕಿಯ ಹೊಸಹಿತ್ಲುವಿನಲ್ಲಿ ಬಡ ಮೀನುಗಾರರ ಕುಟುಂಬದಲ್ಲಿ 1965 ರಂದು ಜನಿಸಿದರು. ಆರ್ಥಿಕವಾಗಿ ಅಷ್ಟೊಂದು ಸಬಲರಾಗದಿದ್ದರೂ ಓದಬೇಕೆನ್ನುವ ಉತ್ಕಟ ಇಚ್ಚೆಯೇ ಸ್ನಾತಕೋತ್ತರ ಪದವಿಯವರೆಗೂ ಓದಿಸಿದೆ. 2003ರಲ್ಲಿ ಸುಳಗೇರಿಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ಮಕ್ಕಳ ಭವಿಷ್ಯತ್ತನ್ನು ರೂಪಿಸುವ ಶಿಕ್ಷಕರಾಗಿ, ಪ್ರಬುದ್ಧ ಯಕ್ಷಗಾನ ಕಲೆಯ ಆರಾಧಕರಾಗಿ, ಕಲಾವಿದರಾಗಿ, ಪ್ರಸಂಗ ಕತ೯ರಾಗಿ ಯಕ್ಷಲೋಕದ ಗಮನ ಸೆಳೆದರು.

ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪೌಷ್ಟಿಕ ಆಹಾರ ವಿಷಯದಲ್ಲಿ ದೆಹಲಿಯಲ್ಲಿ ನಡೆದ ಎನ್‌.ಜಿ.ಓ.ಗಳ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಹೊನ್ನಾವರದ ಚಿತ್ತಾರ ಶಾಲೆಗೆ ವರ್ಗವಾಗಿ ಬಂದಮೇಲೆ ಶಾಲೆಯ ಸಮಗ್ರ ಚಿತ್ರಣ ಬದಲಾಯಿಸಿರುತ್ತಾರೆ. ಪ್ರಸ್ತುತ ಸಹಾಯಕ ಶಿಕ್ಷಕರಾಗಿ ಬೆರಂಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿ ಬದುಕನ್ನು ಅತ್ಯಂತ ಪ್ರೀತಿಯಿಂದ ಪ್ರೀತಿಸುವುದರ ಮೂಲಕ ಶಾಲೆಯಲ್ಲಿ ನಡೆಯುವ ಅನೇಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.
ನೂರು ಜನ ನೂರು ತರ
ನಾನೇಕೆ ಇರಬೇಕು ನಿನ್ನತರ
ನಾನಿರುವೆ ನನ್ನ ತರ ನಿರಂತರ-
ಈ ಮಕ್ಕಳ ಕವನದ ಸಾಲಿನಂತೆ ಮುಗ್ಧ ಮನಸ್ಸಿನ ಅಪ್ಪಟ ಗ್ರಾಮೀಣ ಪ್ರತಿಭೆ ಎಂ.ಡಿ. ಹರಿಕಾಂತರು ಬದುಕಿನಲ್ಲಿ ನೊಂದು,ಬೆಂದು ಗಟ್ಟಿಯಾದವರು. ಸಾವಿರ ನೋವಿನ ಹೊಡೆತ ತಿಂದು ಸುಂದರ ಮೂರ್ತಿಯಾಗಿ ಬದುಕನ್ನು ಪ್ರೀತಿಸಿ ಗೆಲುವನ್ನು ಕಂಡವರು.ಬದುಕು ಒಂದೆಡೆ ನಿಂತ ನೀರಲ್ಲ. ಸದಾ ಹರಿಯುವ ನದಿಯಂತೆ. ಎಲ್ಲಾ ಏರಿಳಿತ ಕಂಡ ಗಟ್ಟಿ ಮನಸ್ಸಿನ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಮಾದರಿಯಾದ ಎಂ. ಡಿ. ಹರಿಕಾಂತರವರಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ನಲಿ ಕಲಿ ಶಿಕ್ಷಕ, ಹೊನ್ನಾವರ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*