ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದಶಕದ ಸಂಬ್ರಮದ ಉದ್ಘಾಟನೆ
ದಾಂಡೇಲಿ: ಒಂದು ಸರಕಾರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಅದರ ಹಿಂದೆ ಹಲವಾರು ರೀತಿಯ ಶ್ರಮ, ತ್ಯಾಗಗಳಿರುತ್ತವೆ. ಆ ನಿಟ್ಟಿನಲ್ಲಿ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೇವಲ ಹತ್ತು ವರ್ಷಗಳಲ್ಲಿ ಬೆಳೆದು ಬಂದ ರೀತಿ ಮಾತ್ರ ಹುಬ್ಬೇರಿಸುವಂತದ್ದು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಡಾ. ಎಸ್.ಎಂ. ತುವಾರ ನುಡಿದರು.
ಅವರು ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತನ್ನ ಹತ್ತು ವರ್ಷಗಳ ಕ್ರಮಿಸುವಿಕೆಯ ನೆನಪಿನಲ್ಲಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಶಕದ ಸಂಭ್ರಮ ,ದಶಮಾನೋತ್ಸವ ವರ್ಷಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇವತ್ತು ಸರ್ಕಾರಿ ಶಾಲೆ ಮತ್ತು ಸರಕಾರಿ ಕಾಲೇಜುಗಳು ಅಂದಾಗ ಅನೇಕರು ಮೂಗು ಮುರಿಯುತ್ತಾರೆ. ಆದರೆ ದಾಂಡೇಲಿ ಸರ್ಕಾರಿ ಪದವಿ ಕಾಲೇಜಿನಂತಹ ಕೆಲವು ಕಾಲೇಜುಗಳು ಯಾವ ಖಾಸಗಿ ಕಾಲೇಜುಗಳಿಗೂ ಕಡಿಮೆ ಇಲ್ಲದ ರೀತಿಯಲ್ಲಿ ತಮ್ಮದೇ ಆದ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬರುತ್ತಿವೆ. ದಾಂಡೇಲಿ ಕಾಲೇಜಿನ ಕಟ್ಟಡ, ಇಲ್ಲಿಯ ವಾತಾವರಣ, ಇಲ್ಲಿಯ ಔಷಧಿ ವನ, ಇಲ್ಲಿಯ ವಿದ್ಯಾರ್ಥಿಗಳ ಶಿಸ್ತು ಮತ್ತು ಸೌಜನ್ಯ, ಇಲ್ಲಿಯ ಉಪನ್ಯಾಸಕರುಗಳ ಪ್ರಬುದ್ಧತೆ ಎಲ್ಲವುಗಳನ್ನು ನೋಡಿದಾಗ ಬೆಂಗಳೂರಿನ ಕ್ರಿಸ್ತ ಕಾಲೇಜು ನೆನಪಾಗುತ್ತದೆ. ಡಾ. ವಕ್ಕುಂದರವರು ಒಬ್ಬ ಅನುಭವೀ ಶಿಕ್ಷಕರೆನ್ನುವ ಜೊತೆಗೆ ಒಬ್ಬ ಉತ್ತಮ ಆಡಳಿತಗಾರರು. ಸಂಘಟಕರು. ಇಂತಹವರ ಸಾರಥ್ಯದಲ್ಲಿ ಈ ಕಾಲೇಜು ಮುನ್ನಡೆಯುತ್ತಿರುವುದೇ ಒಂದು ಹೆಮ್ಮೆ. ಮಹಾನಗರಗಳಲ್ಲಿರುವ ಯಾವುದೇ ದೊಡ್ಡ ಕಾಲೇಜುಗಳಿಗೆ ಕಡಿಮೆ ಇಲ್ಲದ ರೀತಿಯಲ್ಲಿ ದಾಂಡೇಲಿಯ ಪದವಿ ಕಾಲೇಜು ನಡೆಯುತ್ತಿದೆ. ಈ ಕಾಲೇಜನ್ನು ಪ್ರಾರಂಭಿಸುವಲ್ಲಿ ಹಾಗೂ ಕೇವಲ 10 ವರ್ಷಗಳಲ್ಲಿ ಇದು ಒಂದು ಸುಸಜ್ಜಿತವಾದ ಕಟ್ಟಡಗಳ ಜೊತೆಗೆ ಎಲ್ಲ ಸೌಕರ್ಯಗಳನ್ನು ಪಡೆಯುವಲ್ಲಿ ಸಹಕರಿಸಿದ ಸ್ಥಳೀಯ ಶಾಸಕರು ಹಾಗೂ ಎಲ್ಲಾ ಆಡಳಿತ ಸಂದರ್ಭದಲ್ಲಿ ಅಭಿನಂದನಾರ್ಹರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಡಿ.. ಒಕ್ಕುಂದರವರು ಈ ಮಹಾವಿದ್ಯಾಲಯವು ಬಡ ಮಕ್ಮಳ ಉನ್ನತ ಶಿಕ್ಷಣದ ಕನಸನ್ನು ಈಡೇರಿಸುವ ಆರ್.ವಿ.ದೇಶಪಾಂಡೆಯವರ ಕನಸಿನ ಕೂಸಾಗಿದೆ. ಅವರು ಸರಕಾರದಿಂದ ತಂದ ಅನುದಾನ ಮತ್ತು ಕಂಪನಿಗಳಿಂದ ತಂದ ಸಿ.ಎಸ್.ಆರ್. ನಿಂದ ಎಲ್ಲಬಗೆಯ ಸೌಕರ್ಯಗಳನ್ನು ಕಾಲೇಜು ಪಡೆದುಕೊಂಡಿದ್ದು , ಕೇವಲ ಹತ್ತು ವರುಷಗಳಲ್ಲಿ ಉತ್ಕೃಷ್ಟವಾಗಿ ಬೆಳೆದು ನಿಂತಿದೆ ಎಂದ ಅವರು ಕಾಲೇಜಿನ ಪ್ರಗತಿಯಲ್ಲಿ ಸಹಕರಿಸಿದ ಎಲ್ಲಾ ಜನಪ್ರತಿನಿಧಿಗಳನ್ನು, ಸ್ಥಳೀಯ ಆಡಳಿತದವರನ್ನು ಹಾಗೂ ಸೇವೆ ಸಲ್ಲಿಸಿದ ಎಲ್ಲಾ ಪ್ರಾಧ್ಯಾಪಕರನ್ನು ಸಿಬ್ಬಂದಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ನಗರಸಭೆಯ ಮಾಜಿ ಅಧ್ಯಕ್ಷೆ ಸರಸ್ವತಿ ರಜಪೂತ , ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಪೌರಾಯುಕ್ತ ರಾಜಾರಾಮ ಪವಾರ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಯು. ಎಸ್. ಪಾಟೀಲ, ನಿವೃತ್ತ ಪ್ರಾಧ್ಯಾಪಕ ಎಸ್. ವಿ. ಚಿಂಚಣಿ ನಿವೃತ್ತ ಪ್ರಾಧ್ಯಾಪಕ ಡಾ. ಬಿ. ಎನ್. ಅಕ್ಕಿ ಮುಂತಾದವರು ಮಾತನಾಡಿ ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೇವಲ ಹತ್ತು ವರ್ಷಗಳಲ್ಲಿ ಬೆಳೆದು ನಿಂತ ಬಗೆಯ ಬಗ್ಗೆ ಮತ್ತು ಇಲ್ಲಿಯ ಗುಣಮಟ್ಟದ ಶಿಕ್ಷಣ, ಸಾಂಸ್ಕೃತಿಕ ವಾತಾವರಣದ ಕುರಿತು ಮಾತನಾಡಿದರು.
ಕಾವ್ಯ ಭಟ್ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ . ನಾಸೀರ್ ಅಹ್ಮದ್ ಜಂಗುಬಾಯಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ವಿನಯ ಜಿ. ನಾಯಕ ಪ್ರಾಸ್ತಾವಿಕ ಮಾತುಗಳ ನಾಡಿದರು. ಸುನಿತಾ ಜೋಗ ಸಂದೇಶವಾಚಿಸಿದರು. ಗೀತಾ ಕೋಟೆಣ್ಣವರ್ ಪರಿಚಯಿಸಿದರು. ಬಿ.ಎಸ್. ಹುಲಕಟ್ಟಿ ಬಿಡುಗಡೆಗೊಂಡ ಪುಸ್ತಕಗಳ ಪರಿಚಯ ಮಾಡಿದರು. ನಿಶಾಂತ್ ಶರೀಫ ವಂದಿಸಿದರು. ಡಾ. ಮಂಜುನಾಥ್ ಚಲವಾದಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ನಾಸಿರ್ ಅಹಮದ್ ಜಂಗುಬಾಯಿಯವರ ನಾಲ್ಕು ಪುಸ್ತಕಗಳನ್ನು ಕವಿವಿ ಕಾಲೇಜು ಅಭಿವೃದ್ದಿ ಸಮಿತಿಯ ನಿರ್ದೇಶಕರಾದ ಡಾ. ಎಸ್.ಎಂ. ತುವಾರ ಬಿಡುಗಡೆಗೊಳಿಸಿದರು.
ದಾಂಡೇಲಿ ಕಾಲೇಜು ರಾಜ್ಯಕ್ಕೆ ದ್ವಿತೀಯ
ಈ ವರ್ಷ ಶಾಶ್ವತ ಸಂಯೋಜನೆಗೆ ಅರ್ಜಿ ಸಲಿಸಿದ ರಾಜ್ಯದ 237 ಕಾಲೇಜುಗಳಲ್ಲಿ 76.32 ಅಂಕ ಪಡೆದ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಕಾಲೇಜಿನ ಸರ್ವಾಂಗೀಣ ಅಭಿವೃದ್ಧಿಯ ಹಾಗೂ ಗುಣಮಟ್ಟದ ಶಿಕ್ಷಣದ ದ್ಯೋತಕವಾಗಿದೆ. ಈ ಕಾಲೇಜು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ. -ಡಾ ಎಸ್. ಎಮ್. ತುವಾರ
ನಿರ್ದೇಶಕರು, ಕಾಲೇಜು ಅಭಿವೃದ್ಧಿ ಸಮಿತಿ ಕವಿವಿ ಧಾರವಾಡ
Be the first to comment