ದಾಂಡೇಲಿ: ಸಾಗವಾನಿ ಮಡಿ (ಟೀಕ್ ಬೆಡ್ ) ಸಿದ್ಧಪಡಿಸುವ ವೇಳೆ ಅಪಾಯಕಾರಿ ವಿಷಪೂರಿತ ಕಳೆನಾಶಕವನ್ನು ಸಿಂಪಡಿಸಿದ ಕೈಯಿಂದಲೇ ಅಜಾಗರೂಕತೆಯಿಂದ ಆಹಾರ ಸೇವಿಸಿದ ದಾಂಡೇಲಿಯ ಉಪ ವಲಯ ಅರಣ್ಯಾಧಿಕಾರಿ ಯೋಗೇಶ ನಾಯ್ಕ (31) ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೂಲತಹ ಕುಮಟಾ ತಾಲೂಕಿನ ಬಾಡ ಗ್ರಾಮದವರಾಗಿರುವ ಯೋಗೇಶ ನಾಯ್ಕ 2010ರಲ್ಲಿ ಅರಣ್ಯ ರಕ್ಷಕನಾಗಿ ದಾಂಡೇಲಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ್ದರು. ನಂತರ ಉಪ ವಲಯ ಅರಣ್ಯಾಧಿಕಾರಿಯಾಗಿ ಪದೋನ್ನತ್ತಿಗೊಂಡು ವಿರ್ನೋಲಿ ವಲಯದ ಕುಳಗಿ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ನಡುವೆ ದಾಂಡೇಲಿ ವಲಯ ಅರಣ್ಯದ ಕಚೇರಿ ರಕ್ಷಕಳಾಗಿರುವ ಅಕ್ಷತಾ ಎಂಬವರನ್ನು ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ನಡೆಸುತ್ತಿದ್ದರು. ಇದೀಗ ಮೃತ ಯೋಗೇಶ ನಾಯ್ಕ ಮಡದಿ ಹಾಗೂ ಮೂರು ವರ್ಷದ ಮಗ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಏನಾಯ್ತು ? : ಕಳೆದ ಏಳೆಂಟು ದಿನಗಳ ಹಿಂದೆ ಯೋಗೇಶ ನಾಯ್ಕ ತನ್ನ ಸಿಬ್ಬಂದಿಗಳ ಜೊತೆ ಕುಳಗಿಯಲ್ಲಿ ಟೀಕ್ ಬೆಡ್ (ಸಾಗವಾನಿ ಮಡಿ) ಸಿದ್ಧಪಡಿಸುತ್ತಿದ್ದರು. ಈ ವೇಳೆ ಭೂಮಿ ಒಳಗಡೆ ಇರುವ ಹುಳಹುಪ್ಪಡಿಗಳನ್ನು ಸಾಯಿಸುವ ಹಾಗೂ ಸಾಗವಾನಿ ಸುತ್ತ ಮುತ್ತ ಬೆಳೆದಿರುವ ಕಳೆಗಳನ್ನು ನಾಶ ಪಡಿಸಲುಬಳಸುವ ಪ್ಯಾರಾಖ್ಯೂಟ್ ( PARAQUAT) ಎಂಬ ವಿಷಪೂರಿತ ಕೀಟ ನಾಶಕವನ್ನು ಸಾಗವಾನಿ ಮಡಿಯೊಳಗೆ ಸಿಂಪಡಿಸಿದ್ದಾರೆ. ನಂತರ ಯೋಗೇಶ್ ನಾಯ್ಕ ಕೈಯನ್ನ ಸ್ವಚ್ಛಗೊಳಿಸುವಲ್ಲಿ ಸ್ವಲ್ಪ ಅಜಾರೂಕತೆ ವಹಿಸಿದ್ದಾರೆ. ಕೈಯನ್ನು ಬಟ್ಟೆಗೆ ಒರೆಸಿಕೊಂಡು ಅದೇ ಕೈಯಿಂದ ತಂಬಾಕು ತೀಡಿ ಬಾಯಿಗೆ ಹಾಕೊಂಡಿದ್ದಾರೆ. ಮತ್ತೆ ಅದೇ ಕೈಯಿಂದ ನೀರಿನ ಬಾಟಲನ್ನು ತೆಗೆದು ನೀರು ಕುಡಿದಿದ್ದಾರೆ. ಇದೇ ಅವರ ಜೀವಕ್ಕೆ ಕುತ್ತು ತಂದಿದೆ.

ಮರುದಿನ ಹೊಟ್ಟೆನೋವು ಬಂದಾಗ ದಾಂಡೇಲಿಯ ಖಾಸಗಿ ವೈದ್ಯರೋರ್ವರಲ್ಲಿ ಚಿಕಿತ್ಸೆ ಪಡೆದ ಯೋಗೇಶ ನೋವು ಶಮನವಾಗದೇ ಮರುದಿನ ಅವರೇ ತನ್ನ ಕಾರು ತಾನೇ ಚಲಾಯಿಸಿಕೊಂಡು ತನ್ನ ಮಡದಿಯ ಜೊತೆಗೆ ಹುಬ್ಬಳ್ಳಿಯ ಎಸ್. ಡಿ. ಎಂ. ಗೆ ಹೋಗಿ ದಾಖಲಾಗಿದ್ದಾರೆ. ಅಲ್ಲಿಯೂ ಚಿಕಿತ್ಸೆ ಸಿಗಲು ಒಂದು ದಿನ ವಿಳಂಬವಾಗಿದೆ. ನಂತರ ಚಿಕಿತ್ಸೆ ನಡೆಸಿದಾಗ ಆಗಲೇ ಕಿಡ್ನಿ, ಲಿವರ್, ಲಂಗ್ಸ್ ಗಳು ಡ್ಯಾಮೇಜ್ ಆಗಿರುವುದು ತಿಳಿದು ಬಂದಿದೆ. ನಂತರ ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಸುಚಿರಾಯು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ವೆಂಟಿಲೇಟರನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯೋಗೇಶ ನಾಯ್ಕ ಕೊನೆಗೂ ಯಾರ ಪ್ರಯತ್ನವೂ ಸಫಲವಾಗದೇ , ಮಡದಿ ಹಾಗೂ ಮಗುವಿನ ಮೊರೆಯೂ ಫಲಿಸದೇ ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಯೋಗೇಶನ ದೇಹದೊಳಗೆ ಅರಣ್ಯ ಇಲಾಖೆ ಕೀಟನಾಶಕಕ್ಕೆ ಬಳಸುವ ಅಪಾಯಕಾರಿ ವಿಷದ ಅಂಶ ಸೇರ್ಪಡೆಯಾಗಿ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಈ ಅನ್ಯಾಯದ ಸಾವು ಸಂಭವಿಸುವಂತಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ದೂರು ದಾಖಲಾಗಿಲ್ಲ. ಆದರೆ ಅಂಬಿಕಾನಗರ ಪೊಲೀಸ್ ಠಾಣೆಯ ಪೊಲೀಸರು ನಾಲ್ಕು ದಿನಗಳ ಹಿಂದೆಯೇ ಹುಬ್ಬಳ್ಳಿಯ ಆಸ್ಪತ್ರೆಗೆ ಹೋಗಿ ಯೋಗೇಶ್ ನಾಯ್ಕ ಅವರ ಹೇಳಿಕೆಯನ್ನು ಪಡೆದು ಬಂದಿದ್ದಾರೆ ಎಂಬ ಮಾಹಿತಿಯಿದೆ.
ಪ್ರಕರಣ ತನಿಖೆಗೊಳಪಡಲಿ
ಅರಣ್ಯ ಇಲಾಖೆಯವರು ಬೀಜ ಹಾಕುವ ಸಂದರ್ಭದಲ್ಲಿ ಪ್ಯಾರಾಖ್ಯೂಟ್ ( PARAQUAT) ಎಂಬ ಇಷ್ಟೊಂದು ವಿಷಪೂರಿತ ಕೀಟನಾಶಕವನ್ನು ಬಳಸಬಹುದೇ ಎಂಬುದು ಇದೀಗ ಪ್ರಶ್ನೆಯಾಗಿದೆ. ಇದು ಪ್ರಾಣಿ ಪಕ್ಷಿಗಳ ಜೀವಕ್ಕೂ ಅಪಾಯಕಾರಿಯೇ ಆಗಿದೆ. ಯೋಗೇಶ ಆಸ್ಪತ್ರೆಯಲ್ಲಿದ್ದಾಗ ಅರಣ್ಯಾಧಿಕಾರಿಗಳು , ಸಿಬ್ಬಂದಿಗಳು ಎಲ್ಲರೀತಿಯಿಂದ ಸಹಕರಿಸಿದ್ದಾರೆ. ಅದರೆ ಮುಂದೆ ಅವರ ಕುಟುಂಬದ ಸ್ಥಿತಿಯೇನು. ಆತ ಕರ್ತವ್ಯ ನಿರತನಾಗಿದ್ದಾಲೇ ಘಟನೆ ಸಂಭವಿಸಿದ್ದರಿಂದ ಅರಣ್ಯ ಇಲಾಖೆ ಈ ಸಾವಿನ ಹೊಣೆ ಹೊತ್ತುಕೊಳ್ಳುವುದೇ ? ಆಕುಟುಂಬಕ್ಕೆ ಸೂಕ್ತ ಪರಿಹಾರ ನಿಡೀತೇ ನೋಡಬೇಕಿದೆ. ಯೋಗೇಶ ಜೀವನ್ಮರಣದ ಸ್ಥಿತಿಯಲ್ಲಿದ್ದರೂ ಯಾಕೆ ಎಪ್.ಐ.ಆರ್. ದಾಖಲಾಗಿಲ್ಲ, ಔಷಧಿ ಸಿಂಪಡಿಸುವ ವೇಳೆ ಯಾಕೆ ಹ್ಯಾಂಡ್ ಗ್ಲೌಸ್ ನೀಡಿಲ್ಲ ಎಂಬುದೂ ಕೂಡಾ ಪ್ರಶ್ನೆಯಾಗದ್ದು, ಈ ಇಡೀಯಾದ ಪ್ರಕರಣದ ಕುರಿತಂತೆ ಸಮಗ್ರ ತನಿಖೆಯಾಗಬೇಕೆಂಬ ಮಾತು ಕೇಳಿ ಬರುತ್ತಿದೆ.
Be the first to comment