ಹೊಸತನದ ಹಂಬಲದ ನಡಿಗೆಯಲ್ಲಿ ಹೆಜ್ಜೆಯಿಡುತ್ತಿರುವ ಬಹುಮುಖ ಪ್ರತಿಭೆಯ ಶಿಕ್ಷಕಿ ಭಟ್ಕಳದ ಜಯಶ್ರೀ ಆಚಾರಿ

ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು ತನ್ನ ಹಲವು ಕಾರ್ಯ ಸಾಧನೆಯ ಮೂಲಕ ನಾಡಿನ ಗಮನ ಸೆಳೆದ ಮಹತ್ವದ ಸಂಘಟನೆಯಾಗಿದೆ. ಶಿಕ್ಷಕರಲ್ಲಿರುವ ಸುಪ್ತ ಪ್ರತಿಭೆಗೆ ಸೂಕ್ತ ವೇದಿಕೆ ನಿರ್ಮಿಸಿ ಅವರ ಪ್ರತಿಭೆಯನ್ನು ಪರಿಚಯಿಸುವುದರ ಮೂಲಕ ವೃತ್ತಿ ಪಾವಿತ್ರ್ಯತೆಗೆ ಗೌರವ ತಂದುಕೊಟ್ಟ ಪರಿಷತ್ತು ತನ್ನ ವಿಭಿನ್ನ ಆಲೋಚನೆ ಮೂಲಕ ಶಿಕ್ಷಣ ಇಲಾಖೆಯ ಸಂಪರ್ಕದ ಸೇತುವೆಯಂತಿರುವ ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ತುಂಬಾ ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಮಹತ್ತರ ಕೈಂಕರ್ಯಕ್ಕೆ ಮುಂದಡಿಯುತ್ತಿರುವ ಪರಿಷತ್ತಿಗೆ ಅಭಿನಂದನೆಗಳು. ಭಟ್ಕಳ ತಾಲೂಕಿನ ಬೆಳಕೆ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜಯಶ್ರೀ ದತ್ತಾತ್ರೇಯ ಆಚಾರ್ಯ ಅವರಿಗೆ ‘ಶಿಕ್ಷಣ ಸಾರಥಿ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಜಿಲ್ಲೆಯ ಶಿಕ್ಷಕರಿಗೆ ಹೆಮ್ಮೆತಂದಿದೆ.

ಮಕ್ಕಳು ಬಯಸುವ ನಡಿಗೆಯಲ್ಲಿ ಹೆಜ್ಜೆಯನ್ನಿಡುತ್ತಾ, ಅವರ ಮನಸ್ಸಿಗೆ ಮುದ ನೀಡುವ ಹೊಸ ಆಲೋಚನೆಗಳಿಗೆ, ನಾವಿನ್ಯಯುತ ಚಟುವಟಿಕೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತ ಹತ್ತರೊಳು ಹನ್ನೊಂದಾಗಿ ಎಲ್ಲರಂತೆ ಬದುಕದೇ ವಿಭಿನ್ನವಾದ ಆಲೋಚನೆಯ ಮೂಲಕ ಕ್ರಿಯಾಶೀಲತೆಗೆ ಹೆಸರಾದವರು ಭಟ್ಕಳದ ಜಯಶ್ರೀ ದತ್ತಾತ್ರೇಯ ಆಚಾರಿಯವರು. ನಿರಂತರ ಪ್ರಯತ್ನ, ತಣಿಯದ ಕುತೂಹಲ, ಹುಡುಕಾಟದ ಮನೋಭಾವ, ಲವಲವಿಕೆಯ ಸ್ವಭಾವ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡ ಜಯಶ್ರೀ ಆಚಾರ್ಯರವರು ಬಹುಮುಖ ಪ್ರತಿಭಾನ್ವಿತೆ.

ಪ್ರತಿಭಾ ಕಾರಂಜಿಯಂತಹ ಮಕ್ಕಳ ಮನೋವಿಕಾಸದ ಪ್ರತಿಭೆಗೆ ನೀರೆರೆದು ಪೋಷಿಸುವ, ಅದನ್ನು ಬೆಳೆಸುವ ಅಧಮ್ಯ ಉತ್ಸಾಹಿಗಳು ಹಾಗೂ ಕಲಾವಿದರು ಕೂಡ. ಇವರ ಶಾಲೆಯ ಮಕ್ಕಳು ಜನಪದ ಗೀತೆ, ಜಾನಪದ ನೃತ್ಯ,ಸಂಗೀತ, ಭಾವಗೀತೆ,ಪ್ರಬಂಧ ರಚನೆ,ಭಾಷಣ, ಪಾಠೋಪಕರಣ ತಯಾರಿ ಮುಂತಾದ ಚಟುವಟಿಕೆಗಳಲ್ಲಿ ಹತ್ತಾರು ಬಾರಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಪ್ರತಿಭೆಗಳಾಗಿ ಹೊರಹೊಮ್ಮುವಲ್ಲಿ ಇವರ ನಿರಂತರ ಶ್ರಮ ಅಡಗಿದೆ. ಇನ್ಸ್ಪೈರ್ಡ್ ಅವಾರ್ಡ್ ನಲ್ಲಿ ಪ್ರತಿ ಬಾರಿ ವಿದ್ಯಾರ್ಥಿಗಳನ್ನು ತಯಾರಿಸಿ ರಾಜ್ಯಮಟ್ಟಕ್ಕೂ ಪ್ರದರ್ಶನ ನೀಡಿದ ಹೆಗ್ಗುರುತು ಇವರದ್ದಾಗಿದೆ.

ತಾವು ಸೇವೆ ಸಲ್ಲಿಸುತ್ತಿರುವ ಸರಕಾರಿ ಗಂಡು ಮಕ್ಕಳ ಶಾಲೆ ಮುಚ್ಚುವ ಸಂದರ್ಭ ಎದುರಾದಾಗ ಅಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡಿದರೆ ಆ ಮಕ್ಕಳನ್ನು ಇಲ್ಲಿಯೇ ಉಳಿಸಿಕೊಳ್ಳಬಹುದು ಎಂಬ ಆಲೋಚನೆಗೆ ಎಲ್ಲರೂ ಕೈಜೋಡಿಸುವಂತೆ ಮಾಡಿ ಸ್ವತಃ ಇಂಗ್ಲಿಷ್ ಪಾಠ ಬೋಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಶಿಕ್ಷಕರಿಗಾಗಿ ಏರ್ಪಡಿಸುವ ಸಹಪಠ್ಯ ಚಟುವಟಿಕೆ ಸ್ಪರ್ಧೆಯಲ್ಲಿ ಜಯಶ್ರೀ ಆಚಾರ್ಯರವರು ಪ್ರಬಂಧ, ಭಾವಗೀತೆ, ಜನಪದ ಗೀತೆ, ಪಾಠೋಪಕರಣ ರಚನೆಯಲ್ಲಿ ಅನೇಕ ಬಾರಿ ಜಿಲ್ಲಾಮಟ್ಟದ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದಾಗಿದೆ.

೨೦೧೧ ರ ಜನಗಣತಿಯಲ್ಲಿ ಉತ್ತಮ ಜನಗಣತಿ ರಜತ ಪದಕ ಪುರಸ್ಕೃತರು ಕೂಡ. ಜಿಲ್ಲಾಮಟ್ಟದ ಕಲಿಕೋಪಕರಣ ಸ್ಪರ್ಧೆಯಲ್ಲಿ ಅವರು ತಯಾರಿಸಿದ ಭಾರತ ಭೌಗೋಳಿಕ ವಿಭಾಗಗಳು ಎಂಬ ಟೋಫೊಗ್ರಫಿ ಉಪನಿರ್ದೇಶಕರಿಂದ ಮೆಚ್ಚುಗೆ ಪಡೆದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲೂ ಇದನ್ನು ರಚಿಸಲು ಆದೇಶಿಸಿದ್ದು ಇವರ ಕರ್ತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಜಯಶ್ರೀಯವರು ಉತ್ತಮ ಕವಿಯಿತ್ರಿಯವರು ಹೌದು. ಅನೇಕ ಕವಿಗೋಷ್ಠಿಯಲ್ಲಿ ಭಾಗವಹಿಸಿರುತ್ತಾರೆ.

ಕುಮಟಾ ತಾಲೂಕಿನ ಧಾರೇಶ್ವರದಲ್ಲಿ ತಂದೆ ದತ್ತಾತ್ರೇಯ ಆಚಾಯ೯,ತಾಯಿ ಗಿರಿಜಾ ಆಚಾರ್ಯರವರ ಮುದ್ದಿನ ಮಗಳಾಗಿ ೧೯೭೮ ರಲ್ಲಿ ಜನಿಸಿದರು. ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿನಿಯಾದ ಇವರು ೧೯೯೪ ರಲ್ಲಿ ಧಾರೇಶ್ವರದ ಜನತಾ ವಿದ್ಯಾಲಯದಲ್ಲಿ ನಡೆದ ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಹಾಗೂ ಪಿಯುಸಿಯಲ್ಲಿ ಇತಿಹಾಸ ವಿಷಯದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರತಿಭಾನ್ವಿತೆ.

೧೯೯೯ರಲ್ಲಿ ಭಟ್ಕಳದ ಸರಕಾರಿ ಗಂಡು ಮಕ್ಕಳ ಶಾಲೆಗೆ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ನೇಮಕರಾದ ಮೇಲೆ ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಶಿಕ್ಷಕ ವೃತ್ತಿಗೆ ಘನತೆ ಗೌರವ ತಂದು ಕೊಟ್ಟಿರುತ್ತಾರೆ.೨೦೨೦ ರಿಂದ ಭಟ್ಕಳದ ಬೆಳಕೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಮುಹೂರ್ತಂ ಜ್ವಲಿತಂ ಶ್ರೇಯ: ಚಿರಂ ಧೂಮ್ರಾಯ ಕಲ್ಪಿತಂ’ಕಡಿಮೆ ಕಾಲ ಉರಿದ ಊದಬತ್ತಿ ಅದು ಬೀರುವ ಪರಿಮಳ ಬಹಳ ಕಾಲದವರೆಗೂ ಇರುತ್ತದೆ ಎನ್ನುವಂತೆ ಓರ್ವ ಶಿಕ್ಷಕಿಯಾಗಿ ತನ್ನ ಕ್ರಿಯಾಶೀಲ ಪ್ರವೃತ್ತಿಯಿಂದಾಗಿ ನಿರಂತರ ಮಕ್ಕಳ ಮನಸ್ಸಿನಲ್ಲಿ ನೆನಪಿರುವ ಶಕ್ತಿಯಾಗಿ ಜಯಶ್ರೀ ಅವರು ತಮ್ಮ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಮಗೆ ಒಪ್ಪಿಸಿದ ಅಥವಾ ತಾವೇ ಒಪ್ಪಿಕೊಂಡ ಯಾವ ಕೆಲಸವನ್ನು ಚ್ಯುತಿಯಿಲ್ಲದೆ ನಿರ್ವಹಿಸುವ ಬಹುಮುಖ ಪ್ರತಿಭಾವಂತೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತು ‘ಶಿಕ್ಷಣ ಸಾರಥಿ’ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಜಿಲ್ಲೆಯ ಶಿಕ್ಷಕರಿಗೆ ಹೆಮ್ಮೆ ತಂದಿದೆ. ಯಾವುದೇ ಪ್ರಚಾರ ಪ್ರಸಿದ್ಧಿ ಬಯಸದ ಕಾಯಕಯೋಗಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದು ಸಮಸ್ತ ಗುರುವೃಂದದ ಪರವಾಗಿ ಹಾರೈಸುತ್ತೇನೆ.

ಪಿ.ಆರ್. ನಾಯ್ಕ
ಶಿಕ್ಷಕ, ಹೊಳೆಗದ್ದೆ,ಕುಮಟಾ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*