ವಯಸ್ಸು ಎಂಬತ್ತು ತುಂಬುತ್ತಿದ್ದರೂ ನಿವೃತ್ತಿಯಾಗದ ಶಿಕ್ಷಕ…!

ಹಸಿ ಕೆಂಪು ಕರಿ ಮೆಣಸು ಕಿರಿ ಮೆಣಸು ಎಲ್ಲ
ಖಾರ ಆದರೂ ಅವು ಒಂದೇ ತೆರವಿಲ್ಲ
ಒಂದೊಂದು ಖಾರದಲಿ ಒಂದೊಂದು ರೀತಿ
ರುಚಿಯಲ್ಲಿ ಘರಕಾಯ್ತು ಮಾನವನ ರೀತಿ

ಕವಿ ದಿನಕರ ದೇಸಾಯಿಯವರ ಈ ಮೇಲಿನ ಚುಟುಕು ಮೆಣಸಿಗೆ ಸಂಬಂಧಪಟ್ಟ ಚುಟುಕದಂತೆ ಹೊರನೋಟಕ್ಕೆ ಕಂಡರೂ, ಅದರ ಅರ್ಥ ವ್ಯಾಪ್ತಿ ಅಷ್ಟಕ್ಕೆ ಸೀಮಿತವಾದುದಲ್ಲ. ನಮ್ಮ ಶಿಕ್ಷಕ ಬಳಗದಲ್ಲಿ ಎಲ್ಲ ತರದ ಮೆಣಸಿನಂತಹ ಮನಸುಗಳಿವೆ. ತಿನ್ನಲು ಖಾರವಾದ ಮೆಣಸನ್ನು ಚಪ್ಪರಿಸಿ ತಿನ್ನುವಂತೆ ಮಾಡುವ ಕಲೆಗಾರಿಕೆ ಅರಿತ ಹಲವು ಪ್ರತಿಭಾವಂತ ಶಿಕ್ಷಕ ಸಾಧಕರಿರುತ್ತಾರೆ. ಒಂದರಂತೆ ಒಂದಿಲ್ಲ. ಒಂದೊಂದರಲ್ಲೂ ಒಂದೊಂದು ಸೊಗಡು, ಸೊಗಸು, ಸುಂದರ.

ಶಿಕ್ಷಕ ಸಮುದಾಯಕ್ಕೆ ಅಪರೂಪವೆನಿಸಿದ ಸರಳ ಸುಂದರ ಬದುಕಿನ ಸರದಾರ ಎಪ್ಪತ್ತೆಂಟರ ಹರೆಯದ ಕ್ರಿಯಾಶೀಲ ಶಿಕ್ಷಕ ಸಿದ್ದಾಪುರದ ಬಿಳೇಗೋಡ ಶಾಲೆಯ ಮಂಜುನಾಥ ಗಣೇಶ ಭಟ್ಟ ರವರು ಮಾನವಕುಲಕ್ಕೆ ಮಾದರಿಯಾದ ವ್ಯಕ್ತಿತ್ವವನ್ನು ರೂಪಿಸಿಕೊಂಡವರು.

ಈ ಕಡಲು ಬತ್ತಿದರೂ ಬತ್ತದ ಉತ್ಸಾಹದೊಂದಿಗೆ, ವೃತ್ತಿ ಬದುಕಿಗೆ ಅಂಟಿದ ನಂಟಿಗೆ ಕೊನೆಯಿಲ್ಲದೆ ನಿರಂತರವಾಗಿ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡು, ಒಂದು ದಿನದಲ್ಲಿಯೇ ಬಿಟ್ಟರೂ ಶ್ವಾಸ,
ಆಳಂಬೆಗೂ ಕೂಡ ಆತ್ಮವಿಶ್ವಾಸ! ಅಂತಹ ಒಂದು ಅತುಲ ಆತ್ಮವಿಶ್ವಾಸ ಹೊಂದಿರುವುದರಿಂದ ದೇವರೊಂದಿಗೆ ಜಗಳವಾಡಬಹುದಾದ ನೈತಿಕ ಬಲದೊಂದಿಗೆ ಎಪ್ಪತ್ತೇಂಟರ ಇಳಿ ವಯಸ್ಸಿನಲ್ಲಿಯೂ ಚೈತನ್ಯದ ಚಿಲುಮೆಯಾಗಿ, ಬರಿಗಾಲಲ್ಲಿ ಓಡಾಡುವ ಎಂಟೆದೆಯ ಬಂಟರಾಗಿ ಇಡೀ ಶಿಕ್ಷಕ ಕುಲಕ್ಕೆ ಮಾದರಿಯಾದವರು.

ತಂದೆ ಗಣೇಶ ಭಟ್ಟ, ತಾಯಿ ಮಹಾದೇವಿಯವರ ಮಗನಾಗಿ ೧೯೪೪ ರಲ್ಲಿ ಕುಮಟಾ ತಾಲೂಕಿನ ಬೆತ್ತಗೇರಿ ಹೊಸಮನೆ ಕುಟುಂಬದಲ್ಲಿ ಜನಿಸಿದರು. ತಂದೆ ಗಣೇಶ ಭಟ್ಟರು ಮೂಲತಃ ಅರ್ಚಕರಾಗಿರುವುದರಿಂದ ತುತ್ತಿನ ಚೀಲ ತುಂಬಲು ಸಿದ್ದಾಪುರ ದೊಡ್ಮನೆ ಯಲ್ಲಿರುವ ಗಣಪತಿ ದೇವಸ್ಥಾನಕ್ಕೆ ಅರ್ಚಕರಾಗಿ ನೇಮಕರಾಗಿರುವುದರಿಂದ ಬೆತ್ತಗೇರಿಯಿಂದ ಅವರ ಕುಟುಂಬವು ದೊಡ್ಮನೆಗೆ ಸ್ಥಳಾಂತರವಾಯಿತು. ಆಗ ಮಂಜುನಾಥ ಭಟ್ಟರು ಒಂದು ವರ್ಷದ ಕೂಸು. ಶಾಲಾ ವಯಸ್ಸಿಗೆ ಬಂದ ನಂತರ ದೊಡ್ಮನೆಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದರು. ಐದನೇ ತರಗತಿಗೆ ಹೋಗಬೇಕೆಂದರೆ ಕಾಡಿನ ಮಧ್ಯದಲ್ಲಿರುವ ದೂರದ ಹಿರಿಯ ಪ್ರಾಥಮಿಕ ಶಾಲೆಗೆ ಹೋಗಬೇಕಾಗಿರುವುದರಿಂದ ಮೂರು ವರ್ಷಗಳ ಕಾಲ ಶಾಲೆಬಿಟ್ಟ ಮಗುವಾಗಿ ಮನೆಯಲ್ಲಿಯೇ ಕಳೆಯಬೇಕಾಯಿತು. ನಂತರ ಕಿರಿಯ ಪ್ರಾಥಮಿಕ ಶಾಲೆಯು ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾದಾಗ ಮುಂದಿನ ಐದ ರಿಂದ ಏಳನೇ ತರಗತಿವರೆಗಿನ ಶಿಕ್ಷಣ ಪೂರೈಸಿದರು.

ತಮ್ಮ ಹದಿನೇಳನೇ ವಯಸ್ಸಿನಲ್ಲಿ ಅಂದರೆ ೧೯೬೧ ರಲ್ಲಿ ಸಿದ್ದಾಪುರ ತಾಲೂಕಿನ ಹಸ್ವಿಗೊಳಿ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕವಾದರು. ಇಲ್ಲಿಂದ ಇವರ ವೃತ್ತಿಜೀವನ ಪ್ರಾರಂಭವಾಗಿ ಇಂದಿಗೆ ಅರವತ್ತೊಂದು ವಸಂತಗಳನ್ನು ಪೂರೈಸಿ ಸುದೀರ್ಘ ಶಿಕ್ಷಕ ವೃತ್ತಿ ಪೂರೈಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ತಮ್ಮ ವೃತ್ತಿ ಬದುಕಿನಲ್ಲಿ ಸುದೀರ್ಘ ೪೧ ವರ್ಷಗಳ ಸೇವೆ ಪೂರೈಸಿ, ೨೦೦೨ ರಂದು ನಿವೃತ್ತಿ ಯಾಗಿರುತ್ತಾರೆ. ವೃತ್ತಿಯಿಂದ ನಿವೃತ್ತಿಯಾಗಿ ಇಪ್ಪತ್ತು ವರ್ಷಗಳು ಸಂದಿವೆ. ಆದರೆ ಇವರ ಶಿಕ್ಷಕ ವೃತ್ತಿಗೆ ನಿವೃತ್ತಿಯೇ ಇಲ್ಲ. ಈಗಲೂ ಸಹ ಅವರು ಬಾಳೇಗೋಡ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕ ರಾಗಿರುತ್ತಾರೆ.ತನ್ನ ಬದುಕಿನ ಕೊನೆಕ್ಷಣದವರೆಗೂ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಂದುವರಿಯಬೇಕೆಂಬ ಬಲವಾದ ಆತ್ಮವಿಶ್ವಾಸವೇ ಅವರ ಮನೋಬಲ ಹಿಗ್ಗಿಸಿದೆ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬಂತೆ ಯಾವುದೇ ಫಲಾಪೇಕ್ಷೆ ಬಯಸದೇ ಕರ್ತವ್ಯ ದೇವರೆಂದು ನಂಬಿ, ಮಕ್ಕಳಲ್ಲಿ ದೈವತ್ವವನ್ನು ಕಾಣುವ ಮಂಜುನಾಥ ಭಟ್ಟರವರು ಅಪರೂಪದ ಸಾಧಕ ಸರಳ, ಸಜ್ಜನ ಭಾರತ ಮಾತೆಯ ಹೆಮ್ಮೆಯ ಪುತ್ರರು.

೨೦೦೨ ನೇ ಸಾಲಿನಲ್ಲಿ ದೊಡ್ಮನೆ ಗ್ರಾಮ ಪಂಚಾಯತ್ ಮಟ್ಟದ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ ಇಲಾಖೆಯಿಂದ ದೊರೆತಿದೆ. ಇಂತಹ ಘನಕಾರ್ಯಕ್ಕೆ ಇನ್ನಾವುದೇ ಪ್ರಶಸ್ತಿಗಳು ಅವರನ್ನರಸಿ ಬರಲಿಲ್ಲ. ಯಾಕೆಂದರೆ ಮಕ್ಕಳ ಸೇವೆ ಮಾಡುವ ಅವಕಾಶಗಳೇ ನನ್ನ ಪಾಲಿನ ಬಹುದೊಡ್ಡ ಪ್ರಶಸ್ತಿ ಎಂದು ಭಾವಿಸಿದ್ದರು.
ಇವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ೨೦೦೨ ರಲ್ಲಿ ಸಿದ್ದಾಪುರದ ಯಕ್ಷೊನ್ಮುಖ ಕಲಾ ಬಳಗ,೨೦೧೫ ರಲ್ಲಿ ಶ್ರೀ ಭುವನೇಶ್ವರಿ ದೇವಾಲಯ ಮಾತ್ರ ವಂದನಾ ಸಮಿತಿ, ೨೦೧೭ ರಲ್ಲಿ ಬಾಳೇಗೋಡ ಎಸ್ಡಿಎಂಸಿ ಸಮಿತಿ,೨೦೧೯ರಲ್ಲಿ ಸೂರಗಾಲ ಎಸ್.ಡಿ.ಎಂ.ಸಿ. ಸಮಿತಿ ಸನ್ಮಾನಿಸಿ ಗೌರವಿಸಿದೆ.

ಬಳ್ಳಿಗೆ ಹೂವು ಚೆಂದ
ಮಕ್ಕಳಿರಲು ಮನೆ ಚೆಂದ
ಹರಿವ ನೀರು, ಕಡಲ ತೆರೆ ಚಂದ
ಪಾದರಕ್ಷೆ ಇಲ್ಲದೇ ಓಡಾಡುವ ನಿಸ್ವಾರ್ಥ ಸಾಧಕ
ಮಂಜುನಾಥ ಭಟ್ಟರು ಲೋಕಕ್ಕೆಲ್ಲ ಚಂದವೋ ಚಂದ!

ಕಾಯಕಯೋಗಿಯ ಜೀವನಕ್ರಮ ತುಂಬಾ ಸೊಗಸು. ಒಪ್ಪ ಓರಣ. ಕಾರ್ಗತ್ತಲಲ್ಲಿ ಒಬ್ಬಂಟಿಯಾಗಿ ನಡೆಯಲು ಸಾಧ್ಯ. ದಟ್ಟ ಅರಣ್ಯದಲ್ಲಿ ಕ್ರೂರ ಪ್ರಾಣಿಗಳ ಮಧ್ಯ ಬದುಕಲು ಸಾಧ್ಯ. ಆದರೆ ಕನಸುಗಳಿಲ್ಲದ ದಾರಿಯಲ್ಲಿ ಖಂಡಿತವಾಗಿಯೂ ನಡೆಯಲಿಕ್ಕಾಗದು. ತಮ್ಮ ಸುದೀರ್ಘ ಬದುಕನ್ನೇ ಮಕ್ಕಳ ಕಲಿಕೆಗಾಗಿ, ಮಕ್ಕಳೊಂದಿಗೆ ಮಕ್ಕಳಾಗಿ ವೃತ್ತಿಯಲ್ಲಿ ಪವಿತ್ರತೆಯ ಕನಸು ಕಂಡು, ಮುದ್ದು ಕಂದಮ್ಮಗಳಿಗೆ ಅಕ್ಕರೆಯ ಗುರುವಾಗಿ, ಗುರುಮಾತೆಯಾಗಿ ನೀಡಿದ ಶಿಕ್ಷಣಕ್ಕೆ ಬೆಲೆಕಟ್ಟಲಾಗದು. ಬದುಕಿನ ಬಯಲಿನಲ್ಲಿ ಗಾಳಿಯ ಕೊರಳೊಳಗೂ ಮುಳ್ಳಿನ ತುದಿಗಳಿರುತ್ತದೆ ಎಂಬಂತೆ, ಎಲ್ಲವನ್ನು ಮೆಟ್ಟಿ ನಿಂತು ಬಂಡೆಗಲ್ಲನ್ನು ಹೂವಾಗಿ ಅರಳಿಸಿ ಬದುಕಿನಲ್ಲಿ ಸಾರ್ಥಕತೆ ಕಂಡ ಗುರುವಿಗೆ ಕೋಟಿ ಕೋಟಿ ನಮನಗಳು.

ಕನಸು ಕಗ್ಗಾಡಿನಲ್ಲೂ ತೆನೆ ತುಂಬಿ ಬಾಗಿ ಕಂಗೊಳಿಸುವ ಭತ್ತದ ಹೊಲದಂತೆ ನಾ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿ, ಮಕ್ಕಳ ಬಾಳಿಗೆ ಬೆಳಕಾಗಿ,ಸಮಾಜಕ್ಕೆ ಮಾದರಿಯಾದ ಮಂಜುನಾಥ ಭಟ್ಟರು ಇಡೀ ಮಾನವ ಕುಲಕ್ಕೆ ಮಾದರಿಯಾಗಿರುತ್ತಾರೆ. ಇವರಿಗೆ ಎರಡು ಜನ ಮಕ್ಕಳು. ಮಗ ದಿವಾಕರ ದೊಡ್ಮನೆ ಸೊಸೈಟಿಯಲ್ಲಿ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಗಳು ಸಾವಿತ್ರಿ. ಸೊಸೆ ತ್ರಿವೇಣಿ. ಮೊಮ್ಮಕ್ಕಳಾದ ಮಾನಸ, ಮಹತಿ ಶಿಕ್ಷಣ ಪಡೆಯುತ್ತಿದ್ದಾರೆ. ತುಂಬು ಜೀವನ ನಡೆಸುತ್ತಿರುವ ಮಂಜುನಾಥ ಭಟ್ಟರವರು ನೂರ್ಕಾಲ ಬದುಕಿ ಬಾಳಿರೆಂದು ಹಾರೈಸುವ-

- ಪಿ.ಆರ್. ನಾಯ್ಕ ಶಿಕ್ಷಕರು
ಹೊಳೆಗದ್ದೆ,ಕುಮಟಾ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*