ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯ್ಕರ ಲೇಖನ ಮಾಲೆ -೧೨

‘ಯೆಂಕ್ಟೇಶ, ಆ ಕಾಡಿಮಾನಿ ಭಾರತಿ ಸುದ್ದಿ ಎಲ್ಲ ಕಾಡಿಗೂ ಗುಸು….ಗುಸು…. ಅಂತಾದೆ. ಮಂಜು ಮತ್ತು ಭಾರತಿ ಕೂಚೂ… ಕೂಚೂ…. ಲವ್ ಮಾಡಿರಂತೆ…. ಲವ್….ಲವೂ……ಇಬ್ಬರು ನಿನ್ನಾಗೆ ಮಾನಿ ಬಿಟ್ಟು ಹೋಗಾರಂತೆ…… ಪಾಪ ಅವರಪ್ಪ,ಆಬ್ಬೆ ಇಡೀ ಉರ್ತುಂಬ ಹುಡ್ಕದ್ರಂತೆ…. ನಿನ್ನೆ ರಾತ್ರಿ ಯಾರೂ ಉಣ್ದೆ ಹಾಂಗೆ ಮನಿಕಂಡ್ರಂತೆ….. ಹೈಸ್ಕೂಲ್ ಸಾಲಿಗೆ ಹೋದ ಹುಡ್ಗಿರ್ದು ಒಬ್ಬೊರ್ದ ಕಾಥಿ ಹಿಂಗೆ…. ಆಲ್ವಾ ಮಾರು ಸಾಲಿಗೆ ಹೋಗು ಮಕ್ಕಳ ಕಾಥಿ ಹೀಂಗಾದ್ರೆ ಆಪ್ಪ,ಆಬ್ಬಿ ಕಾಥಿಯೇನು? ನಮ್ಗೆಂತಾಕೆ ಬ್ಯಾರವ್ರ ಸುದ್ದಿ…. ಆಲ್ವೊ ಮಾರಾಯ ಕೋರೋನಾ ಹೇಳಿ ಸಾಲಿ ಎಲ್ಲಾ ಬಂದಾಗಿ ಹೋಗದೆ. ಇನ್ನೆಷ್ಟ ದಿನಾ ಹಿಂಗೆ ಮಾರಾಯ. ಸಾಲಿ ಸುರು ಆದ್ರೆ ಹಿಂಗೆಲ್ಲಾ ಆಗ್ತಿರ್ಲಿಲ್ಲ. ಇರಲಿ….’

‘ಯೆಂಕ್ಟೇಶ, ಈ ವರ್ಷ ಸಾಲಿಲಿ ಇನ್ನೂ ಪುಸ್ತಕನೇ ಕೊಡ್ಲಿಲ್ಲ. ನನ್ಕೈಲಿ ಇದ್ದ ಪುಸ್ತಕ ಸಾಲಿಗೆ ಕೊಟ್ಬಂದಿದ್ದೆ. ಸಾಲಿ ಮಾಸ್ತರ್ರು ಹೋದ ವರ್ಷದ್ದು ಯೊಳನಿತ್ತಿ ಹಾಳಿ ಪುಸ್ತಕ ನಂಗೆ ಕೊಟ್ಟಾರೆ. ಅದೇ ಓದ್ಕಂಬೇಕಂತೆ. ಎಂಥ ಓದುದು ಮಾರಾಯ. ಆ ಗಣಿತ ಎಷ್ಟೇ ಓದಿದ್ರು ತಲಿಗೆ ಹತ್ತುದಿಲ್ಲ.ಇಂಗ್ಲೀಷಂತು ಓದುಕೆ ಬರುದಿಲ್ಲ, ಹಿಂದಿ ಅ….ಆ…ನೂ ಬರುದಿಲ್ಲ , ವಿಜ್ಞಾನ, ಸಮಾಜ ಪೂರಾ ಚೊಕ್ಕ ಆಗದೆ. ಹೊದ್ಕಾಲೆ ಸಾಲಿಗೆ ಹೊಗ್ದೆ ಈ ವರ್ಷ ನಾನು ಯೊಳನಿತ್ತಿ ಆಗ್ಬಿಟ್ಟೆ. ಈ ವರ್ಷವೂ ಹಾಂಗೆ ಆಗ್ಬಿಟ್ರೆ ಚೋಲೋ ಆಯ್ತದೆ ಮಾರಾಯಾ. ಹಾಂಗೆ ಆದ್ರೆ ಸಾಕು……. ನಾ ಬೇಕಾದ್ರೆ ದ್ಯಾವ್ರಗೆ ಹಾರ್ಕಿ ಹೊತ್ಕಂತೆ…’

‘ಹಾಂಗೆಲ್ಲಾ ಹೆಳ್ಬೇಡ ಮಾರಾಯಾ… ನಮ್ಗೆಲ್ಲಾ ಸಾಲಿ ಸುರು ಆದ್ರೆ ಸಾಕು ಅಂಬಂಗಾಗದೆ…. ಹೊದ್ಕಾಲೆ ನಮ್ಮ ಸರು ಮಾನ್ಮನಿಗೆ ಬಂದು ವಠಾರ್ಸಾಲಿ ಮಾಡ್ದರ್ರು. ನೀನು ವಠಾರ್ಗೆ ಬರ್ಲೆಲಾ. ಕಾಡಿಗೆ ವಿದ್ಯಾಗಮ ಬಂದ್ರೂ ನೀನು ಸಾಲಿಗೆ ಬರ್ಲೆಲಾ. ಕಳ್ದ ವರ್ಷ ನೀನು ಸಾಲಿಲಿ ಕಲ್ತದ್ದು, ಮಾನಿಲಿ ಕಲ್ತದ್ದು, ಮೊಬೈಲ್ ನೋಡಿ ಕಲ್ತದ್ದು, ಟಿ.ವಿ.ನೋಡಿ ಕಲ್ತದ್ದು ನಿನ್ನ ತಾಲಿಲಿ ಎಷ್ಟು ಆದೆ ಅಂತ ನೋಡುಕೆ ಈ ವರ್ಷ ಸೇತುಬಂದ ಸುರು ಆಗದೆ. ಆದಾದ್ಮೇಲೆ ನೀನು ಕಲಿಬೇಕಾದ್ದು ನಿರ್ಧಾರ ಆಗ್ತದೆ. ಇಷ್ಟೇಲ್ಲಾ ಮಾಡ್ದರ್ರು ನಿನ್ನ ತಾಲಿಲಿ ಎಷ್ಟ ಹೊಕ್ಕದೆ, ಇದ್ರಿಂದ್ದ ಎಷ್ಟ ಪಯ್ರೊಜನ ಆಗದೆ ಅಂತಾ ನೋಡ್ತಾರೆ.’

‘ಮಾರು ನೀನು ಹಿಂಗೆಲ್ಲಾ ಮಾಡ್ದರ್ರೆ ತುಂಬಾ ಕಷ್ಟ ಆಗ್ತದೆ.ಕಾಡಿಗೆ ಎಂತದೂ ಬರ್ದೆ ದಡ್ಡ ಅನ್ಸಕಂಬೇಕು. ನೋಡು, ನಾಂಗೆ ಇದೆಲ್ಲಾ ಆಗುದಿಲ್ಲ.ನೀನು ನನ್ಸಂತಿಗೆ ದಿನಾ ಸಾಲಿಗೆ ಬಂದ್ರೆ ಸರಿ. ಇಲ್ಲಾಂದ್ರೆ ನಾಂದೂ,ನಿಂದೂ ದೊಸ್ತಿ ಕಾಟಪ್….ಕಾಟಪ್……’ಎಂದೆಳ್ತ ಮಾನಿ ಕಾಡಿ ಒಡ್ಲಿಕ್ಕೆ ಹತ್ದ…ಏ..ಏ….ನಿಲ್ಲೋ ಯೆಂಕ್ಟೇಶಾ………ಆವ್ನ ಹಿಂದೆ ಮಾರುನೂ ಓಡೇ ಬಿಟ್ಟಾ……

ಪಿ.ಆರ್. ನಾಯ್ಕ, ಹೊಳೆಗದ್ದೆ



ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*