ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ–೫

ವೆಂಕಟೇಶ ನಿನ್ನೆ ಊಟ ಮಾಡ್ದೆ ಹಾಗೆ ಮಲಗಿದ್ಯಂತೆ, ಯಾಕೋ? ಏನಾಯ್ತು?

‘ಸರ್ , ನಿಮ್ಗೆ ನಮ್ಮನಿ ಕಾಥಿ ಕೇಳ್ದರ್ರೆ ನೆಗ್ಗಿ ಬರ್ತದೆ. ನಮ್ಮನೆಲಿ ನಾನು, ಅಬ್ಬಿ, ಅಪ್ಪ ಮೂರೇ ಜನ ಇರೂದು. ಆಬ್ಬಿ ಬೆಳ್ಗಾಗೆ ಎದ್ದಕಂಡಿ ಎಲ್ಲ ಕೆಲ್ಸಾ ಮುಗ್ಸಿ ಅಡ್ಗೀ ಮಾಡಿಟ್ಟಿ ಒಡಿನ್ಮನಿ ಕೆಲ್ಸಕ್ಕೆ ಹೋಗ್ತದೆ. ಅಪ್ಪ ಮಾತ್ರ ಒಂದೊಂದಿನ ಮೊದ್ಲೆ ಏಳ್ತಾ, ಒಂದೊಂದಿನ ಏಳೂದೇ ಇಲ್ಲ.ಆಬ್ಬಿ ದುಡ್ಕ ಬಂದದ್ರಲ್ಲಿ ನಾವೆಲ್ಲ ಊಟ ಮಾಡ್ಬೇಕು. ನಮ್ಮನೇಲಿ ಎಂತದೂ ಇಲ್ಲ ಸರ್. ದಿನ ಅಂಗಡಿ ಸಾಮಾನ್ ತನ್ಕಂಡೆ ಊಟ ಮಾಡ್ಬೇಕು. ನಮ್ಮಪ್ಪ ದೊಡ್ಡ ಕುಡುಕ ಸರ್. ಯಾವಾಗ್ಲೂ ಕುಡಕಂಡೆ ಬರೂದು. ಕುಡ್ಕ ಬಂದ್ಕಂಡಿ ಸುಮ್ನೆ ಮಲ್ಗೂದಿಲ್ಲ ಸರ್. ಇಟ್ಟೀಟ ಸಣ್ಣ ಮಾತ್ಗು ಆಬ್ಬಿಕೆಲಿ ಜಗ್ಳ ಆಡ್ತಾ. ಕಾಡಿಗೆ ಆಬ್ಬಿಗೆ ಚೊಂಟ್ಗಿ ಬಗ್ಸೀ ಗುದ್ತ. ಆಬ್ಬಿ ಕೂಗುದು ನಾಂಕೇಲಿ ನೋಡುಕೆ ಆಗುದಿಲ್ಲ. ನಾನು ಏನ್ ಮಾಡ್ಲಿ ಸರ್. ಸಾಲಿ ಇದ್ರೆ ಬಾಗಿಲಾದ್ರು ಸುಖ ಇತ್ತು . ನಾನು ಬೆಳ್ಗಾಗೆ ಸಾಲಿಗೊದ್ರೆ ಮಾನಿಗ ಬರೂದು ಸಂಜಿಕೆ. ಮಧ್ಯಾಹ್ನ ಸಾಲಿಲೇ ಉಂಡ್ಕಂಡಿ ಆರಾಂ ಇದ್ದೆ.ಈಗ ಹಾಂಗಿಲ್ಲ. ಒಂದೊಂದಿನ ಮಧ್ಯಾಹ್ನ ಉಂಬುಕೆ ಏನೂ ಇರೋದಿಲ್ಲ. ಎಲ್ಲಾ ಆಪ್ನೆ ಉಂಡ್ಬೀಡ್ತ. ಎಂತಕಂದ್ರೆ ಒಂದೊದಿನ ರಾತ್ರಿ ಕುಡ್ಕಂಡಿ, ಜಗ್ಳ ಮಾಡ್ಕಂಡಿ ಹಾಂಗೆ ಉಪಾಸೆ ಮಲ್ಗಬಿಡ್ತ. ಬೆಳ್ಗಾಗೆ ಆಬ್ಬಿ ಮಾನಿಲಿರು ತನ್ಕಾ ಮುಚ್ಕೊಂಡು ಮಲ್ಗೇ ಇರ್ತ. ಆಬ್ಬಿ ಕೆಲ್ಸಕ್ಕೆ ಹೊದ್ಮೇಲೆ ಎದ್ಕಂಡಿ ಉಂಬುಕೆ ಕುತ್ಕಂತ. ಮೊನ್ನಾಗೆ ಆಬ್ಬಿಗೆ ರಾಸಿ ಬೈಯ್ದಿ, ಹೊಡ್ದಬಿಟ್ಟ. ಆಬ್ಬಿ ಇಡೀ ರಾತ್ರಿ ತೀಡ್ಕಂತೆ ಉಣ್ದೆ ಹಾಂಗೆ ಮನಿಕಂತು. ನಾನು ಉಣ್ದೆ ಆಬ್ಬಿ ಸಂಗ್ತಿಗೆ ಹಾಂಗೆ ಮನಿಕಂಡೆ ಸರ್. ನಮ್ಮನಿಲಿ ಪದೇ ಪದೇ ಹೀಂಗೆ ಆಗ್ತೇ ಇರ್ತದೆ ಸರ್. ಕೊರೋನಾ ನಮ್ಗೆಲ್ಲಾ ಶಾಪ ಆಗ್ಬಿಟ್ಟಿದೆ.’

‘ಸರ್ ನಮ್ಮಬ್ಬಿ ಒಬ್ಳೆ ದುಡಿಬೇಕು. ಅಪ್ಪಂದುಡ್ಡು ಆವ್ನ ಕುಡ್ತಕ್ಕೆ ಸರಿ ಆಗ್ತದೆ. ಒಂದೊಂದಿನ ಅಪ್ಪ ಕೆಲ್ಸಕ್ಕೆ ಹೋದ್ರೆ ಹೊಟ್ಟೆ ತುಂಬ ಸಾರಾಯಿ ಕುಡ್ಕಂಡಿ ಬರುವಾಗ ನನ್ಗೆ ಎಗ್ಗರೈಸ್, ಕಬಾಬು, ಮೊಟ್ಟಿ ರೊಟ್ಟಿ, ಉಳ್ಳಿಗೆಂಡಿ ಬಾಜಿ, ಚಕ್ಲಿಕೊಟ್ಟೆ ಏನ್ ಸಿಕ್ತಾದೆ ಅದೆಲ್ಲ ತಾಕಂಡಿ ಬರ್ತಾ. ಆದ್ರೆ ಆಬ್ಬಿಗೆ ಮಾತ್ರ ಹೊಡಿತಾ ಇರ್ತ. ಮೊದ್ಲೆಲ್ಲ ಜಗ್ಳ ಆಡ್ವಾಗ ನಾನು ಬೆರ್ಯವ್ರಮನಿಗೆ ಓಡಹೋಗ್ತಿದ್ದೆ. ಕಾಡಿಗೆ ಆಬ್ಬಿನೆ ಬಂದಿ ನನ್ನ ಕಾರ್ಕಂಡಿ ಮಾನಿಗೆ ಬರ್ತಿತ್ತು.ಆದರೆ ಕೊರೋನಾ ಬಂದ್ಮೆಲೆ ನಾನೂ ಯಾರ ಮನಿಗೂ ಹೊಗ್ವಾಂಗಿಲ್ಲ, ಅವರು ನಮ್ಮನಿಗೆ ಬರ್ವಾಂಗಿಲ್ಲ. ಆಟ ಆಡ್ವಾಂಗಿಲ್ಲ.ಇದ್ಯಾಂತ ನಮೂನಿ ಸರ್. ನನಗಂತೂ ಬೇಜಾರ್ ಬಂದ್ಬಿಟ್ಟಿದೆ.’

ಸರ್, ಅಪ್ಪನ ಹತ್ರ ಇರ್ವಾ ಅಂದ್ರೆ ಯಾವಾಗ್ಲೂ ಆಮಲ್ ಎರ್ಸಂಡೆ ಇರ್ತಾ. ನಾನೊಂದ ಹೇಳ್ದರ್ರೆ ,ಅವ್ನು ಇನ್ನೊಂದು ಹೇಳ್ತಾನೆ. ಒಂದೊಂದ್ಸಲ ಓದುಕೂಂತ್ರೆ ಪುಸ್ತಕನೇ ಹರ್ದಬಿಡ್ತ. ನೀನು ಓದೂದು ಬ್ಯಾಡ,ಓದೀ ಉದ್ದಾರ ಮಾಡ್ದದ್ದು ಸಾಕು. ಹಿಡಿ ಈ ಬೀಡಿ ಹಚ್ಕಂಡ್ಬಾ. ಎಯ್ಡ ಧಮ್ಮು ಒಗೂದ್ಕೂಡ್ಲೆ ಕಿಸಿಲಿದ್ದ ಸಾರಾಯಿ ಕೊಟ್ಟೆ ತೆಗ್ದಿ ಅದ್ಕೆ ನೀರ ಬೆರ್ಸಂಡಿ ಗಟಗಟ ಕುಡಿತಾ ಸರ್. ಮೊಖ ಗಿಂಡ್ಸಕಂಡಿ ಉಪ್ಪಿನ್ಕಾಯಿ ನೆಕ್ತ. ನಂಕೆಲಿ ಈ ತಾಟ್ಟಿ ತೊಳ್ದಿಡು ಅಂತಾ. ನಾ ತೊಳುದಿಲ್ಲ. ಕೆಟ್ಟ ಹಪ್ಪನೊತ. ಕಾಡಿಗೆ ಸಾವ್ಕಾಸೆ ಬಾಗ್ಲತ್ರ ಬಂದ್ಕಂಡಿ ಆಬ್ಬಿ ಮಾಡಿಟ್ಟ ಆನ್ನ-ಸಾರು ಹಾಕಂಡಿ, ಹೊಟ್ಟಿ ತುಂಬಾ ಉಂಡ್ಕಂಡಿ ಮಲ್ಗಬಿಡ್ತ.ಸುಮ್ನೆ ಮಲ್ಗದ್ರೆ ತೊಂದ್ರೆ ಇಲ್ಲಾಗಿತ್ತು . ಆದ್ರೆ ಮಲ್ಗದಲ್ಲೆ ಹಾಡ್ ಹಾಡ್ತಾನೆ, ಕೂಗ್ತಾನೆ, ಒಂದೊಂದ್ಸಲ ಹಾಸ್ಗಿಲೇ ಉಚ್ಚಿಹೊಯ್ಕಂತ. ಕೆಟ್ಟ ಸೊಣ್ಕು, ವಾಸ್ನೆ. ಆಬ್ಬಿ ಕೆಲ್ಸಾ ಮುಗ್ಸಿ ಬಂದ್ಕೂಡ್ಲೆ ಆಪ್ಪಮಾಡ್ದ ಎಲ್ಲ ಕಾಥಿ ಒಂದೊಂದಾಗಿ ಹೇಳ್ಬೀಡ್ತೆ. ಆವಾಗ್ಲೆ ಜಗ್ಳ ಸುರು ಆಗ್ತದೆ. ಇದನ್ನು ನೋಡ್ನೋಡಿ ಸಾಕಾಗ ಹೋಗಿದೆ. ಆಚಿ-ಇಚಿ ಮಾನ್ಯರು ನೆಗಿ ಆಡ್ತರ್ರು. ಮತ್ಯಾರ ಮಾನಿಲು ಇಷ್ಟೆಲ್ಲಾ ಜಗ್ಳ ಆಗುದಿಲ್ಲ. ಆದ್ರೆ ಒಂದೊಂದಿವ್ಸ ಆಗ್ತದೆ. ನಮ್ಮಪ್ಗೆ ಎಷ್ಟ ಬುದ್ದಿ ಹೇಳ್ದುರ್ರು ಅಷ್ಟೇ. ಯಾರ ಮಾತು ಕೇಳುದಿಲ್ಲ. ತಾನಹೇಳ್ದೇ ಅಂತಾನೆ. ನಾನೆನ್ಮಾಡ್ಲಿ ಸಾರ್. ಸಾಲಿ ಸುರು ಆದ್ರೆ ಸಾಕು.’
‘ಸಾಲಿ ಯಾವಾಗ ಸುರು ಆಗ್ತದೆ ಸರ್…..?’

ಪಿ.ಆರ್. ನಾಯ್ಕ, ಹೊಳೆಗದ್ದೆ

ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. ಮಕ್ಕಳ ಕುರಿತು ಪಿ.ಆರ್.ನಾಯ್ಕ.ಸರ್ ಬರಹ ವಾಸ್ತವ ಚಿತ್ರಣವಾಗಿದೆ.ನನ್ನ ವೃತ್ತಿ ಜೀವನದಲ್ಲಿ ಇಂತಹ ಸನ್ನಿವೇಶದ ಸಂದರ್ಭಗಳುಂಟು.ನನ್ನ ನೆನಪಿನ ಬುತ್ತಿಯನ್ನು ಬಿಚ್ಚಬೇಕಷ್ಟೆ.

Leave a Reply

Your email address will not be published.


*