ನಮ್ಮ ಕಥೆ- ನಮ್ಮ ವ್ಯಥೆ… ಪಿ.ಆರ್. ನಾಯ್ಕರ ಬರಹ ಮಾಲಿಕೆ – ೪

‘ಅಯ್ಯೋ! ಗೌರೀಶ ಏನಾಗಿದೆಯೋ ನಿನ್ನ ತಮ್ನಿಗೆ…’

‘ಸರ್ ಕಳೆದ ವರ್ಷ ನಮ್ತಾಮ್ಮ ಒಂದನೇತಿ ಆಗಿದ್ದ. ಆದರೆ ಸಾಲಿಗೆ ಬರ್ದೆ ಈಗ ಎರಡ್ನೇತಿ ಆಗ್ಬಿಟ್ಟ. ಕೋರೋನಾ ಮಂತ್ರ ಮಾಡಿ ಪಾಸಾದ’ ಎಂದಾಗ ಎಲ್ಲರೂ ಹೋ…ಎಂದು ನಕ್ಕರು.

‘ಹೌದು ಗೌರೀಶ ಕಳೆದ ವರ್ಷ ದಾಖಲಾದ ಮಕ್ಕಳು ಈ ವರ್ಷ ಎರಡ್ನೇತಿ, ಎರಡ್ನೇತಿಲಿ ಇದ್ದವರು ಮೂರ್ನೆತಿ, ಮೂರ್ನೆತಿಲಿ ಇದ್ದವ್ರು ಈಗ ನಾಕ್ನೇತಿ, ನೀನು ಮೂರ್ನೆತಿಲಿ ಇದ್ದವನು ಈಗ ನಾಕ್ನೇತಿ ಆಗ್ಬಿಟ್ಟೆ. ನಲಿ-ಕಲಿ ಮುಗ್ದು, ಕಲಿ-ನಲಿಗೆ ಬಂದ್ಬಿಟ್ಟೆ’ ಎಂದಾಗ,

‘ಸರ್, ಸರ್ ನಮ್ತಾಮ್ಮಗೆ ಲೋಗೋ ಅಂದ್ರೆ ಗೊತ್ತಿಲ್ಲ. ನಾನು ಲೋಗೋ ಸುದ್ದಿ ತೆಗ್ದರ್ರೆ ಅವನು ನನಗೆ ಹೋಗೋ ಅಂತವ್ನೆ. ಮೆಟ್ಲ ಸುದ್ದಿ ತೆಗ್ದರ್ರೆ ,ಬಾ ಅಟ್ಟಕ್ಕೊಗ್ವಾ ಅಂತವ್ನೆ. ತಟ್ಟೆ ಸುದ್ದಿ ತೆಗ್ದರ್ರೆ ಒಳಗಿತು ಅಂತವ್ನೆ. ಚಪ್ರಾ ಎಲ್ಲಿದೆ ಅಂದ್ರೆ ಹೊರ್ಗೆ ಓಡ್ಬರ್ತಾ. ಇದೆಲ್ಲಾ ಕೇಳಿ ನಾನು ಹೊಟ್ಟೆ ತುಂಬಾ ನೆಗಿ ಆಡ್ತೆ ಸರ್. ಪಾಪ ! ನಲಿ-ಕಲಿ ಮಕ್ಕಳು ನಲಿ-ಕಲಿ ಕೋಣಿ ನೊಡ್ದೆ ಎರಡ್ನೇತಿಗೆ ಬಂದ್ಬಿಟ್ರು. ನಾನು ರ ಗ ಸ ದ ಅ ಬರಿ ಅಂದ್ರೆ ಅವ್ನು ಬರುದಿಲ್ಲ. ಆಬ್ಬಿ ಮಗ್ಗಿ ಪುಸ್ತಕ ತಂದು ಕೊಟ್ಟವಳೆ. ನೆನಪಾದಟೊತ್ಗೆ ಅ ಆ ಇ ಈ ಬರ್ದಾಂಗೆ ಮಾಡ್ತಾ. ಸರ್ ಸಾಲಿಲಿ ಕೊಟ್ಟ ಪುಸ್ತಕ ತೆಗೂದಿಲ್ಲ.’

‘ಸರ್, ಮತ್ತೊಂದ್ಕಾತಿ ನಿಮ್ಗೆ ಗೊತ್ತಿಲ್ಲ. ಅವ್ನಿಗೆ ನಲಿ-ಕಲಿಯ ಒಂದು ಹಾಡೂ ಬರುದಿಲ್ಲ. ಕಾರ್ಡ್ಂತೂ ನೋಡ್ಲಿಲ್ಲ. ನಲಿ-ಕಲಿ ಕ್ಲಾಸ್ಲ್ಲಿ ಕುಳ್ತಕೊಳ್ಳೊದು ಗೊತ್ತೀಲ್ಲ. ವಾಚಕ ಅಂದ್ರೆ ಏನು? ಹವಾಮಾನ ನಕ್ಷೆ ಎಲ್ಲಿ ತೂಗಾಕ್ತಾರೆ. ಒಂದು ಗೊತ್ತಿಲ್ಲ. ಅಭ್ಯಾಸ ಪುಸ್ತಕ್ದಲ್ಲಿ ಏನ್ ಬರೀಬೇಕು. ತಟ್ಟಿಲಿ ಹ್ಯಾಂಗೆ ಓಡಾಡಬೇಕು. ಪ್ರಗತಿ ನೋಟ ಹೇಗಿರುತ್ತೆ ? ಕಲಿಕಾ ಸಾಮಗ್ರಿ ಎಲ್ಲಿರ್ತದೆ ? ಒಂದು ಗೊತ್ತಿಲ್ಲ. ಸರ್, ಮಗ್ಗಿ ಹೇಳು ಹೊತ್ಗೆ ಮಲಗ್ಬಿಡ್ತ. ಸಂಜಿಕೆ ಆಬ್ಬಿ ಬಂದವ್ಳೆ ಆವ್ನಿಗೆ ಉಂಬುಕ ಹಾಕಿ ಮಲ್ಗಿಸ್ ಬಿಡ್ತವ್ಳೆ. ಹಾಸ್ಗಿಲೆ ಉಚ್ಚಿ ಹೊಯ್ಕಂಡಿ ಹಾಂಗೆ ಮಲ್ಗ ಬಿಡ್ತಾ. ಸಾಲಿ ಇದ್ದಾಗ ಹಾಂಗೆ ಮಾಡ್ತಾ ಇರ್ಲಿಲ್ಲ ಸಾರ್.’

‘ಸರ್, ನಮ್ತಾಮ್ಮ ಬೆಳ್ಗಾಗೆ ಬ್ಯಾಗೆ ಏಳುದಿಲ್ಲ. ಅಮ್ಮನೂ ಏಳ್ಸೂದಿಲ್ಲ.ನನ್ಗೆ ಮಾತ್ರೆ ಬೆಳ್ಗಾಗೆ ಎಳಸ್ತಾಳೆ.ನಾನ್ ಎದ್ಕಂಡಿ ಮೊಖ ತೊಳ್ಕಂಡಿ, ಹೂಂಗ ಕೊಯ್ಕಂಡಿ, ದ್ಯಾವರ ಪೂಜೆ ಮಾಡ್ಬೇಕು. ಅಪ್ಪ ಎದ್ದವ್ನೆ ಮೊಖ ತೊಳ್ಕಂಡಿ, ಹೆಗಲ್ಮೆಲೆ ತುಗಲ ಹಾಕ್ಕಂಡಿ ಅಂಗ್ಡಿಬದಿಕೆ ಹೋದವ್ನು ಅಂಗ್ಡಿಲಿ ಚಾ ಕುಡ್ಕಂಡಿ, ತಿಂಡಿ ತಿನ್ಕಂಡಿ ಒಡೆಯ್ನಮನೆ ಹೋದವ್ನು ಕೆಲ್ಸಾ ಮುಗಿಸಿ ಬರುದೇ ಸಂಜಿಕೆ. ಆಬ್ಬಿನೆ ಎಲ್ಲಾ ಕೆಲ್ಸಾ ಮಾಡ್ಬೇಕು. ನಮ್ಗೆಲ್ಲಾ ಚಾ ತಿಂಡಿ ಮಾಡ್ಕಂಡಿ, ಅನ್ನ ಮಾಡಿಟ್ಟಿ, ತಾಣ್ಣೀ ಸಾರಿದ್ರೆ ಅದೇ ಬಿಸ್ಮಾಡಿಟ್ಟಿ , ಇಲ್ಲಾಂದ್ರೆ ತಂಬ್ಳಿ ಮಾಡಿಟ್ಟಿ ಕೆಲ್ಸಗೆ ಹೊಗ್ತದೆ.ಕೆಲ್ಸ ಬಿಟ್ಬರೊದು ಮೂರ್ಗೆಂಟಿಗೆ.’

‘ನಮ್ತಾಮ್ಮ ಒಂಬತ್ಗೆಂಟಿಗೆ ಏಳ್ತ ಸರ್. ಎದ್ಮೇಲೆ ಹಲ್ಲ ಸರಿಯಾಗಿ ತಿಕ್ಕುದಿಲ್ಲ. ಹೆರ್ಗೆ ನೀರ ಚರ್ಗಿ ಒಲಿಮ್ಯಾಲೆ ಇರ್ತದೆ. ಇಂವ ಎದ್ದವ್ನೆ ಚರ್ಗಿ ಹತ್ರಾ ಹೋಗಿ ಕೈಗೆ ಒಂದಿಷ್ಟು ಮಸಿ ಬಡ್ಕಂಡಿ ಹಲ್ಗೆ ತಿಕ್ತ. ಒಂದೊಂದ್ಸಲ ಕೈ ತಾಕಂಡಿ ಹೊಂಯ್ಗಿ ಮ್ಯಾಲೆ ಇಡ್ತಾ. ಕೈಗೆ ಒಂದಿಷ್ಟು ಹೊಂಯ್ಗಿ ಬಡಿತದೆ. ಅದ ತಾಕಂಡಿ ಹಲ್ತಿಕ್ತ.ಒಂಚೂರು ಚೊಕ್ಕಾಗುದಿಲ್ಲ ಸರ್. ನಮ್ಮಜ್ಜ ಹಾಂಗೆ ಮಾಡಿ ಹಲ್ತಿಕ್ಕುದು. ಅದನ್ನಾ ನಮ್ತಾಮ್ಮ ನೊಡ್ಕಂಡವ್ನೆ ಸರ್. ಮೊಖ ತೊಳ್ಕಂಡಿ ಬಂದಂವ ದ್ಯಾವರ್ಗು ಕೈ ಮುಗಿದಿಲ್ಲ. ಹಾಂಗೆ ತಿಂಡಿ ತಿನ್ಕಂಡಿ ಆಡುಕೆ ಹೋದವ್ನು ಬರುದು ಉಂಬುಕೆ. ಉಂಡ್ಕಂಡಿ ಆಡೂಕೆ ಹೊದ್ರೆ ಬರುದು ಸಂಜಿಕೆ. ನಾನೇ ತಾಟು ತೊಳಿಬೇಕು. ಸಾಲಿಲಾದ್ರೆ ನಾನು, ವೆಂಕಟೇಶ, ಹರೀಶ, ಆರತಿ, ತಿಮ್ಮಪ್ಪ, ಗೋವಿಂದ ಎಲ್ಲರೂ ಸೇರಿ ಊಟ ಮಾಡ್ತಿದ್ರು. ಎಷ್ಟು ಖುಷಿಯಾಗ್ತಿತ್ತು ಸರ್. ಆದರೆ ಈಗ ಏನೂ ಇಲ್ಲ. ನನಗಂತೂ ಬೇಜಾರ್ ಬಂದ್ಬಿಟ್ಟಿದೆ. ನಮ್ತಾಮ್ಮನನ್ನು ಹೀಗೆ ಬಿಟ್ಟರೆ ಏನೂ ಕಲ್ಯೊದಿಲ್ಲ. ಸಾಲಿ ಇದ್ದಾಗ ಹಿಂಗೆ ಮಾಡ್ತಾ ಇರ್ಲಿಲ್ಲ. ಅವ್ನೆನದರೂ ಕಲೀಬೇಕು ಅಂದ್ರೆ ಸಾಲಿ ಶುರು ಆಗ್ಬೆಕು. ಸಾಲಿ ಯಾವಾಗ ಸುರು ಆಯ್ತದೆ. ಸರ್, ವೆಂಕಟೇಶ ಮಾನಿಲಿ ನಿನ್ನಾಗೆ ದೊಡ್ಡ ಜಗಳಂತೆ. ವೆಂಕಟೇಶ ನಿನ್ನಾಗೆ ಉಣ್ಣಲೆಲಂತೆ . ಎಂಥ ಆಗಿದ್ಯಾ ಎನ್ ಕಾಥಿನಾ.ನಾ ಬರ್ತೆ ಸರ್….’

ಪಿ.ಆರ್. ನಾಯ್ಕ, ಹೊಳೆಗದ್ದೆ

ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*