ನಮ್ಮ ಕಥೆ- ನಮ್ಮ ವ್ಯಥೆ… ಪಿ.ಆರ್. ನಾಯ್ಕರ ಬರಹ ಮಾಲಿಕೆ – ೩


ನಮಸ್ಕಾರ ಸರ್… . ಸಾಲಿ ಯಾವಾಗ ಶುರು ಆಗುತ್ತದೆ ಸರ್. ನನಗೆ ಮಾನಿ ಕೆಲ್ಸಾ ಮಾಡ್ಮಾಡಿ ಬೇಜಾರ್ ಬಂದ್ಬಿಟ್ಟಿದೆ ಸರ್. ನಮ್ಮ ಆಬ್ಬಿಗೆ ಲಾಯ್ಕಾಗಿದೆ . ಅದು ಬೆಳ್ಗಾಗೆ ಸಬ್ಬಾಯ್ತೊಡಿನ ಮನಿ ಕೆಲ್ಸಕ್ಕೆ ಹೊದ್ರೆ ಮಾನಿಗೆ ಬರುದೇ ಮೂರ್ಗೆಂಟಿಗೆ. ಅಲ್ಲಿವರೆಗೆ ನಾನೇ ಎಲ್ಲ ಕೆಲ್ಸಾ ಮಾಡ್ಬೇಕು. ಮೊನ್ನೆ ಅಪ್ಪ ಮಂಡ್ಲಿ ಮೀನ್ ತಾಕಂಡಿ ಬಂದವ್ನೆ. ಸಣ್ಣ ಜೊಬ್ಬು ಮೀನು . ಅದು ಮುಗ್ಗಿ ಹೋಗಿತ್ತು. ಮಾಡುವಾಗ್ಲೆ ತುಂಡಾಗಿತ್ತು. ಆದರೂ ಹೆಂಗೋ ಮಾಡಿ ಸಾರ್ ಮಾಡ್ದೇ ಸರ್. ಆದರೆ ಮೀನು ಮುಗ್ಗಿ ಕೆಟ್ಟ ವಾಸನೆ ಬರ್ತಿತ್ತು. ನಂಗಂತೂ ಮೈಯೆಲ್ಲಾ ಹೆಸೊಯ್ತು ಸಾರ್. ನನಗೆ ಎಲ್ಲ ಮೀನು ಮಾಡೂಕೆ ಬರ್ತದೆ ಸರ್. ಆದರೆ ಸಾಡಿ ಮಾತ್ರ ಮಾಡುದಿಲ್ಲ . ಒಂದ್ಸಲ ಅದರ ಮುಳ್ಳು ತಾಗಿ ನನ್ನ ಕೈ ಬಾತ್ ಹೋಗಿತ್ತು. ಅದರ ಮುಳ್ಳು ಗಟ್ಟಿ.ತಾಗಿದ್ರೆ ಸೆರ್ಕಿ ಬರ್ತದೆ. ಅದನ್ನು ಕತ್ತಿ ಮಂಡೆಲಿ ಹೊಡ್ದಿ ಮೈಮೇಲಿನ ಮುಳ್ಳು ಮೂರ್ಕಂಡ್ರೆ ಅಡ್ಡಿಲ್ಲ ಸರ್. ಆದರೆ ನನಗೆ ಆ ಮೀನ್ ಮಾಡ್ಲಿಕ್ಕೆ ಹೆದರಿಕೆ. ಗುರ್ಕನೂ ಹಾಗೆ. ಅದಕ್ಕೂ ಮುಳ್ಳು ರಾಶಿ. ಕೊಕ್ರನ ಮೈ ಮೇಲೆ ಮುಳ್ಳು. ಅದನ್ನು ಸೊಲ್ದಿ ತೆಗಿಬೇಕು.ಅದೂ ಮಾಡುವುದು ಕಷ್ಟ.

ತೂರಿ, ಕಲ್ಗೊಟ್ಲಿ, ಬಂಗಡೆ, ಅಂಬರ್ಕಿ ಆದರೆ ನಾನೇ ಕೊಚ್ಚಿ ಸಾರ್ ಮಾಡಿ ಇಡ್ತೆ ಸರ್. ಒಣಗನ ಜೊಬ್ಬು ಆದ್ರೆ ಆಚೀಚೆ ಚಪ್ಪು ಮೂರ್ದಿ ನೀರ್ನಲ್ಲಿ ತೊಳೆದು ಸಾರ್ ಮಾಡೆ ಬಿಡ್ತೆ. ಒಣಗನ ಸೆಟ್ಲಿ ಆದರೆ ಬೆಸ್ಟ್ ಸರ್. ಬ್ಯಾಗೆ ಸಾರ್ ಆಗ್ಬಿಡ್ತದೆ. ನಮ್ಮನಿಲಿ ದಿನ ಮೀನ್ ಸಾರು ಆಗಲೇ ಬೇಕು. ಇಲಂದ್ರೆ ಅಪ್ಪ ಉಂಬುದೇ ಇಲ್ಲ. ಸೊಮಾರ, ಸಣ್ಯಾರ ಎರ್ಡ ದಿನ ಮಾತ್ರ ತರ್ಕಾರಿ. ಉಳಿದು ದಿನ ಮೀನ್ಸಾರು ಆಗಲೇಬೇಕು.ಹನ್ನೆರಡು ಗೆಂಟಿಯೊಳಗೆ ಅಡುಗೆ ಎಲ್ಲಾ ಮಾಡಿ ಎಯ್ಡ ಆನ್ನಾ ಹಾಕಂಡಿ ಉಂಡೆ ಬಿಡ್ತೆ ಸರ್. ನನ್ ತಂಗಿಗೂ ಎಯ್ಡ ಹಾಕೊಡ್ತೆ ಅದು ಉಂಡ್ಬಿಡ್ತದೆ.

ಉಂಡ ಆದ್ಮೇಲೆ ವಸ್ತ್ರ ತೊಳ್ಕಂಡಿ, ನೀರ್ ತುಂಬ್ಕಂಡಿ, ನೆಲವರ್ಸಂಡಿ ಮಲ್ಗ್ ಬಿಡ್ತೆ ಸಾರ್. ನನ್ಗೆ ಓದೂಕೆ ಮನ್ಸೆ ಇಲ್ಲ.

ಸಂಜಿಕೆ ಲೈಕ್ ಆಗ್ತದೆ ಸರ್ ನಾನು , ಆಬ್ಬೆ , ತಂಗಿ ,ಅಪ್ಪ ಎಲ್ಲ ಸೇರ್ಕೊಂಡು ಧಾರವಾಹಿ ನೋಡ್ತೇವೆ. ನಮ್ ತಂಗಿ ಧಾರವಾಹಿ ನೋಡ್ತಾ ನೋಡ್ತಾ ಒಂದೊಂದಿನ ಅಲ್ಲೇ ಮಲಗ್ಬಿಡ್ತದೆ. ಉಂಬುಕೆ ಎಳ್ಸುದ್ರೂ ಏಳುದಿಲ್ಲ. ಒಂದೊಂದಿನ ಉಪವಾಸ ಮಲಗ್ಬಿಡ್ತದೆ. ಆದರೆ ನಾವೆಲ್ರೂ ಮಂಗಳಗೌರಿ , ಗಟ್ಟಿಮೇಳ, ಕನ್ನಡತಿ, ಜೊತೆ ಜೊತೆಯಲಿ ಎಲ್ಲ ಧಾರವಾಹಿ ನೋಡ್ಕಂಡೆ ಮಲ್ಗೊದು. ನಮ್ಮಪ್ಪ ಏನೂ ಹೇಳುದಿಲ್ಲ. ಆದರೆ ಆಬ್ಬಿ ಓದು, ಓದು ಅಂತಾಳೆ. ಧಾರವಾಹಿ ಸುರು ಆದ್ಮೇಲೆ ನಾವಿಬ್ರೂ ಮಾತಾಡ್ತೆ ನೋಡ್ತೇವೆ. ಸರ್ ನಮಗೆ ಲೈಕ್ ಆಗದೆ. ಈಗಂತೂ ಓದುಕೆ ಮನ್ಸಿಲ್ಲ.

ಆದ್ರೂ ಶಾಲೆ ಶುರು ಆಗ್ಬೆಕಿತ್ತು. ಇಲ್ಲಾಂದ್ರೆ ನಾವ್ಯಾರು ಕಲಿಯೋದೆ ಇಲ್ಲ ಸರ್.

ನೋಡು ಭಾಗ್ಯಶ್ರೀ, ಕಲಿಕೆಗೆ, ಭವಿಷ್ಯದ ಕನಸಿಗೆ ಇದು ಯಾವುದು ಅಡ್ಡ ಬರುವುದಿಲ್ಲ. ಆದರೆ ಮನೆಯಲ್ಲಿರುವ ನಿಮ್ಮ ತಂದೆ-ತಾಯಿ ಒಂದಿಷ್ಟು ಕಾಳಜಿ ತಗೊಂಡಿದ್ದರೆ ನಿಮ್ಮ ಮನೆಯಲ್ಲಿ ಯಾರಾದರೂ ಕಲ್ತವ್ರು ಇದ್ರೆ ಈ ರೀತಿ ಆಗ್ತಾ ಇರ್ಲಿಲ್ಲ. ನೀನು ಮಾತ್ರ ಯಾವುದೇ ಭರವಸೆಯನ್ನು ಕಳೆದುಕೊಳ್ಳಬೇಡ. ಮಾನಸಿಕವಾಗಿ ಖಿನ್ನತೆ ಹೊಂದಬೇಡ. ಧೈರ್ಯವಾಗಿರು. ಓದಿನ ಮೂಲಕ ಎಲ್ಲವೂ ಸಾಧ್ಯ. ಆದರೆ ನಮ್ಮ ಚಿಂತನೆ ಧನಾತ್ಮಕವಾಗಿರಲಿ. ನಾಳೆಯಿಂದ ನೀನು ಮೊದಲಿನಂತೆ ಅಭ್ಯಾಸ ರೂಢಿಸಿಕೊ.ನಾನು ನಿಮ್ ಮನೆಗೆ ಬಂದು ನಿಮ್ಮಪ್ಪ- ಅಮ್ಮನ ಹತ್ತಿರ ಮಾತನಾಡುತ್ತೇನೆ. ಹೀಗೆ ಹೇಳುತ್ತಿರುವಾಗಲೇ ನಮ್ಮ ಮನೆಗೂ ಬರಬೇಕು ಸರ್. ನನ್ನ ತಮ್ಮನಿಗೂ ಬುದ್ಧಿ ಹೇಳಬೇಕು ಎಂದು ಕೂಗಿದ ಗೌರೀಶ…..

ಪಿ.ಆರ್. ನಾಯ್ಕ, ಹೊಳೆಗದ್ದೆ

ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಉತ್ತಮ ಕಥಾಮಾಲಿಕೆ…
    ಅಭಿನಂದನೆಗಳು ಸರ್. ಹೀಗೆ ಸಾಗುತ್ತಿರಲಿ ತಮ್ಮ ಅಕ್ಷರಮಾಲೆ..

Leave a Reply

Your email address will not be published.


*