ಶಿಕ್ಷಣ ಇಲಾಖೆಯಲ್ಲಿ ಹೆಜ್ಜೆ ಗುರುತು ಮೂಡಿಸಿದ ಹೊನ್ನಾವರದ ವಿ.ಆರ್.ನಾಯ್ಕ

ವ್ಯಕ್ತಿಯಲ್ಲಿ ಸುಪ್ತವಾಗಿರುವ ಜ್ಞಾನ ಸಂಪತ್ತನ್ನು ವ್ಯವಸ್ಥಿತವಾಗಿ ವಿಕಸಿಸುವಂತೆ ಮಾಡಿ, ಅಧ್ಯಯನಶೀಲ ಪ್ರವೃತ್ತಿಯನ್ನು ಪ್ರಚೋದಿಸಿ, ಸಮಾಜಮುಖಿ ಚಿಂತನೆಗಳನ್ನು ಬೆಳೆಸಿ, ಅವನಲ್ಲಿರುವ ಪ್ರತಿಭೆಗೆ ಸಾಣೆ ಹಿಡಿದು ಪ್ರಭಾವಿಸುವ ಉಪನ್ಯಾಸಕರಲ್ಲಿ ಕುಮಟಾದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ವಿ.ಆರ್. ನಾಯ್ಕರು ಒಬ್ಬರು.

ರಾಜ್ಯ ರಾಷ್ಟ್ರಮಟ್ಟದ ಅನೇಕ ಸೆಮಿನಾರುಗಳಲ್ಲಿ ಭಾಗವಹಿಸಿ ಡಯಟ್ ನ ಹಿರಿಮೆಯನ್ನು ಹೆಚ್ಚಿಸಿದ ಅಪರೂಪದ ಸಾಧಕರು. ಯಾವುದೇ ವಿಷಯವನ್ನಾದರೂ ನಿರರ್ಗಳವಾಗಿ ಮಾತನಾಡುವ ವಾಗ್ಮಿಗಳು ಕೂಡ. ತಮ್ಮ ಸ್ನೇಹಶೀಲ ಸ್ವಭಾವ, ಹಾಸ್ಯಮಿಶ್ರಿತ ಮಾತುಗಳಿಂದಲೇ ಕಿರಿಯವರೊಡನೆಯೂ ತಮ್ಮ ಹಿರಿತನವನ್ನು ಮರೆತು ಮುಗ್ಧವಾಗಿ ಬೆರೆಯುವ ಅವರ ಸ್ವಭಾವ, ವೃತ್ತಿಯ ಬಗೆಗಿನ ಕರ್ತವ್ಯ ಪ್ರಜ್ಞೆಯಿಂದಾಗಿ, ಕ್ರಿಯಾಶೀಲ ಮನಸ್ಸಿನಿಂದಾಗಿ ವಿ.ಆರ್.ನಾಯ್ಕರು ಎಲ್ಲರಿಗೂ ಆಪ್ತರಾಗಿ ಬಿಡುತ್ತಾರೆ.ಒಬ್ಬ ವಿಜ್ಞಾನ ಶಿಕ್ಷಕರಾಗಿ ವೈಜ್ಞಾನಿಕ ನೆಲೆಯಲ್ಲಿಯೇ ಉತ್ತರ ಹುಡುಕುವ ಇವರ ಜೀವನ ಪ್ರೀತಿ ಅಗಾಧವಾದದ್ದು. ಇವರೊಬ್ಬ ಆಚಾರಕ್ಕೆ ಅರಸನಾಗಿ, ನೀತಿಗೆ ಪ್ರಭುವಾಗಿ, ಶ್ರೇಷ್ಠ ಸಂವಹನಕಾರರಾಗಿ, ಸಚ್ಚಾರಿತ್ರ್ಯದ ವ್ಯಕ್ತಿಯಾಗಿ, ನಿರ್ಮಲ ಪ್ರೀತಿ ತುಂಬಿದ ಹೃದಯವಂತರಾಗಿ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆಸಲ್ಲಿಸಿದ ಅಜಾತಶತ್ರು ಎಂದರೂ ತಪ್ಪಲ್ಲ.

ಮೂಲತಃ ಹೊನ್ನಾವರ ತಾಲೂಕಿನ ಮೇಲಿನ ಇಡಗುಂಜಿ ಯವರಾದ ವಿಠ್ಠಲ ನಾಯ್ಕರು ೧೯೬೧ ರಲ್ಲಿ ತಂದೆ ರಾಮ ನಾಯ್ಕ ,ತಾಯಿ ಈರಮ್ಮ ನವರಿಗೆ ಮುದ್ದಿನ ಮಗನಾಗಿ ಜನಿಸಿದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೂ, ಪದವಿ ಪೂರ್ವ ಶಿಕ್ಷಣವನ್ನು ಕುಮಟಾದ ಡಾಕ್ಟರ್ ಎ.ವಿ. ಬಾಳಿಗ ಕಾಲೇಜಿನಲ್ಲಿಯೂ, ಪದವಿ ಶಿಕ್ಷಣವನ್ನು ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರೈಸಿದರು. ಬಿಎಸ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಎಮ್.ಎಡ್. ಪದವೀಧರರು ಕೂಡ.

ಸದಾ ಅಧ್ಯಯನಶೀಲರಾಗದ ವಿ.ಆರ್. ನಾಯ್ಕರು ೧೯೮೪ ರಲ್ಲಿ ಅಂಕೋಲಾ ತಾಲೂಕಿನ ಹಿಲ್ಲೂರಿನ ಸರಕಾರಿ ಪ್ರೌಢಶಾಲೆಗೆ ವಿಜ್ಞಾನ ಶಿಕ್ಷಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದರ ಮೂಲಕ ಓರ್ವ ಅತ್ಯುತ್ತಮ ವಿಜ್ಞಾನ ಶಿಕ್ಷಕರೆಂದೇ ಪರಿಚಿತರಾದರು. ನಂತರ ೧೯೯೪ ರಲ್ಲಿ ಸರಕಾರಿ ಪ್ರೌಢಶಾಲೆ ತೆರಗಾಂವಗೆ ವರ್ಗವಾಗಿ ಹೋದರು. ಅಲ್ಲಿಯೂ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಅಧ್ಯಾಪಕರೆನಿಸಿಕೊಂಡರು. ೧೯೯೪ ರಲ್ಲಿ ಕೆ. ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ೧೯೯೮ ರಲ್ಲಿ ಕಾರವಾರದ ಉಪನಿರ್ದೇಶಕರ ಕಚೇರಿಯಲ್ಲಿ ವಿಷಯ ಪರೀವಿಕ್ಷಕರಾಗಿ ನೇಮಕರಾದರು. ನಂತರ ೨೦೦೬ ರಲ್ಲಿ ಕುಮಟಾದ ಡಯಟ್ ಗೆ ಹಿರಿಯ ಉಪನ್ಯಾಸಕರಾಗಿ ವರ್ಗವಾಗಿ ಬಂದರು. ೨೦೧೨ ರಿಂದ ಹೊನ್ನಾವರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ,೨೦೧೩ ರಂದು ಪುನಃ ಡಯಟ್ ಗೆ ವರ್ಗವಾಗಿ ಬಂದರು. ೨೦೧೮ ರಂದು ಸಿದ್ದಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಆ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಿದ್ದಾಪುರ ತಾಲೂಕು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆಯುವಲ್ಲಿ ಇವರ ಶ್ರಮ ಅಡಗಿದೆ. ಸಿದ್ದಾಪುರ ತಾಲೂಕಿನ ಕಾವಂಚೂರು ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರು ಇಲ್ಲದಿರುವಾಗ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಯಲ್ಲಿರುವ ವಿ.ಆರ್.ನಾಯ್ಕರವರೇ ಆ ಶಾಲೆಯಲ್ಲಿ ಹದಿನೈದು ದಿನಗಳವರೆಗೆ ಗಣಿತ ಪಾಠ ಮಾಡಿ ಶೇಕಡ ನೂರರಷ್ಟು ಫಲಿತಾಂಶ ಬರಲು ಕಾರಣೀಕರ್ತರಾಗಿದ್ದಾರೆ. ಗಣಿತ ವಿಷಯವನ್ನು ಸುಲಭವಾಗಿ ಸುಲಿದ ಬಾಳೆಯ ಹಣ್ಣಿನಂದದಿ ಕಲಿಸುವ ಚಾಕಚಕ್ಯತೆ ಇವರದ್ದು. ಈ ಕಾರಣಕ್ಕಾಗಿಯೇ ಧಾರವಾಡದ ಮಾನ್ಯ ಆಯುಕ್ತರಿಂದ ವಿಶೇಷ ಗೌರವಕ್ಕೆ ಪಾತ್ರರಾದರು. ನಂತರ ೨೦೧೯ ರಂದು ಮತ್ತೆ ಕುಮಟಾದ ಡಯಟ್ ಗೆ ವರ್ಗವಾಗಿ ಬಂದು ಪ್ರಸಕ್ತ ಸಾಲಿನ ಜೂನ್ ೩೦ ರಂದು ನಿವೃತ್ತಿಯಾಗಲಿದ್ದಾರೆ.

ತಮ್ಮ ಸುದೀರ್ಘ ಮೂವತ್ತೇಳು ವರ್ಷಗಳ ಸೇವಾವಧಿಯಲ್ಲಿ ಸುಮಾರು ೧೨ ವರ್ಷಗಳ ಕಾಲ ದಲ್ಲಿ ಡಯಟ್ ಕುಮಟಾದಲ್ಲಿ ಹಿರಿಯ ಉಪನ್ಯಾಸಕರಾಗಿ ರಾಜ್ಯ ಮಟ್ಟದ ಹಲವು ಕಾರ್ಯಕ್ರಮಗಳ ನೋಡಲ್ ಅಧಿಕಾರಿಯಾಗಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ವಿಜ್ಞಾನ, ಗಣಿತ ವಿಷಯಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲೆಲ್ಲ ವಿ.ಆರ್.ನಾಯ್ಕರೇ ನಾಯಕರು. ಜಿಲ್ಲಾ ಚಿಣ್ಣರ ದರ್ಶನ ಸಾಹಿತ್ಯ ರಚಿಸಿದ ಸಂಪನ್ಮೂಲ ವ್ಯಕ್ತಿಗಳು ಕೂಡ. ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ಸಂಸ್ಥೆ (ಸಿಸ್ಲೆಪ್) ಯವರು ನಡೆಸಿದ ನಾಯಕತ್ವ ತರಬೇತಿಯ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. ನಿರ್ವಹಣಾ ಅಭಿವೃದ್ಧಿ ಯೋಜನೆ ಈ ತರಬೇತಿಯನ್ನು ೧೨೦ ದಿನಗಳ ಎಂ.ಡಿ.ಪಿ.ಪದವಿ ಪಡೆದು ರಾಜ್ಯದ ಟೊಪ್ ಟೆನ್ ರಲ್ಲಿ ಇವರು ಒಬ್ಬರಾಗಿದ್ದರು. ವಿಪ್ರೋ ಸಂಸ್ಥೆಯ ನೆರವಿನೊಂದಿಗೆ ರಾಜ್ಯದ ವಿವಿಧ ಹಂತದ ಅನುಷ್ಠಾನಾಧಿಕಾರಿಗಳಿಗೆ ತರಬೇತಿ ನೀಡಿ , ಸತತ ಎರಡು ವರ್ಷಗಳ ಕಾಲ ವಿಶಿಷ್ಟ ಯೋಜನೆ ರೂಪಿಸಿದ ಹೆಗ್ಗಳಿಕೆ ಇವರದ್ದು.ಶಿಕ್ಷಣ ಇಲಾಖೆಯಿಂದ ಹೊರ ರಾಜ್ಯಗಳ ಶೈಕ್ಷಣಿಕ ಅಧ್ಯಯನ ನಡೆಸಲು ಕೇರಳ,ಆಂಧ್ರಪ್ರದೇಶ,ದೆಹಲಿಯವರೆಗೂ ಹೋಗಿ ವಿಶೇಷ ಅಧ್ಯಯನ ನಡೆಸಿರುತ್ತಾರೆ.

ಭಾರತ ಸ್ಕೌಟ್ ಮತ್ತು ಗೈಡ್ಸ್, ಭಾರತ ಸೇವಾದಳದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ವಿಶೇಷ ಉಪನ್ಯಾಸ, ಕಾರ್ಯಾಗಾರ,ಮೇಳಗಳನ್ನು ಸಂಘಟಿಸಿದ ಶಿಸ್ತುಬದ್ಧ ಅಧಿಕಾರಿ ಎಂದೇ ಪರಿಚಿತ ರಾಗಿರುತ್ತಾರೆ. ಸಮರ್ಥ ಪ್ರೊಜೆಕ್ಟ್ ಸಂಸ್ಥೆಯವರು ರಾಜ್ಯದ ೧೩ ಡಯಟಗಳಿಗೆ ನಡೆಸಿದ ಡಿಜಿಟಲ್ ಟೆಕ್ನೋಲಜಿ ತಂತ್ರಜ್ಞಾನದ ಬಲವಧ೯ನೆಯಲ್ಲಿ ಉನ್ನತ ಶ್ರೇಯಾಂಕ ಪಡೆದಿರುವುದಕ್ಕೆ ಸುಮಾರು ೮ ಲಕ್ಷ ರೂಪಾಯಿ ವಿಶೇಷ ಅನುದಾನ ನೀಡಿರುವುದು ಇವರ ಕೃತ೯ತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.೨೦೦೨ ರಲ್ಲಿ ಸಿಸಿ೯ಯಲ್ಲಿ ನಡೆದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದ ನೊಡೆಲ್ ಅಧಿಕಾರಿಯಾಗಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಸಂಘಟಿಸಿ ಅಂದಿನ ಆಯುಕ್ತರಾದ ವಿಜಯಭಾಸ್ಕರ್ ರವರಿಂದ ಪ್ರಶಂಸೆಗೊಳಪಟ್ಟಿರುತ್ತಾರೆ.

ವಿಜ್ಞಾನ ವಸ್ತು ಪ್ರದರ್ಶನ, ಕ್ವಿಜ್, ವಿಜ್ಞಾನ ವಿಚಾರ ಸಂಕಿರಣ,ವಿಜ್ಞಾನ ನಾಟಕ, ಇಕೋ ಕ್ಲಬ್ ಮುಂತಾದ ಇಲಾಖೆಯ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನೋಡಲ್ ಅಧಿಕಾರಿಯಾಗಿ ಸುಮಾರು ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿರುತ್ತಾರೆ. ವಿಭಾಗ ಮಟ್ಟದ ಗಣಿತ ಪ್ರಶ್ನೆ ಪತ್ರಿಕೆ ತಯಾರಿಸುವ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.೧೯೯೯ ರಲ್ಲಿ ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದ ನೋಡಲ್ ಅಧಿಕಾರಿಯಾಗಿಯೂ, ಮೈಸೂರಿನ ಎಟಿಎ ಸಂಸ್ಥೆಯವರು ನಡೆಸುವ ಹಲವು ತರಬೇತಿಯಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿದ, ತರಬೇತಿ ಪಡೆದ ಅನುಭವಿಗಳು.

ಇತ್ತೀಚೆಗೆ ಶಿಕ್ಷಕರ ವೃತ್ತಿ ತರಬೇತಿ ನಿಷ್ಠಾ ಯೋಜನೆ, ಜಿಲ್ಲಾ ಪ್ರತಿಭಾ ಕಾರಂಜಿ, ನಬಾರ್ಡ್ ಯೋಜನೆ,ಇಕೋ ಕ್ಲಬ್, ಬಾಲಕಾರ್ಮಿಕ ನಿರ್ಮೂಲನ ಯೋಜನೆ, ಕ್ರಿಯಾ ಸಂಶೋಧನೆ ಇನ್ನು ಹಲವು ಇಲಾಖಾ ಕಾರ್ಯಕ್ರಮವನ್ನು ಸಮಪ೯ಕವಾಗಿ ಅನುಷ್ಠಾನಗೊಳಿಸುವ ನೋಡಲ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ ಅನುಭವವಿದೆ.ಇಲಾಖೆ ಎದುರಿಸುತ್ತಿರುವ ಕೋಟ೯ ಕಚೇರಿಗಳ ನಿರ್ವಹಣೆಯನ್ನು ಸುಮಾರು ೮ ವರ್ಷಗಳಿಂದ ನಿರ್ವಹಿಸುತ್ತ ಬಂದಿರುವುದು ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಯಾವುದೇ ಕೆಲಸ ನೀಡಿದರೂ ಜಾರಿ ಕೊಳ್ಳದೆ ಆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಇಲಾಖೆಯ ಘನತೆ ಗೌರವವನ್ನು ಹೆಚ್ಚಿಸುವಲ್ಲಿ ನಾಯಕರ ಸೇವೆ ಅನನ್ಯವಾಗಿದೆ.

ವಿಠ್ಠಲ್ ನಾಯ್ಕರವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಶ್ರೇಷ್ಠ ಅಧ್ಯಾಪಕರಾಗಿ, ವಿಚಾರವಂತರಾಗಿ, ಸಂಶೋಧಕರಾಗಿ, ಚಾಣಾಕ್ಷ ವಾಗ್ಮಿಯಾಗಿ, ಸಮಾಜಮುಖಿಯಾಗಿ, ನಿತ್ಯ ಓದುಗರಾಗಿ ,ಒಬ್ಬ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಯಾಗಿ, ಉಪನ್ಯಾಸಕರಾಗಿ,ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಹತ್ತು ಹಲವು ಕ್ಷೇತ್ರದಲ್ಲಿ ಕೈಯಾಡಿಸಿ ಸೈ ಎನಿಸಿಕೊಂಡವರು. ತಮ್ಮ ಅಪಾರವಾದ ಜ್ಞಾಪನ ಶಕ್ತಿ, ವಿಷಯ ಪ್ರಸ್ತುತ ಪಡಿಸುವ ಶೈಲಿಯಿಂದಾಗಿ ಶಿಕ್ಷಕ ಸಮೂಹದ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿರುತ್ತಾರೆ. ಸುಂದರ, ಸದೃಢ, ಆಕರ್ಷಕ ವ್ಯಕ್ತಿತ್ವದ ಸರಳ ಸಜ್ಜನಿಕೆಗೆ ಹೆಸರಾದ ವಿ. ಆರ್. ನಾಯ್ಕರವರು ಶಿಕ್ಷಣ ಇಲಾಖೆಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತನ್ನು ದಾಖಲಿಸಿ ನಿವೃತ್ತಿಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂಬುದೇ ಹಲವರ ಹಾರೈಕೆಯಾಗಿದೆ.

ಪಿ.ಆರ್.ನಾಯ್ಕ ಹೊಳೆಗದ್ದೆ ಕುಮಟಾ.
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಪ್ರಾಮಾಣಿಕ ಅಧಿಕಾರಿಗಳಾಗಿದ್ದವರು. ಇವರ ಅವಧಿಯಲ್ಲಿ ಸಿದ್ದಾಪುರ ತಾಲ್ಲೂಕಿನ ಎಸ್ಎಸ್ಎಲ್ ಸಿ ಫಲಿತಾಂಶ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷ ಸಾಧನೆಗೆ ಸಾಕ್ಸಿ

Leave a Reply

Your email address will not be published.


*