ನಮ್ ಕಥೆ…. ನಮ್ ವ್ಯಥೆ….ಪಿ.ಆರ್. ನಾಯ್ಕರ ಬರಹ ಮಾಲಿಕೆ–೨

ಛೇ… ಸುಬ್ಬು ಈಗಷ್ಟೇ ಶಾಲೆ ಪ್ರವೇಶಿಸಿ ಎರಡು ವರ್ಷ ಆಯ್ತು. ಓದ್ಲಿಕ್ಕೆ , ಬರ್ಲಿಕ್ಕೆ ಮಾತ್ರ ಪ್ರಾರಂಭಿಸಿದ ವಿದ್ಯಾರ್ಥಿಯಾಗಿದ್ದ. ಸ್ವಲ್ಪ ಕಿಲಾಡಿ ಜಾಸ್ತಿ. ಸುಮ್ಮನೆ ಕುತು ಕೊಳ್ಳುವವನಲ್ಲ .ಆಚೆ – ಈಚೆ ಕುಳಿತವರಿಗೆ ಚೂಟೋದು, ಅವರೊಟ್ಟಿಗೆ ಜಗಳ ಆಡೋದು, ಹೊಡೆಯೊದು, ಕೆಲವು ಸಲ ಕೆಟ್ಟ ಬೈಗಳು ಹೇಳಲು ಹಿಂಜರಿಯಲಾರ. ಒಮ್ಮೊಮ್ಮೆ ಸರ್ ನೀನು ಎಲ್ಲಿಂದ ಬರ್ತೆ, ಉಂಡಾಯ್ತಾ, ಎಂತ ಸಾರು ಉಂಡೆ, ನಂಗೆ ಓದುಕೆ ಬರೂಕೆ ಬರುವುದಿಲ್ಲ. ನೀನು ಹೊಡಿಬೇಡ, ನಂಗೂ ಸಿಟ್ಟು ಬರ್ತದೆ ಎಂದೆಲ್ಲಾ ಗುರುಗಳ ಹತ್ತಿರ ಸಲುಗೆಯಿಂದ ಮಾತನಾಡುವವ. ಏನೇ ಇರಲಿ ಸುಬ್ಬು ನಮ್ಮ ವಿದ್ಯಾರ್ಥಿ. ಮಾಸ್ತರರೇ ಅವನಿಗೆ ಗುರು. ಗುರುಶಿಷ್ಯರು ಅಂದಮೇಲೆ ಇಂಥದ್ದೆಲ್ಲ ಇರೊದೆ. ನೋಡುವ ಶಾಲೆ ಪ್ರಾರಂಭ ಆದ ಮೇಲೆ ಅವನ ಕಲಿಕೆಯ ಕಡೆಗೆ ಕಣ್ಣಿಟ್ಟರಾಯಿತೆಂದು ಆಲೋಚಿಸುತ್ತಿರುವಾಗಲೇ ವಿದ್ಯಾಶ್ರೀ ಅಳಲು ಪ್ರಾರಂಭಿಸಿದಳು.

ಸರ್ ಸುಬ್ಬುದು ಒಂದು ಕಥೆಯಾದರೆ, ನನ್ನ ಕಥೆ ಕೇಳೋರು ಯಾರು? ನಾನು ಈಗ ಐದನೇತ್ತಿ. ನನಗೂ ಓದ್ಬೇಕು, ಬರಿಬೇಕು ಅನ್ನೊ ಆಸೆಯಿದೆ. ಆದರೆ ಶಾಲೆ ಯಾವಾಗ ಲಾಕ್ಡೌನ್ ಆಯ್ತೋ ಆವಾಗ್ನಿಂದ ನನಗೆ ಓದ್ಲಿಕ್ಕೆ,ಬರಿಲಿಕ್ಕೆ ಮನಸ್ಸಿಲ್ಲ.

ಸರ್, ಸುರವೀಲಿ ಹಾಗಾಗ್ಲಿಲ್ಲ. ನಾನು ಬೆಳಗಾಗೆ ಮೊದ್ಲೆ ಎಳ್ತಿದ್ದೆ.ಎದ್ಮೇಲೆ ಮುಖ ತೊಳ್ಕೊಂಡು ಓದ್ತಿದ್ದೆ. ನಾನು ನಾಕ್ನೇತಿವರೆಗೂ ಕ್ಲಾಸಿಗೆ ಪಸ್ಟ ಬರ್ತಿದೆ. ಈಗ್ಲೂ ಒಂದನೇ ನಂಬರ್ ಬರ್ಬೆಕು ಹೇಳಿ ಮೊದಲೇ ಎದ್ದು ಓದುತ್ತಿದ್ದೆ. ಆದರೆ ಹಾಳಾದ ಈ ಕೊರೋನಾ ಬಂದು ಸಾಲಿನೇ ಮುಚ್ಬಿಡ್ತು. ಸರ್, ನೀವು ಕೊಟ್ಟ ಹೊಂಮ ವಕ೯ ಎಲ್ಲಾ ಮಾಡ್ತಾ ಇದ್ದೆ. ನಾನು ಸಾಲಿಗೆ ಬರುವಾಗ ಟಿವಿ ನೋಡ್ತಾ ಇರ್ಲಿಲ್ಲ. ಧಾರಾವಾಹಿ ನೋಡಲೇ ಇಲ್ಲಾಗಿತ್ತು. ನಂಗೆ ಸಾಲಿದೆ ಚಿಂತೆ. ಯಾವಾಗ ಶಾಲೆ ಸುರು ಆಯ್ತದೇನೊ?

ಮೊನ್ನೆ ನಿದ್ರೆ ಬಿದ್ದು ಏಳೋಕೆ ತಡ ಆಯ್ತು ಸರ್. ಕssಡಿಗೆ ಎಚ್ರಾದ್ರೂ ಚಾದರ ಮುಚ್ಕೊಂಡು ಕಣ್ಣು ಒಡ್ಕಂಡೆ ಮಲಗಿದ್ದೆ. ನಮ್ಮಪ್ಪ ದ್ಯಾವರಪೂಜಿ ಮಾಡುತ್ತಿದ್ದಾಗ ಎದ್ದು ಕುತ್ಕಂಡೆ. ಆಗ ನಮ್ಮಬ್ಬೆ ಇಗೆಂತಕೆ ಎದ್ದೆ . ಎದ್ಕಂಡು ಎನ್ ದಂಡ್ಕಡಿತೆ. ಮಲಗು…ಮಲಗು. ಸಾಲಿಲಿ ಕೋರೋನಾ ಬಂದು ಕೂತ್ಕೊಂಡಿದೆ. ಅದ್ಕೆ ಸಾಲಿನೂ ಇಲ್ಲ. ನಾಳೆಯಿಂದ ನಾನು ಸಬ್ಬಾಯ್ತೊಡಿನ ಮನಿ ಕೆಲಸಕ್ಕೆ ಹೊಗ್ತೆ. ಮನಿಕೆಲಸ ನೀನೇ ಮಾಡ್ಬೇಕು ಎಂದು ಹೇಳಿದ್ದು ಕೇಳಿಸಿಕೊಂಡು ಮತ್ತೆ ಮುಚ್ಚಿಕೊಂಡು ಮಲಗೆ ಬಿಟ್ಟೆ ಸರ್.

ನಮ್ಮಾಬ್ಬಿಗೆ ನಾವೆದ್ರೆ ಕಷ್ಟ ಕೊಡ್ತರ್ರು ಅಂತ ನಮ್ಮನ್ನು ಎಳ್ಸೊದೆ ಇಲ್ಲ. ಸರ್ ಮೊಬೈಲ್ ಅಂತೂ ರಾಶಿ ಹೊತ್ತು ನಮ್ಮತ್ರ ಕೊಡೂದಿಲ್ಲ. ಪಾಠ ನೋಡುಕ್ಕೆ ಕೊಡುದಿಲ್ಲ. ಒಂದ ಅಧ೯ ತಾಸು ನೋಡಿ ವಾಪಸ್ ಕೊಡ್ಬೇಕು.ನಮ್ ಕಣ್ಣು ಹಾಳಾಗ್ತದ್ಯಂತೆ. ನಾಳೆಯಿಂದ ಕೆಲಸಕ್ಕೆ ಹೋಗುವಾಗ ತಾಕಂಡೆ ಹೊಯ್ತದ್ಯಂತೆ. ಸರ್ ಅಕ್ಕೊರು ಫೋನ್ ಬಂದರೆ, ಅಕ್ಕೋರೆ ಅವರು ನಮ್ ಮಾತು ಕೇಳುದಿಲ್ಲ.ಬರೀ ಮನಿಕಂಡೆ ಇರ್ತಾರೆ. ಆಟ ಆಡೋದು, ಟಿ.ವಿ. ನೋಡೋದು ಬಿಟ್ಟರೆ, ಬೇರೆ ಏನೂ ಮಾಡುದಿಲ್ಲ ಎಂದೇಳಿ ಫೋನು ಇಟ್ಬಿಡ್ತಾಳೆ. ನಮ್ಗೆ ಎಂತ ಮಾಡಬೇಕು ಹೇಳಿ ಗೊತ್ತಾಗುದಿಲ್ಲ ಸರ್.

ಮೊದ್ಲೇ ನಮ್ಮನಿಗೆ ಆರತಿ, ಕಾರ್ತಿಕ, ವೆಂಕಟೇಶ ,ಲಕ್ಷ್ಮಿ ತಿಮ್ಮಪ್ಪ, ಎಲ್ಲರೂ ಬರ್ತಿದ್ರು. ನಾವೆಲ್ಲ ಒಟ್ಟಾಗಿ ಓದುದು, ಬರೆಯೊದು, ಗುಂಪ್ನಲ್ಲಿ ಕುಂತು ಚಟುವಟಿಕೆ ಎಲ್ಲ ಮಾಡ್ತಿದ್ರು ಸರ್. ಆದರೆ ಈಗ ಯಾರು ಬರುದಿಲ್ಲ .ನಾವೂ ಎಲ್ಲಿಗೂ ಹೋಗುದಿಲ್ಲ .ಸರ್ ನಮ್ಮ ತಂಗಿ ಬಿಂದುಗಂತೂ ಲಾಯ್ಕ ಆಗಿದೆ. ಬರೀ ಟಿವಿ ನೋಡುದು ಮಲಗೊದು. ನಾವು ಮನೇಲಿರೋದು ನೋಡಿ ನಮ್ಮ ಆಬ್ಬಿಗೂ ಲಾಯ್ಕಾಗಿದೆ. ಈಗಂತೂ ಒಡೆನಮನಿ ಕೆಲಸ ಹೋಗ್ತದೆ.

ನೀನು ಓದದ್ದು ಸಾಕು. ಮನಿ ಚಾಕ್ರಿ ಮಾಡು ಅಂತ ನನಗೆ ಬೈದು ಹೋಗ್ತಾಳೆ. ಬೆಳ್ಗಾದ್ರೆ ಸಾರ್ಗೆ ಮಸಾಲೆ ಮಾತ್ರ ಬಿಸ್ಕೊಟ್ಟಿ ಹೋಗ್ತಾಳೆ. ಯಾಕಂದ್ರೆ ಮಸಾಲೆ ಬೀಸು ಕಲ್ಲು ನನ್ನತ್ರ ತಿರ್ಗಿಸ್ಲಿಕ್ಕೆ ಆಗುದಿಲ್ಲ. ಅದು ದೊಡ್ಕಾದೆ. ಅದ್ಕಾಗಿ ಅದೊಂದು ಕೆಲ್ಸ ಬಿಟ್ಟು ಬಾಕಿ ಎಲ್ಲ ಕೆಲ್ಸ ನಾನೇ ಮಾಡ್ಬೇಕು ಸರ್. ನನ್ ತಂಗಿ ಯಾವ ಕೆಲ್ಸಾನೂ ಮಾಡುದಿಲ್ಲ. ಸರ್ ನಾನೇ ಗುಡ್ಸಿ, ನೆಲವಸಿ೯, ಪಾತ್ರೆ ತೊಳ್ಕೊಂಡು, ದನಿಗೆ ಅಕ್ಕಚ್ಚು ಕೊಟ್ಕೊಂಡು ಚಾ ಕುಡಿತೆ ಸರ್. ತಿಂಡಿ ಒಂದೊಂದಿನ ಬ್ರೆಡ್ ಆದ್ರೂ ಆಯ್ತು, ದೊಸಿ ಆದ್ರೂ ಆಯ್ತು, ಅವಲಕ್ಕಿ ಆದ್ರೂ ಆಯ್ತು. ಅವಲಕ್ಕಿ ಮಾಡುದೇ ಜಾಸ್ತಿ. ನಮ್ಮ ತಂಗಿಗೆ ಅವಲಕ್ಕಿ ಅಂದ್ರೆ ಇಷ್ಟ. ಅವಲಕ್ಕಿಗೆ ಚಹಾ ಹಾಕಂಡಿ ಮುದ್ದಿ ಕಟ್ಕಂಡಿ ತಿಂತಾಳೆ ಸರ್.

ಚಾ ಆದ್ಮೇಲೆ ಅನ್ನ ಚರ್ಗಿ ಒಲೆ ಮೇಲೆ ಇಡ್ತೆ ಸರ್. ಅನ್ನದ ಚರ್ಗೆ ದೊಡ್ಡದು ಸರ್ .ನನ್ನ ಹತ್ರ ಅನ್ನ ಬಾಗ್ಸೂಕೆ ಆಗೂದಿಲ್ಲ. ಆದರೆ ಏನ್ ಮಾಡೊದು ಆಬ್ಬಿ ಬೈತದೆ. ಕೆಳಗೆ ತಾಪ್ಲಿ ಇಟ್ಕಂಡಿ ಅದರೊಳಗೆ ಹುಟ್ಟು ಹಾಕಿ ಕೌಂಚಿ ಮಲಗ್ಸಿಡ್ತೆ.

ಸರ್ ಮೊನ್ನಾಗೆ ಅನ್ನಬಾಗ್ಸ ಬೇಕಾದರೆ ತಿಳಿ ಚೆಲ್ಲಿ ಕೈಮೇಲೆ ಬಿದ್ದು ಬಿಡ್ತು. ಜೀಂವ ಹೋದಂಗಾಯಿತು. ಕssಡಿಗೆ ನಮ್ ತಂಗಿ ಗೆದ್ದಿ ಬೈಲಿಗೆ ಓಡಿ ಹೋಗಿ ಅಲ೯ ಮುದ್ದಿ ತಂದು ಕೈ ಮೇಲೆ ಹಾಕ್ತು. ಅವಳಿಗೆ ಕೈ ಸುಟ್ಟರೆ ಹಾಗೆ ಮಾಡ್ಬೇಕು ಅಂತ ಯಾರೋ ಹೇಳಿದ್ರಂತೆ.ಅವಾಗ ತಂಪಾಯ್ತು ಸರ್. ಹಾಂಗಾಗಿ ಏನೂ ಆಗಲಿಲ್ಲ. ಕೈಯೆಲ್ಲ ಕೆಂಪಾಕಂಡಿ ಇದೆ. ಸರ್ ಸಾಲಿ ಕೆಲ್ಸ ಬೇಕು. ಮನಿ ಕೆಲ್ಸ ಬೇಡವೇ ಬೇಡ. ಆದರೆ ಹದಿನೈದು ದಿನ ಆಯ್ತು .ಈಗ ಬಾಗಿಲಿ ರೂಢಿ ಆಯ್ತು. ಸಾಲಿಗಿಂತ ಮನಿ ಕೆಲ್ಸಾ ಲಾಯ್ಕು ಅಂಬಾಂಗೆ ಆಯ್ತಾ ಇದೆ ಸರ್. ಯಾವಾಗ ಸಾಲಿ ಸುರು ಆಗೊದು. ನನಗೆ ಮನಿಲಿ ಉಳ್ದುಳ್ದು ಬೇಜಾರ್ ಬಂದ್ಬಿಟ್ಟಿದೆ ಸರ್ .ನಾನಿನ್ನು ಒಂದ್ಸಲನೂ ಅಜ್ಜಿ ಮನಿಗೆ ಹೋಗ್ಲಿಲ್ಲ. ಪಾಪ! ಅಜ್ಜಿ ಮನೆಯಲ್ಲೊಂದು ಕುನ್ನಿ ಮರಿ ಇತ್ತು ಸರ್ . ಏನ್ ಆಯ್ತೆನ. ಸಾಲಿ ಶುರುಆಗುದ್ರೊಳಗೆ ಒಂದು ಸಲ ಅಜ್ಜಿ ಮನೆಗೆ ಹೋಗಿ ಬರ್ತೆ. ಸರ್ ಅಪ್ಪ ಮೀನ್ತಗೊಂಡು ಮನಿ ಬದಿಗೆ ಹೊಗ್ತವ್ನೆ. ನಾನೇ ಅದನ್ನು ಕೊಚ್ಚಿ ಸಾರ್ ಮಾಡ್ಬೇಕು. ನಾನು ಬರ್ತೇನೆ .ಸಾಲಿ ಯಾವಾಗ ಸುರು ಆಗ್ತದೇ ಸರ್……

(ಮುಂದುವರೆಯುವುದು….)

ಪಿ.ಆರ್. ನಾಯ್ಕ, ಹೊಳೆಗದ್ದೆ

ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*