ಕಾರವಾರ : ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚುತ್ತಿರುವುದರ ನಡುವೆ ತಮ್ಮ ತಂದೆಗೆ ಹೃದಯ ಚಿಕಿತ್ಸೆಯಾಗಿದ್ದರೂ, ಕೊರೊನಾ ಸೋಂಕಿತರ ಸೇವೆಯೇ ಮುಖ್ಯ ಎಂದು ನೂರಾರು ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡುವಲ್ಲಿ ಮಗ್ನರಾಗುವ ಮೂಲಕ ಕಾರವಾರದ ವೈದ್ಯರೊಬ್ಬರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಕೊರೊನಾ ಎರಡನೇ ಅಲೆಯ ಅಬ್ಬರದಿಂದ ಜನರು ಆತಂಕಕ್ಕೆ ಒಳಗಾಗಿದ್ದು, ಕೊರೊನಾ ಸೋಂಕು ಕಡಿವಾಣಕ್ಕೆ ಒಂದೆಡೆ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದೆಡೆ ಸೋಂಕಿತರ ರಕ್ಷಣೆಗೆ ವೈದ್ಯರ ತಂಡ ಎಲ್ಲೆಡೆ ಹಗಲಿರಳು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶ್ವಾಸಕೋಶ ತಜ್ಞ ಡಾ.ಶ್ರೀನಿವಾಸ್ ತಮ್ಮ ತಂದೆಯ ಹೃದಯ ಚಿಕಿತ್ಸೆಯಾಗಿದ್ದರೂ, ಕೊರೊನಾ ಸೋಂಕಿತರ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂಲತಃ ಶಿವಮೊಗ್ಗ ನಗರದ ಡಾ.ಶ್ರೀನಿವಾಸ್, ಈ ಹಿಂದೆ ಮಂಗಳೂರಿನ ಪ್ರಸಿದ್ಧ ಎಜೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡಿದ್ದರು. ಕಳೆದ ಆರು ತಿಂಗಳಿನಿಂದ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಶ್ವಾಸಕೋಶ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಹಲವರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡಿದ್ದ ಶ್ರೀನಿವಾಸ್, ಸದ್ಯ ಎರಡನೇ ಅಲೆಯಲ್ಲಿ ಸುಮಾರು 250ಕ್ಕೂ ಅಧಿಕ ಸೋಂಕಿತರಿಗೆ ಚಿಕಿತ್ಸೆ ಕೊಟ್ಟು ಗುಣಮುಖರಾಗುವಂತೆ ಮಾಡಿದ್ದಾರೆ
Be the first to comment