ಬಹು ವರ್ಣದ ಸಹಜ ಪ್ರತಿಭೆ : ಹೊನ್ನಾವರದ ಶಾರದಾ ಹೆಗಡೆ

ಬ್ರಿಟಿಷ ಸರಕಾರವೇ ಇವರಿಗೆ *”ಇಂಡಿಯಾಸ್ ಫಸ್ಟ್ ಲೇಡಿ ಟೀಚರ್”* ಎಂಬ ಬಿರುದು ನೀಡಿದೆ. ಪ್ರಗತಿಪರ ದೃಷ್ಟಿಕೋನದ ಮಾನವ ಕುಲಕ್ಕೆ ಮಾದರಿಯಾಗಿ “ಸತ್ಯೋಧಕ” ಸಮಾಜದ ನಿರ್ಮಾತರಾಗಿ ಅನಕ್ಷರಸ್ಥ ಭಾರತೀಯರ ಬಾಳಿನ ಬೆಳಕಾಗಿ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದ ಹರಿಕಾರರಾಗಿ ಮಾತೆ ಸಾವಿತ್ರಿಬಾಯಿ ಫುಲೆಯವರು ಶಿಕ್ಷಕರ ಕುಲಕ್ಕೆ ಪ್ರಾತಃ ಸ್ಮರಣೀಯರು. ಇಂತಹ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ನಮ್ಮ ನಡುವಿನ ಆದರ್ಶ ಶಿಕ್ಷಕಿ ಶಾರದಾ ಮಂಜುನಾಥ ಹೆಗಡೆಯವರ ಮುಡಿಗೇರಿರುವುದು ಜಿಲ್ಲೆಗೆ ಹೆಮ್ಮೆ.

ಶಬ್ದಗಳ ದೀಪ ಮಾಲೆಯ ಹಿಡಿದು ಬಂದವರು
ನಕ್ಷತ್ರಗಳಿಗೆ ಎಣ್ಣೆ ನೀಡಿದವರು
ಕತ್ತಲೆಯ ಗೂಡುಗಳ ಬಿಡಿಸಿ ಎಲ್ಲೆಲ್ಲಿಯೂ
ಬೆಳಕಿನ ಹಾಡುಗಳ ಹಾಡಿದರು
ಕವಿ ವಾಣಿಯಂತೆ ಅನ್ನಕ್ಕೂ ಅಕ್ಷರಕ್ಕೂ ಸಂಪರ್ಕದ ಸೇತುವೆಯಂತಿರುವ ಮಾತೆ ಸಾವಿತ್ರಿಬಾಯಿಯವರ ಆದರ್ಶದ ಬದುಕನ್ನು ಮೆಚ್ಚಿಕೊಂಡವರು, ನೆಚ್ಚಿಕೊಂಡವರು ಬಹುಮುಖ ಪ್ರತಿಭಾವಂತೆ ಶಾರದಾ ಹೆಗಡೆಯವರು ಮೂಲತಃ ಸಿರಸಿ ತಾಲೂಕಿನ ಕಾನಗೋಡದವರು. ಹಿಂದುಸ್ತಾನಿ ಸಂಗೀತದಲ್ಲಿ ವಿದ್ವತ್ ಪದವಿ ಪಡೆದ ಇವರು ಹಾಡುಗಾರಿಕೆಯಲ್ಲಿ ಎತ್ತಿದ ಕೈ. ಹಲವು ವರ್ಷಗಳಿಂದ ಮಕ್ಕಳಿಗೆ ಉಚಿತ ಸಂಗೀತ ನೀಡುವ “ಸಂಗೀತ ಶಾರದೆ” ಅಪ್ಪಟ ಗ್ರಾಮೀಣ ಪ್ರತಿಭೆ.

ಕಳೆಯಿದ್ದರೇನು ಕನಸಿರದ ಬಾಳು ಬಾಳೆ ಬದುಕಬೇಕು ಕನಸಿನರ ಮನೆಯಲ್ಲ ರೂಪಿಸಬೇಕು ಬಣ್ಣ ಬಣ್ಣದ ಬದುಕನ್ನು-

ಕವಿ ನಿಸ್ಸಾರ್ ಅವರ ಈ ಕವನದ ಸಾಲನ್ನೆ ಬದುಕಿಗಂಟಿಸಿಕೊಂಡು ಮಕ್ಕಳ ಬದುಕನ್ನು ಹಸನಾಗಿಸುವಲ್ಲಿ ನಿತ್ಯ ಹೆಣಗಾಡುವ ವಿಶಾಲ ಹೃದಯವಂತೆ. ತಮ್ಮ ಯೋಚನೆ ಮತ್ತು ಯೋಜನೆಗಳ ನಡುವೆ ಕುಟಿಲತೆ ಇಲ್ಲದಂತೆ ಮಕ್ಕಳ ಬಾಳಿನಲ್ಲಿ ಬೆಳಕಾಗುವ ಸಂಕಲ್ಪದ ಕನಸು ಕಟ್ಟಿ, ಆರ್ಥಿಕ ಸಂಕಷ್ಟದಲ್ಲಿರುವವರ ಬೆನ್ನಿಗೆ ನಿಂತವರು. ಬದುಕಿನ ನಡಿಗೆಯಲ್ಲಿ ಎದುರಾದ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಭಾರತ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ಬುಲ್ ಬುಲ್ ವಿಭಾಗದಲ್ಲಿ ಎಎಲ್ ಟಿ ಪದವಿ ಪಡೆದಿರುತ್ತಾರೆ. ಗೈಡ್ ಮತ್ತು ಬುಲ್ ಬುಲ್ ವಿಭಾಗದಲ್ಲಿ ಮಕ್ಕಳು ರಾಜ್ಯ ಪುರಸ್ಕಾರ ಪಡೆಯುವಲ್ಲಿ ಇವರ ಶ್ರಮ ಅಡಗಿದೆ.

ತಂದೆ ಮಂಜುನಾಥ ಹೆಗಡೆ ತಾಯಿ ಶಾಮಲಾ ಹೆಗಡೆಯವರ ಮುದ್ದಿನ ಮಗಳಾಗಿ ಶಿರಸಿಯ ಕಾನಗೋಡಿನಲ್ಲಿ ಜನಿಸಿರುತ್ತಾರೆ. ಪ್ರಾಥಮಿಕ ಶಿಕ್ಷಣ ಕಾನಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣ ಶಿರಸಿಯ ಯಡಳ್ಳಿಯಲ್ಲಿಯೂ, ವೃತ್ತಿನಿರತ ಪದವಿಯನ್ನು ಅರೆಅಂಗಡಿಯ ಎಸ್. ಕೆ.ಪಿ ಕಾಲೇಜಿನಲ್ಲಿಯೂ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ  ಪದವಿ ಪಡೆದಿರುತ್ತಾರೆ.

೧೯೯೨ ರಲ್ಲಿ ಹೊನ್ನಾವರ ತಾಲೂಕಿನ ಚಿಕ್ಕನಕೋಡ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ನಂತರ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳೂಕುವಾ೯, ಹಡಿನಬಾಳ ದಲ್ಲಿಯೂ, ಕಿರಿಯ ಪ್ರಾಥಮಿಕ ಶಾಲೆ ಸಿಂಧೂರಿ ನಲ್ಲಿಯೂ ಸೇವೆ ಸಲ್ಲಿಸಿ ವಿದ್ಯಾರ್ಥಿ ಮತ್ತು ಪಾಲಕರ ಮನಸ್ಸನ್ನು ಗೆದ್ದ ಅಪರೂಪದ ಮಾತೃ ಸ್ವರೂಪಿ ಶಿಕ್ಷಕಿ. ಮಕ್ಕಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ ನಿಲ್ಲಲು ಇವರ ಸಾಂಸ್ಕೃತಿಕ ಕಾಳಜಿ ನಿರಂತರವಾಗಿ ಶ್ರಮಿಸಿದೆ. ಶಾಲಾ ವಾರ್ಷಿಕ ಸಮ್ಮೇಳನದಲ್ಲಿ ಪ್ರತಿ ಮಗು ವೂ ಸಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ನಿರಂತರ ಪ್ರೇರಣೆ ನೀಡಿದ ಅಪರೂಪದ ಪ್ರತಿಭಾ ಸಂಪನ್ನೆ ಶಾರದಾ ಸಂಗೀತದಲ್ಲಿಯೂ ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತೆ ಮಾಡಿರುತ್ತಾರೆ. ತನ್ನ ಒಡಲ ಧ್ವನಿಗೆ ಮಕ್ಕಳನ್ನು ಸೇರಿಸಿದ  ಹಿತ ಚಿಂತಕಿ ಶಾರದಾಕ್ಕೋರು ಈಗ ಮೂರಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ವೃತಿ ಬದುಕನ್ನು ಅಪಾರವಾಗಿ ಪ್ರೀತಿಸಿ ಮಕ್ಕಳ ಪಾಲಿನ ಆರಾಧ್ಯರು ಎನಿಸಿಕೊಂಡಿರುತ್ತಾರೆ. ಭಾರತ ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ಜಿಲ್ಲಾ ಸಂಘಟಕರಾಗಿಯೂ ಕರ್ತವ್ಯ ನಿರ್ವಹಿಸಿ ಶಿಸ್ತುಬದ್ಧ ಜೀವನಕ್ಕೆ ಹೆಸರಾಗಿರುತ್ತಾರೆ.

*ಉದುರುವ ಎಲೆ, ಅರಳಿದ ಹೂವು, ಉರಿಯುವ ದೀಪ ಯಾವತ್ತು ಶಾಶ್ವತವಲ್ಲ* ಎಂಬ ಸತ್ಯವನ್ನರಿತ ಶಾರದೆ ತನ್ನ ವೃತ್ತಿ ಬದುಕಿನಲ್ಲಿ ಏನನ್ನಾದರೂ ಸಾಧಿಸಿ ತೋರಿಸುವ ಛಲದಿಂದ ಮುನ್ನಡೆದುದರ ಫಲವೇ ಮಹಾನ್ ಸಾಧಕ ಹೆಸರಿನ ಪುರಸ್ಕಾರ ಸಿಕ್ಕಿರುವುದು ಇವರ ವೃತ್ತಿ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ.

ಹೀಗೆ ಇರು ನೀ ಹೀಗೆ ನಗುತಿರು
ಹೇಗೆ ಬಿರಿದೆಯೋ ಹಾಗೆಯೇ!
ಯಾವ ತುರುಬಿಗೂ ಯಾವ ದೇವಗೂ
ಯಾವ ದುಂಬಿಗೂ ಬಗ್ಗದೆ!

ಸ್ವಂತಿಕೆ ಉಳಿಸಿಕೊಳ್ಳುವ ಬಗ್ಗೆ ಕವಿ ಹೂವಿಗೆ ಹೇಳಿದ ಗುಟ್ಟು. ಈ ಮಾತು ಶಾರದಾ ಹೆಗಡೆಯವರ ಮೃದು ಮನಸ್ಸಿಗೆ ಅನ್ವಯಿಸದಿರಲಾರದು. ಹಿರಿ- ಕಿರಿಯರನ್ನು ಅತ್ಯಂತ ಪ್ರೀತಿಯಿಂದ ಮಾತನಾಡಿಸಿ ಬಾಯ್ತುಂಬಾ ನಗುವ ಚೆಲ್ಲುವ ವಿಶಾಲ ಹೃದಯವಂತೆಗೆ ಮಾತೆ ಸಾವಿತ್ರಿಬಾಯಿ ಫುಲೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಸಂದಿರುವುದು ಇಡೀ ಶಿಕ್ಷಕ ಸಮುದಾಯಕ್ಕೆ ಸಂದ ಗೌರವವಾಗಿದೆ. ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಇವರನ್ನರಸಿ ಬರಲಿ ಎಂದು ಹಾರೈಸುವ-

ಪಿ.ಆರ್. ನಾಯ್ಕ
ನಲಿ-ಕಲಿ ಶಿಕ್ಷಕ ಹೊನ್ನಾವರ.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*