
ಅಂಕೋಲಾ : ಜನಪದ ಹಾಡುಗಳ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿದ್ದ ಹಾಗೂ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ (90) ಅವರು ಇಂದು ನಸುಕಿನ ಜಾವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಡ ಗೇರಿಯ ತಮ್ಮ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಕೆಲವು ದಿನದ ಹಿಂದೆ ಉಸಿರಾಟ ಸಮಸ್ಯೆಯಿಂದ ಉಡುಪಿಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಆದರೆ ಇಂದು ಮುಂಜಾನೆ 4 ಗಂಟೆ ಸಮಯಕ್ಕೆ ಅಂಕೋಲದ ಬಡಿಗೇರಿಯ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹಾಲಕ್ಕಿ ಜಾನಾಂಗ ಜಾನಪದ ಕೋಗಿಲೆ ಎಂದೇ ಪ್ರಸಿದ್ದಿ ಪಡೆದಿದ್ದ ಸುಕ್ರಿ ಬೊಮ್ಮಗೌಡ ಅವರು, ಹಾಲಕ್ಕಿ ಜಾನಪದ ಹಾಡುಗಳ ಜೊತೆ ಮದ್ಯ ನಿಷೇಧ ಹೋರಾಟ ಸೇರಿದಂತೆ ಹಲವು ಹೋರಾಟದಲ್ಲಿ ಭಾಗಿಯಾಗಿದ್ದರು. ಅಂಕೋಲಾದ ಬಡಿಗೇರಿ ಗ್ರಾಮವನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಿದ್ದರು.

ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಾಲಕ್ಕಿ ಒಕ್ಕಲಿಗ ಜನಾಂಗಕ್ಕೆ ಸೇರಿದ ಸುಕ್ರಿ ಬೊಮ್ಮಗೌಡ ಅವರು ಸುಪ್ರಸಿದ್ಧ ಜಾನಪದ ಗಾಯಕಿಯಾಗಿದ್ದರು. ಸುಮಾರು 5 ಸಾವಿರ ಜಾನಪದ ಹಾಡುಗಳು ಅವರ ನಾಲಿಗೆಯಲ್ಲಿ ನಿರರ್ಗಳವಾಗಿದ್ದವು. ಅವರು ಜಾನಪದ ಕಲೆಗೆ ನೀಡಿದ ಕೊಡುಗೆಗಳಿಗಾಗಿ ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕಾರ್ಯಕ್ಕಾಗಿ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ
ಸುಕ್ರಿ ಬೊಮ್ಮಗೌಡ ಅವರಿಗೆ ಸುಕ್ರಜ್ಜಿ ಎಂದು, ಹಾಲಕ್ಕಿ ಕೋಗಿಲೆ, ಜಾನಪದ ಕೋಗಿಲೆ ಎಂದು ಕೆರಯುತ್ತಾರೆ. ಸಾಕ್ಷರತಾ ಆಂದೋಲನ, ಸಾರಾಯಿ ನಿಷೇಧ ಆಂದೋಲನ, ಉಳುವವನೇ ಹೊಲದೊಡೆಯ, ಪರಿಶಿಷ್ಟ ಜಾತಿ ಗುರುತಿಸುವಿಕೆಯಂತಹ ಚಳವಳಿಗಳಿಗಾಗಿ ಖುದ್ದು ಭಾಗವಹಿಸಿ ಹೋರಾಡಿದ್ದಾರೆ.

ಜನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಸುಕ್ರಿ ಬೊಮ್ಮ ಗೌಡ ನೀಡಿರುವ ಕೊಡುಗೆ ಗುರುತಿಸಿ, 2017ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಸೇರಿದಂತೆ ದೇಶ ಹಾಗೂ ರಾಜ್ಯದ ಹಲವು ಪ್ರತಿಷ್ಠಿತ ಪ್ರಶಸ್ತಿ ಸುಕ್ರಿ ಬೊಮ್ಮ ಗೌಡ ಅವರನ್ನು ಅರಸಿಕೊಂಡು ಬಂದಿವೆ. ಇನ್ನು ಮುಂದೆ ಪದ್ಮಶ್ರೀ ಸುಕ್ರಜ್ಜಿ ನೆನಪು ಮಾತ್ರ.

Be the first to comment