ನಡೆಯದ ಕರಾವಳಿ ಉತ್ಸವದಲ್ಲಿ ನೆನಪಾಗುವ ದೇಶಪಾಂಡೆ

ವಿಭಾಗವಾರು ಉತ್ಸವ ನಡೆಸುತ್ತಿದ್ದ ಆರ್.ವಿ.ಡಿ.

ಅದ್ಯಾಕೋ ಕಳೆದ ಕೆಲವು ವರ್ಷಗಳಿಂದ ಕರಾವಳಿ ಉತ್ಸವ ಆಯೋಜನೆಗೆ ಸರಿಯಾದ ಮಹೂರ್ತವೇ ಸಿಗುತ್ತಿರುವಂತೆ ಕಂಡುಬರುತ್ತಿಲ್ಲ. ಒಂದಿಲ್ಲೊಂದು ಕುಂಟು ನೆಪವನ್ನು ಹೇಳಿಕೊಂಡು ಕರಾವಳಿ ಉತ್ಸವ ಮರೆಯಾಗುತ್ತಲೇ ಇದೆ.

ಕಳೆದ ಐದಾರು ವರ್ಷಗಳಿಂದ ಕರಾವಳಿ ಉತ್ಸವ ನಡೆದಿಲ್ಲ. ಅದಕ್ಕೆ ಆಳುವವರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯು  ಕಾರಣ ಎನ್ನಬಹುದೇನೋ . ಕಳೆದ ಬಾರಿಯೂ ಮೂರು ವರ್ಷಗಳಿಂದ ಕರಾವಳಿ ಉತ್ಸವದ ಸಿದ್ಧತೆ ಮಾಡಿಕೊಂಡು ಮುಂದೂಡಲಾಗುತ್ತಿದೆ. ಕಳೆದ ವರ್ಷ ಕೂಡ ಕರಾವಳಿ ಉತ್ಸವ ಆಗೇ ಬಿಟ್ಟಿತೇನೋ ಎಂಬಷ್ಟರ ಮಟ್ಟಿಗೆ ತಯಾರಿಯೂ ಆಗಿತ್ತು.  ಕರಾವಳಿ ಉತ್ಸವ ಮಾಡುವ ಪೂರ್ವ ಸಿದ್ಧತಾ ಸಭೆಗಳು ನಡೆದಿತ್ತು. ಒಂದಿಷ್ಟು ಹಣ ಕೂಡ ಸಂಗ್ರಹ ಆಗಿತ್ತು. ದಾಂಡೇಲಿಯ ಕಾಗದ ಕಂಪನಿ ಯವರು  ಎಂಟು ಲಕ್ಷ ರೂಪಾಯಿಯನ್ನು ಮುಂಚಿತವಾಗಿ  ಜಿಲ್ಲಾಡಳಿತಕ್ಕೆ ನೀಡಿದ್ದರು. ಒಂದಿಷ್ಟು ಕಲಾವಿದರನ್ನು ಮುಂಗಡವಾಗಿಯೇ ಕಾಯ್ದಿರಿಸಲಾಗಿತ್ತು.  ಆದರೆ ಅದ್ಯಾಕೋ ಕೊನೆಗೂ ಕರಾವಳಿ ಉತ್ಸವದ ದಿನ ಮಾತ್ರ ನಿಗದಿಯಾಗಲೇ ಇಲ್ಲ.

ಈ ವರ್ಷ ಆಗುವುದಿದ್ದರೆ ಈಗ ಸಿದ್ದತೆಗಳಾಗಬೇಕು.  ಫೆಬ್ರವರಿ , ಮಾರ್ಚ ತಿಂಗಳಲ್ಲಿ ಪರೀಕ್ಷೆಗಳು ಬರುತ್ತವೆ. ಇಷ್ಟರೊಳಗಾಗಿ ಆಗಬೇಕಿದ್ದ ಕರಾವಳಿ ಉತ್ಸವ ಇನ್ನು ಫೆಬ್ರವರಿ ತಿಂಗಳಲ್ಲಿ ಯಾವಾಗ ನಡೆಯಬಹುದು ಎನ್ನುವುದೇ ಪ್ರಶ್ನೆಯಾಗಿದೆ. ಊಸ್ತುವಾರಿ ಸಚಿವರೇನೋ ಎಪ್ರಿಲ್ ತಿಂಗಳಲ್ಲಿ ಕರಾವಳಿ ಉತ್ಸವ ನಡೆಸುವುದಾಗಿ ಹೇಳಿದ್ದಾರೆ. ಸಾಧ್ಯತೆಗಳ ಬಗ್ಗೆ ನೋಡಬೇಕಷ್ಟೆ…

ಅದೇನೇ ಇದ್ದರೂ… ಹಲವು ವರ್ಷಗಳಿಂದ ಕರಾವಳಿ ಉತ್ಸವ ನಡೆಯದೇ ಇರುವ ಬೆಳವಣಿಗೆಯನ ನೋಡುತ್ತಿದ್ದರೆ ಈಗ ಶಾಸಕ ಆರ್. ವಿ. ದೇಶಪಾಂಡೆ ನೆನಪಾಗುತ್ತಾರೆ. ದೇಶಪಾಂಡೆ ಉಸ್ತುವಾರಿ ಸಚಿವರಿದ್ದಾಗ ಕರಾವಳಿ ಉತ್ಸವದ ಆರಂಭವಾಗಿತ್ತು. ಹಾಗೆ ನೋಡಿದರೆ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ಪ್ರತಿ ವರ್ಷ ಕರಾವಳಿ ಉತ್ಸವದ ಆಯೋಜನೆ ಮಾಡಿದ್ದಾರೆ. ಉತ್ಸವಕ್ಕೆ ಅವಶ್ಯವಿರುವ ಆರ್ಥಿಕ ಸೌಲಭ್ಯವನ್ನು ಸರಕಾರದಿಂದ ತರುವ ಜೊತೆಗೆ ಸ್ಥಲೀಯವಾಗಿ ಕ್ರೋಢೀಕರಿಸುವ ತಾಕತ್ತು ಕೂಡ ಅವರಿಗಿತ್ತು. ಮುಖ್ಯಮಂತ್ರಿಗಳನ್ನು ಕರೆಯಿಸುತ್ತಿದ್ದರು. ಅವರು ಬರೆದಿದ್ದರೆ ತಾವೇ ಉದ್ಘಾಟಿಸಿ ಕರಾವಳಿ ಉತ್ಸವ ನಡೆಸಿ ಕಲಾವಿದರಿಗೆ ವೇದಿಕೆ ಕೊಡುತ್ತಿದ್ದರು. ಇನ್ನು ವಿಶೇಷ ಸಾಧಕರನ್ನೂ ಆಹ್ವಾನಿಸಿ ಉತ್ಸವ ಉದ್ಘಾಟಿಸುತ್ತಿದ್ದರು. ಆದ್ರೆ ಈಗ ಮುಖ್ಯಮಂತ್ರಿಗಳ ಸಮಯ ಸಿಗುತ್ತಿಲ್ಲ ಎಂಬ ಕಾರಣವೊಡ್ಡುತ್ತಲೇ ಕರಾವಳಿ ಉತ್ಸವ ಮುಂದಕ್ಕೆ ಹೋಗುತ್ತಿರುವುದು ವಿಪರ್ಯಾಸ.

ದೇಶಪಾಂಡೆ ಕೇವಲ ಕಾರವಾರದಲ್ಲಿ ಮೂರು ದಿನಗಳ ಕರಾವಳಿ ಉತ್ಸವವನ್ನಷ್ಟೇ ಮಾಡುತ್ತಿರಲಿಲ್ಲ. ಈ ಕರಾವಳಿ ಉತ್ಸವದ ನೆನಪಲ್ಲಿ ಜಿಲ್ಲೆಯ ವಿಭಾಗವಾರು ಉತ್ಸವಗಳನ್ನ ಮಾಡುತ್ತಿದ್ದರು.  ಕುಮಟಾ,  ಸಿರಸಿ  ಹಾಗೂ ದಾಂಡೇಲಿ ಮತ್ತು ಹಳಿಯಾಳಗಳಲ್ಲಿಯೂ ಕೂಡ ಒಂದು ದಿನದ ಉತ್ಸವ ನಡೆಯುತ್ತಿತ್ತು. ಇದರ ನಂತರ ಕಾರವಾರದಲ್ಲಿ ಕರಾವಳಿ ಉತ್ಸವ ಮೂರು ದಿನಗಳ ಕಾಲ ನಡೆಯುತ್ತಿತ್ತು. ಈಗ ವಿಭಾಗವಾರು ಉತ್ಸವ ನಡೆಯುವುದು ಹಾಗಿರಲಿ. ಕರಾವಳಿ ಉತ್ಸವದ ಮೂರು ದಿನ ಸಂಘಟಿಸುವುದೇ ಜಿಲ್ಲಾಡಳಿತಕ್ಕೆ ಏದುಸಿರು ಬಿಡುವಂತಾಗಿದೆ.

ಬಹು ವರ್ಷಗಳ ರಾಜಕಾರಣ,  ಬಹು ವರ್ಷಗಳ ಉಸ್ತುವಾರಿ ಸಚಿವ,  ಜಿಲ್ಲೆಯ ಅಭಿವೃದ್ಧಿ… ಈ ಯಾವುದೇ ಕಾರಣಗಳಲ್ಲಿ ದೇಶಪಾಂಡೆಯವರ ಬಗ್ಗೆ  ಅದ್ಯಾವುದೇ ವೈರುಧ್ಯಗಳಿದ್ದರೂ ಕೂಡ ಕರಾವಳಿ ಉತ್ಸವದ ಸಂಘಟನೆ ಮತ್ತು  ಕೆಲ ಕಾರ್ಯಕ್ರಮಗಳ ವಿಚಾರ ಬಂದಾಗ ಶಾಸಕ ಆರ್.ವಿ. ದೇಶಪಾಂಡೆ ಇಂದು  ಖಂಡಿತವಾಗಿ ನೆನಪಾಗುತ್ತಾರೆ.

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*