
ದಾಂಡೇಲಿ ತಾಲೂಕಿನ ಡಿ.ಎಪ್.ಎ. ಮೈದಾನದಲ್ಲಿ ದಾಂಡೇಲಿ ಪ್ರೀಮಿಯರ್ ಲೀಗ್ ಆಶ್ರಯದಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತ ಬಂದಿರುವ ‘ದಾಂಡೇಲಿ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯು ಈ ವರ್ಷ ಫೆಬ್ರುವರಿ 20 ರಿಂದ 23ರ ವರೆಗೆ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಎಂದು ಡಿಪಿಎಲ್ ಅಧ್ಯಕ್ಷ ವಿಷ್ಣುಮೂರ್ತಿ ರಾವ್ ತಿಳಿಸಿದರು.
ಅವರು ಪಂದ್ಯಾವಳಿಯ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡುತ್ತಿದ್ದರು.
ದಾಂಡೇಲಿಯಲ್ಲಿ ಡಿಪಿಎಲ್ ಕ್ರಿಕೆಟ್ ಎಂದರೆ ಮನೆ ಮಾತಾಗಿದೆ. ಮೂರು ವರ್ಷ ಅದ್ದೂರಿಯಾಗಿ ನಡೆದಿರುವ ಪಂದ್ಯಾವಳಿಯಲ್ಲಿ ಕಳೆದ ವರ್ಷದಿಂದ ಹೊನಲು ಬೆಳಕಿನ ಪ್ರದರ್ಶನವನ್ನು ನೀಡಲಾಗುತ್ತಿದೆ. ಈ ವರ್ಷ ಕೂಡ ವಿಶೇಷ ಆಕರ್ಷಣೆಗಳೊಂದಿಗೆ ಈ ಪಂದ್ಯಾಟ ನಡೆಯಲಿದೆ. ಫೆ. 21 ಉದ್ಘಾಟನೆಗೊಂಡು ಪ್ರದರ್ಶನ ಪಂದ್ಯ ನಡೆಯಲಿದೆ. 23ರ ವರೆಗೆ ಮೂರು ದಿನಗಳ ಕಾಲ ರಾಜ್ಯ ರಾಷ್ಟ್ರಮಟ್ಟದ ಆಟಗಾರರ ವಿಶೇಷ ಆಕರ್ಷಣೆಯು ಇರಲಿದೆ ಎಂದರು.
ದಾಂಡೇಲಿ ಪ್ರೀಮಿಯರ್ ಲೀಗ್ ಚೇರ್ಮನ್ ಕುಲದೀಪ್ ರಜಪೂತ್ ಮಾತನಾಡಿ ರಾಷ್ಟ್ರ ಮಟ್ಟದ ಆಟಗಾರರಿಂದ ಗಮನ ಸೆಳೆಯುವ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಷ್ಣುಮೂರ್ತಿ ರಾವ್ ಮಾಲಿಕತ್ವದ ದಾಂಡೇಲಿ ಡ್ರೀಮ್ಸ, ಶಮಲ್ ಅಬ್ದುಲ್ಲಾ ಮಾಲಿಕತ್ವದ ಡಿವ್ ಡ್ರಾಪ್ಸ್, ರಮೇಶ ನಾಯ್ಕ ಮಾಲಿಕತ್ವದ ಕಾಳಿ ಟೈಗರ್, ಸಂದೀಪ್ ರಜಪೂತ್ ಮಾಲಿಕತ್ವದ ದಾಂಡೇಲಿ ಜಂಗಲ್ ವಿಲ್ಲಾ ವಾರಿಯರ್ಸ, ಮುಜೀಬ್ ಕೆ ಮಾಲಿಕತ್ವದ ಕಿಂಗ್ಸ್ 11, ರೋಷನ್ ಜಿತ್ ಮಾಲಿಕತ್ವದ ಕುಳಗಿ ರೋಡ ಲೆಜೆಂಡ್ಸ್, ಉಸ್ಮಾನ್ ವಹಾಬ ಮಾಲಿಕತ್ವದ ಸ್ಟಾರ್ಲಿಂಗ್ ರಾಯಲ್ಸ್, ಅತುಲ ಮಾಡ್ದೋಳಕರ ಮಾಲಕತ್ವದ ದಾಂಡೇಲಿ ಟಸ್ಕರ ತಂಡಗಳು ಪ್ರದರ್ಶನ ನೀಡಲಿವೆ. ಪ್ರತಿ ತಂಡದ ಆಟಗಾರರಲ್ಲಿ ಇಬ್ಬರು ಆಟಗಾರರು ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ನೀಡಿದವರು ಭಾಗವಹಿಸಲಿದ್ದಾರೆ. ಉಳಿದವರು ದಾಂಡೇಲಿಯ ಆಟಗಾರರಾಗಿರುತ್ತಾರೆ. ಪಂದ್ಯ ವಿಜೇತರಿಗೆ ಪ್ರಥಮ ಬಹುಮಾನ 2 ಲಕ್ಷ ರೂಪಾಯಿ ಹಾಗೂ ದ್ವಿತೀಯ ಬಹುಮಾನ ಒಂದು ಲಕ್ಷ ರೂಪಾಯಿಗಳ ಜೊತೆಗೆ ಆಕರ್ಷಕ ಪರ್ಯಾಯ ಪಲಕಗಳನ್ನು ಕೂಡ ನೀಡಲಾಗುತ್ತದೆ. ವೈಯಕ್ತಿಕ ಬಹುಮಾನವು ಇರುತ್ತದೆ. ಮುಂಜಾನೆ ಎಂಟರಿಂದ ಆರಂಭಗೊಳ್ಳುವ ಪಂದ್ಯಾಟದಲ್ಲಿ 6 ಪಂದ್ಯಗಳ ನಡೆಯಲಿದ್ದು, ಹೊನಲು ಬೆಳಕಿನಲಿ ನಡೆಯಲಿರುವ ಈ ಪಂದ್ಯಾಟ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆಯಲಿದೆ. M9 youtube ಚಾನೆಲ್ ನಿಂದ ನೇರ ಪ್ರಸಾರ ಕೂಡ ಇರುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷ ನಿತಿನ್ ಕಾಮತ್ ತಂಡಗಳು ಹಾಗೂ ನಿಯಮಗಳ ಬಗ್ಗೆ ತಿಳಿಸಿದರೆ, ಮೈದಾನ ಉಸ್ತುವಾರಿ ಅತುಲ್ ಮಾಡ್ದೋಳಕರ ವಿಶೇಷವಾದ ಮೈದಾನದ ಸಿದ್ಧತೆಯ ಬಗ್ಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಮೇಶ್ ನಾಯ್ಕ್, ಸಹಕಾರ್ಯದರ್ಶಿ ನರಸಿಂಗದಾಸ ರಾಟಿ, ಮೈದಾನ ಉಸ್ತುವಾರಿ ಸಂದೀಪ ರಜಪೂತ್ ಸದಸ್ಯರಾದ ಶಮಲ್ ಅಬ್ದುಲ್ಲಾ ಮುಂತಾದವರಿದ್ದರು.

Be the first to comment