ಸಾಲಗಾರರಿಗೆ ಕಿರುಕುಳ ನೀಡಿದರೆ ಜೋಕೆ : ವಾರ್ನಿಂಗ್ ನೀಡಿದ ತಹಶೀಲ್ದಾರ ಶೈಲೇಶ ಪರಮಾನಂದ, ಡಿ.ವೈ.ಎಸ್.ಪಿ. ಶಿವಾನಂದ

ದಾಂಡೇಲಿ : ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾಲ ಪಡೆದ ಬಡ ಮಹಿಳೆಯರಿಗೆ ಅನಗತ್ಯ ಕಿರುಕುಳ ನೀಡುತ್ತಿರುವ ಹಾಗೂ ನಿಯಮ ಉಲ್ಲಂಘಿಸಿ ಸಾಲ ವಸೂಲಿ ಮಾಡುತ್ತಿರುವ ಆರೋಪಗಳು ಬಂದ ಹಿನ್ನೆಲೆಯಲ್ಲಿ ದಾಂಡೇಲಿಯಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ ನೇತೃತ್ವದಲ್ಲಿ ಶನಿವಾರ ಆಡಳಿತ ಸೌಧದಲ್ಲಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದರವರು ಬಡವರು ತಮ್ಮ ಕಷ್ಟಕಾಲದ ಸಂದರ್ಭದಲ್ಲಿ ಅನುಕೂಲವಾಗಲೆಂದು ಸಾಲವನ್ನು ಪಡೆದಿರುತ್ತಾರೆ. ಆದರೆ ಸಾಲ ನೀಡುವಾಗ ಹಾಗೂ ಸಾಲ ವಸೂತಿ ಸಂದರ್ಭದಲ್ಲಿ ಮೈಕ್ರೋ ಫೈನಾನ್ಸ್ ನವರು ಮಹಿಳೆಯರಿಗೆ ಅತಿರೇಕದ ಕಿರುಕುಳ ನೀಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ಪತ್ರಿಕೆಗಳಲ್ಲೂ ವರದಿಯಾಗಿದೆ. ಫೈನಾನ್ಸ್ ನವರು ಆರ್.ಬಿ.ಐ. ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮುಂಜಾನೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಸಾಲ ವಸೂಲಾತಿಗೆ ಹೋಗಬೇಕು. ಸಮಯ ಮೀರಿ ಹೋದರೆ ನಿಯಮಾನುಸರ ಕ್ರಮ ಕೈಗೊಳ್ಳಲಾಗುತ್ತದೆ. ಒಂದೊಮ್ಮೆ ಸಾಲದ ಕಾರಣಕ್ಕಾಗಿ ಯಾರಾದರೂ ಅವಗಡ ಮಾಡಿಕೊಂಡರೆ ಅದಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿಎಂದು ಖಡಕ್ ಎಚ್ಚರಿಕೆ ನೀಡಿದರು.

ಡಿವೈಎಸ್ಪಿ ಶಿವಾನಂದ್ ಮದರಕಂಡಿ ಸಾಲ ನೀಡುವಾಗ ಮಹಿಳೆಯರಿಗೆ ಸಮರ್ಪಕವಾದ ಮಾಹಿತಿಯನ್ನು ನೀಡಬೇಕು. ವಸೂಲಿಯ ಸಂದರ್ಭದಲ್ಲಿಯೂ ಕೂಡ ಆರ್‌ಬಿಐ ನಿಯಮಗಳನ್ನು ಪಾಲಿಸಬೇಕು. ಸಾಲ ಪಡೆಯುವವರ ಅರ್ಥಿಕ ಸದ್ರಢತೆಯನ್ನು ಪರಿಶೀಲಿಸಿ, ಅವರಲ್ಲಿ ತುಂಬುವ ಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಅಧ್ಯಯನ ಮಾಡಿ ಸಾಲ ನೀಡಬೇಕು. ಬೇಕಾ ಬಿಟ್ಟಿ ಸಾಲ ನೀಡಿ ವಸೂಲಿಯ ಸಂದರ್ಭದಲ್ಲಿ ಅಮಾನೀಯವಾಗಿ ನಡೆದುಕೊಳ್ಳುವುದು ಸರಿಯಲ್ಲ. ನೀವು ಯಾವೆಲ್ಲ ಪದ ಬಳಸುತ್ತಿದ್ದೀರಿ ಎಂಬುದು ನಮಗೆ ತಿಳಿದಿದೆ. ಒಂದು ವೇಳೆ ಸಾಲ ಪಡೆದವರಿಗೆ ಅನಗತ್ಯವಾಗಿ ಕಿರುಕುಳ ನೀಡಿದರೆ ಕಾನೂನು ಪ್ರಕಾರ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. ನಿಗದಿತ ಸಮಯ ಹೊರತುಪಡಿಸಿ ಸಾಲ ವಸೂಲಾತಿಗೆ ಹೋದರೆ ಸುಮ್ಮನಿರುವುದಿಲ್ಲ. ಕಿರುಕುಳ ನಡೆದ ಬಗ್ಗೆ ಯಾರೇ ದೂರು ನೀಡಿದರು ಕೂಡ ನಾವು ಕಠಣ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು. 

ಸಿಪಿಐ ಜೆ.ಎ.ಪಾಟಿಲ್ ಮೈಕ್ರೋ ಫೈನಾನ್ಸ್ ಸಂಸ್ಥೆಯವರಿಂದ  ದಾಂಡೇಲಿಯಲ್ಲಿ ನೀಡಿದ ಸಾಲಗಳ ಬಗ್ಗೆ ಹಾಗೂ ಅವರ ನಿಯಮಗಳ ಬಗ್ಗೆ ಮಾಹಿತಿಯನ್ನು ಪಡೆದು ಫೈನಾನ್ಸ್ ಗಳು ತಮ್ಮ ನಿಯಮಾವಳಿಗಳ ಬಗ್ಗೆ ಹಾಗೂ ದಾಖಲೆಗಳನ್ನು ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಪಾಲ್ಗೊಂಡ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು

ಈ ಸಂದರ್ಭದಲ್ಲಿ ಭಾರತ ಫೈನಾನ್ಸ್, ಎಸ್.ಕೆ.ಎಸ್.,  ಚೈತನ್ಯ ಫೈನಾನ್ಸ್,  ಗ್ರಾಮೀಣ ಕೂಟ ದವರು ತಾವು ನೀಡಿರುವ ಸಾಲದ ಮೊತ್ತಗಳ ಬಗ್ಗೆ ಹಾಗೂ ತಮ್ಮ ಸಂಸ್ಥೆಯಲ್ಲಿರುವ ಸಂಘಗಳ ಬಗ್ಗೆ ಮಾಹಿತಿಯನ್ನು ನೀಡಿ,  ಇನ್ನು ಮುಂದೆ ತಾವು ಯಾರಿಗೂ ಕಿರುಕುಳ ನೀಡುವುದಿಲ್ಲ. ಆರ್.ಬಿ.ಐ ನಿಯಮಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದರು. ಧರ್ಮಸ್ಥಳ ಸಂಸ್ಥೆ, ಶ್ರೀರಾಮ ಫೈನಾನ್ಸ್, ಕೆಎಲ್ಎಂ ಗೋಲ್ಡ್ ಲೋನ್ ಇವರು ತಾವು ನೀಡುವ ಸಾಲಗಳ ಬಗ್ಗೆ ಮಾಹಿತಿ ನೀಡಿ ತಾವು ಮೈಕ್ರೋ ಸಾಲವನ್ನು ನೀಡುವುದಿಲ್ಲ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಸಿ.ಪಿ.ಐ ಜಯದೇವ್ ಪಾಟೀಲ್ ಒಂದೊಮ್ಮೆ ಮಹಿಳೆಯರಿಂದ ನಿಮ್ಮ ಮೇಲೆ ದೂರುಗಳು ಬಂದಲ್ಲಿ ನಾವು ನಿಯಮಾನುಸರ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದಾಂಡೇಲಿ ನಗರ ಠಾಣೆಯ ಪಿಎಸ್ಐಗಳಾದ ಅಮೀನ್ ಸಾಬ್ ಅತ್ತಾರ್,  ಕಿರಣ್ ಪಾಟೀಲ್ ಉಪಸ್ಥಿತರಿದ್ದರು.

*ಆಧಾರ್ ಲಿಂಕ್ ಮಾಡಿ ಹೆದರಿಸುವ ಹಾಗಿಲ್ಲ*

ಕೆಲವು ಮೈಕ್ರೋ ಫೈನಾನ್ಸ್ ನವರು ಸಾಲ ಪಡೆದ ಮಹಿಳೆಯರಿಗೆ ನಿಮ್ಮ ಆಧಾರ್ ಕಾರ್ಡನ್ನು ಸಾಲಕ್ಕೆ ಲಿಂಕ್ ಮಾಡಲಾಗಿದೆ. ನೀವು ಸಾಲವನ್ನು ತುಂಬದಿದ್ದರೆ ಮುಂದೆ ನಿಮಗೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯಗಳು ಸಿಗದ ಹಾಗೆ ನಾವು ಮಾಡುತ್ತೇವೆ. ಎಂಬ ಬೆದರಿಕೆಯನ್ನು ಒಡ್ಡುತ್ತಿದ್ದ ದೂರು ಬಂದ ಹಿನ್ನೆಲೆಯಲ್ಲಿ  ತಹಶೀಲ್ದಾರ್ ಶೈಲೇಶ ಪರಮಾನಂದ ಹಾಗೂ ಡಿ.ವೈ.ಎಸ್.ಪಿ. ಶಿವಾನಂದ ಮದರಖಂಡಿಯವರು  ಖಾಸಗಿ ಸಂಸ್ಥೆಯವರು ಯಾವುದೇ ಮನುಷ್ಯನ ಆಧಾರ್ ಕಾರ್ಡನ್ನ ತಮ್ಮ ಖಾತೆಗೆ ಲಿಂಕ್ ಮಾಡುವ ಹಾಗಿಲ್ಲ. ಹಾಗೂ ಮಹಿಳೆಯರಿಗೆ ಬಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡ  ಫೈನಾನ್ಸ ಸಾಲದ ಖಾತೆಗೆ ಹಸ್ತಾಂತರಿಸಿಕೊಳ್ಳುವ ಹಾಗಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಕಾನೂನು ಪ್ರಕಾರ ತಮ್ಮ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.

*ಮೀಟರ್ ಬಡ್ಡಿ ಸಾಲದವರಿಗೂ ಎಚ್ಚರಿಕೆ* 
ದಾಂಡೇಲಿಯಲ್ಲಿ ಮೈಕ್ರೋ ಫೈನಾನ್ಸ್ ಗಳ ಜೊತೆಗೆ ಕೆಲವರು ಮೀಟರ್ ಬಡ್ಡಿ ದಂದೆಯನ್ನು ಜೋರಾಗಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇದಕ್ಕೆ ಇನ್ನಷ್ಟು ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ. ಸಾರ್ವಜನಿಕರು ಕೂಡ ಮೀಟರ್ ಬಡ್ಡಿ ದಂದೆ ಮಾಡುವರ ಬಗ್ಗೆ ಪೊಲೀಸ್ ಠಾಣೆಗೆ ನೇರವಾಗಿ ಮಾಹಿತಿಯನ್ನು ನೀಡಬಹುದು.  ಮಾಹಿತಿ  ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ಮೀಟರ್ ಬಡ್ಡಿ ದಂಧೆ ಮಾಡುವವರು ಮೇಲೆ ನಿಗಾ ವಹಿಸಲಾಗಿದ್ದು  ಈಗಾಗಲೇ ಇಬ್ಬರನ್ನು ಜೈಲಿಗಟ್ಟಲಾಗಿದೆ. ಇನ್ನು ಮತ್ತೆ ನಮ್ಮ ಗಮನಕ್ಕೆ ಬಂದ ತಕ್ಷಣ ಅಂಥರ ಮೇಲೆ ಕಠಿಣ ಅಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆಯನ್ನು ಡಿ.ವೈ.ಎಸ್.ಪಿ. ಶಿವಾನಂದ ಮದರಕಂಡಿ ನೀಡಿದ್ದಾರೆ.

ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ಡಿ.ವೈ.ಎಸ್.ಪಿ. ಶಿವಾನಂದ ಮದರಕಂಡಿ ಏನೆಂದರು… ಈ ವಿಡಿಯೋ ನೋಡಿ…

About ಬಿ.ಎನ್‌. ವಾಸರೆ 620 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*