
ದಾಂಡೇಲಿ : ಜೋರು ಮಳೆಗಾಲದಲ್ಲಿ ಕುಂಭ ದ್ರೋಣ ಮಳೆ ಸುರಿದು ಅಥವಾ ಹೊಳೆ ಉಕ್ಕಿ ಹರಿದು ಜಲಕಂಠಕವಾಗುವುದನ್ನು ಕಂಡಿದ್ದೇವೆ. ಆದರೆ ಈ ಬಿರು ಬೇಸಿಗೆಯಲ್ಲಿ ಮಳೆ ಇಲ್ಲ, ಹೊಳೆಯಿಲ್ಲ. ಆದರೂ ರಸ್ತೆಯ ತುಂಬೆಲ್ಲ ನೀರು ಹರಿದು ಜಲಕಂಟಕದ ರೀತಿಯಲ್ಲಿ ಆತಂಕ ನಿರ್ಮಾಣವಾಗಿರುವ ಸನ್ನಿವೇಶ ರವಿವಾರ ಮುಂಜಾನೆ ಹಳೆ ದಾಂಡೇಲಿ ರಸ್ತೆಯಲ್ಲಿ ನಡೆದಿದೆ.
ಇದೊಂಥರಾ ವಿಚಿತ್ರ ವಿಸ್ಮಯವೆನ್ನುವ ರೀತಿಯ ಘಟನೆ. ಈ ಬಿಸಿಲ ಬೇಸಿಗೆಯಲ್ಲಿ ಅದು ಹೇಗೆ ರಸ್ತೆಯ ಮೇಲೆ ನೀರು ಹೊಳೆಯಂತೆ ಹರಿಯಲು ಸಾಧ್ಯ?. ಇದ್ದಕ್ಕಿದ್ದಂತೆ ಕೇವಲ ಐದು ನಿಮಿಷದ ಅವಧಿಯಲ್ಲಿಯೇ 10 – 20 ಕಡೆ ರಸ್ತೆಯ ಮೇಲೆ ಒರತೆಯಂತೆ ನೀರು ಉಕ್ಕಿ ರಸ್ತೆಯ ತುಂಬೆಲ್ಲ ಹರಿದಿತ್ತು. ಅಲ್ಲಿ ಒಂದು ಕಡೆ ಕುತೂಹಲ. ಮತ್ತೊಂದು ಕಡೆ ಆತಂಕವೂ ಆಗಿತ್ತು. ಆ ರಸ್ತೆಯುದ್ದಕ್ಕೂ ಎಲ್ಲೋ ಒಂದು ಕಡೆ ನೀರು ಸೋರಿದಿದ್ದರೆ ಜ ಅಷ್ಟಾಗಿ ಗಾಬರಿ ಪಡುತ್ತಿರಲಿಲ್ಲ. ಸೀಮಿತ ಜಾಗದಲ್ಲಿ 20ಕ್ಕೂ ಹೆಚ್ಚು ಕಡೆಗೆ ನೀರು ಉಕ್ಕಿ ಹರಿದಾಗ ಜನರಿಗೆ ಆತಂಕವಾಗಿದ್ದು ಸಹಜವೇ. ಹೀಗೆ ಆಗುತ್ತಿದ್ದಂತೆಯೇ ಸುತ್ತಮುತ್ತಲ ಜನ ಸೇರಿದರು. ಹರಿಯುವ ನೀರಿನಲ್ಲಿ ಮಕ್ಕಳು ಬೇಸಿಗೆಯಲ್ಲಿ ಬಂದ ಮೊದಲ ಮಳೆ ಎಂಬಂತೆ ಕುಣಿದಾಡಿದರು. ಮನೆಯೊಳಗಡೆ ಇದ್ದ ಮಹಿಳೆಯರು ಇದೇನಾಯ್ತು ಎಂದು ಬಂದು ಆತಂಕದ ಕಣ್ಣುಗಳಲ್ಲಿಯೇ ನೋಡಲು ಆರಂಭಿಸಿದರು. ಸ್ವಲ್ಪೇ ಸಮಯ ಜನ ಸೇರಿದರು. ಆಗಲೇ ಕೆಲವರು ಆಡಿದ್ದು ಬಹುಶಹ ರಸ್ತೆಯ ಕೆಳಗಡೆ ಇದ್ದ ಪೈಪ್ ಲೈನ್ ಒಡೆದಿರಬೇಕೆಂದು. ಅದಕ್ಕೆ ಮತ್ತೆ ಮರು ಪ್ರಶ್ನೆ. ಕೇವಲ ಐದು ನಿಮಿಷದಲ್ಲಿ ಹೇಗೆ ಹತ್ತಾರು ಕಡೆ ಹೀಗೆ ಪೈಪ್ ಲೈನ್ ಒಡೆಯಲು ಸಾಧ್ಯ? ಸಿಗದ ಉತ್ತರ.

ಹೌದು ಇದೇ ಹಳೆ ದಾಂಡೇಲಿ ರಸ್ತೆಯಲ್ಲಿ ಪಟೇಲ ನಗರದಿಂದ ಹಳಿಯಾಳಕ್ಕೆ ಸಕ್ಕರೆ ಕಾರ್ಖಾನೆಗಾಗಿ ಹಾಗೂ ಹಡೆಯಾಳದ ಕೆರೆಗಳನ್ನು ತುಂಬಿಸುವ ಯೋಜನೆಗಾಗಿ, ಹಳಿಯಾಳದ 24*7 ಕುಡಿಯುವ ನೀರಿನ ಯೋಜನೆಗಾಗಿ, ಅಳ್ನಾವರದ ನೀರಿಗಾಗಿ ಪೈಪ್ ಲೈನ್ ಮೂಲಕ ನೀರನ್ನು ಸಾಗಿಸಲಾಗಿದೆ. ಇದರ ಜೊತೆಗೆ ದಾಂಡೇಲಿಯ ಜನರ ಕುಡಿಯುವ ನೀರಿನ ಪೈಪ್ ಲೈನ್ ಕೂಡ ಅಲ್ಲಿದೆ. ಜನರ ಅಭಿಪ್ರಾಯದ ಪ್ರಕಾರ ಬಹುಶಹ ಹಳಿಯಾಳಕ್ಕೆ ಸಾಗಿಸಲ್ಪಟ್ಟ ನೀರಿನ ಪೈಪ್ ಲೈನ್ ಒಡೆದಿದೆ. ಅದೇ ಕಾರಣಕ್ಕಾಗಿ ರಸ್ತೆಯ ತುಂಬೆಲ್ಲ ಹೀಗೆ ಬುಗ್ಗೆಯಂತೆ ನೀರು ಚಿಮ್ಮಿದೆ.
ಪೈಪ್ ಲೈನ್ ನಿರ್ಮಾಣದ ಸಂದರ್ಭದಲ್ಲಿಯೇ ಒಂದು ಆರೋಪ ಇತ್ತು. ಇಲ್ಲಿಯ ಪೈಪ್ ಲೈನ್ ಗಳನ್ನುಮಾಡುವಾಗ ಆಳವಾದ ತೆಗೆದು ಹಾಕಿಲ್ಲ. ಮೇಲಿಂದ ಮೇಲೆ ಹಾಕಿ ಮಣ್ಣು ಮುಚ್ಚಲಾಗಿದೆ ಎಂಬ ಆಕ್ಷೇಪವಿತ್ತು. ಬಹುಶ ಹಾಗೆ ಆಗಿರುವ ಕಾರಣಕ್ಕೆ ಭಾರವಾದ ವಾಹನಗಳು ಈ ರಸ್ತೆಯಲ್ಲಿ ಚಲಿಸಿದ್ದರಿಂದ ಪೈಪ್ ಲೈನ್ ಒಡೆದು ನೀರು ಹೀಗೆ ರಸ್ತೆ ಮೇಲೆ ತುಂಬಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ತಕ್ಷಣ ಈ ಪೈಪ್ ಲೈನ್ ಸರಿಪಡಿಸಿ ಹಳೆದಾಂಡೇಲಿ ಭಾಗದ ಜನರ ಸಮಸ್ಯೆ ನಿವಾರಿಸಬೇಕೆಂಬುದು ಅಲ್ಲಿಯ ಜನರ ಆಗ್ರಹವಾಗಿದೆ.
ಕುಡಿಯುವ ನೀರಾಗಿದ್ದರೆ ಕಲ್ಮಶ ಸೇರ್ಪಡೆ
ಹೀಗೆ ಹಳೆದಾಂಡೇಲಿ ರಸ್ತೆಯಲ್ಲಿ ಪೈಪ್ ಲೈನ್ ಒಡೆದು ನೀರು ರಸ್ತೆಯ ಮೇಲೆ ಬಂದು ರಾಡಿಯಾಗಿರುವುದನ್ನ ಗಮನಿಸಿದರೆ ಒಂದೊಮ್ಮೆ ಅದು ಹಳಿಯಾಳಕ್ಕೆ ಸಾಗಿಸಿದ ಅಥವಾ ದಾಂಡೇಲಿ ಜನರಿಗೆ ಸಾಗಿಸಿದ ಕುಡಿಯುವ ನೀರಿನ ಪೈಪ್ ಲೈನ್ ಆಗಿದ್ದರೆ, ಈ ನೀರಿನೊಳಗೆ ರೌಡಿ ನೀರು ಹಾಗೂ ಕಲ್ಮಶ ನಿರು ಸೇರಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಈ ಕಲ್ಮಶನೀರು ಕುಡಿಯುವ ನೀರಿನ ಪೈಪ್ ಲೈನ್ ನಲ್ಲಿ ಸೇರಿಕೊಂಡರೆ ಅದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಜನ ಜಾಗೃತೆ ವಹಿಸಬೇಕಿದೆ ಎಂಬ ಮಾತು ಕೇಳಿ ಬರುತ್ತಿದೆ.
ದಾಂಡೇಲಿಯಿಂದ ಹಳಿಯಾಳದ ಸಕ್ಕರೆ ಕಾರ್ಖಾನೆ ಹಾಗೂ ಹಳಿಯಾಳದ ಕುಡಿಯುವ ನೀರು ಮತ್ತು ಕೆರೆ ತುಂಬಿಸುವ ಯೋಜನೆಗಳಿಗೆ ಹಾಗೂ ಅಳ್ನಾವರಕ್ಕೆ ನೀರು ಸಾಗಿಸುವ ಯೋಜನೆಗಳಿಗೆ ನಾವು ಮೊದಲೇ ವಿರೋಧಿಸಿದ್ದೆವು. ಇಂತಹ ಎಲ್ಲ ಸಮಸ್ಯೆಗಳು ನಿರ್ಮಾಣವಾಗಬಹುದೆಂಬ ಅಂದಾಜು ನಮಗೆ ಆಗಲೇ ಇತ್ತು. ಆದರೆ ನಮ್ಮ ವಿರೋಧದ ನಡುವೆ ಕೂಡ ನೀರನ್ನ ಸಾಗಿಸಲಾಗಿತ್ತು. ಈಗ ಅದರ ಒಂದೊಂದೇ ಕಿರಿಕಿರಿಗಳು , ಅದ್ವಾನಗಳು ಈಗ ಆಗಲಾರಂಭಿಸಿದೆ. ನಮ್ಮ ನೋವನ್ನು ಕೇಳುವವರು ಯಾರು. ಇಂಥ ಸಮಸ್ಯೆ ಇನ್ನೂ ಮತ್ತೆ ಮತ್ತೆ ನಡೆಯುತ್ತಲೇ ಇರಬಹುದು. ಸಂಬಂಧಿಸಿದವರು ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ ಹಳೆದಾಂಡೇಲಿಯ ಹಿರಿಯರಾದ ವಿಷ್ಣು ಕಾಮತರವರು.

Be the first to comment