ಉಳ್ಳವರು ಉಚಿತ ಯೋಜನೆ ಬಯಸಬಾರದು – ದೇಶಪಾಂಡೆ

ದಾಂಡೇಲಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಕಾರ್ಯಾಲಯ ಉದ್ಘಾಟನೆ

ದಾಂಡೇಲಿ : ಕಾಂಗ್ರೆಸ್ ಸರಕಾರ ಚುನಾವಣೆಯ ಸಂದರ್ಭದಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿ ಗಳನ್ನು ಜನತೆಗೆ  ಉಚಿತವಾಗಿ ನೀಡುತ್ತಿದೆ. ಇದರಿಂದ ಸಾಕಷ್ಟು ಬಡವರಿಗೆ ಅನುಕೂಲವಾಗಿದೆ. ಅದರೆ ಉಳ್ಳವರು ಉಚಿತ ಯೋಜನೆಗಳನ್ನು  ಬಯಸಬಾರದು ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ , ಶಾಸಕ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟರು.

ಅವರು ದಾಂಡೇಲಿ ನಗರಸಭೆಯ ಅವರಣದಲ್ಲಿದ್ದ ಹಳೆ ತಾಲೂಕು ಪಂಚಾಯತ ಕಟ್ಟಡದಲ್ಲಿ  ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಗ್ಯಾರಂಟಿ ಯೋಜನೆ  ಇದು ಸರಕಾರದ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಈ ಯೋಜನೆಯ ಲಾಭ ಯಥಾವತ್ತಾಗಿ ಫಲಾನುಭವಿಗಳಿಗೆ ಸಿಗಬೇಕು ಎಂಬ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸರಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮಿತಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಗ್ಯಾರಂಟಿ ಯೋಜನೆಯಿಂದ ಸರಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳೂ ಹೊರೆಯುಗುತ್ತಿರುವುದು ನಿಜ. ಹಾಗೆಂದು ಯೋಜನೆ ನಿಲ್ಲಿಸಲಾಗದು. ನಾವು ಮಾತುಕೊಟ್ಟಂತೆ ನಡೆಯುತ್ತಿದ್ದೇವೆ. ಎಲ್ಲ ಜಾತಿ, ಧರ್ಮ, ಪಕ್ಷದವರೂ ಗ್ಯಾರಂಟಿ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿಯ ಆದ್ಯಕ್ಷ ರಿಯಾಜ ಅಹಮ್ಮದ ಬಿ. ಸಯ್ಯದ ಮಾತನಾಡಿ ತಾಲೂಕಿನಲ್ಲಿ ಬಾಕಿಯಿರುವ ಗ್ಯಾರಂಟಿ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಸಿಗುವಂತೆ ಕೆಲಸ  ಮಾಡುತ್ತೇವೆ. ಸರಕಾರದ ಈ ಯೋಜನೆ ಅನುಷ್ಟಾನಗೊಳಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಸುಭಾಸ ಕೊರವೇಕರ, ಜಿಲ್ಲಾ ಸಮಿತಿ ಸದಸ್ಯ ಅನಿಲ್ ದಂಡಗಲ, ದಾಂಡೇಲಿ ನಗರಸಭಾ ಅಧ್ಯಕ್ಷ ಅಷ್ಪಾಕ ಅಹ್ಮದ ಶೇಖ್,   ಉಪಾಧ್ಯಕ್ಷೆ  ಶಿಲ್ಪಾ  ಕೋಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ ಹಾಗೂ ನಗರಸಭಾ ಸದಸ್ಯರು, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯರು ಹಾಗೂ ತಹಶೀಲ್ದಾರ ಶೈಲೇಶ ಪರಮಾನಂದ,   ಪೌರಾಯುಕ್ತ ರಾಜಾರಾಂ ಪವಾರ,  ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಮೋದ ಮಹಾಲೆ  ಹಾಗೂ ಅಧಿಕಾರಿಗಳು ಇದ್ದರು.

ಬಿ.ಪಿ.ಎಲ್. ಕಾರ್ಡದಾರರ ಮರು ಪರಿಶೀಲನೆ

ರಾಜ್ಯದಲ್ಲಿ ಬೇಕಾಬಿಟ್ಟಿ ಬಿ.ಪಿ.ಎಲ್. ಕಾರ್ಡ ಪಡೆದು ಕೊಂಡಿದ್ದಾರೆ. 100 ಕ್ಕೆ 80 ರಷ್ಟು ಜನ ಬಿ.ಪಿ.ಎಲ್. ಕಾರ್ಡ ಪಡೆದಿದ್ದಾರೆ. ಹೀಗಾದರೆ ಯಾವ ಸರಕಾರ ತಡೆದುಕೊಳ್ಳಲು ಸಾಧ್ಯ. ಹಾಗಾಗಿ ಬಿ.ಪಿ.ಎಲ್. ಮರು ಪರಿಶೀಲನೆ ಮಾಡಬೇಕೆಂದುಕೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳೂ ಕೂಡಾ ಅರ್ಹ ಬಡವರಿಗೆ ಸಿಗುವಂತಾಗಬೇಕಿದೆ.
-ಆರ್.ವಿ. ದೇಶಪಾಂಡೆ , ಶಾಸಕರು

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*