ಶಿರೂರು ಗುಡ್ಡಕುಸಿತದಲ್ಲಿ ಕಣ್ಮರೆಯಾಗಿದ್ದ ಲಾರಿಯ ಅವಶೇಷ ಪತ್ತೆ…

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಧ ಕುಸಿತದಲ್ಲಿ ಕಣ್ಮರೆಯಾಗಿರುವ ಲಾರಿ ಹಾಗೂ ಕೆಲ ವ್ಯಕ್ತಿಗಳ ಪತ್ತೆ ಕಾರ್ಯಾಚರಣೆ ಮತ್ತೆ ಮುಂದುವರೆದಿದ್ದು, ಜಿಲ್ಲಾಡಳಿತದ ಪರವಾನಿಗೆಯಿಲ್ಲದಿದ್ದರೂ ಕಾರ್ಯಾಚರಣೆ ನಡೆಸಿದ ಉಡಪಿಯ ಈಶ್ವರ ಮಲ್ಫೆಯವರಿಗೆ ಲಾರಿಯ ಜಾಕ್ ಹಾಕೂ ಕೆಲ ಅವಶೇಷಗಳು ದೊರೆತಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ಭೂ ಕುಸಿತವಾಗಿ 29 ದಿನವಾಗಿದೆ. ಇದರ ಬೆನ್ನಲ್ಲೇ ಗಂಗಾವಳಿ ನದಿಯಲ್ಲಿ ಕಾಣೆಯಾದ ಮೂವರ ಶೋಧ ಕಾರ್ಯಕ್ಕೆ ಜಿಲ್ಲಾಡಳಿತ ಹಿಂದೇಟು ಹಾಕಿತ್ತು. ಆದರೆ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಸೂಚನೆಯಂತೆ ಉಡುಪಿಯ ಮುಳುಗು ತಜ್ಞ ಈಶ್ವರ್ ಮಲ್ಪೆಯವರು ಗಂಗಾವಳಿ ನದಿಯಲ್ಲಿ ಮಂಗಳವಾರ ಸಂಜೆ ವೇಳೆಯಲ್ಲಿ ಶೋಧಕಾರ್ಯಕ್ಕಿಳಿದಿದ್ದು, ಗ್ಯಾಸ್ ಟ್ಯಾಂಕರ್‌ನ ಚಿಕ್ಕ ಭಾಗವನ್ನು ಶೋಧ ನಡೆಸಿ ಹೊರತೆಗೆದಿದ್ದಾರೆ.

ಕೇರಳದ ಲಾರಿ ಚಾಲಕ ಅರ್ಜುನ್, ಶಿರೂರಿನ ಜಗನ್ನಾಥ್, ಗಂಗೆಕೊಳ್ಳದ ಲೋಕೇಶ್ ಶವಕ್ಕಾಗಿ ಶೋಧ ನಡೆಸಬೇಕಿದ್ದು, ಇದೀಗ ಗಂಗಾವಳಿ ನದಿಯಲ್ಲಿ ಜಿಲ್ಲಾಡಳಿತದ ತಡೆಯ ಮಧ್ಯೆಯೇ ಶೋಧ ಕಾರ್ಯ ಮುಂದುವರೆದಿದೆ. ಜಿಲ್ಲಾಡಳಿತದಿಂದ ಇದುವರೆಗೂ ಅಧಿಕೃತ ಅನುಮತಿ ಸಿಕ್ಕಿಲ್ಲ. ಈ ಹಿನ್ನೆಲೆ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಈಶ್ವರ್ ಮಲ್ಪೆ ಗಂಗಾವಳಿ ನದಿಗೆ ಇಳಿದಿದ್ದಾರೆ. ಸೇನಾ ತಂಡ ಈ ಹಿಂದೆ ಗುರುತಿಸಿದ ಜಾಗದಲ್ಲಿ ಮತ್ತೊಮ್ಮೆ ಮುಳುಗಿ ಈಶ್ವರ ಮಲ್ಪೆ ಶೋಧ ನಡೆಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಶಾಸಕ ಸತೀಶ್ ಸೈಲ್ ಖುದ್ದು ಸ್ಥಳಕ್ಕೆ ಆಗಮಿಸಿದ್ದರು. ಇವರೊಂದಿಗೆ ಕೇರಳ ರಾಜ್ಯದ ಶಾಸಕ ಆಶ್ರಫ್ ಕೂಡ ಹಾಜರಿದ್ದರು.

ಇನ್ನು ಶೋಧ ಕಾರ್ಯಾಚರಣೆ ವೇಳೆ ಲಾರಿಯ ಜಾಕ್ ಪತ್ತೆಯಾಗಿದೆ. ಕೇರಳ ಮೂಲದ ಚಾಲಕ ಅರ್ಜುನ್ ಓಡಿಸುತ್ತಿದ್ದ ಲಾರಿಯ ಜಾಕ್ ಪತ್ತೆ ಮಾಡಲಾಗಿದೆ. ಗಂಗಾವಳಿ ನದಿಯಲ್ಲಿ ಸ್ಕೂಬಾ ಡೈವ್ ಕಾರ್ಯಾಚರಣೆ ವೇಳೆ ಜಾಕ್ ಪತ್ತೆಯಾಗಿದ್ದು, ಸಿಕ್ಕಿರುವ ಜಾಕ್ ಅರ್ಜುನ್ ಓಡಿಸುತ್ತಿದ್ದ ಲಾರಿಯದ್ದೇ ಎಂದು ಲಾರಿ ಮಾಲಿಕ ಮುಫಿನ್ ಖಚಿತ ಪಡಿಸಿದ್ದಾರೆ. ಲಾರಿಯ ಎರಡು ಬಿಡಿ ಭಾಗಗಳು ಕೂಡ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ. ಒಂದು ಲಾರಿ ಬಾಗಿಲಿನ ಕೀಲು ಹಾಗೂ ಜಾಕ್ ಪತ್ತೆಯಾಗಿದೆ. ಬಾಗಿಲಿನ ಕೀಲು ತನ್ನ ವಾಹನದ್ದಲ್ಲ. ಆದರೆ ಜಾಕ್ ಮಾತ್ರ ತನ್ನ ವಾಹನದ್ದೇ ಎಂದು ನಾಪತ್ತೆಯಾದ ಬೆಂಜ್ ಲಾರಿಯ ಮಾಲಿಕ ಮುಫಿನ್ ಹೇಳಿದ್ದಾರೆ.

ಕಾರ್ಯಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರ್ ಮಲ್ಪೆ ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಾಚರಣೆ ಆರಂಭ ಮಾಡಿದೆವು. ನಿರಂತರ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಲಾಯಿತು. ಕಾರ್ಯಾಚರಣೆ ವೇಳೆ ಬೆಂಜ್ ಲಾರಿಯ ಜಾಕ್ ಪತ್ತೆ ಆಗಿದೆ. ಜಾಕ್ ಪತ್ತೆ ಆಗಿದ್ದ ಬಳಿಯೇ ಕೆಳಗೆ ಲಾರಿ ಇರುವುದು ಖಚಿತವಾಗಿದೆ. ಬುಧವಾರ ಮುಂಜಾನೆ ಮತ್ತೆ ಕಾರ್ಯಾಚರಣೆ ಆರಂಭ ಮಾಡುತ್ತೇವೆ. ಲಾರಿ ಇಂತಹದ್ದೇ ಸ್ಥಳದಲ್ಲಿ ಇದೆ ಎಂಬುವುದು ಖಚಿತ ಆಗಿದೆ. ಆದರೆ ಆ ಲಾರಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಬಿದ್ದಿದೆ. ಮಣ್ಣನ್ನು ತೆರವು ಮಾಡುವ ಕಾರ್ಯದ ಬಳಿಕ ಮೃತ ದೇಹಗಳು ಸಿಗುವ ಸಾಧ್ಯತೆಯಿದೆ ಎಂದು ಈಶ್ವರ ಮಲ್ಪೆ ತಿಳಿಸಿದ್ದಾರೆ. ಬುಧವಾರ ಕಾರ್ಯಾಚರಣೆ ನಡೆಸಲು ಅನುಮತಿ ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*