ಕಾರವಾರ ಹಾಗೂ ಗೋವಾ ಸಂಪರ್ಕಿಸುವ ಕಾಳಿ ಸೇತುವೆ ಕುಸಿದು ಬಿದ್ದ ಪರಿಣಾಮ ಅಭಿವೃದ್ಧಿ ಹಾಗೂ ಇನ್ನಿತರ ವಿಚಾರಗಳಗೆ ಸಾಕಷ್ಟು ನಷ್ಟವುಂಟಾಗಿದ್ದು, ತಕ್ಷಣ ಹೊಸ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಅವಶ್ಯ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೇಂದ್ರ ಸಾರಿಗೆ ಸಚಿವ ನಿತಿನ ಗಡ್ಕರಿಯವರಿಗೆ ಶಾಸಕ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆಯವರು ಪತ್ರ ಬರೆದಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದ ಕಾಳಿ ಸೇತುವೆ ಕುಸಿದಿದೆ. ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳ ಸಂಪರ್ಕ ಕೊಂಡಿಯಾಗಿದ್ದ ಹಾಗೂ ಕಾರವಾರ–ಗೋವಾ ಮಾರ್ಗದಲ್ಲಿ ಕಾರವಾರದಿಂದ ಸದಾಶಿವಗಡಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಹಳೆಯ ಕಾಳಿನದಿ ಸೇತುವೆ ಕುಸಿದಿರುವುದು ದುರ್ದೈವದ ಸಂಗತಿ. ಈ ಸೇತುವೆ ರಾತ್ರಿ ಹೊತ್ತಿನಲ್ಲಿ ಅದು ಸಂಚಾರ ತುಂಬಾ ಕಡಿಮೆ ಇರುವ ಸಮಯದಲ್ಲಿ ಕುಸಿದು ಬಿದ್ದಿರುವುದರಿಂದ ದೊಡ್ಡ ದುರಂತ ತಪ್ಪಿದಂತಾಗಿದೆ.
ಕರ್ನಾಟಕ ಮತ್ತು ಗೋವಾ ರಾಜ್ಯದ ಸಂಪರ್ಕಕ್ಕೆ ಕೊಂಡಿಯಾಗಿರುವ ಈ ಸೇತುವೆ ತುಂಡಾಗಿ ಬಿದ್ದಿರುವುದರಿಂದ ಪ್ರವಾಸೋದ್ಯಮದ ಮೇಲೆಯೂ ಪರಿಣಾಮ ಬೀರಿದೆ. ಈ ಹೆದ್ದಾರಿ ಮೇಲಿನ ಸೇತುವೆಯ ಕುಸಿತದಿಂದಾಗಿ ಪ್ರವಾಸೋದ್ಯಮದ ಜೊತೆಗೆ ಅಭಿವೃದ್ಧಿಯ ಮೇಲೆಯೂ ಪರಿಣಾಮ ಬೀರಿದ್ದು, ಈಗಿರುವ ಸೇತುವೆ ಮೇಲೆ ಹೆಚ್ಚು ಒತ್ತಡ ಬೀಳದಂತೆ ಶೀಘ್ರವಾಗಿ ಹೊಸ ಸೇತುವೆ ನಿರ್ಮಾಣ ಮಾಡಲು ಅನುಕೂಲವಾಗುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಗತ್ಯ ಅನುದಾನ ಮಂಜೂರು ಮಾಡವಂತೆ ಶಾಸಕ ಆರ್.ವಿ. ದೇಶಪಾಂಡೆ ಯವರು ಕೇಂದ್ರ ಸಾರಿಗೆ ಸಚಿವರಾದ ನಿತಿನ ಗಡ್ಕರಿಯವರಲ್ಲಿ ಲಿಖಿತ ಪತ್ರ ಮುಖೇನ ಒತ್ತಾಯಿಸಿದ್ದಾರೆ.
Be the first to comment