ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳು : ಸಮಸ್ಯೆ ಹೇಳಿಕೊಂಡ ಮಕ್ಕಳು : ಸಿಬ್ಬಂದಿಗಳು
ಉತ್ತರಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು ಸೋಮವಾರ ದಾಂಡೇಲಿಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಭೇಟಿ ನೀಡಿ ಇಲ್ಲಿಯ ಸಮಸ್ಯೆಗಳನ್ನು ಪರಿಶೀಲಿಸಿ ಸಿಬ್ಬಂದಿಗಳು ಹಾಗೂ ಮಕ್ಕಳಿಂದ ಮಾಹಿತಿಯನ್ನು ಪಡೆದು ಕೊಂಡಿದ್ದಾರೆ.
ದಾಂಡೇಲಿಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಚಾರ್ಯರಾಗಿದ್ದ ವಿಶ್ವನಾಥ್ ಹುಲಸುದಾರವರು ವರ್ಗಾವಣೆಗೊಂಡರೂ ಚಾರ್ಜ್ ನೀಡದೇ ಹೋಗಿರುವ ಹಿನ್ನೆಲೆಯಲ್ಲಿ ಈ ಶಾಲೆಯಲ್ಲಿ ಆಗಿರುವ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಹಾಗೂ ಅವರ ಅವಧಿಯಲ್ಲಿ ಈ ಶಾಲೆಯಲ್ಲಿ ನಡೆದಿರುವ ಹಲವು ಸರ್ವಾಧಿಕಾರಿ ಕೆಲಸಗಳ ಬಗ್ಗೆ ಒಡನಾಡಿ.ಕಾಂ ನಿರಂತರ ವರದಿಗಳನ್ನು ಪ್ರಕಟಿಸಿತ್ತು. 10 ದಿನಗಳಾದರೂ ಮೇಲಾಧಿಕಾರಿಗಳು ಸ್ಪಂದಿಸದೆ ಇರುವ ಬಗ್ಗೆಯೂ ಕೂಡ ಗಮನ ಸೆಳೆದಿತ್ತು. ನಂತರ ವಿದ್ಯಾರ್ಥಿ ಪಾಲಕರು ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ತಹಶೀಲ್ದಾರ ಶೈಲೇಶ ಪರಮಾನಂದ ರವರು ಸ್ಥಳಕ್ಕೆ ಆಗಮಿಸಿ, ಅಧಿಕಾರಿಗಳನ್ನು ಕರೆಯಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಸೋಮವಾರ ಉತ್ತರ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಫಕೀರಪ್ಪ ಪೂಜಾರಿಯವರು ಶಾಲೆಗೆ ಭೇಟಿ ನೀಡಿ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಸಮ್ಮುಖದಲ್ಲಿ ಸಭೆ ನಡೆಸಿ, ಸಿಬ್ಬಂದಿಗಳಿಂದ ಸಮಸ್ಯೆಯ ಮಾಹಿತಿ ಪಡೆದರು. ನಗರಸಭಾ ಸದಸ್ಯರಾದ ಯಾಸ್ಮಿನ್ ಕಿತ್ತೂರ್ ಸಂಜಯ ನಂದ್ಯಾಳಕರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳು, ‘ಪ್ರಾಚಾರ್ಯರು ವರ್ಗಾವಣೆಗೊಂಡು ಹೋಗಿದ್ದರೂ ಕೂಡ ಅಧಿಕಾರ ಹಸ್ತಾಂತರಿಸದೇ ಇರುವುದರಿಂದ ಹಾಗೂ ಅಗತ್ಯ ದಾಖಲೆಗಳಿರುವ ಕಪಾಟುಗಳ ಬೀಗವನ್ನು ನೀಡದೇ ಇರುವುದರಿಂದ ಎಸ್. ಎಸ್. ಎಲ್. ಸಿ. ಮಕ್ಕಳ ಟಿಸಿ ಜಾಗೂ ಮಾರ್ಕ್ಸ್ ಕಾರ್ಡ್ ವಿತರಿಸಲು ಹಾಗೂ ಇನ್ನಿತರ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ಅಂತರ್ಜಾಲ ಕೆಲಸಗಳಿಗಾಗಿ ಪಾಸ್ವರ್ಡ್ ಗಳನ್ನು ನೀಡದಿರುವುದರಿಂದ ಹಲವು ಕೆಲಸಗಳಾಗಿಲ್ಲ ಎಂಬನೇಕ ವಿಷಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪೋಷಕರೊಬ್ಬರು ‘ಪ್ರಾಚಾರ್ಯ ವಿಶ್ವನಾಥರವರು ತಮ್ಮ ಅವಧಿಯಲ್ಲಿ ಈ ಶಾಲೆಯಲ್ಲಿ ಅನೇಕ ಸರ್ವಾಧಿಕಾರಿ ಧೋರಣೆಯ ಕೆಲಸವನ್ನು ಮಾಡಿದ್ದಾರೆ. ತಮ್ಮದೇ ಊರಿನ ನಾಲ್ವರು ಗುತ್ತಿಗೆ ಸಿಬ್ಬಂದಿಗಳನ್ನು ತಂದಿಟ್ಟುಕೊಂಡು ಎಲ್ಲ ಜವಾಬ್ದಾರಿ ಅವರಿಗೇ ಕೊಟ್ಟಿದ್ದರು. ಆ ನಾಲ್ವರು ಇಲ್ಲಿಯ ಮಕ್ಕಳಿಂದಲೇ ತಮ್ಮ ಬಟ್ಟೆ ತೊಳೆಯಿಸಿಕೊಳ್ಳುವುದು, ಮೈ ಒತ್ತಿಸಿಕೊಳ್ಳುವುದು, ಇದೇ ವಸತಿ ಶಾಲೆಯ ಕೊಠಡಿಯೊಂದರಲ್ಲಿ ಮಧ್ಯಪಾನ ಮಾಡುವುದು. ವಿದ್ಯಾರ್ಥಿಗಳಿಗೆ ತಮ್ಮ ಸೊಂಟದ ಬೆಲ್ಟ್ ನಿಂದ ಹೊಡೆಯುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಇಲ್ಲಿಯ ಸಿಬ್ಬಂದಿಗಳಿಗೂ ಅನಗತ್ಯ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಪ್ರಾಚಾರ್ಯರಿಗೆ ದೂರು ನೀಡಿದರೂ ಕೂಡ ಕ್ರಮ ಕೈಗೊಂಡಿರಲಿಲ್ಲ. ಬದಲಿಗೆ ಮಕ್ಕಳಿಗೆ ಕರೆದು ನಿಮ್ಮನ್ನ ಇಲ್ಲಿಂದ ಟಿಸಿ ಕೊಟ್ಟು ಮನೆಗೆ ಕಳಿಸುತ್ತೇವೆ ಎಂದು ಬೆದರಿಸುತ್ತಿದ್ದರು. ಹಾಗೂ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಟಿಸಿ ಹಾಗೂ ಮಾರ್ಕ್ಸ್ ಕಾರ್ಡ್ ನೀಡುವಾಗ ಎರಡರಿಂದ ನಾಲ್ಕು ಸಾವಿರದ ವರೆಗೆ ಹಣ ವಸೂಲಿ ಮಾಡುತ್ತಿದ್ದರು ಟ್ರ್ಯಾಕ್ ಶೂಟ್ ನೀಡುತ್ತೇನೆಂದು ವರ್ಷ 300 ವಿದ್ಯಾರ್ಥಿಗಳಿಂದ ಹಣ ಪಡೆದು ಅವರಿಗೆ ಟ್ರ್ಯಾಕ್ ಶೂಟ್ ನೀಡದೆ ವಂಚಿಸಲಾಗಿದೆ. ಶಾಲೆ ಮಕ್ಕಳಿಗೆ ಊಟ ಹಾಗೂ ಆರೋಗ್ಯದ ವಿಚಾರದಲ್ಲಿ ಕೂಡ ನಿರ್ಲಕ್ಷ್ಯ ಮಾಡುತ್ತಿದ್ದರು’ ಎಂಬನೇಕ ಆಕ್ಷೇಪಗಳನ್ನ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳೆದುರು ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಯಿಸಿದ ಅಲ್ಪಸಂಖ್ಯಾತ ಇಲಾಖೆ ಕಲ್ಯಾಣ ಅಧಿಕಾರಿ ಫಕೀರಪ್ಪ ಪೂಜಾರಿಯವರು ‘ಈ ಎಲ್ಲ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಿಬ್ಬಂದಿಗಳು ಹಾಗೂ ಮಕ್ಕಳೂ ಕೂಡಾ ಹಲವು ವಿಚಾರ ಹೇಳಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೂ ಕೂಡ ವರದಿಯನ್ನು ಸಲ್ಲಿಸುತ್ತೇನೆ. ಇನ್ನು ಮುಂದೆ ಈ ಶಾಲೆಯಲ್ಲಿ ಸಮಸ್ಯೆಗಳು ಆಗದ ರೀತಿಯಲ್ಲಿ ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ನಾನು ವೈಯಕ್ತಿಕವಾಗಿ ಗಮನಹರಿಸುತ್ತೇನೆ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕೆ ಹಿಂಜರಿಯುವುದಿಲ್ಲ’ ಎಂದರು.
ನಂತರ ಮಕ್ಕಳ ಜೊತೆಯಲ್ಲಿಯೂ ನೇರವಾಗಿ ಮಾತುಕತೆ ನಡೆಸಿದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿಗಳು ಮಕ್ಕಳಿಂದ ಬಂದ ದೂರುಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಮಕ್ಕಳು ‘ತಮಗೆ ಪ್ರಾಚಾರ್ಯರು ವರ್ಗಾವಣೆಯಾಗಿ ಹೋದ ನಂತರ (ಆಗಸ್ಟ್ 5ರ ನಂತರ ) ಊಟ ಮತ್ತು ಉಪಹಾರಗಳು ಚೆನ್ನಾಗಿ ಸಿಗುತ್ತಿವೆ. ಅದಕ್ಕೂ ಮೊದಲು ಸರಿ ಇರುತ್ತಿರಲಿಲ್ಲ. ಸಪ್ಪೆ ಇರುತ್ತಿತ್ತು. ಒಂದು ಮುಷ್ಟಿ ಅನ್ನವನ್ನು ಹೆಚ್ಚಿಗೆ ಕೇಳಿದರು ಹೊಡೆತ ಬೀಳುತ್ತಿತ್ತು. ಈಗ ಸಮರ್ಪಕವಾಗಿ ನಡೆಯುತ್ತಿದೆ’ ಎಂದು ಹೇಳಿದರಲ್ಲದೆ, ಪ್ರಾಚಾರ್ಯರ ಊರಿನ ನಾಲ್ವರು ಸಿಬ್ಬಂದಿಗಳ ನಡವಳಿಕೆಯ ಬಗ್ಗೆಯೂ ದೂರು ನೀಡಿದರು . ಹಾಗೂ ಶಾಲೆಯಲ್ಲಿ ವೈಫೈ ಇಲ್ಲದೆ ಇರುವ ಬಗ್ಗೆ ವಿಜ್ಞಾನ ಲ್ಯಾಬ್ ಗಳು ಸಮರ್ಪಕವಾಗಿ ಇಲ್ಲದಿರುವ ಬಗ್ಗೆಯೂ ಹೇಳಿಕೊಂಡರು. ಆಗ ಅಧಿಕಾರಿಗಳು ‘ಇಲ್ಲಿಯವರೆಗೆ ಆಗಿದ್ದನ್ನು ವಿಚಾರಣೆ ನಡೆಸಲಾಗುವುದು. ಇನ್ನು ಮುಂದೆ ಹೀಗಾಗುವುದಿಲ್ಲ. ಸರಿಪಡಿಸಲಾಗುವುದು’ ಎಂದರು.
ನಂತರ ತಂತ್ರಜ್ಞರನ್ನು ಕರೆಯಿಸಿ ಶಾಲೆಯ ಇ-ಮೇಲ್ ಹಾಗೂ ಅಂತರ್ಜಲದ ಪಾಸ್ವರ್ಡ್ ನವೀಕರಿಸುವ ಜೊತೆಗೆ ಪ್ರಾಚಾರ್ಯ ಬೀಗ ಹಾಕಿ ಹೋಗಿದ್ದ ಕಪಾಟುಗಳ ಬಾಗಿಲು ತೆರವುಗೊಳಿಸಿ ಪ್ರಭಾರ ಇರುವರಿಗೆ ಅಧಿಕಾರ ಹಸ್ತಾಂತರಿಸಿದರು. ವಸತಿ ಶಾಲೆಯ ಎಲ್ಲ ಕೊಠಡಿ ಹಾಗೂ ಹಾಸ್ಟೆಲ್ ಅಡುಗೆ ಕೋಣೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಶಾಲೆಯ ಉಪನ್ಯಾಸಕರೋರ್ವರಿಗೆ ವಾರ್ಡನ್ ಜವಾಬ್ದಾರಿ ನೀಡಿದರು.
ತಪ್ಪಿತಸ್ಥರ ಮೇಲೆ ಕ್ರಮ :
‘ದಾಂಡೇಲಿಯ ಅಬ್ದುಲ್ ಕಲಾಂ ವಸತಿ ಶಾಲೆಯ ಬಗ್ಗೆ ತಮ್ಮ ಮಾಧ್ಯಮದಲ್ಲಿ ಬಂದ ವರದಿಯನ್ನ ಗಮನಿಸಿದ್ದೇನೆ. ನನ್ನ ಅನಾರೋಗ್ಯದ ಕಾರಣ ನನಗೆ ಭೇಟಿ ನೀಡಲಾಗಿರಲಿಲ್ಲ. ಇಂದು ವಸತಿ ಶಾಲೆಗೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ಪಡೆದಿದ್ದೇನೆ. ಸಿಬ್ಬಂದಿಗಳು, ಮಕ್ಕಳು ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ ಪ್ರಾಚಾರ್ಯರು ಚಾರ್ಜ್ ನೀಡದೇ ಹೋಗಿರುವು ದರಿಂದ ಸಮಸ್ಯೆಗಳಾಗಿದ್ದು ನಿಜ. ಯಾರೇ ತಪ್ಪು ಮಾಡಿದರೂ ಕೂಡ ಇಲಾಖೆ ಅವರ ಮೇಲೆ ಕ್ರಮ ಕೈಗೊಳ್ಳುತ್ತದೆ. ಈ ವಸತಿ ಶಾಲೆಯಲ್ಲಿ ಇನ್ನು ಮುಂದೆ ಈ ರೀತಿ ಸಮಸ್ಯೆಗಳಾಗದಂತೆ ನೋಡಿಕೊಳ್ಳ ಲಾಗುವುದು. ಇಲ್ಲಿಯ ವಿದ್ಯಾಮಾನಗಳ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.
–ಫಕೀರಪ್ಪ ಪೂಜಾರಿ
ಜಿಲ್ಲಾ ಅಲ್ಪಸಂಖ್ಯಾತ ಇಲಾಖಾ ಕಲ್ಯಾಣಾಧಿಕಾರಿ
Be the first to comment