‘ಹಿಡಿಯಷ್ಟು ಪ್ರೀತಿ..!!’ ಪರಮೇಶ್ವರಪ್ಪ ಕುದರಿಯವರ ಕಥೆ….

ಬೆಳಗಿನ ಜಾವ ಮುತ್ತಣ್ಣ ತನ್ನ ಮೂರನೇ ಕಾಲನ್ನು ಊರುತ್ತ ಮಗಳ ಮನೆಯತ್ತ ಹೊರಟಿದ್ದರು ಯಾವುದೋ ಕಾರು ಬಂದು ಅವರ ಬಳಿ ನಿಂತಿತು.
ಮುತ್ತಣ್ಣ ಆಶ್ಚರ್ಯಕರ ನೋಟವನ್ನು ಬೀರಿದರು. ಕಾರ್ ಒಳಗಿದ್ದ ವ್ಯಕ್ತಿ
” ಬನ್ನಿ ಯಜಮಾನರೇ ಒಳಗೆ ಬನ್ನಿ , ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಬಿಡ್ತೀನಿ” ಎಂದರು. ಮುತ್ತಣ್ಣನಿಗೆ ಆ ವ್ಯಕ್ತಿಯ ಪರಿಚಯವೇ ಇರಲಿಲ್ಲ!
” ಸರ್, ತಾವು ಯಾರು ಅಂತಾನೇ ನನಗೆ ಗೊತ್ತಿಲ್ಲ. ಪರಿಚಯವೇ ಇಲ್ಲದವರ ಕಾರನ್ನು ಹೇಗೆ ಏರಲಿ? ಎಂದು ಹಿಂಜರಿದರು.
ಆದರೂ ಕಾರಿನೊಳಗಿದ್ದ ವ್ಯಕ್ತಿ ತನ್ನ ಹಠ ಬಿಡಲಿಲ್ಲ. “ಹಿರಿಯರನ್ನು ಗೌರವಿಸುವುದು, ಸಹಾಯ ಮಾಡೋದು ಮನುಷ್ಯತ್ವ ಅಲ್ಲವೇ ಸರ್? ಬನ್ನಿ ಬನ್ನಿ” ಎಂದಾಗ, ಮುತ್ತಣ್ಣ ಅವರ ಕಾರನ್ನೇರಿದರು. ಕಾರಿನಲ್ಲಿ ಪರಸ್ಪರ ಪರಿಚಯವಾಯಿತು. ಪರಿಸರ ಬಿಲ್ಡಿಂಗ್ ಬಂತು, ಮುತ್ತಣ್ಣ ಕಾರನ್ನಿಳಿದರು. ” ಮಗಳ ಮನೆಗೇ ಬಿಡ್ತೀವಿ ಬನ್ನಿ” ಎಂದರು ಕಾರನಲ್ಲಿದ್ದ ವ್ಯಕ್ತಿ. ” ಪರವಾಗಿಲ್ಲ ಇಲ್ಲೇ ಹತ್ತಿರದಲ್ಲೇ ಇದೆ” ಎಂದು ಥ್ಯಾಂಕ್ಸ್ ಹೇಳಿ ಹೊರಟರು ಮುತ್ತಣ್ಣ.

*************#########**************

ಮುತ್ತಣ್ಣ 72ರ ವಯಸ್ಸಿನಲ್ಲೂ ಉತ್ಸಾಹ‌ ಕಳೆದುಕೊಂಡಿರಲಿಲ್ಲ! ಚಿತ್ರದುರ್ಗದ ಇತಿಹಾಸದ ಬಗ್ಗೆ ಹುಡುಕಿ ಹುಡುಕಿ , ಓದಿ – ಓದಿ ಪತ್ರಿಕೆಗಳಿಗೆ ಲಘು ಬರಹಗಳನ್ನು ಬರೆಯುವುದು. ಹಳೆಯ ಚಿತ್ರಗೀತೆಗಳನ್ನು ಹಾಡುವುದು.ಸಂಜೆ ಗಂಟೆಗಟ್ಟಲೇ ತನ್ನ ಮೂರನೇ ಕಾಲನ್ನೂರುತ್ತ ವಾಕ್ ಮಾಡುತ್ತ ಲವಲವಿಕೆಯಿಂದ ಇರೋದು ಅವರ ಹುಟ್ಟು ಗುಣ. ಮೇಲಿನ ಕಾರಿನ ಘಟನೆಯನ್ನು ಇತ್ತೀಚಿಗೆ ನನ್ನೊಂದಿಗೆ ಹಂಚಿಕೊಂಡರು. ಮಾತು ಮುಂದುವರೆಸುತ್ತ;
” ಸರ್ , ಈಗ ನಾನು ಬದುಕಿನ ಕೊನೆಯ ಹಂತದಲ್ಲಿದ್ದೇನೆ. ಮೂರು ಮಕ್ಕಳು ನನಗೆ.ಆದರೆ ಯಾರೂ ನನ್ನ ಕ್ಯಾರೆ ಅನ್ನೋದಿಲ್ಲ.ಹೆಂಡತಿ ನನ್ನಿಂದ ದೂರವಾಗಿ ವರ್ಷಗಳೇ ಗತಿಸಿದವು. ನಾನು ರಿಟೈರ್ಡ್ ಎಂಪ್ಲಾಯಿ.ನನಗೆ 35,000 ರೂ ಪೆನ್ಸನ್ ಬರುತ್ತೆ.ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದೇನೆ! ನನಗೆ ಮಕ್ಕಳಿಂದ, ಸೊಸೆಯಿಂದ, ಮೊಮ್ಮಕ್ಕಳಿಂದ ಏನೂ ಬೇಕಿಲ್ಲ ಸರ್. ನನಗೆ ಬೇಕಿರುವುದು ಬದುಕಿನ ಈ ದಿನಗಳಲ್ಲಿ ಒಂದು ಹಿಡಿಯಷ್ಟು ಪ್ರೀತಿ ಮಾತ್ರ” ಎಂದು ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಂಡರು.ಮತ್ತೆ ಮಾತು ಮುಂದುವರೆಸುತ್ತ ” ಯಾವುದೇ ಸಭೆ- ಸಮಾರಂಭಕ್ಕೆ ಹೋದರೂ ಅಲ್ಲಿ ಬಂದವರೆಲ್ಲ ಹಿರಿಯರೆಂದು, ಸಾಹಿತಿಗಳೆಂದು ನನ್ನ ಕಾಲಿಗೆರಗಿ ಆಶೀರ್ವಾದ ಪಡೆಯುತ್ತಾರೆ. ಆದರೆ ನನ್ನ ಮಕ್ಕಳಿಗೆ ನನ್ನಿಂದ ಅದೇನು ಕೇಡಾಗಿದೆಯೋ ತಿಳಿಯದಾಗಿದೆ.” ಎಂದು ಆಕಾಶದತ್ತ ಮುಖ ಮಾಡಿದರು!
ಮೂರು ಮಕ್ಕಳು ಇದ್ದೂ ಬದುಕನ್ನು ಅನಾಥರಂತೆ ಕಳೆಯುತ್ತಿರುವ ಮುತ್ತಣ್ಣನನ್ನು ನೋಡಿ ನನಗೂ ಕಣ್ಣು ತುಂಬಿ ಬಂದವು. ಮುಂದಿನ ನನ್ನ ಬದುಕಿನ ಕಲ್ಪನೆಯ ದಿನಗಳು ಕಣ್ಣು ಮುಂದೆ ಹಾದು ಹೋದಂತಾಯಿತು!!

✍️ ಪರಮೇಶ್ವರಪ್ಪ ಕುದರಿ

ಲೇಖಕರ ಪರಿಚಯ:
ಪರಮೇಶ್ವರ ಕುದರಿಯವರು ಮೂಲತಃ ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಗ್ರಾಮದವರು. ಪ್ರಸ್ತುತ ಚಿತ್ರದುರ್ಗ ನಿವಾಸಿ. ನಿವೃತ್ತ ಪ್ರೌಢಶಾಲಾ ಶಿಕ್ಷಕರು. ಕತೆ,ಕವನ,ಶಾಯಿರಿ ಬರೆಯುವುದು, ಗಣ್ಯರ ಸಂದರ್ಶನ ಮಾಡುವುದು.ಮಿಮಿಕ್ರಿ, ಕರೋಕೆ ಗಾಯನ ಇವರ ಹವ್ಯಾಸಗಳು. ಈ ವರೆಗೆ ಒಂಬತ್ತು ಕೃತಿಗಳು ಪ್ರಕಟವಾಗಿವೆ. ಉದಯ, ಸುವರ್ಣ, ಝೀ ಕನ್ನಡ, ಟಿವಿ 9 ದಲ್ಲಿ ಹಾಸ್ಯ ಕಾರ್ಯಕ್ರಮ, ಚಂದನ ದಲ್ಲಿ ಬೆಳಗು, ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರವಾಗಿವೆ.ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ, ಗೌರವ ಡಾಕ್ಟರೇಟ್ ಪಡೆದಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*