ಪ್ರತಿ ಸಲ ಟ್ರಾನ್ಸ್‌ಫರ್ ಆದಾಗಲೂ ನನಗಾಗುವ ದೊಡ್ಡ ಕಷ್ಟ ಎನಂದ್ರೇ ಹೊಸ ಊರಲ್ಲಿ ಸರಿಯಾದ ಹೇರ್ ಕಟ್ಟಿಂಗ್ ಶಾಪ್ ಹುಡಕೋದು. ಈ ಸರ್ತೀನೂ ಅದೇ ಪ್ರಾಬ್ಲೇಂ ಹಿಡ್ಕೊಂಡೇ ಬಾಗಿಲ ಚಿಲಕ ಭದ್ರ ಮಾಡುವಂತೆ ಹೆಂಡತಿಗೆ ಹೇಳಿ ನಡೆದುಕೊಂಡು ಹೋಗಿಯೇ ನೋಡೋಣವೆಂದು ಮನೆಯಿಂದ ಹೊರ ನಡೆದೆ ಬೆಳಂ ಬೆಳಿಗ್ಗೆ, “ಇನ್ನೂ ಈ ಜಾಗದಲ್ಲಿ ಸಹ ಭಂಡಾರಿಯತ್ರ ಗಲಾಟೆ ಮಾಡ್ಕೊಂಡು ಬರಬೇಡಿ” ಎಂದು ಸುಮನ ಒಳಗಿನಿಂದ ಬೊಬ್ಬೆ ಹೊಡೆಯುವಾಗ. ಸಿಕ್ಕಾಪಟ್ಟೆ ಕೂದಲು ಬೆಳೆದು ಒಳ್ಳೆಯ ರೋಡ್ ರೊಮಿಯೋ ತರ ಕಾಣ್ತಿದ್ದೆ ಯಾರು ಇಲ್ಲದ ರಸ್ತೆಯಲ್ಲಿ ಹೆಜ್ಜೆ ಹಾಕುವಾಗ. ಆಫ್ಟರ್ ಆಲ್ ಸೊಣ್ಣಳಿಪುರ ಒಂದು ಸಣ್ಣ ಹಳ್ಳಿ, ಹೆಚ್ಚು ಅಂದರೆ ಒಂದು ನೂರು ಮನೆ ಇರಬಹುದು ಅಸುಪಾಸಿನನಲ್ಲಿ. ಅದೇನು ಬಿಸಿನೆಸ್ ಆಗೂತ್ತೋ ಗೊತ್ತಿಲ್ಲ ಇಂತಹ ಜಾಗದಲ್ಲಿ ಬ್ಯಾಂಕ್ನ ಹೊಸ ಬ್ರಾಂಚ್ ಮಾಡಿ ನನ್ನ ಗ್ರಹಚಾರಕ್ಕೆ ನನ್ನನ್ನೇ ಮ್ಯಾನೇಜರ್ ಮಾಡಿ ಕಳಿಸಿದ್ದಾರೆ ಆನುಭವ ಇರುವ ವ್ಯಕ್ತಿಯೆಂದು. ನನಗೂ ಒಂದು ಹಳೇ ಅಭ್ಯಾಸ, ಈ ಬಾರ್ಬರ್, ಬಸ್ ಕಂಡಕ್ಟರ್. ಇಂತಹವರತ್ರೆಲ್ಲ ಛಾನ್ಸ್ ಸಿಕ್ಕಿದಾಗ ಬಾಯಿ ತುಂಬಾ ಮಾತನಾಡೋದು… ಅವರ ನಾಲ್ಕೂರಿನ ಹತ್ತಾರು ಜನರ ಆನುಭವ ಕೇಳೋದು. ಒಂದೆರಡು ಸಲ ಆ ರೀತಿ ಮಾಡುವಾಗ ಅದೇನೂ ಬೇಕು ಬೇಡದ್ದು ಚರ್ಚೆ ಆಗಿ ಕೊನೆಗೆ ಸಣ್ಣ ಪುಟ್ಟ ಗಲಾಟೆನೂ ಅದದ್ದಿದೆ. ಅದು ಗೊತ್ತಿದ್ದೇ ನನ್ನ ಹೆಂಡತಿ ಮೊದಲೇ ಎಚ್ಚರಿಸಿದ್ದು ನನಗೆ ಪ್ರೀತಿಯಿಂದ.
ಹೆಚ್ಚು ಕಡಿಮೆ ಒಂದು ಅರ್ಧ ಕಿಲೋಮೀಟರ್ ಸಾಗಿ ಮೂರು ದಾರಿ ಸೇರೋ ಸಣ್ಣ ಜಂಕ್ಷನ್ ಬಳಿ ಬರುವಾಗ, ಅಲ್ಲೇ ಬಲ ಬದಿಯಲ್ಲಿ ನಾಲ್ಕರು ಅಂಗಡಿಗಳ ಸಾಲು ಕಣ್ಣಿಗೆ ಬಿತ್ತು. ಆ ದಿಕ್ಕಿನಲ್ಲೇ ಹೆಜ್ಜೆ ಹಾಕಿ ನೋಡ್ತೇನೆ,” ಮುರಾರಿ ಹೇರ ಕಟ್ಟಿಂಗ ಸಲೂನ” ವಿಚಿತ್ರ ಕನ್ನಡದ ಬೋರ್ಡ್ ಇದೆ ಯಶ್, ಸಲ್ಮಾನ್ ರ ದೊಡ್ಡ ದೊಡ್ಡ ಫೋಟೋ ಹೊತ್ತು. ತಡಮಾಡದೇ ಅದರೊಳಗೆ ನಾನು ಕಾಲು ಇಡುವುದಕ್ಕೂ ಅಂಗಡಿಯಾತ ಜೋರಾಗಿ ಗಂಟೆ ಬಾರಿಸುತ್ತ “ಗಣಪತಿ ಅಲ್ಲಾ ಯೇಸು ಬುದ್ಧ ಮಹಾವೀರ…” ಹೀಗೆ ಎಲ್ಲರೂ ಒಟ್ಟಿಗೆ ಇರುವ ಸರ್ವ ಧರ್ಮ ಸಮ್ಮೇಳನದ ಫೋಟೋದೆದುರು ಆರತಿ ಬೆಳಗುವುದಕ್ಕೂ ಸರಿಯಾಯ್ತು. ಗಂಭೀರವಾಗಿ ಒಳಸೇರಿ ಅವನ ಪೂಜೆ ಮುಗಿಯುವುದನ್ನೇ ಕಾಯ್ತ ಸುತ್ತ ನೋಡಿದ್ರೇ, ಪರವಾಗಿಲ್ಲ ಎರಡೇ ಸೀಟಿನ ಸಣ್ಣ ಅಂಗಡಿಯಾದರೂ ತುಂಬಾ ನೀಟಾಗಿದ್ದು ಗೋಡೆ ತುಂಬಾ ಹಾಲಿವುಡ್ ಬಾಲಿವುಡ್ ಸ್ಯಾಂಡಲ್ವುಡ್ ನ ಹಿಂದಿನ, ಇಂದಿನ ನಟ ನಟಿಯರೇ ತುಂಬಿದ್ದರೂ ಸಿಕ್ಸ್ ಪ್ಯಾಕ್, ಎದೆ ಸೀಳನ್ನೆಲ್ಲ ಧಾರಳ ಪ್ರದರ್ಶಿಸಿ. ಅಂಗಡಿಯಾತ ಕಮ್ ನಾಲ್ವತ್ತರಸುಪಾಸಿನ ಗಟ್ಟಿಮುಟ್ಟು ಹುಡುಗ ಕೊನೆಗೂ ಅಷ್ಟು ಸಣ್ಣ ಜಾಗದಲ್ಲಿ ಸಹ ಸಾಷ್ಟಾಂಗ ಅಡ್ಡ ಬಿದ್ದೆದ್ದು, ಸೀದಾ ನನ್ನ ಬಳಿ ಬಂದು ನಕ್ಕು ಸಲೂನ್ ಸೀಟಿನೆಡೆಗೆ ಕೈ ತೋರಿಸಿದ ಮೈ ಮೇಲೆ ಹಾಕಲು ಬಟ್ಟೆ ಹಿಡಿದು. ಯಾವ ಭಾಷೆಯ ಅಸಾಮಿ ಇರಬಹುದಪ್ಪ ಇವ, ಈಗ ಎಲ್ಲಿ ನೋಡಿದರೂ ಸಲೂನ್ ಅಂಗಡಿಗಳಲ್ಲಿ ಬರೀ ನಾರ್ತ್ ನ ಹಿಂದಿ ಹುಡುಗರೇ ತುಂಬಿರುತ್ತಾರೆ, ನನಗೆ ಮೊದಲೇ ಹಿಂದಿ ಸರಿ ಬರಲ್ಲ ನಾನು ಆಲೋಚನೆ ಮಾಡ್ತಿರಬೇಕಾದರೆನೇ… “ಸ್ಮಾಲ.. ಮೀಡಿಯಂ ಕಟ್ಟಿಂಗ ಸಾರ್” ಅಚ್ಚ ಕನ್ನಡದಲ್ಲಿ ಬಾಯಿ ಬಿಟ್ಟನವ ಅಬ್ಬ! ಕೊನೆ ಪಕ್ಷ ಇಲ್ಲಾದ್ರೂ ಈ ಹಳ್ಳಿಯೊಳಗೆ ಒಬ್ಬ ಕನ್ನಡಿಗ ಬಾರ್ಬರ್ ಉಳ್ಕೋಡಿದ್ದನಲ್ಲ ಎಂದು ಸಂತಸ ತಂದು.
ಕಡುನೀಲಿ ಬಣ್ಣದ ನೈಲಾನ್ ಬಟ್ಟೆ ಹಾಕಿ ಬಾಟಲಿಯಿಂದ ಪುಸ್ ಪುಸ್.. ಎಂದು ತಲೆ ತುಂಬ ನೀರು ಚಿಮುಕಿಸಿ ಕತ್ತರಿ ಕೈಯಲಿಡಿಡು ಬಹಳ ಏಕಾಗ್ರತೆಯಿಂದ ನನ್ನ ಕೂದಲು ಮುಟ್ಟಿಯೇ ಬಿಟ್ಟನವ, ಸೀಟ್ ಪಕ್ಕದ ಟಿವಿಯೊಳಗೆ “ಹನುಮಾನ್ ಛಾಲೀಸ್” ಆನ್ ಮಾಡಿ. ನನಗೆ ತಿಂಗಳಿಗೊಮ್ಮೆ ಈ ಹೇರ್ ಕಟ್ಟಿಂಗ್ ಮಾಡಿಸುವುದಂದ್ರೆನೆ ಒಂಥರಾ ಖುಷಿ ಸಣ್ಣದಿಂದಲೂ, ಅವರ ಬಂಡಲ್ ಮಾತು ಕೇಳ್ತಾ ಕೂತಲ್ಲಿಯೇ ಕೆಲವೊಮ್ಮೆ ನಿದ್ರೆ ಬಂದ ಆನುಭವದೊಂದಿಗೆ. ಎರಡು ವರ್ಷದ ಹಿಂದೆ ಬಂದ ಕರೊನಾ ಟೈಂ ನಲ್ಲಿ ಬೇರೆ ಉಪಾಯವಿಲ್ಲದೆ ಅದೇಂತದ್ದೋ ಮನೆಯಲ್ಲಿ ನಾವೇ ತಲೆ ಕೂದಲು ತೆಗಿಯೋ ಮಿಷನ್ ನನ್ನು ಬರೋಬ್ಬರಿ ಎರಡು ಸಾವಿರ ರೂಪಾಯಿ ಕೊಟ್ಟು ತಗೊಂಡ್ರೂನೂ ಕರೊನಾ ಮುಗಿತಾನೇ ಅದನ್ನು OLX.. ನಲ್ಲಿ ಒಂದು ಸಾವಿರಕ್ಕೆ ಮಾರಿದ್ದೆ ನಾನು ಆ ಉಸಾಬರಿಯೇ ಬೇಡವೆಂದು, ಸುಮನ “ಬೇಡರೀ ಇರಲಿ ನೆಕ್ಸ್ಟ್ ಯಾವಾಲಾದರೂ ಹೊಸ ಟೈಪ್ ಕರೊನಾ ಪುನಃ ಬಂದ್ರೆ ಬೇಕಾಗಬಹುದು” ಅಂದ್ರುನೂ.
ಬಹಳ ಶ್ರದ್ಧೆಯಿಂದ ಏನೇನೂ ಮಾತಿಲ್ಲದೆ ತಲೆಯನ್ನು ಎಡಕ್ಕೆ ತಿರುಗಿಸುವಂತೆ ಹೇಳಿ ಕಿವಿ ಬದಿಯ ಕೂದಲಿಗೆ ಚಕ ಚಕ ಎಂದು ಅವ ಕತ್ತರಿ ಹಾಕುವಾಗ ನಾನೇ ಬಾಯಿ ತೆರೆದೆ… “ಎನಪ್ಪ ನಿನ್ನ ಹೆಸರು” ಎಂದು ಕೇಳಿ? ಮುರಾರಿ… ಚಿಕ್ಕದಾಗಿ ಉತ್ತರಿಸಿದನವ, ಬಹುಶಃ ಅದಕ್ಕಿಂತ ಸಣ್ಣ ಉತ್ತರ ಕೊಡಲಾಗದೇ. “ಎಷ್ಟು ವರ್ಷ ಆಯ್ತು ಈ ಅಂಗಡಿಗೆ…” ನಾನು ಮತ್ತೇ ಮುಂದುವರಿಸಿದೆ…” ಸಾರ್ ನಿನ್ನೆಯೇ ಓಪನ್ ಆಗಿದ್ದು… ಕಟ್ಟಿಂಗ್ ಮಾಡಲಿಕ್ಕೆ ಶುರು ಮಾಡಿದ್ದು ಇವತ್ತೇ.. ನೀವೇ ಫಸ್ಟ್ ಕಸ್ಟಮರ್… ನಾಳೆಯಿಂದ ಮೌಢ್ಯ ಅಲ್ವಾ… ಅದಕ್ಕೆ ನಿನ್ನೆ ಶುಕ್ರವಾರ ಚೆನ್ನಾಗಿರುತ್ತೇ ಅಂತ ಗಣಹೋಮ ಮಾಡಿ ಶುರು ಮಾಡಿದ್ದೇ… ಅಂಗಡಿ ಕೆಲಸ ಇನ್ನೂ ಪುಲ್ ಆಗಿಲ್ಲ… ಅದಕ್ಕೆ ನೋಡಿ ಹಿಂಬಾದಿ ಗ್ಲಾಸ್ ಕೂತ್ಕೋಳಿಸಬೇಕಾಷ್ಟೇ…” ಒಮ್ಮೆಲೇ ಇಡೀ ಪುರಾಣ ಬಿಚ್ಚಿ ಇಟ್ಟ ಒಂದೇ ವ್ಯಾಕದಲ್ಲಿ.” ಓಹೋ.. ಅಂದರೆ ಈ ಸೊಣ್ಣಳಿಪುರದ ಮುರಾರಿ ಸಲೂನ್ ಗೆ ಬೆಂಗಳೂರಿನಿಂದ ಬಂದ ಬ್ಯಾಂಕ್ ಮ್ಯಾನೇಜರ್ ಅಲಿಯಾಸ್ ವೆಂಕಟೇಶ,.. ಅಂದರೆ ನಾನು ವೆರಿ ಫಸ್ಟ್ ಕಸ್ಟಮರ್..ಹ.. ಹ ಇರಲಿ ನಾಡಿದ್ದು ಸೋಮವಾರ ಇವನನ್ನೇ ನಮ್ಮ ಬ್ಯಾಂಕ್ ನ ಫಸ್ಟ್ ಆಕೌಂಟ್ ಹೋಲ್ಡರ್ ಮಾಡಿದ್ರಯಿತೆಂದು ನನ್ನೊಳಗೆ ಅಂದ್ಕೊಂಡು…, ಪುನಃ ಅವನ ಆದೇಶದಂತೆ ತಲೆ ಬಲಕ್ಕೆ ತಿರುಗಿಸಿದೆ ಕನ್ನಡಿಯೊಳಗೆ ಮುಖ ನೋಡ್ತಾ.
ಇನ್ನೇನೂ ಅವ ಮತ್ತೊಮ್ಮೆ ನನ್ನ ಕಿವಿ ಹತ್ತಿರ ಕತ್ತರಿ ಸವಾರಿ ಮಾಡಿಸಬೇಕು ಫೋನ್ ರಿಂಗುಣಿಸಿತು ಪ್ಯಾಂಟ್ ಕಿಸೆಯಿಂದ… “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕ್ಕೆ ನಿನ್ನನ್ನು” ಎಂದು… ರಾಗವಾಗಿ. “ಒಂದು ನಿಮಿಷ.. ಸ್ಸಾರೀ…” ಅಂತ ಹೇಳಿ ಅವನ ಮುಖ ನೋಡಿ ಕಷ್ಟ ಪಟ್ಟು ಕೂತಲಿಯೇ ಪ್ಯಾಂಟು ಕಿಸೆಗೆ ಕೈ ಹಾಕಿ ಮೊಬೈಲ್ ಹೊರಗೆಳೆದೆ… ” ಡಾರ್ಲಿಂಗ್ ವೈಫ್ ಸುಮೀ ಕಾಲಿಂಗ್” ಅಂತ ಕಾಣುತ್ತ. ತಕ್ಷಣ ಹಸಿರು ಬಟನ್ ಓತ್ತಿದ್ದೇ ತಡ..” ಸಿಕ್ತೇನ್ರೀ ಸಲೂನ್ ಶಾಪ್…”ಒಂಥರಾ ಗಾಬರಿಯ ಅವಳ ಧ್ವನಿ ಸಹ ಕೇಳಿ.” ಹ. ಹ ಸಿಗ್ತು ಸಿಗ್ತು… ಆಮೇಲೆ ಫೋನ್ ಮಾಡು” ಅಂತ.. ಫಟಾಫಟ್ ಉತ್ತರ ಕೊಟ್ಟೆ … “ಒಂದು ನಿಮಿಷ ಒಂದು ನಿಮಿಷ.. ಇಲ್ಲಿ ಕೇಳಿ” ಆಕೆ ಅಂದ್ರುನೂ ಮಂದೆ ಅವಳಿಗೆ ಮಾತನಾಡಲು ಅವಕಾಶ ಕೊಡದೆ ಫೋನ್ ಸೈಲೆಂಟ್ ಮಾಡಿ ಎದುರಿಟ್ಟು. ಬಾರ್ಬರ್ ನ ಆದೇಶದಂತೆ ನಾನು ಮತ್ತೊಮ್ಮೆ ಬಲಕ್ಕೆ ವಾಲಿದ್ದೆ ತಡ .. ಹನುಮಾನ್ ಛಾಲೀಸ್ ಒಂದು ರೌಂಡ್ ಮುಗಿದೋ ಗೊತ್ತಿಲ್ಲ… ಗಾಯತ್ರಿ ಮಂತ್ರ ಶುರು ಆಯ್ತು… ಸುಮಧುರ ಹೆಣ್ಣಿನ ಸ್ವರದಲ್ಲಿ! ನಾನು ಮತ್ತೆ ಸ್ಟಾರ್ಟ್ ಮಾಡು ಕೆಲಸ… ಎಂಬಂತೆ ಅವನಿಗೆ ಮುಖಭಾವ ಮಾಡಿ.
ಈ ಸಲ ಅವನೇ ಮಾತಿಗಿಳಿದ… “ಏನೇ ಹೇಳಿ ಸಾರ್ ಈ ಮೊಬೈಲ್ ಬಂದು ಕಾಲ ಕೆಟ್ಟೋಯ್ತು.. ನಮ್ಮ ಯಂಗ್ ಹುಡುಗರಂತೂ ಹೋಪ್ ಲೆಸ್ ಆಗಿದ್ದಾರೆ” ಎನ್ನುತ್ತ. ಇವನಿಗೆಲ್ಲಿ ಅರ್ಥ ಆಗುತ್ತೆ ಮೊಬೈಲ್ ನ advantages… ಅದರಲ್ಲೂ ಯಂಗ್ ಜನರೇಷನ್ ಅದರ ಮೂಲಕ ಅಧ್ಭುತ ಸಾಧಿಸ್ತಿದೆ…. ಎಲ್ಲ ಜನ ಸಾಮಾನ್ಯರ ತರ ಮೊಬೈಲ್ನ ಒಂದೆರಡು ನೆಗೆಟಿವ್ ಮಾತ್ರ ತಲೆಯೊಳಗೆ ತುಂಬಿಸಿ ಕೂತ್ಕೋಂಡಿದ್ದಾನೆ ಪೆದ್ದ , ಅಂದ್ಕೊಂಡು ಸುಮ್ಮನೆ ಇದ್ದೆ ನಾನು. ಅಷ್ಟರಲ್ಲಿ ಪುನಃ ಅವನೇ ಶುರು ಮಾಡಿದ… “ಎನೇ ಆಗಲಿ ಅವತ್ತು ತೊಂಬತ್ತೆರಡರಲ್ಲಿ ಬಾಬರಿ ಮಸೀದಿ ಹೊಡೆದದ್ದು ಮಾತ್ರ ಹಂಡ್ರೆಡ್ ಪರ್ಸೆಂಟ್ ತಪ್ಪು ಸರ್… ಅಲ್ವಾ” ಎನ್ನುತ್ತ . ನನಗೆ ಒಮ್ಮೆಗೆ ಭಾರಿ ಆಶ್ಚರ್ಯ ಆಯ್ತು ಅವನ ಆ ಮಾತು ಕೇಳಿ.. ನೋಡಿದರೆ ಗಟ್ಟಿ ಮುಟ್ಟು ದೇಹ ಬಿಟ್ಟರೆ ತಲೆಯೊಳಗೆನೇನೂ ಇಲ್ಲದ ಅಸಾಮಿ ಇರಬೇಕು… ಮುವತ್ತು ವರ್ಷದ ಹಿಂದಿನ ವಿಷಯ ಹೊರತೆಗೆದ್ದಿದ್ದನೇ ಮಾತನಾಡಲಿಕ್ಕೆ.. ಅದು ನೇರ ನೇರ ನನ್ನ ಅಭಿಪ್ರಾಯ ಕೇಳ್ತ.. ಬಹುಶಃ ಎಡಪಂಥೀಯ ಇರಬೇಕು ಎಂದು ಕೊಂಡೆ..” ಹಾಗೇನಿಲ್ಲಪ್ಪ… ಈಗ ಯಾಕೆ ಆ ಮಾತು.. ಈಗಲ್ಲಿ ಮಂದಿರ ಕಟ್ಟಿ ಎಲ್ಲ ಸಮಸ್ಯೆ ಪರಿಹಾರ ಆಯ್ತಲ್ಲ” ಅಂದೆ.. ಒಂಥರಾ ಈ ವಿಷಯ ಇಲ್ಲಿಯೇ ಮುಗಿಯಲಿ ಎಂಬಂತೆ. “ಸಾರ್ ರಾಮ ರಹೀಮ ಎಲ್ಲ ಒಂದೇ… ಅದಕ್ಕೆ ಹೇಳಿದೆ ನಾನು… ಈ ಕತ್ತರಿ ಯಾರ ತಲೆ ಕೂದಲು ಕಟ್ ಮಾಡಲ್ಲ ಹೇಳಿ..ಎಲ್ಲರ ರಕ್ತನೂ ಕೆಂಪೇ… ಸುಮಾರು ಕಂಡಿದ್ದಿನೀ ನಾನು…” ಒಳ್ಳೆಯ ದಾರ್ಶನಿಕರಂತೆ ಉತ್ತರ ಕೊಟ್ಟ.. ನನ್ನ ಕಣ್ಣುಗಳನ್ನೇ ಮೊದಲ ಬಾರಿಗೆ ನೇರವಾಗಿ ಸ್ವಲ್ಪ ಗಡುಸಾಗಿ ನೋಡುತ್ತ.” ಓಹೋ ಅದಕ್ಕೆ ಇರಬೇಕು ನೀನು ಎಲ್ಲ ದೇವರುಗಳು ಒಟ್ಟಿಗೆ ಇರೋ ಈ ಫೋಟೋ ತಂದು ಅಂಗಡಿಯೊಳಗೆ ಹಾಕಿರೋದು..” ಸ್ವಲ್ಪ ಕೊಂಕಿನ ದಾಟಿಗೆ ಇಳಿದೆ.. “ಯಾಕೋ ಮೂವತ್ತ್ಮೂರು ಕೋಟಿ ದೇವರು ಒಟ್ಟಿಗೆ ಇರೇ ಫೋಟೋ ನಿನಗೆ ಸಿಗಲಿಲ್ಲವೇ ಅಥವ ಈ ಸಣ್ಣ ಅಂಗಡಿಯಲ್ಲಿ ಜಾಗ ಸಾಲದು ಅಂತ ಬಿಟ್ಟಯ” ಎಂದು ಸೇರಿಸಿ. “ಅಯ್ಯೋ… ಅ ಕಥೆ ಬಿಡಿ… ಈ ಫೋಟೋ ಹುಡುಕಲಿಕ್ಕೆ ಬೆಂಗಳೂರು ಅವೆನ್ಯೂ ರೋಡಿನಲ್ಲ ಮೂರು ದಿನ ಸುತ್ತಾಡಿದಿನೀ… ಇನ್ನೂ ಒಂದೆರಡು ಧರ್ಮದ ದೇವರು ಬಾಕಿ ಇದ್ದರೆ ನನಗೆ ಗೊತ್ತು… ಸಿಕ್ಕಿಲ್ಲ ಅಷ್ಟೇ… “ಭಾರೀ ಡಿಪ್ಲೋಮ್ಯಾಟಿಕ್ ಉತ್ತರ ಕೊಟ್ಟ ಅವ ತಲೆ ಮುಂದೆ ಬಾಗಿಸಿ ನೇರ ಕೂತ್ಕೋಳಿ ಎನ್ನುತ್ತ .
ಯಾಕೋ ಇವ ಸರಿಯಿಲ್ಲ… ಯಾವುದೋ ಲೋಕಲ್ ವಿಷಯ ಮಸಾಲೆ ತುಂಬಿಸಿ ಮಾತನಾಡಿ ಟೈಂ ಪಾಸ್ ಮಾಡೋ ಬದಲು ಒಳ್ಳೆಯ ಬುದ್ದಿಜೀವಿ ತರ ದೊಡ್ಡ ದೊಡ್ಡದು ಮಾತನಾಡುತ್ತಿದ್ದನೆ… ಬೇಡ ಸಹವಾಸ ಎಂದು ಸುಮ್ಮನೆ ಇದ್ದು ತಲೆಬಾಗಿಸಿದೆ. ಹೇರ್ ಕಟ್ಟಿಂಗ್ ಮಾತ್ರ ಸ್ಮೂತಾಗಿ ಚೆನ್ನಾಗಿ ಮಾಡುತ್ತಿದ್ದ ಆಗಾಗ ಬ್ರಶ್ ನಿಂದ ಮುಖದ ಮೇಲೆ ಬೀಳುತ್ತಿದ ಕೂದಲನ್ನೆಲ್ಲ ಸ್ವಚ್ಛ ಮಾಡ್ತಾ. ಅಷ್ಟರಲ್ಲಿ ಗಾಯತ್ರಿ ಮಂತ್ರ ಸಹ ಒಂದು ಸುತ್ತು ಮುಗಿಯಿತು… ಸೀದಾ ಹೋಗಿ.. ಅದನ್ನು ಬದಲಾಯಿಸಿ “ಪಿಳ್ಳಂಗೋವಿಯ ಚೆಲುವ ಕೃಷ್ಣನ ಹಾಡು” ಹಾಕಿದ ಪುಣ್ಯಾತ್ಮಾ…” ಸರ್ ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಿದ್ರೇ ನಿಜಕ್ಕೂ ಭಾರೀ ಲಾಭ ಆಗುತ್ತ” ಎಂದು ನನ್ನ ಬಳಿ ಕೇಳ್ತಾ.
ಈಗಂತೂ ಇವ ಸ್ವಲ್ಪ ಅಲ್ಲ ಪುಲ್ ಲೂಸ್ ಅಂದ್ಕೊಂಡು… ಮಾತಿಲ್ಲದೆ ತಲೆತಗ್ಗಿಸಿಯೇ ಕೂತೆ… “ಹಿಂದೆ ರೌಂಡ್ ಕಟ್ಟ… ಇಲ್ಲ ಸ್ಟ್ರೈಟಾ…” ಅಂತ ಕೇಳುವಾಗ ಮಾತ್ರ..” ರೌಂಡ್…” ಎಂದು ಉತ್ತರಿಸಿ. “ನಿಮ್ಮ ಕೂದಲು ತುಂಬಾ ರಫ್… ಒಳ್ಳೆಯ ಕಂಡೀಷನರ್ ಉಪಯೋಗಿಸಿ… ಒಂದೆರಡು ಬಿಳಿ ಸಹ ಆಗಿದೆ… ಯಾವುದೇ ಕಾರಣಕ್ಕೂ ಈ ಪ್ಯಾಕೇಟುಗಳಲ್ಲಿ ಸಿಗೋ ಕಲರ್ ಮಾತ್ರ ಹಾಕಬೇಡಿ ಪ್ಯೂಚರ್ ನಲ್ಲಿ… ಅದು ಬರೀ ಅಮೋನಿಯಾ…” ಎಂದೆಲ್ಲ ಅವನಷ್ಟಕ್ಕೆ ಬಡಬಡಿಸ್ತಾ ಇದ್ರುನೂ ನಾನು ಚಕಾರವಿಲ್ಲದೆ ಕನ್ನಡಿಯೊಳಗೆ ನನ್ನ ಮುಖ ನೋಡ್ತಾನೆ ಇರಬೇಕಾದರೆ, ಕೊನೆಗೂ ನನ್ನ ಕಟ್ಟಿಂಗ್ ಒಂದು ಹಂತಕ್ಕೆ ಬಂದು ಕಿವಿ ಸುತ್ತ ನೀಟ್ ಮಾಡಲು ಬಾಳ್ ಕೈಯಲ್ಲಿಡಿದನವ… ಹೊಸ ಬ್ಲೇಡ್ ಅದಕ್ಕೆ ಸಿಕ್ಕಿಸಿ. ಒಂದಿಷ್ಟು ನೀರು ತಾಗಿಸಿ ಮೆಲ್ಲ ಮೆಲ್ಲ ನೆ ಅದನ್ನು ನನ್ನ ಚರ್ಮದ ಮೇಲೆ ಗೀರ ಗೀರ ಎಳೆಯುವಾಗ ಮಾತ್ರ ಯಾಕೋ ಗೊತ್ತಿಲ್ಲ.. ಅದೇನೂ ಒಂಥರಾ ಅವೇಶ ಬಂದಂತೆ ಸ್ವಲ್ಪ ವರಟಾಗಿ ಕೆಲಸ ಮಾಡುತ್ತಿದ್ದಂತೆ ಅನಿಸಿತು. ಅಂಗಡಿಯೊಳಗಿನ ಹಾಡು “ನಮ್ಮಮ್ಮ ಶಾರದೆ ದಾಟಿ… ಮಧುಕರ ವೃತ್ತಿ ಎನ್ನದು” ಕೇಳಿಬರುವಾಗ ಸುಶ್ರಾವ್ಯವಾಗಿ.
ಫೈನಲಿ ಕಂಫ್ಲೀಟ್ ಕೆಲಸ ಮುಗಿಸಿ ಮೈ ಮೇಲಿನ ಬಟ್ಟೆ ತೆಗೆದು…” ಶೇವಿಂಗ್, ಹೆಡ್ ಮಸಾಜ್ ಎನಾದ್ರೂ ಮಾಡ್ಲ ಸಾರ್” ಎಂದಾಗ.. “ನೋ.. ನೋ.. ಶೇವಿಂಗ್ ಮನೆಯಲ್ಲಿ ಮಾಡ್ತಿನೀ ನಾನು…ಫಸ್ಟ್ ಕ್ಲಾಸ್ ಮಸಾಜ್ ಮಾಡು ಯಾವುದಾದರೂ ಒಳ್ಳೆಯ ಕೂಲ್ ಎಣ್ಣೆ ಹಾಕಿ” ಅಂದೆ, ಸುತ್ತಾಲೇನಾದರೂ ರೇಟ್ ಲಿಸ್ಟ್ ಇದ್ದೀಯ ಹೇಗೆ ಎಂದು ಕಣ್ಣಾಡಿಸಿ. ತಕ್ಷಣ ಆತ ಕೆಂಪು ಬಣ್ಣದ ಬಾಟಲಿಯೊಂದನ್ನು ತಲೆ ಮೇಲಿಡಿಡು..” ಸಾರ್ ಈ ಸಲ ಮೋದಿ ಬರಬಹುದಲ್ವಾ… “ಎಂದ ಒಮ್ಮಿಂದೊಮ್ಮೆಗೆ ತಲೆ ಸುತ್ತ ಎರಡು ಕೈಗಳಿಂದ ಬೆರಳು ತೀಡುತ್ತ. ನಾನು ತಡಮಾಡದೇ…” ಹ ಹಾಗೇ ಕಾಣ್ತಿದ್ದೆ… ಮತ್ತೆ ಯಾರಿಗೆ ಗೊತ್ತು…” ಅಂತ ಗಂಭೀರ ಉತ್ತರ ಕೊಟ್ಟೆ ಅದಕ್ಕೆ. “ಯಾರೋ ಬಂದ್ರೂ ಒಂದೇ ಸಾರ್… ಆದರೆ ಡೇಮಾಕ್ರಸಿ ಮಾತ್ರ ಉಳಿಬೇಕಾಷ್ಟೇ.. ರಾಮನಾಗಲಿ ರಹೀಮನಾಗಲಿ ನಮ್ಮ ಹೊಟ್ಟೆ ತುಂಬಿಸ್ತಾರ ಹೇಳಿ… ನಮಗೆ ಹದಿನೈದು ಲಕ್ಷ ಎನ್ ಬೇಡ ಸಾರ್… ರಾಮ ರಹೀಮ ಒಟ್ಟಿಗೆ ಬದುಕಿದ್ರೇ ಆಯ್ತು…ಜೀವನದಲ್ಲಿ ನಾನು ತುಂಬಾ ಕಂಡಿದ್ದಿನೀ…ಸಾಕಿನ್ನೂ ಅಂತ ಈಗ ಎಲ್ಲ ಬಿಟ್ಟು….” ತಲೆಬುಡ ಇಲ್ಲದೆ ನಾನ್ ಸ್ಟಾಪ್ ಬಸ್ ನಂತೆ ಎಲ್ಲೆಲ್ಲೂ ಸಾಗಿ ಮಸಾಜ್ ಮುಗಿದಾಗ ಒಳಗಿನಿಂದ ತಂಪು ಎನಿಸಿದರೂ ಹೊರಗಿನಿಂದ ಅವನ ಮಾತಿನ ಅರ್ಥ ಬಿಲ್ ಕುಲ್ ಆಗದೇ ತಲೆ ಬಿಸಿಯೇ ಆಯ್ತಾ ನನಗೆ. ತಡಮಾಡದೇ ಕುರ್ಚಿ ಬಿಟ್ಟೆದ್ದು ನೋಡ್ತೇನೆ ಪರ್ಸು ತಂದಿಲ್ಲ ಗಡಿಬಿಡಿಯಲ್ಲಿ. ಗೂಗಲ್ ಪೇ ಮಾಡೋಣ ಅಂದ್ರೆ ಅವನತ್ತ ಇನ್ನೂ ಶುರುವಾಗಿಲ್ಲ ಅದು.. ಛೇ.. ಎಂದು ಕೊಂಡು” ನೋಡಪ್ಪ ನಾನು ಇದೇ ಊರಲ್ಲಿ ಶುರು ಆಗ್ತಿರೋ ಬ್ಯಾಂಕ್ ನ ಹೊಸ ಮ್ಯಾನೇಜರ್…” ಅಂತೆಲ್ಲಾ ನನ್ನ ಕಥೆ ಹೇಳಿ, ಆಮೇಲೆ ದುಡ್ಡು ತಂದುಕೊಡ್ತೇನಂತ… ಹ ಮತ್ತೆ ಬ್ಯಾಂಕ್ನಿಂದ ನೀನಗೇನಾದರೂ ಬೇಕಾದ್ರೂ ಹೆಲ್ಪ್ ಮಾಡೋಣ.. ಡೋಂಟ್ ವರೀ… ಇದನ್ನು ಬೇಕಾದರೆ ನೆಕ್ಸ್ಟ್.. ದೊಡ್ಡ ಬೂಟಿಕ್ ಪಾರ್ಲರ್ ಮಾಡು” ಎಂದು ಸೇರಿಸಿ … ಮುಜುಗರದಿಂದಲೇ ಜಾಗ ಖಾಲಿ ಮಾಡಿದೆ ಅಲ್ಲಿಂದ…” ಸರ್ ಮೋದಿ ಮತ್ತೆ ಬಂದರೆ ಅವರ ಮಾತೆಲ್ಲ ನೆನಪಿಡಲಿಕ್ಕೆ ಹೇಳಿ…. ಇಲ್ಲಾಂದ್ರೆ ಯಾಕೋ ಚೆನ್ನಾಗಿರಲ್ಲ…” ಅಂದ ಅವ… ನಾನು ಪುನಃ ಹೆಜ್ಜೆ ಹಿಂದೆ ಇಡುವಾಗ, ದಾಸರ ಹಾಡು “ಸುಳ್ಳು ನಮ್ಮಲ್ಲಿಲ್ಲವಯ್ಯಾ ಸುಳ್ಳೇ ನಮ್ಮನೇ ದೇವರು…” ಕಿವಿಗೆ ಬಿದ್ದು!
****************
ಹೋದ ದಾರಿಯಲ್ಲೇ ವಾಪಸು ಮನೆಯತ್ರ ತಲುಪಬೇಕಾದರೆನೇ ಸುಮನ ಬಾಗಿಲು ಹೊರಗೆ ನಿಂತಿದ್ಥಾಳೆ ಭಯಭೀತ ಮುಖಭಾವದೊಂದಿಗೆ. ನಾನು ಸಹ ಹೆದರಿ..” ಎನೇ ಎನಾಯ್ತು ಅಂತ ಕೇಳಿದ್ದೆ ತಡ….” ಅದೇರಿ ಯಾರ ಒಬ್ಬ ಹಳೇ ರೌಡಿ ತನ್ನ ಕುಲಕಸುಬು ಅಂತ ಇ ಊರಲ್ಲಿ ಸಲೂನ್ ಶುರುಮಾಡಿದ್ದನಂತೆ ಹೊಸದಾಗಿ… ಮನೆಕೆಲಸಕ್ಕೆ ಬಂದಿರೋ ಲಕ್ಷ್ಮಮ್ಮ ಹೇಳಿದ್ಳು ಈಗ.. ನೀವೇನಾದ್ರೂ ಅಲ್ಲಿಗೆ ಹೋಗಿಬಿಟ್ಟಿರೋ ಅಂತ … ಹೆದರಿಕೆ ಆಗಿ ಪದೇ ಪದೇ ಫೋನ್ ಮಾಡಿದ್ರೇ ಸೈಲೆಂಟ್ ಬೇರೆ ಇಟ್ಟಿದೀರಾ ನೀವು…” ಸುಮನಳ ಮಾತು ಸಾಗುತ್ತಲೇ ನಾನು ಬಾತ್ ರೂಂ ಸೇರಿದೆ… ಮಸಾಜ್ಗೆ ಹಾಕಿದ್ದ ಕೂಲ್ ಕೂಲ್ ಎಣ್ಣೆ ಬಿಸಿ ಬಿಸಿಯಾಗಿ ಗಲ್ಲದ ಮೇಲೆ ಇಳಿಯಲಾರಂಭಿಸುತ್ತಲೇ.
ಮರುದಿನ ಅದಿತ್ಯವಾರ ಮನೆಯಿಂದ ಎಲ್ಲೂ ಹೊರಗೆ ಹೋಗದೇ, ಸೋಮವಾರ ಬೆಳಿಗ್ಗೆ ಬ್ಯಾಂಕ್ ತಲುಪಿದ್ದೆ ತಡ.. ಹಿಂದಿನಿಂದಲೇ ಎಂಬಂತೆ ಸಲೂನ್ ನವ ಕಂಡ” ನಮಸ್ಕಾರ ಸಾರ್”.. ಎನ್ನುತ್ತ. ಕೂಡಲೇ ನೆನಪಾಗಿ ಅವನ ಇನ್ನೂರು ರೂಪಾಯಿ ನೋಟು ಕೈಯಲ್ಲಿಡಿದೆ… ಕಷ್ಟ ಪಟ್ಟು ಮುಖ ಅರಳಿಸಿ. ಕೂಡಲೇ ಆತ “ಇರಲಿ ಬಿಡಿ… ನನಗೆ ಇದು ಮುಖ್ಯ ಅಲ್ಲ.. ನೀವು ನನ್ನ ಫಸ್ಟ್ ಕಸ್ಟಮರ್.. ಫ್ರೀ ಸರ್ವಿಸ್ ನಿಮಗೆ… ಈಗ ನಾನು ನಿಮಗೆ ಫಸ್ಟ್ ಕಸ್ಟಮರ್… ನೀವು ನನಗೆ ಎರಡು ಲಕ್ಷ ಸಾಲ ಕೊಡಿ ಬ್ಯಾಂಕ್ ನಿಂದ… ಕರೆಕ್ಟಾಗಿ ಚಾ ಚೂ ತಪ್ಪದೇ ವಾಪಸ್ ಕಟ್ತೀನೀ ತಿಂಗ್ಳು ತಿಂಗ್ಳು… ಹ ಅಂದಹಾಗೆ ಮೋದಿ ಪುನಃ ಬರ್ತಾರೋ ಇಲ್ವೋ… ನಾಳೆ ಗೊತ್ತಾಗುತ್ತೇ ಬಿಡಿ.. ಬೀ ಹ್ಯಾಪಿ “ಅಂದ ವಿಚಿತ್ರವಾದ ಹಾವಭಾವದಲ್ಲಿ ಕೈಯ ಮಣಿಗಟ್ಟನ್ನು ತಿರುಗಿಸುತ್ತ. ಕೂತಲ್ಲಿಯೇ ಮೆಲ್ಲನೆ ಬೆವರಿ” ಆಯ್ತು.. ಆಯ್ತಪ್ಪ.. ನೋಡೋಣ… ” ಅಂದೇ, ಮೋದಿ ಬಂದರೆಷ್ಟು ಹೋದರೆಷ್ಟು ನನಗೆ ಅಂದುಕೊಂಡು… ಚಿನ್ನದ ಮಳೆ ಸುರಿಸುತ್ತಿದ್ದ ಅಷ್ಟಲಕ್ಮ್ಷೀಯ ಫೋಟೋದೆದುರು ಕೈ ಮುಗಿಯುತ್ತಾ … ಬಾರ್ಬರ್ ಮುರಾರಿ ಅದರೆದುರು ಸಾಷ್ಟಾಂಗ ಅಡ್ಡಬೀಳುತ್ತಲೇ!
ಕಲ್ಲಚ್ಚು ಮಹೇಶ ಆರ್. ನಾಯಕ್, ಮಂಗಳೂರು
9880692447
ಲೇಖಕರ ಪರಿಚಯ : ಮಹೇಶ ಆರ್ ನಾಯಕ್ ಮಂಗಳೂರು ಮೂಲದವರು. ಕಳೆದ 30 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು ಸ್ವಂತ ಕಲ್ಲಚ್ಚು ಪ್ರಕಾಶನ ಸಂಸ್ಥೆಯನ್ನು ಮುಂದುವರಿಸಿಕೊಂಡು, ಸ್ವರಚಿತ 30ಕ್ಕೂ ಅಧಿಕ ವಿಭಿನ್ನ ಪುಸ್ತಕಗಳನ್ನು ಸೇರಿದಂತೆ ಒಟ್ಟು 100 ಕ್ಕೂ ಮಿಕ್ಕಿ ಕೃತಿ ಪ್ರಕಟಿಸಿದ್ದಾರೆ. ವಿವಿಧ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಲು ವಿಪುಲ ದೇಶ ವಿದೇಶಗಳನ್ನು ಭೇಟಿ ನೀಡಿರುವರು
Be the first to comment