ಕಥೆ ಬರೆಯೋ ಹುಡುಗನ ಕಥೆ

ಶಾಮ ಮತ್ತೆ ಕಥೆ ಬರೆಯಲು ಕುಳಿತ. ಸಿಂಹ ಮತ್ತು ಮೊಲದ ಕಥೆ ಬರೆಯುತ್ತೇನೆ ಅಂದುಕೊಂಡ. ಓಹೋ ಆಗ ನೆನಪಾಯಿತು… ಸರ್ ಹೇಳಿದ್ದು ಏನೂ ಅಂದರೆ… “ಮೊದಲು ಓದಿದ ಕೇಳಿದ ಯಾವುದೋ ಪುಸ್ತಕದಲ್ಲಿ ಇದ್ದ ಕಥೆ ಬರೆದುಕೊಂಡು ಬರುವ ಹಾಗೆ ಇಲ್ಲ, ನಾವೇ ಒಂದು ಹೊಸ ಕಥೆ ಬರೆದುಕೊಂಡು ತರಬೇಕು”. ಹೌದು ಹೌದು ಆಗಿನಿಂದ ಯೋಚಿಸುತ್ತ ಕುಳಿತಿದ್ದೇನೆ.

ನಮ್ಮ ಸರ್, ಅಷ್ಟೆಲ್ಲಾ ಕಥೆ ಹೇಳುತ್ತಾ ಇರುತ್ತಾರೆ. ಅವರು ಯಾವುದೋ ಯಾವುದೋ ಪುಸ್ತಕ ಓದಿಕೊಂಡು ಅದನ್ನು ನಮಗೆ ಹೇಳುತ್ತಾ ಇರುತ್ತಾರೆ. ಆದರೆ ಅವರೇ ಅನೇಕ ಪುಸ್ತಕ ಬರೆದಿದ್ದಾರಲ್ಲ, ಅವುಗಳ ತುಂಬಾ ಕಥೆಗಳಿವೆ. ಅದನ್ನು ಅವರೇ ಯೋಚಿಸಿ ಬರೆದದ್ದಂತೆ. ಹಾಂ, ನಾನೂ ಬರೆಯುತ್ತೇನೆ. ಯಾವ ರೀತಿಯ ಕಥೆ ಬರೆಯುವುದು ಅಂತ ಮೊದಲು ನಾನು ಯೋಚಿಸಿಕೊಳ್ಳಬೇಕು ಅಲ್ವಾ? ಅದನ್ನೆಲ್ಲಾ ಸರ್ ನನಗೆ ಹೇಳಿಕೊಟ್ಟಿದ್ದಾರೆ. ಆದರೆ ನಾನು ಬರೆಯುವ ಕಥೆ ಎಲ್ಲಿ ನಡೆಯುವುದು ಎಂದು ಯೋಚಿಸಿದರೆ ಆಕಾಶಕ್ಕೆ ಹೋಗೋಣ ಎನಿಸಿಬಿಡುತ್ತದೆ. ಆಕಾಶಕ್ಕೆ ಹಾರಿ ಅಲ್ಲಿ ತುಂಬಿಕೊಂಡಿರುವ ಮೋಡಗಳನ್ನೆಲ್ಲ ಅಣ್ಣ ಅಣ್ಣ ಎಂದು ಮಾತಾಡಿಸಿ ಸಲ್ಪ ಸರಿರಿ ಎಂದು ಮೃದುವಾಗಿ ಮುಟ್ಟುವುದು. ಹಾಗೇ ಅವುಗಳ ನಯವಾದ ಮೈ ಮುಟ್ಟುತ್ತಾ ತಟ್ಟುತ್ತಾ ಮಾತಾಡಿಸಿ ಒಂದು ಮುತ್ತು ಕೊಟ್ಟು ಅವುಗಳ ಮೇಲೆ ಏರಿ ತೇಲೋದು… ಎಂದೆಲ್ಲಾ ಯೋಚನೆ ಬರುತ್ತದೆ. ಹಾಗೆ ಮುಂದೆ ಹೋಗಿ ಚಂದಮಾಮನ ಚಿನ್ನದಂತಾ ಮೈ ಮುಟ್ಟಿ ಪ್ರೀತಿ ಮಾಡಿ ಆಟ ಆಡೋದು… ಪುಟ್ಟ ಪುಟ್ಟ ನಕ್ಷತ್ರಗಳನ್ನೆಲ್ಲ ಜೊತೆಯಲ್ಲಿ ಕರೆದುಕೊಂಡು ಅವನ ಸುತ್ತಲೂ ಸುತ್ತು ಹಾಕುವುದು. ಸಾವಿರಾರು ಮಿಣುಕು ಹುಳಗಳು ಗುಂಪಾಗಿ ಹಾರುವ ಹಾಗೆ ಆಗ ನಿಮಗೆಲ್ಲಾ ಕಾಣುತ್ತದೆ. ಅವುಗಳ ಮಧ್ಯದಲ್ಲಿ ಪುಟಾಣಿ ಗೊಂಬೆ ಹಾಗೆ ನಾನು ನಿಮಗೆ ಕಾಣಿಸುವುದು ಎಲ್ಲಾ ಎಷ್ಟು ಮಜವಾಗಿರುತ್ತದೆ… ಹೌದು ಮಜವಾಗಿರುತ್ತದೆ. “ಏ ಶಾಮು ಏನು ಮಾಡುತ್ತಾ ಇದ್ದೀಯ… ಆಗಿನಿಂದ ನೋಡುತ್ತಾ ಇದ್ದೇನೆ. ಪೆನ್ನು ಹಿಡಿದುಕೊಂಡು ಸುಮ್ಮನೆ ಕುಳಿತಿದ್ದೀಯ. ಯಾರೂ ಇಲ್ಲದಿದ್ದರೂ ಮುಗುಳು ನಗು ಬೇರೆ ಮುಖದ ಮೇಲೆ ಕಾಣುತ್ತಿದೆ. ಹಗಲುಗನಸು ಕಾಣುತ್ತಾ ಇದ್ದೀಯಾ? ಹೋಮವರ್ಕ್ ಮಾಡುವುದು ಬಿಟ್ಟು ಏನೇನೋ ಮಾಡುತ್ತಾ ಇರುತ್ತೀಯ” ಎಂದು ಅಪ್ಪ ಒಂದೇ ಉಸಿರಿಗೆ ಹೇಳಿದಾಗ ನನಗೆ ಒಮ್ಮೆಲೇ ಆಕಾಶದಿಂದ ದೊಪ್ಪನೆ ಕೆಳಗೆ ಬಿದ್ದ ಹಾಗೆ ಆಯಿತು.

“ಇಲ್ಲ ಅಪ್ಪ, ಸರ್ ಒಂದು ಕಥೆ ಬರೆದುಕೊಂಡು ಬಾ ಎಂದು ಹೇಳಿದ್ದಾರೆ. ಕಥೆ ಬರೆಯಲಿಕ್ಕೆ ಯೋಚನೆ ಮಾಡುತ್ತಾ ಇದ್ದೆ” ಅಂದೆ. “ಕಥೆ ಬರೆಯಲಿಕ್ಕೆ ಹೇಳಿದ್ದಾರಾ? ನಿಮ್ಮ ಸರಗೆ ಬುದ್ಧಿ ಇಲ್ಲ. ಏನಾದರೂ ಮಾಹಿತಿ, ನಾಲೆಜ್ ಅಂತ ನಿಮ್ಮ ತಲೆಗೆ ತುಂಬಿ ಜಾಣರಾಗಿಸುವುದನ್ನು ಬಿಟ್ಟು ಕಥೆ ಬರೆಸುವ ಸಾಹಿತ್ಯ ಪ್ರೀತಿಯ ಸರ್. ಒಬ್ಬೊಬ್ಬ ಸರ್ ಗಳು ಬಂದಾಗಲೂ ಅವರ ಪ್ರೀತಿಯ ಜಗತ್ತನ್ನು ನಮ್ಮ ಮಕ್ಕಳ ತಲೆಯಲ್ಲಿ ತುಂಬುವ ಪ್ರಯೋಗ ಮಾಡುತ್ತಾರೆ. ಸರೇ ಹೇಳಿದ್ದಾರೆ ಅಂದಮೇಲೆ ಏನಾದರೂ ಬರೆದು ಹಾಕು. ಆಮೇಲೆ ನಾನು ತಂದು ಕೊಟ್ಟಿರುವ ಸಾಮಾನ್ಯ ಜ್ಞಾನದ ಪುಸ್ತಕ ಓದು, ತಿಳಿತಾ” ಎಂದು ಹೇಳಿ ಹೊರಗೆ ಹೋದ ಅಪ್ಪ.

ಇಡೀ ದಿನ ಸಾಮಾನ್ಯ ಜ್ಞಾನ, ಸಾಮಾನ್ಯ ಜ್ಞಾನ, ಅದನ್ನು ಕಂಠ ಪಾಠ ಮಾಡು ಇದನ್ನು ಕಂಠ ಪಾಠ ಮಾಡು ಅಂತ ನನಗೆ ಬೈಯುತ್ತಲೇ ಇರುತ್ತಾರೆ. ಕಥೆ ಓದಿದರೆ ಎಷ್ಟು ಖುಷಿಯಾಗುತ್ತದೆ ಎನ್ನುವುದು ನನಗೆ ಹೊಸ ಸರ್ ಬಂದ ಮೇಲೆಯೇ ಗೊತ್ತಾದದ್ದು. ಆಗಲೇ ಹೇಳಿದ ಹಾಗೆ ಅವರೂ ಕಥೆ ಬರೆಯುತ್ತಾರೆ. ಹಾಂ, ನಾನು ಆ ದಿನ ಒಂದು ಕಥೆ ಬರೆದಿದ್ದೆ. ಅದನ್ನು ಬರೆಯುವಾಗ ಎಷ್ಟೆಲ್ಲಾ ಯೋಚನೆ ಮಾಡಿದ್ದೆ. ಈ ಕಥೆ ಬಗ್ಗೆ ಯೋಚನೆ ಮಾಡುವಾಗ ನನಗೆ ಪುಟ್ಟ ಪುಟ್ಟ ಹಕ್ಕಿಗಳೆಲ್ಲ ಅಂಗಿ ಲಂಗ ಹಾಕಿಕೊಂಡು ಹಾಡು ಹೇಳುತ್ತಾ ಗೆಳೆಯರ ಹಾಗೆ ನನ್ನನ್ನು ಮುತ್ತಿಕೊಂಡರು. ಅವರ ಸಂಗಡ ನಾನು ಅವರ ಗೂಡಿಗೆ ಹೋಗಿ ಅವರು ತಂದು ಹಾಕಿದ್ದ ಮೆತ್ತನೆಯ ನಾರು, ಹತ್ತಿ, ಗರಿ, ಜೇಡರ ಬಲೆಯ ದಾರ ಮುಂತಾದವುಗಳಿಂದ ಮಾಡಿದ ಹಾಸಿಗೆಯ ಮೇಲೆ ಮಲಗಿಕೊಂಡೆ. ಹಕ್ಕಿಗಳ ಜೊತೆ ಹಣ್ಣಿನ ಗಿಡಗಳಿಗೆ ಹೋಗಿ ಹಣ್ಣು ತಿಂದೆ, ಯಾವುದೋ ಹೊಲಕ್ಕೆ ಹೋಗಿ ಕಾಳುತಿಂದೆ. ಹೌದು ಅವು ಮರಿಗಳಿಗೆ ಏನೇನೋ ಗುಟುಕು ತಂದು ಕೊಡುತ್ತಾ ಇರುವುದನ್ನು ನೋಡುವುದೇ ಮಜ. ತಾಯಿ ಹಕ್ಕಿ ಆಹಾರ ಕೊಕ್ಕಿನಲ್ಲಿ ಕಚ್ಚಿಕೊಂಡು ಗೂಡಿಗೆ ಬರುವುದೇ ತಡ ಮರಿಗಳು ಎಷ್ಟು ದೊಡ್ಡ ಬಾಯಿ ತೆರೆಯುತ್ತವೆ. ತನಗೆ ಮೊದಲು ತನಗೆ ಮೊದಲು ಎಂದು ಆಸೆ ಪಡುತ್ತವೆ. ಅವರ ತಾಯಿ ಎಲ್ಲರಿಗೂ ಆಹಾರ ಹಂಚಿಕೊಡುತ್ತದೆ. ಒಂದು ಸಾರಿ ಮರಿಗಳು ಬಾಯಿಕಳೆದದ್ದನ್ನು ನೋಡುತ್ತಾ ನಾನೂ ದೊಡ್ಡಕ್ಕೆ ಬಾಯಿ ಕಳೆದು ಬಿಟ್ಟಿದ್ದೆ. ಹಕ್ಕಿ ಪಿಚಕ್ ಅಂತ ಪಿಷ್ಟಿ ಹಾಕಿದ್ದು ನನ್ನ ಬಾಯಿಯಲ್ಲಿಯೇ ಬಂದು ಬೀಳಬೇಕಾ… ಅಯ್ಯೋ ಮುಖ ಏಕೆ ಹಾಗೆ ಮಾಡಿಕೊಂಡಿರಿ? ಅದೆಲ್ಲ ಕಥೆ ಬರೆಯುವಾಗ ನನ್ನ ಮನಸ್ಸಿನಲ್ಲಿ ನಡೆದದ್ದು. ನೀವ್ಯಾಕೆ ಬಾಯಿ ಒರೆಸಿಕೊಳ್ಳುತ್ತಿದ್ದೀರಿ?

ಹೌದು ಪ್ರಾಣಿಗಳು ಅಷ್ಟೇ. ಆನೆ ಮರಿ ಚಡ್ಡಿ ಹಾಕಿ ಟೀ ಶರ್ಟ್ ಹಾಕಿಕೊಂಡು ಬಂದರೆ ನಮ್ಮ ಶಾಲೆಯ ದಪ್ಪನೆಯ ಗಪ್ಪು ಇದ್ದಾನಲ್ಲ ಅವನ ಹಾಗೆ ಕಾಣೋದು. ಹುಲಿ ಕರಡಿ ಎಲ್ಲಾ ನನ್ನ ಹೆಗಲ ಮೇಲೆ ಕೈ ಹಾಕಿ ಕುಣಿಯುತ್ತ ಇರೋದು ನೀವು ನೋಡಬೇಕು. ಹಾವು ಹಲ್ಲಿ ಯಾರೂ ಏನೂ ಮಾಡೋದಿಲ್ಲ. ಸರಿ ಸರಿ ನಿಮಗೂ ಇವೆಲ್ಲಾ ಪ್ರಾಣಿಗಳ ಸಂಗಡ ಇರಬೇಕೂ ಅಂತ ಅನ್ನಿಸುತ್ತಾ ಇದೆಯಾ? ಹಾಗಾದರೆ ನೀವೂ ಕಥೆ ಬರೆಯಬೇಕು ಹಾಗೂ ಓದಬೇಕು.

ಈ ದಿನ ನಾನು ಬರೆಯಬೇಕು ಅಂತ ಇರೋದು ಬೇರೆಯದೇ ಕಥೆ. ಅದು ಪ್ರಾಣಿ ಪಕ್ಷಿಗಳದ್ದಲ್ಲ. ರವಿ ಹತ್ತಿರ ಒಂದು ಸೈಕಲ್ ಇತ್ತು. ಅದನ್ನು ಅವನಿಗೆ ಅವನ ಅಜ್ಜ ಕೊಡಿಸಿದ್ದು. ಸೈಕಲ್ ಅಂದರೆ ನಿಮ್ಮ ಹತ್ತಿರ ಇರುತ್ತದೆಯಲ್ಲಾ ಅಂತಹದೇ ಸೈಕಲ್. ರವಿ ದಿನಾಲು ಇದೇ ಸೈಕಲ್ ಮೇಲೆ ಕುಳಿತೇ ಶಾಲೆಗೆ ಹೋಗುವುದು. ಒಂದು ದಿನ ಏನಾಯಿತು ಎಂದರೆ… ರವಿ ರಸ್ತೆಯಲ್ಲಿ ಸೈಕಲ್ ಹೊಡೆದುಕೊಂಡು ಶಾಲೆಗೆ ಹೋಗುತ್ತಾ ಇದ್ದ. ಆವಾಗಲೇ ಆ ನಾಯಿಮರಿ ಎಲ್ಲಿಂದಲೂ ಓಡಿ ಬಂದು ರಸ್ತೆಗೆ ಇಳಿಯಿತು. ರವಿ ಸೈಕಲ್ ನಿಲ್ಲಿಸಿದ. ನಾಯಿ ಮರಿ ಮುಂದೆ ಹೋಗಿ ಉರುಳಿತು. ಒಂದು ಬೈಕ್ ಜೋರಾಗಿ ಬಂತು ನೋಡಿ. ಪುಟ್ಟ ಮರಿಯ ಬಾಲದ ಮೇಲೆ ಆ ಬೈಕಿನ ಟಾಯರ್ ಹತ್ತಿ ಹೋಯಿತು ಅಂತ ಕಾಣುತ್ತದೆ. ನಾಯಿ ಮರಿ ಕ್ಯಾಂ ಕ್ಯಾಂ ಎಂದು ಕೂಗುತ್ತಿತ್ತು. ರವಿ ಸೈಕಲ್ ನಿಲ್ಲಿಸಿ ಓಡಿಬಂದು ನಾಯಿಮರಿಯನ್ನು ಎತ್ತಿಕೊಂಡ. ನಿಜ ಅದರ ಬಾಲ ಅರೆದೇಹೋಗಿತ್ತು. ಬಾಲದ ಬುಡದಿಂದ ರಕ್ತ ಸುರಿಯುತ್ತಿತ್ತು. ರವಿ ನಾಯಿಮರಿ ಯೊಂದಿಗೆ ರಸ್ತೆಯ ಬದಿಗೆ ಬಂದು ನಿಂತ. ಅಷ್ಟರಲ್ಲಿ ಜೋರಾಗಿ ಬಂದ ದೊಡ್ಡ ಲಾರಿ ರವಿಯ ಸೈಕಲ್ ಅನ್ನು ದೂಡಿ ಅದರ ಮೇಲೆಯೇ ದೊಡ್ಡ ಟಾಯರ್ ಹರಿದುಹೋಯಿತು. ರವಿಯ ಸೈಕಲ್ ಈಗ ಒತ್ತಲ್ಪಟ್ಟು ರಸ್ತೆಯ ಮೇಲೆ ಬಿಡಿಸಿಟ್ಟ ಚಿತ್ರದ ಹಾಗೆ ಚಪ್ಪಟೆಯಾಗಿ ಹೋಗಿತ್ತು. ರವಿಗೆ ಏನು ಮಾಡಬೇಕು ಅಂತ ತೋಚುತ್ತಿಲ್ಲ. ಕಥೆ ಬರೆಯುತ್ತಿರುವ ನನಗೂ ಸಂಕಟ ಶುರುವಾಯಿತು. ಈಗ ಕಥೆ ಹೇಗೆ ಮುಂದುವರಿಸುವುದು ಎಂದು ನನಗೆ ತಿಳಿಯುತ್ತಿಲ್ಲ… ಕಣ್ಣಲ್ಲಿ ನೀರು ಇಳಿಯುತ್ತಿದೆ. ಕಥೆ ಮುಗಿಸಲೇಬೇಕು. ರವಿ ಜಜ್ಜಿ ಹೋದ ಸೈಕಲನ್ನು ನೋಡುತ್ತಾ ನಾಯಿಮರಿಯನ್ನು ಎತ್ತಿಕೊಂಡು ಪಶು ಚಿಕಿತ್ಸಾಲಯ ಎಲ್ಲಿದೆ ಎಂದು ಹುಡುಕುತ್ತಾ ಹೊರಟ ಎಂದು ಬರೆದು ಇಟ್ಟೆ.

ತಮ್ಮಣ್ಣ ಬೀಗಾರ

: ಪರಿಚಯ :

ಮೂಲತಹ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾಗಿರುವ ತಮ್ಮಣ್ಣ ಬೀಗಾರವರು ಶಿಕ್ಷಕರಾಗಿ ನಿವೃತ್ತರಾದವರು. ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಹಲವಾರು ಸಾಹಿತ್ಯಕ ಕೃತಿಗಳನ್ನು ಹೊರತಂದಿರುವ ಇವರು ಮಕ್ಕಳ ಸಾಹಿತಿಯೆಂದೇ ಪರಿಚಿತರು. ಇವರ ಸಾಹಿತ್ಯ ಕೃತಿಗಳಿಗೆ ಹಲವಾರು ಪ್ರಶಸ್ತಿಯ ಗೌರವಗಳೂ ಬಂದಿವೆ. ಇವರು ಮೊದಲ ಬಾರಿಗೆ ನಮ್ಮ ಒಡನಾಡಿಯಲ್ಲಿ ಬರೆದಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*