“ವಿನಯ ಸ್ಮೃತಿ” ಸಮರ್ಥ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕುಮಟಾದ ಪಿ.ಎಂ. ಮುಕ್ರಿ

“ಹೂವಿನ ಸೊಬಗನು ನೋಡುತ ನಾನು
ಕೋಮಲವೆನ್ನುತ ಮುತ್ತಿಡುವೆ
ಹೂವಿನ ಪೆಂಪಿಗೆ ಬಾಳನು ಕೊಟ್ಟಾ
ಮೊಳಕೆಯ ಗೋಳನು ನೀನರಿಯೇ”
ಕುವೆಂಪುರವರ ಈ ಪದ್ಯದ ಸಾಲುಗಳು ಸೌಂದರ್ಯದ ಹಿಂದೆ ಅಡಗಿರುವ ಸತ್ಯದ ಸಂಕಟದ ಧ್ವನಿಯಾಗಿದೆ. ಹೂವಿನ ಸೊಬಗಿನಲ್ಲಿ ಸೌಂದರ್ಯವನ್ನು ಕಾಣುವವರು ಹೂವಿಗೆ ಮುಂಚೆ ಮೊಳಕೆಯು ಅನುಭವಿಸಿದ ವೇದನೆಯನ್ನು ಅರಿಯಬೇಕೆಂಬುದೇ ಕವಿಯ ಅಪೇಕ್ಷೆಯಾದರೆ, ಸೌಂದರ್ಯ ಮತ್ತು ಸಂಕಟಗಳು ಬೆರೆತ ಶ್ರೇಣಿಕೃತ ಸಮಾಜದಲ್ಲಿ ತನ್ನನ್ನು ತಾನೇ ಗುರುತಿಸಿಕೊಳ್ಳುವಲ್ಲಿ ವೃತ್ತಿ ಬದುಕನ್ನೇ ಪ್ರಧಾನವನ್ನಾಗಿಸಿಕೊಂಡು ಪ್ರಾಮಾಣಿಕ ಸೇವೆ ಮೂಲಕ ಹೆಸರಾದವರು ಕುಮಟಾದ ಹಿರಿಯ ಮುಖ್ಯ ಶಿಕ್ಷಕ ಪರಮೇಶ್ವರ ಮಾಸ್ತಿ ಮುಕ್ರಿಯವರು.

ತೀರ ಹಿಂದುಳಿದ ಅನಕ್ಷರಸ್ಥ ಕುಟುಂಬದಲ್ಲಿ ಶಿಕ್ಷಣ-ಆರ್ಥಿಕ- ನೆಲೆಗಳಲ್ಲಿ ಜೀವನ ಭದ್ರತೆಯಿಂದ ವಂಚಿತರಾದರು ಮೂಢ,ಮೌಢ್ಯಗಳನ್ನು ಮೆಟ್ಟಿನಿಂತು ತಂದೆ ತಾಯಿಯವರ ಬದುಕಿನ ಆಸೆಗೆ ಶಿಕ್ಷಣದತ್ತ ಮುಖ ಮಾಡಿ ಸಾಧನೆಗೈದವರು. ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ಅನುಭವಿಸಿ, ಮೇಲಾಧಿಕಾರಿಗಳು ಹೇಳಿದ ಕೆಲಸವನ್ನು ಅಚ್ಚುಗಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡವರು.ತಾಲೂಕಿನಾದ್ಯಂತ ಪಿ. ಎಂ. ಮುಕ್ರಿಯೆಂದೆ ಪರಿಚಿತರಾಗಿ ತನ್ನ ಕರ್ತವ್ಯದ ಮೂಲಕ ಮಾದರಿಯಾದವರು. ಅವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಕೊಂಕಣ ಎಜುಕೇಶನ್ ಟ್ರಸ್ಟ್ ನವರು “ವಿನಯ ಸ್ಮೃತಿ” ಹೆಸರಿನಲ್ಲಿ ನೀಡುವ ಸಮರ್ಥ ಶಿಕ್ಷಕ ಪುರಸ್ಕಾರಕ್ಕೆ ಭಾಜನರಾಗಿರುವುದು ತಾಲೂಕಿಗೆ ಹೆಮ್ಮೆ ಎನಿಸಿದೆ.

ವಿದ್ಯೆ ಸಾಮಾನ್ಯ ಮನುಷ್ಯನನ್ನು ದೈವತ್ವಕ್ಕೆ ಎತ್ತುವ ಸಾಧನ ಮತ್ತು ವಿಧಾನ. ಜಾತಿ ಪ್ರಭೇದಗಳ ಒಳಗೋಡೆಗಳನ್ನು ಒಡೆದು ನಾಗರಿಕತೆಯನ್ನು ಬೆಳೆಸಿಕೊಳ್ಳಬೇಕೆಂಬ ಹಲವು ದಾಶ೯ನೀಕರ ಆಶಯದಂತೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನವರು ಶಿಕ್ಷಣ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವುದರ ಮೂಲಕ ಎಲ್ಲರೊಳಗೊಂದಾಗಿ ಎಲ್ಲರಂತಾಗದ ವಿಶಿಷ್ಟ ವ್ಯಕ್ತಿತ್ವದ ಸರಳ ಸಜ್ಜನಿಕೆಯ ಪಿ.ಎಂ. ಮುಕ್ರಿಯವರನ್ನು ಗುರುತಿಸಿ “ವಿನಯ ಸ್ಮೃತಿ”ಯಂತ ಶ್ರೇಷ್ಠ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ವಿಷಯವಾಗಿದೆ.

ಜಾತಿ- ಮತವೆಂಬ ಭೂತದ ಸಂಕುಚಿತ ಭಾವನೆಗಳ ಸಂಕೋಲೆಯಲ್ಲಿ ಬಂದಿತವಾದ ಕಾಲಘಟ್ಟದಲ್ಲಿಯೂ ತಂದೆ ಮಾಸ್ತಿ ಮುಕ್ರಿ, ತಾಯಿ ಮಾದೇವಿಯವರು ಉಳ್ಳವರು ಮನೆಯ ಕೂಲಿ ಮಾಡುತ್ತ ಮಗನ ಶಿಕ್ಷಣಕ್ಕೆ ಒತ್ತುಕೊಟ್ಟರು. ದುಡಿತದ ಕೆಲ ಪಾಲನ್ನು ಇವರ ಶಿಕ್ಷಣಕ್ಕಾಗಿ ಮೀಸಲಿಟ್ಟು ಓದಿಸಲು ಪಣತೊಟ್ಟ ಪರಿಶ್ರಮದ ಫಲವಾಗಿ, ಸತ್ತ ಸಂಪ್ರದಾಯಗಳಿಗೆ ವಿದಾಯ ಹೇಳಿ ಮಗನನ್ನು ಶಿಕ್ಷಣದತ್ತ ಮುಖ ಮಾಡುವಂತೆ ಮಾಡಿದ ಪುಣ್ಯಾತ್ಮರು.

“ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ ಗುಟ್ಟುಗಳ
ನೀವು ಕಲಿಸಿದಿರಿ ನನಗೆ ತಲೆಯೆತ್ತಿ ನಿಲ್ಲುವುದನ್ನು
ಕಿರುಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆವುದನ್ನು
ಸದ್ದಿರದೆ ಬದುಕವುದನ್ನು”ಎಂಬ ಕವಿವಾಣಿಯಂತೆ ಬದುಕಿನ ಕಷ್ಟ ಪರಂಪರೆಯನ್ನು ಮೆಟ್ಟಿನಿಂತು ಇಡೀ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ತಂದೆ- ತಾಯಿಯವರನ್ನು ಸದಾ ನೆನೆಯುವ ಪಿ.ಎಂ.ಮುಕ್ರಿಯವರು 1970ರಲ್ಲಿ ಕುಮಟಾದ ವಾಲಗಳ್ಳಿಯಲ್ಲಿ ಜನಿಸಿದರು.

ಪ್ರಾಥಮಿಕ ಶಿಕ್ಷಣ ವಾಲಗಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ,ಪ್ರೌಢ ಶಿಕ್ಷಣ ಗಿಬ್ ಪ್ರೌಢಶಾಲೆಯಲ್ಲಿಯೂ, ಡಾ ಎ.ವಿ.ಬಾಳಿಗ ಕಾಲೇಜಿನಲ್ಲಿ ಪದವಿ ಶಿಕ್ಷಣ, ಕುಮಟಾದ ಡಯಟ್ ನಲ್ಲಿ ವೃತ್ತಿ ಶಿಕ್ಷಣ ಪೂರೈಸಿ, 1991ರಲ್ಲಿ ಸಿದ್ದಾಪುರದ ಅರೇಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ 2001 ರಂದು ಕುಮಟಾದ ಸಂತೆಗುಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ವರ್ಗವಾಗಿ ಬಂದರು. ನಂತರ ಹಂದಿಗೋಣ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ, ಪದೋನ್ನತ ಮುಖ್ಯಾಧ್ಯಾಪಕರಾಗಿ ಅಂಕೋಲಾದ ಹಟ್ಟಿಕೇರಿಗೆ ವರ್ಗವಾದರು. ಅಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಶಿಕ್ಷಣ ಸಂಯೋಜಕರಾಗಿ ಕುಮಟಾದ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಈಗ ಗೋಕರ್ಣದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ಪಠ್ಯಪುಸ್ತಕ ಹಾಗೂ ಎಸ್. ಎಸ್. ಎಲ್. ಸಿ.ಪರೀಕ್ಷೆಯ ನೋಡಲ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಇರುತ್ತದೆ. ನಾಟಕ, ಸುಗ್ಗಿ ಕುಣಿತ, ಜನಪದ ನೃತ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು ಪರಿಣಿತರು ಕೂಡ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯವೇ ದೇವರೆಂದು ನಂಬಿ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕರಾದ ಪಿ. ಎಂ. ಮುಕ್ರಿಯವರು, ವಿದ್ಯಾರ್ಥಿ ಜೀವನ ಒಂದು ತಪಸ್ಸಿದ್ದಂತೆ. ಗುರಿ ಮುಟ್ಟುವ ತನಕ ಸಾಧಿಸುವ ಛಲ ಇದ್ದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎನ್ನುವ ನಂಬಿಕೆ ಇವರದ್ದಾಗಿದೆ. ಇವರ ಧರ್ಮಪತ್ನಿ ಸಾವಿತ್ರಿ ಮುಕ್ರಿ ,ಮಕ್ಕಳಾದ ನಿತಿನ ಮತ್ತು ನಂದನ ಇವರೊಂದಿಗೆ ತುಂಬು ಸಂಸಾರ ನಡೆಸುತ್ತಿರುವ ಇವರ ಬದುಕು ಸದಾ ಹಸಿರಾಗಿರಲಿ ಎಂದು ಸಮಸ್ತ ಶಿಕ್ಷಕರ ಪರವಾಗಿ ಹಾರೈಸುತ್ತೇನೆ.

  • ಪಿ.ಆರ್. ನಾಯ್ಕ ಹೊಳೆಗದ್ದೆ, ಕುಮಟಾ
About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*