ಪ್ರಾಧ್ಯಾಪಕ ಎಸ್.ವಿ. ಚಿಂಚಣಿಯವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಸೇವಾ ನಿವೃತ್ತಿಗೊಂಡ ದಾಂಡೇಲಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾದ್ಯಾಪಕ ಎಸ್.ವಿ. ಚಿಂಚಣಿಯವರನ್ನು ಬೀಳ್ಕೊಡುವ ಹೃದಯಸ್ಪರ್ಶಿ ಕಾರ್ಯಕ್ರಮ ಪದವಿ ಕಾಲೇಜಿನ ಸಭಾ ಭವನದಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ವಿ. ಚಿಂಚಣಿಯವರು ನನ್ನ ವೃತ್ತಿ ಜೀವನದಲ್ಲಿ ಕಲಿಸುವಿಕೆಯ ಭಾಗವಾಗಿ ಸಾರ್ಥಕ ಬದುಕು ನಡೆಸಿದ್ದೇನೆ ಎನ್ನಲು ಹೆಮ್ಮೆಯಿದೆ. ಮಕ್ಕಳ ಜೊತೆಗೆ ಕಲಿಸುವ ಮತ್ತು ನಾವು ಕಲಿಯುವ ಪ್ರಕ್ರಿಯೆಯಲ್ಲಿ ಒಂದಾಗಿ 35 ವರ್ಷಗಳ ಅನುಭವದ ಮೂಟೆ ಹೊತ್ತುಕೊಂಡು ಜೀವನದಲ್ಲಿ ಅಂತಿಮ ಘಟ್ಟಕ್ಕೆ ಬಂದಿದ್ದೇನೆ. ಅರವತ್ತಕ್ಕೆ ಮರಳಿ ಅರಳುವಂತೆ ಹೊಸ ವೈಯಕ್ತಿಕ ಜೀವನವನ್ನು ಆಸೆಯಿಂದ ಕಂಡಿದ್ದೇನೆ. ನಮ್ಮ ತಂದೆ ತಾಯಿ ಸಾಲ ಮಾಡಿ ನನಗೆ ಶಿಕ್ಷಣ ಕೊಡಿಸಿದ್ದರು. ಭಾಗಶಹ ಅವರ ಶ್ರಮ ಇಂದು ಸಾರ್ಥಕತೆ ಕಂಡಿದೆ. ತಾಯಿಗೆ ಮಾತು ಕೊಟ್ಟಂತೆ ನನ್ನ ನಿವೃತ್ತ ದಿನದಂದು ಅವಳಿಗೂ ಸನ್ಮಾನಿಸುವ ಭಾಗ್ಯ ನನ್ನದು ಎಂದು ಭಾವುಕರಾದರು. ತಮ್ಮ ವೃತ್ತಿ ಜೀವನದಲ್ಲಿ ಜೊತೆಯಾದವರನ್ನು, ಸಹಕರಿಸಿದವರನ್ನು ಸ್ಮರಿಸಿ, ದಾಂಡೇಲಿ ಕಾಲೇಜು ಹೊಸ ಅನುಭವನ್ನೇ ಕೊಟ್ಟಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಎಮ್. ಡಿ. ವಕ್ಕುಂದ ಮಾತನಾಡಿ ಎಸ್.ವಿ. ಚಿಂಚಣಿಯವರು ಅರ್ಹತೆ ಮತ್ತು ಅನುಭವ ಬಹಳ ದೊಡ್ಡದು. ಅವರ ಈಗಾಗಲೇ ಕಾಲೇಜಿನ ಪ್ರಾಚಾರ್ಯರಷ್ಟೇ ಅಲ್ಲ ಕಾಲೇಜು ಶಿಕ್ಷಣ ಇಲಾಖೆಯ ಉಪ ನಿರ್ದೇಶಕರೂ ಆಗಬಹುದಿತ್ತು. ಅದರೆ ಆ ಅಧಿಕಾರಗಳನ್ನು ಬಯಸದೇ ನಯವಾಗಿಯೇ ತಿರಸ್ಕರಿಸಿದ ಅವರು ತಾನು ವಿದ್ಯಾರ್ಥಿಗಳ ಜೊತೆಯೇ ಇರುತ್ತೇನೆಂದು ಪ್ರಾದ್ಯಾಪಕರಾಗಿಯೇ ಮುಂದುವರೆದರು. ಇದು ಅವರ ಸರಳತೆಗೊಂದು ನಿದರ್ಶನವಾಗಿದೆ. ದಾಂಡೇಲಿ ಕಾಲೇಜಿನ ಪ್ರಗತಿಯಲ್ಲಿಯೂ ಅವರ ಪ್ರಯತ್ನ ಸಾಕಷ್ಠಿದೆ ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ. ವೈ.ಎಸ್. ಹನುಮಂತರಾಯ , ನಿವೃತ್ತ ಜಂಟಿ ನಿರ್ದೇಶಕ ಡಿ.ಎಂ. ನಿಡುವಣಿ, ಬಿ.ಪಿ. ಹುರಕಡ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ವಿವಿದೆಡೆಯ ನಿವೃತ್ತ ಹಾಗೂ ಹಾಲಿ ಪ್ರಾಚಾರ್ಯರಾದ ಕೆ. ರಾಮರಾವ, ಸರಸ್ವತಿ ಕಳಸದ್, ಜಿ.ಸಿ. ಗಮಗೋಳಮಠ, ಜಿ.ಎಸ್. ಭಟ್, ಚಂದ್ರಶೇಖರ ಲಮಾಣಿ, ಗೀತಾ ನಾಯಕ, ಅಂಜಲಿ ರಾಣೆ, ಮೋತಿಲಾಲ ರಾಠೋಡ್, ಬಿ.ಎಲ್. ಗುಂಡೂರ, ಕಾಲೇಜಿನ ಪ್ರಾದ್ಯಾಪಕರಾದ ಬಿ.ಎನ್. ಅಕ್ಕಿ, ವಿನಯಾ ನಾಯಕ, ತಸ್ಲಿಮಾ ಜೋರೂಮ, ಲಕ್ಷ್ಮಿ ಬಾಯಿ ಕಬಾಡಿ, ರಾಜು ವೆರ್ಣೇಕರ ಹಾಗೂ ವಿದ್ಯಾರ್ಥಿಗಳು ಮಾತನಾಡಿ ನಿವೃತ್ತರಾದ ಸತೀಶ ಚಿಂಚಣಿಯವರ ಗುಣಗಾನ ಮಾಡಿದರು.

ಪ್ರಾದ್ಯಾಪಕ ಡಾ. ಎನ್.ಏ. ಜಂಗೂಬಾಯಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸುನೀತಾ ಜೋಗ ವಂದಿಸಿದರು, ಮಂಜುನಾಥ ಛಲವಾದಿ ನಿರೂಪಿಸಿದರು. ಉತ್ತರ ಕನ್ನಡ, ಧಾರವಾಡ, ಅಳ್ನಾವರ ಸೇರಿದಂತೆ ಹಲವೆಡೆಯ ಕಾಲೇಜು ಪ್ರಾಚಾರ್ಯರು, ಪ್ರಾದ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*