ಮನಸ್ಸು ಎಲ್ಲದಕ್ಕೂ ಮೂಲ. ಮನಸ್ಸು ಎಂದರೆ ಸಂಕಲ್ಪದ ಶಕ್ತಿ. ಒಂದು ಕೆಲಸವನ್ನು ಮಾಡಲೇಬೇಕು ಎಂದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮನಸ್ಸಿಗಿದೆ.ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂಥ ಮನಸ್ಸಿನ ಹಾದಿಯಲ್ಲಿ ನಡೆದು ಜಿಲ್ಲೆಯ ಗ್ರಾಮ ಪಂಚಾಯಿತಿಗೆ ಮಾದರಿಯಾಗಿ “ಪಿಡಿಒ ಆಫ್ ದಿ ಮಂತ್”ಪ್ರಶಸ್ತಿಗೆ ಪುರಸ್ಕೃತರಾದವರು ಹೆರಂಗಡಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉದಯ ಈಶ್ವರ ಬಾಂದೇಕರವರು. ಅವರ ಕಾರ್ಯಕ್ಷಮತೆ, ದಕ್ಷತೆ, ಸಾಧಿಸಿದ ಪ್ರಗತಿ ಪರಿಗಣಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂರವರು ಈ ಪ್ರಶಸ್ತಿ ನೀಡಿ ತನ್ನ ಸಿಬ್ಬಂದಿಯನ್ನು ಗೌರವಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ.
ನಾನು ಬಡವಿ, ಆತ ಬಡವ, ಒಲವೇ ನಮ್ಮ ಬದುಕು
ಬಳಸಿಕೊಡವದನೆ ನಾವು
ಅದಕು ಇದಕು ಎದಕು – ಕವಿ ಅಂಬಿಕಾತನಯರವರು ಪ್ರೀತಿಯ ಅನನ್ಯತೆಯನ್ನು ಸಾರಿದಂತೆ,ತನ್ನ ಪಂಚಾಯತಿಯಲ್ಲಿ ಏನು ಇದೆಯೋ? ಇಲ್ಲವೋ? ಗೊತ್ತಿಲ್ಲ.ಆದರೆ ತನ್ನ ಇತಿಮಿತಿಯಲ್ಲಿ ಅವೆಲ್ಲವನ್ನು ಮೀರಿ ಪಂಚಾಯತ ವ್ಯಾಪ್ತಿಯ ಜನಪರ ಬದುಕಿಗಾಗಿ ತನ್ನನ್ನು ತಾನು ತೊಡಗಿಸಿಕೊಂಡರು. ತನ್ನ ಬದುಕನ್ನು ಇತರರು ಪ್ರೀತಿಸುವ ಬದುಕನ್ನಾಗಿ ಪರಿವರ್ತಿಸಿ, ತನ್ನ ಪಾಲಿನ ಪ್ರೀತಿಯನ್ನು ತ್ಯಾಗದಿಂದ, ಸೇವೆಯಿಂದ, ಶ್ರಮದಿಂದ ಹಂಚುವುದರ ಮೂಲಕ ಅಭಿವೃದ್ಧಿ ಪಥದತ್ತ ಸಾಗಲು ಬೆಳಕಿನ ದೀವಟಿಕೆ ಹಿಡಿದು, ಜನಹಿತ ಕಾಳಜಿಯ ಮೂಲಕ ಮುನ್ನಡೆದು ಇತರರಿಗೆ ಮಾದರಿಯಾಗಿರುತ್ತಾರೆ.
ಜಿಲ್ಲೆಯಲ್ಲಿರುವ ೨೩೧ ಗ್ರಾಮ ಪಂಚಾಯತಿಗಳಲ್ಲಿ ೨೦೧ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯ ನಿರ್ಮಿಸುತ್ತಿದ್ದಾರೆ. ೫ ಗ್ರಾಮಗಳು, ೪೪ ಮಜರೆಗಳು, ೬೧೦೦ ಜನಸಂಖ್ಯೆ ಹೊಂದಿರುವ ಹೆರಂಗಡಿ ಗ್ರಾಮ ಪಂಚಾಯತ ತನ್ನ ಕಾರ್ಯ ಸಾಧನೆ ಮೂಲಕ ಜಿಲ್ಲೆಗೆ ಮಾದರಿಯಾಗಿರುತ್ತದೆ.
ಸ್ವಾತಂತ್ರ್ಯಾ ನಂತರ ಭಾರತದ ಶೋಷಿತರ ಬದುಕು ಹಸನಾಗುತ್ತದೆ.ಹಸಿವು ಇಂಗುತ್ತದೆ. ಅವಮಾನ ಕಳೆಯುತ್ತದೆ.ಎಲ್ಲರೂ ಮನುಷ್ಯರಾಗಿ ಮಾನವತ್ವದ ಬದುಕು ಸಾಗುತ್ತದೆ ಎಂದೇ ನಂಬಲಾಗಿತ್ತು.” ದೇವರು ಹಳ್ಳಿಯನ್ನು ಮಾಡಿದರೆ, ಮನುಷ್ಯ ಪಟ್ಟಣವನ್ನು ಮಾಡಿದನು” ಎಂಬ ಗಾದೆಯ ಹುಟ್ಟಿಗೂ ಕಾರಣವಾದರೂ, ಹಳ್ಳಿಯ ಜನರ ಬದುಕು ಬೆಳಗಲಿಲ್ಲ. ಬಾಡಲೂ ಇಲ್ಲ.
ಸ್ಥಳೀಯ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರ ನೀಡಿದರೆ, ಸ್ಥಳೀಯರೇ ಆ ಸರ್ಕಾರವನ್ನು ನಡೆಸಿದರೆ, ಜನಪ್ರತಿಯಾಗಿ ಸಮಸ್ಯೆ ಪರಿಹಾರಕ್ಕೆ ಮುಂದಾದರೆ,ಆ ಹಳ್ಳಿ ಅಭಿವೃದ್ಧಿ ಹೊಂದಲು ಸಾಧ್ಯ ಎಂಬ ದೂರದೃಷ್ಟಿತದ ಚಿಂತನೆಯ ಫಲವಾಗಿ ಪಂಚಾಯತ ಅಭಿವೃದ್ಧಿ ಅಧಿಕಾರಿಯೆಂಬ ಹೊಸ ಹುದ್ದೆ ಹುಟ್ಟಿಕೊಂಡಿದ್ದು ೨೦೧೦ರಲ್ಲಿ.
“ಒಬ್ಬ ಗುಲಾಮನಿಗೆ ನೀನು ಗುಲಾಮ” ಎಂದು ಪದೇಪದೇ ಅಂದರೆ ಅವನಿಗೆ ಅದರ ಅರ್ಥ ತಿಳಿಯುತ್ತದೆ. ಎನ್ನುವ ಗ್ರೀಕ್ ಇತಿಹಾಸ ತಜ್ಞ ದೊಸಿಡೇಸ್ ರವರ ಪ್ರಕಾರ ಹಳ್ಳಿಯಲ್ಲಿ ಹುಟ್ಟಿದ ಪೊರ ದಿಲ್ಲಿಯವರೆಗೂ ಬೆಳಗುವಂತಾಗಬೇಕು. ಅವನ ಬದುಕು ಅವನಿಗರಿವಾದಾಗಲೇ ಸಾರ್ಥಕ ಬದುಕನ್ನು ಕಂಡುಕೊಳ್ಳಲು ಸಾಧ್ಯ. ಓರ್ವ ಪಂಚಾಯತ ಅಭಿವೃದ್ಧಿ ಅಧಿಕಾರಿ ತನ್ನ ಊರಿನ ಪಕ್ಕದಲ್ಲಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಮಾಡಿದ ಕೆಲಸ “ಅಂಚಿನ ಸಮುದಾಯದ ಆತ್ಮ ಗೌರವ” ಹೆಚ್ಚಿಸಿ,ಅಕ್ಷರ, ಅಧಿಕಾರ, ಆತ್ಮಭಿಮಾನದ ಮೂಲಕ ವಿವಿಧ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಸಮಾಜಮುಖಿ ಕಾರ್ಯದ ಮೂಲಕ ಜಿಲ್ಲೆಯ ಮೊದಲ ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಸಮನ್ವಯ ಕೆಲಸದ ಮೂಲಕ ಕಾನೂನಿನ ಚೌಕಟ್ಟಿನಲ್ಲಿ, ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಸರಕಾರದ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಪಣತೊಟ್ಟು ಮನೆಗಳ ನಿರ್ಮಾಣ, ಬಾವಿಗಳ ನಿರ್ಮಾಣ, ಜಮೀನಿನ ಅಭಿವೃದ್ಧಿ,ವಿದ್ಯುತ್ ಸಂಪರ್ಕ, ಜಮೀನಿನ ವ್ಯಾಜ್ಯೆಯಿಂದ ಅರ್ಧಕ್ಕೆ ನಿಂತ ಮನೆ ನಿರ್ಮಾಣಕ್ಕೆ ಮುಂದೆ ನಿಂತು ಸಮಸ್ಯೆ ಪರಿಹರಿಸಿದ ಹಠಯೋಗಿ. ಸರ್ಕಾರದ ವಿವಿಧ ಯೋಜನೆಗಳನ್ನು ಅಹ೯ ಫಲಾನುಭವಿಗಳಿಗೆ ತಲುಪಿಸುವ ಮಹತ್ಕಾರ್ಯದಲ್ಲಿ ಎಂದು ಹಿಂದೆ ಸರಿಯದೇ ಜನಪ್ರತಿನಿಧಿಗಳ ಸಹಕಾರದಿಂದ ಎಲ್ಲವೂ ಸಾಧ್ಯ ಎಂದು ಮಾಡಿ ತೋರಿಸಿದರು.
(ಗ್ರಾಮ ಪಂಚಾಯತಿ ಮಟ್ಟದಲ್ಲಿ ದಕ್ಷತೆ, ಪ್ರಾಮಾಣಿಕತೆ ಹಾಗೂ ಮಾನವೀಯತೆ ನೆಲೆಗಟ್ಟಿನಲ್ಲಿ ಗ್ರಾಮೀಣ ಜನರಿಗೆ ಸರಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲಾ ಪಂಚಾಯತ್ನಿಂದ ಕೊಡಮಾಡುವ ಮೇ ಮಾಹೆಯ ಜಿಲ್ಲಾ ಮಟ್ಟದ ಪಿಡಿಒ ಆಫ್ ದಿ ಮಂತ್ ಪ್ರಶಸ್ತಿಗೆ ಆಯ್ಕೆಯಾಗಿರುವ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೇರಂಗಡಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉದಯ್ ಬಾಂದೇಕರ ಅವರಿಗೆ ಜಿಲ್ಲಾ ಪಂಚಾಯತ್ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಅವರು ತಮ್ಮ ಕಚೇರಿಯಲ್ಲಿ ಗುರುವಾರ ಪ್ರಶಂಸಾ ಪತ್ರ ಪ್ರದಾನ ಮಾಡುವ ಮೂಲಕ ಅಭಿನಂದಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ನ ಉಪ ಕಾರ್ಯದರ್ಶಿ(ಆಡಳಿತ) ನಾಗೇಶ ರಾಯ್ಕರ್, ಮುಖ್ಯ ಲೆಕ್ಕಾಧಿಕಾರಿ ಸತೀಶ ಪವಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.)
೨೦೧೪ ರಲ್ಲಿ ಉತ್ತಮ ಕರವಸೂಲಿ ಪಂಚಾಯತ,೨೦೧೫ ರಲ್ಲಿ ಗಾಂಧಿ ಗ್ರಾಮ ಪುರಸ್ಕಾರ, ೨೦೨೧ ರಲ್ಲಿ ಸ್ವಚ್ಛ ಭಾರತ ಮಿಷನ್ ನೈರ್ಮಲ್ಯ ಪುರಸ್ಕಾರ, ಅಮೃತ ಗ್ರಾಮ ಪುರಸ್ಕಾರ ಇಂತಹ ಹಲವು ಪ್ರಶಸ್ತಿ ಇವರನ್ನರಸಿ ಪಂಚಾಯಿತಿ ಬಾಗಿಲಿಗೆ ಬಂದಿರುತ್ತದೆ. ತಾಲೂಕಿನಲ್ಲಿ ಪ್ರಪ್ರಥಮವಾಗಿ ಎಸ್.ಬಿ.ಎಂ. ಘಟಕ ಸ್ಥಾಪನೆಗೆ ಕಾರಣಿಕರ್ತರೂ ಕೂಡ.
ಮತ ಎಂಬುದು ದುರ್ಬಲ. ಮತಿಯ ಮುಖ್ಯ ಎಂಬ ಸರ್ವಕಾಲಿಕ ಸತ್ಯವನ್ನರಿತ ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬಾಂದೇಕರವರು ಆರ್ಥಿಕವಾಗಿ ತೀರ ಸಂಕಷ್ಟದ ಕುಟುಂಬದಲ್ಲಿ ಜನಿಸಿದರೂ, ತಮ್ಮ ವೃತ್ತಿ ಬದುಕಿನ ಮೂಲಕ ಇಡೀ ಜಿಲ್ಲೆಯಲ್ಲಿ ವಿಶಿಷ್ಟ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಕರ್ತೃತ್ವ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಹೊನ್ನಾವರ ತಾಲೂಕಿನ ಉಪ್ಪೋಣಿಯಲ್ಲಿ ತಂದೆ ಈಶ್ವರ ಬಾಂದೇಕರ, ತಾಯಿ ರುಕ್ಮಿಣಿ ಅವರ ಮಗನಾಗಿ ೧೯೭೮ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಉಪ್ಪೊಣಿಯಲ್ಲಿಯೂ, ಪ್ರೌಢ ಶಿಕ್ಷಣವನ್ನು ಅಳ್ಳಂಕಿಯಲ್ಲಿಯೂ, ಪದವಿ ಶಿಕ್ಷಣವನ್ನು ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿಯೂ, ಬಿಇಡಿ ಶಿಕ್ಷಣವನ್ನು ಕುಮಟಾದ ಬಾಳಿಗ ಕಾಲೇಜಿನಲ್ಲಿಯೂ, ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪೂರೈಸಿ ೨೦೦೪ ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಅಥಣಿಯಲ್ಲಿ ವೃತ್ತಿ ಬದುಕನ್ನು ಆರಂಭಿಸಿದರು. ಆರು ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ೨೦೧೦ ರಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ತಾಲೂಕಿನ ಜಲವಳ್ಳಿಗೆ ನೇಮಕರಾದರು. ಅಲ್ಲಿ ಮೂರು ವರ್ಷ ಸೇವೆ ಸಲ್ಲಿಸಿ ೨೦೧೩ ರಿಂದ ಹೆರಂಗಡಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪಂಚಾಯತ ಹೊರತಾಗಿಯೂ ಕೊಡಾಣಿ,ಉಪ್ಪೋಣಿ, ಮಾಗೋಡು,ನಗರಬಸ್ತಿಕೇರಿ ಪಂಚಾಯತ ಅಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಸರಕಾರದ ಕಾನೂನಿನ ಚೌಕಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಿದ ಸರಳ ಸಜ್ಜನರು ಮೇಲಾಧಿಕಾರಿಗಳ ಪ್ರೀತಿಗೂ, ಸಾರ್ವಜನಿಕರ ಪ್ರೀತಿಗೂ ಪಾತ್ರರಾಗಿರುತ್ತಾರೆ.
ಹಸಿದ ದಿನಗಳಿಗಿಂತ ಉಂಡ ದಿನಗಳನೆಣಿಸಿ
ಉಳಿದುಕೊಂಡರೆ ಹೆಚ್ಚು ಬದುಕಿನಲ್ಲಿ
ಉಗುಳನುಂಡರೂ ಸರಿಯೇ ಉಳಿದುಕೊಳ್ಳಲೇಬೇಕು ಏನನ್ನಾದರೂ ಸಾಧಿಸುವ ದೃಷ್ಟಿಯಲ್ಲಿ-ಎಂಬ ಕವಿವಾಣಿಯಂತೆ ಬದುಕಿನುದ್ದಕ್ಕೂ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಪಂಚಾಯತ ವ್ಯಾಪ್ತಿಯ ಅಭಿವೃದ್ಧಿಗೆ ತೊಡಗಿಸಿಕೊಂಡರು.
ಹಿಂತಿರುಗಿ ನೋಡಬೇಡಿ, ಯಾವಾಗಲೂ ಮುನ್ನಡೆಯಿರಿ, ಅನಂತಶಕ್ತಿ,ಅನಂತ ಉತ್ಸಾಹ, ಅನಂತ ಸಾಹಸ ಮತ್ತು ಅನಂತ ತಾಳ್ಮೆ ಇವುಗಳಿದ್ದರೆ ಮಾತ್ರ ಮಹತ್ಕಾರ್ಯಗಳನ್ನು ಸಾಧಿಸಲು ಸಾಧ್ಯ ಎಂಬ ವಿವೇಕ ವಾಣಿಯನ್ನು ತನ್ನ ಬದುಕಿಗಟಿಸಿಕೊಂಡು ಪಂಚಾಯತ ಅಭಿವೃದ್ಧಿಯ ಸಮಗ್ರ ಮನೋಟದ ಅರಿವಿನೊಂದಿಗೆ ಮುಂದಡಿಯಿಡುತ್ತಿರುವ ಉದಯ ಬಾಂದೇಕರವರ ನೂರೆಂಟು ಕನಸುಗಳು ಸಾಕಾರವಾಗಲಿ. ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಅವರನ್ನರಸಿ ಬರಲಿ ಎಂದು ಹಾರೈಸುತ್ತೇನೆ.
- ಪಿ.ಆರ್.ನಾಯ್ಕ, ಹೊಳೆಗದ್ದೆ
Be the first to comment