ಸೂತ್ರಕ್ಕೆ, ಶಾಸ್ತ್ರಕ್ಕೆ ಅಂಟಿಕೊಳ್ಳದ ಪ್ರಯೋಗ ಶೀಲ ಭಾಗವತ ಉಮಾಮಹೇಶ್ವರ ಭಟ್ಟ

ವಿದ್ಯಾ ವಿನಯ ಸಂಪನ್ನೆ’ ಎನ್ನುವ ವಿನಯಶೀಲತೆಗೆ ಹೆಸರಾಗಿ ಯಕ್ಷಗಾನ ಕಲೆಯ ಬಗ್ಗೆ ಪರಿಪೂರ್ಣ ಅರಿವಿನೊಂದಿಗೆ ಮುನ್ನಡೆದು ಬದುಕಿನ ಬಹುಪಾಲು ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತ ಬಾಡದ ಭಾಗವತರೆಂದೇ ಪ್ರಖ್ಯಾತರಾದವರು ಉಮಾಮಹೇಶ್ವರ ಲಕ್ಷ್ಮೀನಾರಾಯಣ ಭಟ್ಟ. ಬಡಗಿನ ರಂಗಭೂಮಿಯಲ್ಲಿ ಪ್ರಯೋಗಶೀಲತಾ ದೃಷ್ಟಿಕೋನದ ಪಾರಂಪರಿಕ ಜಾನಪದ ಕಲೆಯ ಉಳುವಿಗಾಗಿ ನಿರಂತರವಾಗಿ ಹೋರಾಡುವುದರ ಮೂಲಕ ಮುಂದಿನ ಪೀಳಿಗೆಗೆ ಕಲೆಯನ್ನು ವರ್ಗಾಯಿಸಲು ಮಕ್ಕಳ ಮೇಳ ಕಟ್ಟಿ ಸಮರ್ಥ ಗುರುವಾಗಿ ಸಾವಿರಾರು ಮಕ್ಕಳಿಗೆ ಮಾರ್ಗದರ್ಶನ ಮಾಡಿರುತ್ತಾರೆ. ೧೯೫೭ ರಲ್ಲಿ ಕುಮಟಾ ತಾಲೂಕಿನ ಬಾಡ ಗ್ರಾಮದಲ್ಲಿ ತಂದೆ ಲಕ್ಷ್ಮಿ ನಾರಾಯಣ, ತಾಯಿ ಮಹಾದೇವಿಯವರ ಮಗನಾಗಿ ಜನಿಸಿ, ಹವ್ಯಾಸಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಯಕ್ಷಗಾನ ಕ್ಷೇತ್ರ. ಕಲಾವಿದರನ್ನು ಕಂಡರೆ ಮೂಗು ಮುರಿಯುವ ಕಾಲಘಟ್ಟದಲ್ಲಿ ತನ್ನ ಬಹುಮುಖ ಪ್ರತಿಭೆಯ ಮೂಲಕ ಕಲೆಯನ್ನು ಸಿದ್ಧಿಸಿಕೊಂಡು ಬಯಲಾಟದ ಹವ್ಯಾಸಿ ಭಾಗವತರಾಗಿ ಕಲಾಸೇವೆ ಪ್ರಾರಂಭಿಸಿದರು.

ತಮ್ಮ ವೈಶಿಷ್ಟ ಪೂರ್ಣ ಭಾಗವತಿಕೆಯ ಮೂಲಕ ಪ್ರೇಕ್ಷಕ ವರ್ಗ ತಲೆ ತೂಗುವಂತೆ ಮಾಡುವ ಚಾಕಚಕ್ಯತೆ ಹೊಂದಿದ ಭಾಗವತರು ಚಿಟ್ಟಾಣಿಯವರ ಮೆಚ್ಚುಗೆಗೆ ಪಾತ್ರರಾಗಿ, ನಾನು ಕುಣಿಯಬೇಕೆಂದರೆ ಭಾಗವತರಾಗಿ ಉಮಾಮಹೇಶ್ವರ ಭಟ್ಟರೆ ಇರಬೇಕು ಎನ್ನುವಷ್ಟರ ಮಟ್ಟಿಗೆ ತಮ್ಮೊಳಗಿನ ಕಲೆಯನ್ನು ಮೆರೆಸಿದರು.ಜಿಲ್ಲೆಯ ತುಂಬೆಲ್ಲ ಕೌರವ- ಕೌರವ- ಕೌರವ ಯಕ್ಷಪ್ರಸಂಗದಲ್ಲಿ ಭಾಗವತರ ಸಿರಿ ಕಂಠ ಮೇಲುಗೈ ಸಾಧಿಸಿದರೆ, ಚಟ್ಟಾಣಿಯವರ ಕುಣಿತಕ್ಕೆ ಬೆರಗಾಗದವರಿಲ್ಲ. ಹಿರಿಯ ತಲೆಮಾರಿನ ಅದೆಷ್ಟೋ ಸಾಧಕ ಕಲಾವಿದರಿಗೆ ತಮ್ಮ ಪ್ರತಿಭೆ ಪರಿಶ್ರಮಗಳಿಂದ ಸಾಥ ನೀಡುವಲ್ಲಿ ಮೇಲ್ಪಂಕ್ತಿಯ ಸಾಧಕರು ಹೌದು.

ಅಮೃತೇಶ್ವರಿ,ಸಾಲಿಗ್ರಾಮ, ಗೋಳಿಗರಡಿ, ಪಂಚಲಿಂಗ, ಮಾರಿಕಾಂಬಾ, ಗುಂಡಬಾಳ, ಕುಮಟಾ ಮೇಳದಲ್ಲಿ ಭಾಗವತರಾಗಿ ಮೇಳದ ಪ್ರಸಿದ್ಧಿಗೂ ಕಾರಣಿಕತ೯ರಾಗಿರುತ್ತಾರೆ. ಪದವನ್ನು ವೇಷ ಮತ್ತು ಭಾಗವತ ಒಬ್ಬರಿಂದೊಬ್ಬರು ಎತ್ತಿಕೊಂಡು ಹಾಡುತ್ತ ರಂಗಾಭಿನಯ ಮುಂದುವರಿಸುವುದಕ್ಕೆ ಕೆರೆಮನೆ ಮಹಾಬಲ ಹೆಗಡೆಯವರೊಂದಿಗೆ ಭಾಗವತರಾಗಿ ಕೈಜೋಡಿಸಿದ ಉಮಾಮಹೇಶ್ವರ ಭಟ್ಟರು ತಾಳ ಇಲ್ಲದೆ ಮದ್ದಳೆ ಬಾರಿಸುವ ಏಕಮೇಯ ವ್ಯಕ್ತಿಗಳಲ್ಲೊಬ್ಬರು.

ಯಕ್ಷರಂಗದ ಭಾಗವತರಾಗಿ ತಮ್ಮ ವಿಶಾಲ ದೃಷ್ಟಿಕೋನದ ವ್ಯಾಪ್ತಿಯನ್ನು ಮಕ್ಕಳ ಕಡೆಗೆ ವಿಸ್ತರಿಸಿದ ಕುಮಟಾ ಬಾಡದ ಲಿಂಗಡಿಮನೆ ಕುಟುಂಬದ ಕುಡಿಯೊಂದು ಹೊನ್ನಾವರ ತಾಲೂಕಿನ ನವಿಲುಗೋಣ ಗ್ರಾಮಕ್ಕೆ ಸ್ಥಳಾಂತರಗೊಂಡಾಗ ಅಲ್ಲಿ ಸಿದ್ಧಿ ವಿನಾಯಕ ಯಕ್ಷಗಾನ ಚಿಣ್ಣರ ಮೇಳದ ಹುಟ್ಟಿಗೂ ಕಾರಣರಾದರು. ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆಗೆ ಗೆಜ್ಜೆ ಕಟ್ಟಿ ಕುಣಿಯಲು ಸೂಕ್ತ ಅವಕಾಶ ಕಲ್ಪಿಸಿ ಕೊಟ್ಟರು. ಲೋಕಪ್ರಿಯತೆಯನ್ನು ಕಲೆಯ ಮೂಲಕ ಸಿದ್ದಿಸಿದ ಭಾಗವತರು ಮಸ್ಕಲ್ಮಕ್ಕಿಯಂತಹ ಕುಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಹಳ್ಳೇರ ಕುಟುಂಬದಲ್ಲಿ ಜನಿಸಿದ ಬಡ ಮಕ್ಕಳಿಗೆ ಗೆಜ್ಜೆ ಕಟ್ಟಿ ಕುಣಿಸಿದ ಮಹಾನುಭಾವರು. ಸೂತ್ರಕ್ಕೆ, ಶಾಸ್ತ್ರಕ್ಕೆ ಅಂಟಿಕೊಳ್ಳದೇ ಪ್ರಯೋಗ ಶೀಲ ಪ್ರವೃತ್ತಿಯಿಂದಾಗಿ ಗುರು ನಾರಾಯಣ ಭಾಗವತರಿಂದ ಕಲಿತ ಭಾಗವತಿಕೆಯ ಮೂಲಕ ತಮ್ಮ ಸಹಕಲಾವಿದ ಡಾ. ಎಸ್. ಡಿ. ಹೆಗಡೆಯವರೊಂದಿಗೆ ಹೊನ್ನಾವರದ ನಗರ ಶಾಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಮಕ್ಕಳಿಗೆ ಪಾತ್ರ ಬರೆದುಕೊಟ್ಟು ಅವರಿಂದ ಹೇಳಿಸಿ ನೃತ್ಯ ಕಲಿಸಿದ ಗುರುಗಳಾದರು. ಕುಮಟಾದ ಹಂದಿಗೋಣ,ಕೂಜಳ್ಳಿ, ಮೊಗಟಾ,ಹೊನ್ನಾವರದ ಅಗ್ರಹಾರ, ಹಳದೀಪುರ,ಕಸಬಾ ಶಾಲೆಗಳಲ್ಲಿಯೂ ಮಕ್ಕಳಿಗೆ ತರಬೇತಿ ನೀಡಿ ಅನೇಕ ಕಲಾವಿದರನ್ನು ಹುಟ್ಟು ಹಾಕಿದ ಖ್ಯಾತಿಗೆ ಪಾತ್ರರಾಗಿರುತ್ತಾರೆ.

ಹಿಮ್ಮೇಳ ಕಲಾವಿದ ಭಾಗವತರು, ಮುಮ್ಮೇಳ ಕಲಾವಿದರ ಖ್ಯಾತಿಗೂ ಪಾತ್ರರಾಗುವವರಲ್ಲಿ ಭಾಗವತರ ಶ್ರಮ ಅಡಗಿದೆ. ತಮ್ಮ ನಿಸ್ವಾರ್ಥ ಸೇವೆಯ ಮೂಲಕ ಅನೇಕ ತರಬೇತಿ ಕೇಂದ್ರ ಪ್ರಾರಂಭಿಸಿ ಚಿಕ್ಕ ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿ ಮೂಡಿಸಿ ಅವರನ್ನು ತಿದ್ದಿ-ತೀಡಿ, ಆಕಾರ ಬದ್ಧವಾದ ನಡೆ, ಹಾವ- ಭಾವ, ಹೆಜ್ಜೆ- ನಿಲುವು, ಕುಣಿತ-ಮಣಿತಗಳನ್ನು ಕಲಿಸಿದ್ದಾರೆ. ಕುಟುಂಬದ ಯಜಮಾನರಾಗಿ ಮಕ್ಕಳಿಗೆ ಯಕ್ಷಗಾನದ ಗುರುಗಳು ಕೂಡ. ಓರ್ವ ಮಗ ವಿಘ್ನೇಶ್ವರ ಭಟ್ಟರು ಬಹುದೊಡ್ಡ ಯಕ್ಷರಂಗದ ವಿದ್ವಾಂಸರು ಮತ್ತು ಅರ್ಥದಾರಿಗಳು. ಇನ್ನೊವ೯ ಮಗ ಸುಬ್ರಮಣ್ಯ ಭಟ್ಟ ಉತ್ತಮ ಮದ್ದಲೆಗಾರ ಮತ್ತು ಯಕ್ಷ ಕಲಾವಿದರು. ಮಗಳು ಕಾಂಚಿಕಾ ಯಕ್ಷಗಾನ ಕಲಾವಿದೆ. ಇವರ ಸೊಸೆ ರಶ್ಮಿಯವರು ಕೂಡ ಯಕ್ಷಗಾನ ಕಲಾವಿದರು. ಇಡೀ ಕುಟುಂಬವೇ ಯಕ್ಷಗಾನ ಕಲಾವಿದರು ಮತ್ತು ಕಲಾರಾಧಕರು.

ಒಂದು ಕಾಲದಲ್ಲಿ ಜಿಲ್ಲೆಯ ಜನರ ಗಂಡು ಮೆಟ್ಟಿನ ಕಲೆಯಾದ ಯಕ್ಷಗಾನವು ಇಂದು ತನ್ನ ಮೊದಲಿನ ವೈಭವ ಕಳೆದುಕೊಂಡಿದೆ. ಸಾಮಾನ್ಯ ಜನರು ಆರಾಧಿಸುವ ಕಲೆ ಗಾವುದ ದೂರ ಸಾಗಿದೆ. ಯಕ್ಷ ಪರಂಪರೆ ನಿರಂತರತೆಗೆ ಶ್ರಮಿಸಿದ ಉಮಾಮಹೇಶ್ವರ ಭಟ್ಟರವರು ಕಾಲಮಿತಿ ಪ್ರಯೋಗ ಯಶಸ್ವಿಯಾಗಿ ಅಳವಡಿಸಿರುತ್ತಾರೆ. ಇತ್ತೀಚೆಗೆ ಅವರ ಕಲಾ ಸೇವೆಯನ್ನು ಪರಿಗಣಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪುರಸ್ಕರಿಸಿದೆ.ಇನ್ನಷ್ಟು ಪ್ರಶಸ್ತಿ,ಪುರಸ್ಕಾರಗಳು ಅವರನ್ನರಸಿ ಬರಲಿ ಎಂದು ಹಾರೈಸೋಣ.

ಲೇಖಕರು : ಪಿ.ಆರ್. ನಾಯ್ಕ, ಹೊಳೆಗದ್ದೆ
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*