ಪಿ.ಆರ್. ನಾಯ್ಕರ ‘ದೇವಗಿರಿ’ ಕೃತಿ ಗ್ರಾಮೀಣ ಪರಿಸರದ ಕೈಗನ್ನಡಿಯಾಗಿದೆ – ಡಿ.ಡಿ.ಪಿ.ಐ. ಈಶ್ವರ ನಾಯ್ಕ

 ಕುಮಟಾ: ಅಂಗೈಯಲ್ಲಿ ಜಗತ್ತನ್ನು ಕಾಣುವ ಇಂದಿನ ದಿನಗಳಲ್ಲಿ ದೇವಗಿರಿ ಗ್ರಾಮ ಚರಿತ್ರೆ ಗ್ರಾಮೀಣ ಪರಿಸರದ ಕೈಗನ್ನಡಿ ಎಂದು ಉಪ ನಿರ್ದೇಶಕ ಈಶ್ವರ ಎಚ್. ನಾಯ್ಕ ಹೇಳಿದರು.

ಅವರು ಇತ್ತೀಚೆಗೆ ಗ್ರಾಮ ಪಂಚಾಯತಿ ದೇವಗಿರಿ ಹಾಗೂ ನಾಗಮ್ಮ ಪ್ರಕಾಶನ ಹೊಳೆಗದ್ದೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪಿ. ಆರ್. ನಾಯ್ಕ ರಚಿಸಿದ ದೇವಗಿರಿ ಜೀವನ ವೈವಿಧ್ಯ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಸ್ಥಳೀಯ ದಾಖಲಾತಿ ಎಚ್ಚರದ ಹಾಗೂ ಸವಾಲಿನ ಕೆಲಸ. ದೇವಗಿರಿ ಪಂಚಾಯತ್ ವ್ಯಾಪ್ತಿಯ ಸಾಧಕರ, ಯೋಧರ, ಸಮುದಾಯದ ಬದುಕಿನ ಚಿತ್ರಣಗಳನ್ನು ಕಟ್ಟಿ ಕೊಡುವಲ್ಲಿ ದೇವಗಿರಿ ಸಂಗ್ರಹ ಯೋಗ್ಯ ಕೃತಿಯಾಗಿದೆ. ಗ್ರಾಮೀಣ ಪ್ರದೇಶದ ಭಾಷೆ,ಸಂಸ್ಕೃತಿ, ಸಂಪ್ರದಾಯಗಳೆಲ್ಲವೂ ಜೀವಂತವಾಗಿದ್ದಂತೆ ಕಂಡುಬರುವ ಈ ಕೃತಿಯು ಮುಂದಿನ ಪೀಳಿಗೆಯವರಿಗೆ ಇಂದಿನ ಇತಿಹಾಸ ತಿಳಿದುಕೊಳ್ಳಲು ಸಾಧ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಶಾಸಕ ದಿನಕರ್ ಶೆಟ್ಟಿ ಮಾತನಾಡಿ, ಒಂದು ಸ್ಥಳದ ಬಗ್ಗೆ ಕ್ಷೇತ್ರ ಸಂಶೋಧನೆ ನಡೆಸಿ ರಚಿಸಿರುವ ಕೃತಿಯು ಐತಿಹಾಸಿಕ ಮಹತ್ವ ಪಡೆಯುವುದರ ಮೂಲಕ ಕೃತಿಕಾರದ ಹೆಸರು ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯ.ಇಂತಹ ಪ್ರಯತ್ನ ಎಲ್ಲ ಊರುಗಳಲ್ಲಿ ನಡೆದರೆ ಮುಂದಿನ ಜನಾಂಗಕ್ಕೆ ಇಂದಿನ ಇತಿಹಾಸ ತಿಳಿಸಲು ಸಾಧ್ಯ ಎಂದರು.

ದೇವಗಿರಿ ಕೃತಿಯ ಒಳನೋಟದ ಕುರಿತು ಡಾ. ಸೈಯದ್ ಜಮೀರುಲ್ಲಾ ಶರೀಫ್ ಮಾತನಾಡಿ, ಕಾಲ್ಪನಿಕವಾಗಿರುವ ದೃಶ್ಯಗಳನ್ನು ಸೆರೆಹಿಡಿಯದೇ, ವಾಸ್ತವಿಕವಾಗಿ ಇರುವ ಸತ್ಯದ ಸಂಗತಿಯ ಹುಡುಕಾಟದ ಪ್ರಯತ್ನದ ಫಲವೇ ದೇವಗಿರಿ. ದೀಪದ ಅಡಿಯಲ್ಲಿ ಕತ್ತಲೆಯ ಬೆಳಕು,ಕತ್ತಲೆಯಲ್ಲಿ ಬೆಳಕನ್ನು ಹುಡುಕುವ ಕೆಲಸ ಪಿ.ಆರ್. ನಾಯ್ಕರಿಂದ ಆಗಿದೆ. ಹಿತ್ತಲ ಗಿಡ ಮದ್ದಾಗಿದೆ ಎನ್ನುವುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಗ್ರಾಮಗಳ ಒಳ ಹೊರಗಿನ ಸಾಂಸ್ಕೃತಿಕ ದರ್ಶನ ಮಾಡಿಸುವ ಈ ಕೃತಿ ವಿಶ್ವ ವಿಖ್ಯಾತ ಪ್ರತಿಭೆಗಳು ಹುಟ್ಟುವುದು ಗ್ರಾಮಗಳಲ್ಲಿ, ಸಂಸ್ಕೃತಿಯ ತಾಯಿ ಬೇರು ಇರುವುದು ಗ್ರಾಮಗಳಲ್ಲಿ ಎಂದು ಗ್ರಾಮಗಳನ್ನು ಕಡೆಗಣಿಸುವವರನ್ನು ಎಚ್ಚರಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿ ರೋಹಿದಾಸ ನಾಯಕ ಮಾತನಾಡಿ, ಓರ್ವ ಶಿಕ್ಷಕ ಇಡೀ ದೇವಗಿರಿ ಪಂಚಾಯತ್ ವ್ಯಾಪ್ತಿಯ ಚರಿತ್ರೆಯನ್ನು ಬಯಸುವುದಾದರೆ, ಜಿಲ್ಲೆಯಲ್ಲಿರುವ ಶಿಕ್ಷಕರು ತಮ್ಮ ತಮ್ಮ ಕ್ಷೇತ್ರದ ಪರಿಚಯ ಮಾಡಿಕೊಟ್ಟರೆ ಇಡೀ ಜಿಲ್ಲೆಯ ಚಿತ್ರಣ ಕಣ್ಮುಂದೆ ಬರಲು ಸಾಧ್ಯ ಎಂದರು.
ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವ್ಕರ್ ಮಾತನಾಡಿ, ಶಿಕ್ಷಣದ ನೀತಿ ಬರೇ ಪುಸ್ತಕದಲ್ಲಿದ್ದರೆ ಸಾಲದು. ಅದು ಇಡೀ ದೇಶಕ್ಕೆ ಏಕ ರೂಪವಾಗಿರಬೇಕು ಎಂಬುದು ಅಭಿಮತ. ಶಿಕ್ಷಣ ನೀತಿಯ ಈ ತಾರತಮ್ಯವು ಶಿಕ್ಷಣ ಸುಧಾರಣೆಗೆ ಹಿನ್ನಡೆಯಾಗಿದೆ ಎಂದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ರತ್ನಾ ಸುರೇಶ ಹರಿಕಾಂತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಲ್.ಭಟ್, ಕ್ಷೇತ್ರ ಸಮನ್ವಯಾಧಿಕಾರಿ ರೇಖಾ ನಾಯ್ಕ, ಉಪಾಧ್ಯಕ್ಷ ಎಸ್. ಟಿ. ನಾಯ್ಕ, ಸ್ವರ್ಣ ಲೇಟೆಕ್ಸ್ ಮಾಲೀಕರಾದ ಮಂಜುನಾಥ ಭಟ್, ಸಾಹಿತಿ ಡಾ. ಎಸ್. ಡಿ. ಹೆಗಡೆ, ಶಿಕ್ಷಕ ಸಂಘದ ಗೌರವಾಧ್ಯಕ್ಷ ಸುದೀಶ್ ಎಸ್. ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷರಾದ ರವೀಂದ್ರ ಭಟ್ ಸೂರಿ, ಎಂ.ಜಿ.ನಾಯ್ಕ, ವಿ.ಕೆ.ಭಟ್ಟ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನಯ್ ಕುಮಾರ್ ನಾಯ್ಕ ಮಾತನಾಡಿದರು.

ಪ್ರಾರಂಭದಲ್ಲಿ ಕೃತಿಕಾರ ಪಿ. ಆರ್. ನಾಯ್ಕ ಸ್ವಾಗತಿಸಿದರು. ಶಿಕ್ಷಕ ಸಂಘದ ಸುರೇಶ ನಾಯ್ಕ ನಿರೂಪಿಸಿದರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*