ಶ್ರೀಅರವಿಂದರ “ಸಾವಿತ್ರಿ” ಪುಟ್ಟು ಕುಲಕರ್ಣಿಯವರ ಒಂದು ಕವಿತೆ

ಕಲ್ಯಾಣಕಾಗಿ ಉತ್ಕಂಠ ಸ್ಪಂದ ಅವನೀಗ ದರ್ಶಗೊಂಡು,
ತಾರಕದಿ-ಮುರಲಿ ನಾದವನು ಸೃಜಿಸಿ ಸಂಯೋಗ ಹೊಂದಲೆಂದು
ಮುದ-ಮೋದ – ಸ್ವನದ ಆತ್ಮ-ಸಂಗಾತಿಯಾಂತರ್ಯ ತುಡಿತ ಕಂಡು,
ನೀಲಕಂಠಗರಿ ಅವನ-ಶಿರ-ಕವಚ , ತರು-ಮರದಿ ಅರಳಿ ಇಂದು // 1//
ತಪ್ತ ಭಾವದಾ ಅವನ ಉಸಿರೀಗ ತೋಷಕ್ಕೆ ಕರೆಯ ಪೋಷ,
ನೀಲಲೋಹಿತದ ಘನಸಾಂದ್ರ ಭೋಗದಾಲೋಕವವನ ಕೋಶ.
ದಿವಿಜ-ಕೋಮಲದ ಭೂಮದಾಭೀಪ್ಸೆ ರಕ್ತಕ್ಕು ರಂಗು ತಂದು
ಪ್ರಕೃತಿ ಸಹಜದಾ ದೇವ –ಇಂದ್ರಿಯದ- ತೋಷಗಳು ಘನದಿ ನಿಂದು. //2//
ರಮಣೀಯವಾಗಿ ತಾ ದೃಷ್ಟವೀಗ , ಮೋಹನದ ಸ್ವರದ ತಾಲ
ಆರೋಹ ಮತ್ತೆ ಅವರೋಹದಲ್ಲಿ ಲೋಕಾತಿಲೋಕ ಲೀಲ
ಪರಮೋಚ್ಚ ಪುಲಕ ಹರ್ಷಾತಿರೇಕ ಜೀವನದಿ ಸಲಿಲವಾಗಿ
ಇದು ನಿಯತಿಲಿಖಿತ ಆಧಾರಭೂತ ಸಾರ್ಥಕಕೆ ಖಾತ್ರಿಯಾಗಿ //3//
ಸಾವಿರದ ಚಲನಗಳು ತುಡಿತದಲ್ಲಿ ಸ್ಪರ್ಶಿಸಿತು ಘಳಿಗೆಗಳನು
ಶೀಘ್ರಾತಿಶೀಘ್ರದಲಿ ಚಲಿತ ಕ್ಷಣದ-ಭಂಗುರದ ಭಾವಗಳನು.
ಚಂಡವೇಗದಾ ಅರಿವಿಗೀಗಿಲ್ಲಿ ಆ-ಕವಚ ದೇವಸದೃಶ
ಆವರಿಸಿ ತಾನು ಅನುಭಾವಗೊಳಿಸೆ ಭವದ ನಿತ್ಯದಾವೇಶ //4//
ಉಸಿರುಸಿರಿಗೀಗ ಅದ ಕುಸುರಿಗೊಳಿಸಿ ಸಂತೃಪ್ತಿ ಅಲೆಗಳಲ್ಲಿ
ಉತ್ಕಟದ ತೃಪ್ತಿಗಾ-ಕೃತಿಯ ಪ್ರತಿಮೆ ಪಡಿಮೂಡಿಸುತ್ತ ಅಲ್ಲಿ;
ಸರ್ವಾಂಗವೀಗ ಸರ್ವಾತಿಸರ್ವ ಸಾದೃಶ್ಯ ಪರ್ವವಾಗಿ
ಜೊತೆ ಸರ್ವ ನಾದ ಸಂಯೋಗವೀಗ ಏಕೈಕ್ಯ ಚಿತ್ತವಾಗಿ. //5//

[ದಳ 4 ರೇಣು 1 ಪುಟ 351]

-ಪುಟ್ಟು ಕುಲಕರ್ಣಿ


About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*