ದಾಂಡೇಲಿ: ಕೊನೆಗೂ ಕೋಗಿಲಬನ ರುದ್ರಭೂಮಿಯಲ್ಲೊಂದು ಸುಸಜ್ಜಿತವಾದ ಶವಸಂಸ್ಕಾರ ಕಟ್ಟಡ ನಿರ್ಮಾಣಗೊಂಡಿದ್ದು, ದಾಂಡೇಲಿಗರ ಬಹುದಿನಗಳ ಬೇಡಿಕೆ ಕಾಗದ ಕಾರ್ಖಾನೆಯವರಿಂದ ಈಡೇರುವಂತಾಗಿದೆ.
ದಾಂಡೇಲಿಯಲ್ಲಿ ಪಟೇಲ ನಗರ ಮತ್ತು ಕೋಗಿಲಬನದಲ್ಲಿ ಪ್ರತ್ಯೇಕ ರುದ್ರಭೂಮಿಗಳಿವೆ. ಪಟೇಲನಗರದ ಹಿಂದೂ ರುದ್ರಭೂಮಿಗೆ ನಗರಸಭೆಯಿಂದ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಕೋಗಿಲಬನದ ರುದ್ರಭೂಮಿ ಹಲವು ಸೌಕರ್ಯಗಳ ಕೊರತೆಯಿಂದ ಕೂಡಿತ್ತು. ಇಲ್ಲಿ ಶವ ಹೂಳುವ ಹಾಗೂ ಸುಡುವ ಎರಡೂ ವ್ಯವಸ್ಥೆ ಇತ್ತು. ಆದರೆ ಇಲ್ಲಿ ಶವ ಸಂಸ್ಕಾರಕ್ಕೆ ಯಾವುದೇ ರೀತಿಯ ಅವಶ್ಯ ವ್ಯವಸ್ಥೆಗಳಿರಲಿಲ್ಲ. ಖಾಲಿ ಜಾಗದಲ್ಲಿ ಒಟ್ಟಾರೆ ಶವಸಂಸ್ಕಾರ ಮಾಡಿ ಬರುವಂತಹ ಅನಿವಾರ್ಯ ಪರಿಸ್ಥಿತಿ ಇತ್ತು. ಮಳೆಗಾಲ ದಲ್ಲಂತೂ ಇಲ್ಲಿಯ ಕಷ್ಟ ಹೇಳತೀರದಾಗಿತ್ತು. ಶವಸಂಸ್ಕಾರದ ಸಂದರ್ಭದಲ್ಲಿ ಮಳೆ ಬಂದರಂತೂ ಅಂತ್ಯಸಂಸ್ಕಾರಕ್ಕೆ ಬಹಳವೇ ಕಷ್ಟವಾಗುತ್ತಿತ್ತು.
ಜೊತೆಗೆ ಇಲ್ಲಿ ಶವ ಸಂಸ್ಕಾರ ನಡೆಸಿ ಹೋದಮೇಲೆ ಸ್ವಚ್ಛಗೊಳಿಸುವವರು ಯಾರೂ ಇರಲಿಲ್ಲ . ಒಮ್ಮೆ ನಡದ ಅಂತ್ಯಸಂಸ್ಕಾರದ ಸ್ಥಳದಲ್ಲಿಯೇ ಮತ್ತೊಮ್ಮೆ ಬೇರೆಯವರು ಅಂತ್ಯಸಂಸ್ಕಾರವನ್ನು ಮಾಡುವಂಥ ಸ್ಥಿತಿ ಕೂಡ ಇತ್ತು . ಬೆಳಕಿನ, ನೀರಿನ ಸಮಸ್ಯೆಯೂ ಇತ್ತು. (ರಸ್ತೆ ಹಾಗೂ ಕೆಲ ವ್ಯವಸ್ಥೆಯನ್ನು ಕೋಗಿಲಬನ ಪಂಚಾಯತ ಮಾಡಿತ್ತು) ಈ ಎಲ್ಲ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ಹಲವು ಬಾರಿ ಆಡಳಿತಕ್ಕೆ ಮನವಿಯನ್ನು ಕೂಡ ನೀಡಿದ್ದರು. ಮೂಲ ಸೌಕರ್ಯಗಳನ್ನು ಒದಗಿಸುವಂತೆ ಮನವಿ ಯನ್ನು ಕೂಡ ಮಾಡಿಕೊಂಡಿದ್ದರು. ಆದ್ರೆ ಅದ್ಯಾಕೋ ಸಾಧ್ಯವಾಗಿರಲಿಲ್ಲ.
ಕೆಲ ವರ್ಷಗಳ ಹಿಂದೆ ಇಲ್ಲಿ ರುದ್ರಭೂಮಿ ಅಭಿವೃದ್ಧಿ ಟ್ರಸ್ಟ್ ಕಮಿಟಿ ಎಂಬುದು ಅಸ್ತಿತ್ವಕ್ಕೆ ಬಂದಿತ್ತು. ಅದರ ನೇತೃತ್ವ ವಹಿಸಿದ ಪ್ರಕಾಶ ಬೆಟ್ಕರವರು ಇಲ್ಲೊಂದು ರುದ್ರಭೂಮಿಯ ಕಟ್ಟಡ ನಿರ್ಮಿಸುವ ವಿಚಾರ ಮಾಡಿದ್ದರು. ಆದರೆ ಅದು ಅವರಿಂದ ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ತಮ್ಮ ವಿಚಾರವನ್ನು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆಡಳಿತ ಮಂಡಳಿಯ ಬಳಿ ಹೇಳಿಕೊಂಡಾಗ ಕಂಪನಿಯವರು ಅದರ ಎಲ್ಲ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿ ಹೊತ್ತರು. ಇದೀಗ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅವರ ಮಾರ್ಗದರ್ಶನದಲ್ಲಿ ಒಂದು ವರುಷದೊಳಗೆ ಉದ್ದೇಶಿತ ಕಟ್ಟಡ ನಿರ್ಮಾಣವಾಗಿದೆ. ಈ ಭಾಗದ ಜನರ ಬೇಡಿಕೆಯಾಗಿದ್ದ ಅಂತ್ಯಸಂಸ್ಕಾರಕ್ಕೆ ಅನುಕೂಲವಾಗುವಂತಹ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ.
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ತನ್ನ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ಸರಿ ಸುಮಾರು 17 ಲಕ್ಷ ರುಪಾಯಿಗಳ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಿದ್ದು, ಕಟ್ಟಡದೊಳಗೆ ವಿಶಾಲವಾದ ಜಾಗದ ವ್ಯವಸ್ಥೆಯಿದೆ. ಎಂತಹದ್ದೇ ಮಳೆ ಬಂದರೂ ಅಂತ್ಯಸಂಸ್ಕಾರಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಮೇಲ್ಚಾವಣಿ ಹೊದಿಸಲಾಗಿದೆ. ಒಂದೇ ಕಟ್ಟಡದೊಳಗಡೆ 2 ಕಡೆ ಅಂತ್ಯಕ್ರಿಯೆ ನಡೆಸುವಂತಹ ವ್ಯವಸ್ಥೆ ಮಾಡಲಾಗಿದೆ. ಕಡಿಮೆ ಕಟ್ಟಿಗೆಯನ್ನು ಬಳಸಿ ಅಂತ್ಯಸಂಸ್ಕಾರ ನಡೆಸುವ ವ್ಯವಸ್ಥೆ ಇಲ್ಲಿದ್ದು ಕಬ್ಬಿಣದ ಸರಳುಗಳನ್ನು ಬಳಸಿ ಸುಲಭ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಅವಶ್ಯವಿರುವ ವಿದ್ಯುತ್ ದೀಪವನ್ನು ಅಳವಡಿಸಲಾಗಿದೆ .ಅಲ್ಲಿಯೇ ಪಕ್ಕದಲ್ಲಿ ಅಂತ್ಯಸಂಸ್ಕಾರಕ್ಕೆ ಬಂದು ನಂತರ ಕೈ ಕಾಲು ಕೈತೊಳೆದುಕೊಳ್ಳಲು ನೀರಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಅಷ್ಟೇ ಅಲ್ಲ ಅಂತ್ಯಸಂಸ್ಕಾರದ ವೇಳೆ ಬರುವ ಜನರಿಗೆ ಅಂತ್ಯಸಂಸ್ಕಾರ ಮುಗಿಯೋರು ಕುಳಿತುಕೊಳ್ಳುವ ಅನೇಕರಿಗೆ ಅನುಕೂಲವಾಗಲೆಂದು ಹೊರ ಆವರಣದಲ್ಲಿ ಸಿಮೆಂಟಿನ ಆಸನ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಒಟ್ಟಾರೆಯಾಗಿ ಶವಸಂಸ್ಕಾರಕ್ಕೆ ಬರುವ ಸಾರ್ವಜನಿಕರಿಗೆ ಉಪಯೋಗವಾಗುವ ಎಲ್ಲ ರೀತಿಯ ಅವಶ್ಯಕತೆಗಳನ್ನು ಒದಗಿಸಿ ನಿರ್ಮಾಣಗೊಂಡಿರುವ ಈ ಶವಸಂಸ್ಕಾರ ಕಟ್ಟಡ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುವ ಸಿದ್ಧತೆಯಲ್ಲಿದೆ.
ಕಂಪನಿಯ ಕಾರ್ಯಕ್ಕೆ ಶ್ಲಾಗನೆ
ಸರಕಾರ ಅಥವಾ ಸ್ಥಳೀಯ ಆಡಳಿತದವರು ಮಾಡಬೇಕಾಗಿದ್ದ ಕಾರ್ಯವನ್ನು ಖಾಸಗಿ ಕಂಪನಿಯೊಂದು ಮಾಡಿದ್ದು (ವೆಸ್ಟ್ ಕೋಸ್ಟ್ ಪೇಪರ್ ಮಿಲ್ ) ಕಂಪನಿಯ ಈ ಜನುಪಯೋಗಿ ಕಾರ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದೆ. ಜೊತೆಗೆ ಸಾರ್ವಜನಿಕರ ಬೇಡಿಕೆಯಂತೆ ಕಡಿಮೆ ಅವಧಿಯಲ್ಲಿ ಶವಸಂಸ್ಕಾರ ಕ್ಕೆ ಅನುಕೂಲವಾಗುವ ಕಟ್ಟಡ ನಿರ್ಮಿಸಿ ಕೊಟ್ಟ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.
ಜನರ ಅನುಕೂಲಕ್ಕೆ ಸೇವಾ ಕಾರ್ಯ
ಕೋಗಿಲಬನದ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಒಂದು ಕಟ್ಟಡವನ್ನು ನಿರ್ಮಿಸುವಂತೆ ಸಾರ್ವಜನಿಕರು ಹಾಗೂ ರುದ್ರಭೂಮಿ ಅಭಿವೃದ್ಧಿ ಟ್ರಸ್ಟ್ ಕಮಿಟಿಯವರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಅವರ ಮಾರ್ಗದರ್ಶನದಂತೆ ಸುಮಾರು ಹದಿನೇಳು ಲಕ್ಷ ರುಪಾಯಿಗಳ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅವಶ್ಯವಿರುವ ಎಲ್ಲ ವ್ಯವಸ್ಥೆಗಳನ್ನು ನೀಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಸೇವಾ ಕಾರ್ಯವನ್ನು ಮಾಡಲಾಗಿದೆ. –ರಾಜೇಶ್ ತಿವಾರಿ ಸಾರ್ವಜನಿಕ ಸಂಪರ್ಕಾಧಿಕಾರಿಗಳು, ಕಾಗದ ಕಾರ್ಖಾನೆ ದಾಂಡೇಲಿ
ಬಹುದಿನಗಳ ಬೇಡಿಕೆ ಈಡೇರಿದೆ
ಕೋಗಿಲಬನ ರುದ್ರಭೂಮಿಯಲ್ಲಿ ಹಲವು ಸಮಸ್ಯೆಗಳಿದ್ದವು. ಅಂತ್ಯಕ್ರಿಯೆಯ ಸಂದರ್ಭದಲ್ಲಿ ಕೂಡ ಸಾಕಷ್ಟು ಸಮಸ್ಯೆಗಳ ಆಗುತ್ತಿತ್ತು. ಇದನ್ನು ಮನಗಂಡ ನಮ್ಮ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ಜನರ ಬೇಡಿಕೆಯಂತೆ ಕಟ್ಟಡವನ್ನು ನಿರ್ಮಿಸಿ ಕೊಟ್ಟು ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ನಿಜಕ್ಕೂ ಅವರ ಕಾರ್ಯ ಶ್ಲಾಘನಾರ್ಹವಾದುದು. ಉಳಿದಂತೆ ಅವಶ್ಯ ಸೌಕರ್ಯ ಒದಗಿಸಲು ಕೋಗಿಲಬನ ಗ್ರಾಮ ಪಂಚಾಯಿತಿ ಕೂಡ ತನ್ನ ಮಿತಿಯಲ್ಲಿ ಪ್ರಯತ್ನಿಸುವುದು. –ಅಶೋಕ ನಾಯ್ಕ, ಅಧ್ಯಕ್ಷರು -ರಮೇಶ ನಾಯ್ಕ, ಸದಸ್ಯರು ಗ್ರಾಮ ಪಂಚಾಯತ ಕೋಗಿಲಬನ
Be the first to comment