ಕಾಡಿನೊಳಗಿನ ಬುಡಕಟ್ಟು ಕುಣಬಿ ಕಲಾವಿದನನ್ನು ಅರಸಿ ಬಂದ ರಾಜ್ಯೋತ್ಸವ ಪ್ರಶಸ್ತಿ

?

ಬುಡಕಟ್ಟು ಕುಣಬಿ ಸಮುದಾಯದ ಹಿರಿಯ ಜಾನಪದ ಕಲಾವಿದ, ಹಾಡುಗಾರ, ತಮ್ಮ ಜನಪದರ ರಾಮಾಯಣವನ್ನು ನಿರಂತರ 24 ಘಂಟೆಗಳ ಕಾಲ ಹಾಡ ಬಲ್ಲಂತಹ ಜನಪದ ವಿದ್ವಾಂಸ ಜೋಯಿಡಾದ ಮಾದೇವ ವೇಳಿಪರು ಕರ್ನಾಟಕ ಸರಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಬರಲು ಇವರಿಗೆ ಒಂದಿಷ್ಟು ತಡವಾಯಿತಲ್ಲಾ ಎಂದೆನಿಸಿದರೂ ಬಂತಲ್ಲಾ ಎಂಬ ನೆಮ್ಮದಿಯಿದೆ.


ಹಾಗೆ ನೋಡಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಪ್ರಶ್ತಿಗೆ ಅರ್ಹರಾದರವರು ಇನ್ನೂ ಸಾಕಷ್ಟು ಜನರಿದ್ದಾರೆ. ಸಾಹಿತ್ಯ, ಸಾಂಸ್ಕøತಿಕ, ಮಾದ್ಯಮ, ಸೇವೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಸಾಕಷ್ಠು ಸಾಧಕರಿದ್ದಾರೆ. ಅವರ ಸಾಲಿನಲ್ಲಿ ಮಾದೇವ ವೇಳಿಪನಂತರ ಬಡ ಕಲಾವಿದ ಕೂಡಾ ಸೇರಿಕೊಂಡಿದ್ದಾನೆಂಬುದೇ ಹೆಮ್ಮೆಯ ಸಂಗತಿ.

ಮಾದೇವ ಬುಧೋ ವೇಳಿಪ

ಜೋಯಿಡಾದ ಕಾರ್ಟೋಳಿ ಎಂಬ ಕಾಡ ನಡುವಿನ ಕುಗ್ರಾಮದವರಾಗಿರುವ ಮಾದೇವ ಬುಧೋ ವೇಳಿಪರಿಗೆ ಈಗ 85 ವರ್ಷ. ಇವರು ಯಾವುದೇ ಶಿಕ್ಷಣ ಕಲಿತವರಲ್ಲ. ಪರಂಪರಾಗತವಾಗಿ ಬಂದ ಜನಪದವನ್ನೇ ತಮ್ಮ ಕಲೆಯನ್ನಾಗಿಸಿಕೊಂಡಿರುವ ಇವರು ಯಾವ ವಿದ್ವಾಂಸರ ವಿದ್ವತ್ತಿಗೂ ಕಡಿಮೆಯಿಲ್ಲದಂತವರು. ರೈತಾಬಿಯನ್ನೆ ಬದುಕಿನ ಕಸುಬನ್ನಾಗಿಸಿಕೊಂಡು ಜೀವನ ನಡೆಸಿಕೊಂಡು ಬರುತ್ತಲೇ, ತಮ್ಮೊಳಗಿದ್ದ ಜಾನಪದ ಕಲೆಯನ್ನು ಬಿಚ್ಚಿಟ್ಟವರು. ಬುಡಕಟ್ಟುಗಳಾಗಿರುವ ಕುಣಬಿಗಳ ಬದುಕಿನ ವೈವಿದ್ಯತೆ, ವಿಶೇಷತೆ, ಸಾಂಸ್ಕøತಿಕ ಸೊಗಡನ್ನು ಕಾಪಿಟ್ಟುಕೊಂಡು ಬಂದವರು.

ಕೈಯ್ಯಲ್ಲೊಂದು ಕೋಲು, ತಲೆಗೊಂದು ಮುಂಡಾಸು, ಒಂದು ಅಂಗಿ, ಚಡ್ಡಿ ಅಥವಾ ಕಚ್ಛೆ, ತೊಟ್ಟುಕೊಂಡೇ ಊರು, ದೇಶ ಸುತ್ತುವ ಈ ಸರಳ ಜೀವಿ ಮಾದೇವ್ ವೇಳಿಪರು ಜೋಯಿಡಾದ ಜನತೆಗೆ ‘ಮಾದೇವ ಮಾಮಾ’ ಎಂದೇ ಪರಿಚಿತರು. ಕುಣಬಿ ಸಂಪ್ರದಾಯದ ಸುಗ್ಗಿಪದ, ಸೊಂಗೊ, ತುಳಸಿಹಬ್ಬದ ಹಾಡು, ರಾಮಾಯಣ, ಮಹಾಭಾರತ, ಪಂಡರಾಪುರದ ವಿಠೋಬನ ಹಾಡು, ನೌಮಿ ಹಾಡು…. ಹೀಗೆ ಹಲವಾರು ಜನಪದದ ಸೊಗಡುಗಳು ಇವರೊಲಗೆ ತುಬಿಕೊಂಡಿವೆ. ಮಾದೇವ ಮಾಮ ನಿಜಕ್ಕೂ ಜಾನಪದ ಲೋಕದ ಒಂದು ಜೀವಂತ ಸಂಪತ್ತು.

?

ತುಳಸಿ ಹಬ್ಬ ಬಂತೆಂದರೆ ಇವರು ಇಪ್ಪತ್ನಾಲ್ಕು ಗಂಟೆಗಳ ಕಾಲ ನಿರಂತರ ಹಾಡುತ್ತಾರೆ. ತುಳಸಿ ಕಟ್ಟೆಯನ್ನು ತಿರುಗುತ್ತಾ ಒಂದು ನಿಮಿಷವೂ ನಿದ್ರಿಸದೇ ಈಗಲೂ ಹಾಡುವುದರಲ್ಲಿ ಸಂಭ್ರಮಿಸುತ್ತಾರೆ. ಇದು ಜಾನಪದ ಆಚರಣೆ ಹಾಡುಗಳನ್ನು ಮುಂದಿನ ತಲೆ ಮಾರಿಗೆ ಮುಟ್ಟಿಸುವ ರೀತಿ ಕೂಡ ಎಂದರೆ ತಪ್ಪಾಗಲಾರದು. ಕುಣಬಿ ಜಾನಪದ ಕಲೆ ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವಂತೆ ಮಾಡಲು ಶ್ರಮಿಸಿ, ವಿವಿಧ ಅಧ್ಯಯನ ತಂಡಗಳು ಬಂದಾಗ ಸಹಕಲಾವಿದರನ್ನು ಸೇರಿಸಿ ಪ್ರದರ್ಶನ ನೀಡಿದ್ದಾರೆ. ಜೋಯಿಡಾದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರಿನಲ್ಲಿ 2009ರಲ್ಲಿ ಜರುಗಿದ ರಾಜ್ಯಮಟ್ಟದ ಆದಿವಾಸಿ ಸಮಾವೇಶ, ಸಹಯಾನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಕುಣಬಿ ರಾಮಾಯಣ ಪ್ರಸ್ತುತ ಪಡಿಸಿದ್ದಾರೆ. ಕದಂಬೋತ್ಸವ ಹಾಗೂ ಜೋಯಿಡಾದಲ್ಲಿ ರಾಜ್ಯ ಸರ್ಕಾರದಿಂದ ಗಡಿ ಉತ್ಸವ ನಡೆದಾಗ ಕಲಾತಂಡದೊಂದಿಗೆ ಪಾಲ್ಗೊಂಡಿದ್ದಾರೆ. ಇಂತಹ ಹಲವರು ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿರುವ ಅವರು ಇಳಿವಯಸ್ಸಿನಲ್ಲಿಯೂ ಕಲಾ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅವರ ವಿಶೇಷತೆಯಾಗಿದೆ.

ಕರ್ನಾಟಕ ಜಾನಪದ ಪರಿಷತ್ತು ಮೈಸೂರಿನ ಜಾನಪದ ಲೋಕಕ್ಕೆ ಕರೆದು ‘ಜಾನಪದ ಲೋಕ’ ರಾಜ್ಯ ಮಟ್ಟದ ಪ್ರಶಸ್ತಿ, ಕರ್ನಾಟಕ ಕೊಂಕಣಿ ಅಕಾಡೆಮಿಯ ಜೀವ ಮಾನ ಸಾಧನೆಯ ಗೌರವ ಪ್ರಶಸ್ತಿ ಪಡೆದಿರುವ ಇವರಿಗೆ ಇದೀಗ ಈ ಎಲ್ಲ ಪ್ರಶಸ್ತಿಗಳಿಗೊಂದು ಕಿರೀಟ ಎಂಬ ರೀತಿಯಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಬಂದಿರುವುದು ನಿಜಕ್ಕೂ ಸಕಾಲಿಕವೂ, ಸ್ವಾಗತಾರ್ಹವೂ ಆಗಿದೆ. ಅಭಿನಂದನೆಗಳು ಬುಡಕಟ್ಟು ಜನಪದ ಕಲಾವಿದ ಮಾದೇವ ಮಾಮಾನಿಗೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*