ಸುದೀಶ… ಈ ಹೆಸರು ಹೊನ್ನಾವರ ತಾಲೂಕಿನ ಇತಿಹಾಸದಲ್ಲಿ ಸದಾ ನೆನಪು ಉಳಿಯುವ ಹೆಸರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಅವರು ಸಲ್ಲಿಸಿದ ಸೇವೆ ಅಪರಿಮಿತ . ವಿಶ್ವಾಸ, ನಂಬಿಕೆಗೆ , ಆದರಾತಿಥ್ಯತೆಗೆ , ಗೆಳೆತನಕೆ, ಒಳಿತಾದ ಒಡನಾಟಕೆ ಇವರೊಬ್ಬ ಮಾದರಿಯ ಅಭಿಜಾತ ಗುಣದವರು. ಇಂಥವರು ಅಪರೂಪ. ಹೊನ್ನಾವರ ತಾಲೂಕಿನಲ್ಲಿ ಶಿಕ್ಷಕ ವೃತ್ತಿಯ ಜೊತೆಗೆ ಸಂಘದ ಸದಸ್ಯರಾಗಿ ಶಿಕ್ಷಕರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ತಾಲೂಕಿನಾದ್ಯಂತ ಜನಮನ್ನಣೆ ಗಳಿಸಿದವರು.
ಸುದೀಶ ನಾಯ್ಕ ಕುಮಟಾ ತಾಲೂಕಿನ ಹೊಳೆಗದ್ದೆಯ ಶಂಕರ ನಾಯ್ಕ, ತಾಯಿ ಗಿರಿಜಾ ನಾಯ್ಕರವರ ಮುದ್ದಿನ ಮಗನಾಗಿ ೧೯೭೨ ರಲ್ಲಿ ಜನಿಸಿದರು. ಬಾಲ್ಯದ ಶಿಕ್ಷಣವನ್ನು ಪೂರೈಸಿ ೧೯೯೨ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಹೊನ್ನಾವರ ತಾಲೂಕಿನಾದ್ಯಂತ ಶಿಕ್ಷಕ ವೃತ್ತಿ ಕೈಗೊಂಡು ಚಿರಪರಿಚಿತರಾದರು. ಶಿಕ್ಷಕ ವೃತ್ತಿಯ ಜೊತೆಗೆ ಸಾಮಾಜಿಕ ಸಂಘಟನೆಯಲ್ಲೂ ತೊಡಗಿಸಿಕೊಂಡವರು. ಅಲ್ಲಲ್ಲಿ ನಿರೂಪಕರಾಗಿ ತಮ್ಮ ಜಾಣ್ಮೆಯನ್ನು ಪ್ರದರ್ಶಿಸಿದರು.
ಸುದೀ….ಈ ಹೆಸರಿನಲ್ಲಡಗಿದೆ ಬುದ್ಧಿವಂತ, ಪಂಡಿತ ಎಂದು. ಕಲೆ-ಸಾಹಿತ್ಯ, ನಾಟಕ, ಸಂಘಟನೆ , ನಿರೂಪಣೆ, ಅಧ್ಯಾಪನೆ, ಉಪನ್ಯಾಸಕ, ಅಧಿಕಾರಿ….. ಒಂದೇ…ಎರಡೇ… ಇವೆಲ್ಲದರ ಸಮ್ಮಿಳಿತವೇ ಬಹುಮುಖ ಪ್ರತಿಭೆ. ಆಚರಣೆ, ಅನುಭವ, ಅಹ೯ತೆ, ಯೋಗ್ಯತೆ ಮೂಲಕ ಬಹುಮುಖ ವ್ಯಕ್ತಿತ್ವದೊಂದಿಗೆ ಸಾಮಾಜಿಕ-ಸಾಂಸ್ಕೃತಿಕ ಹರಿಕಾರರಾಗಿ ಹೊನ್ನಾವರ ತಾಲೂಕಿನ ಯುವಜನ ಸೇವಾ ಕ್ರೀಡಾ ಅಧಿಕಾರಿಯಾಗಿ ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವುದು ಇವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
1994 ರಿಂದ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಸದಸ್ಯರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಆ ಕ್ಷೇತ್ರಕ್ಕೆ ಬೆಳ್ಳಿಗೆರೆ ಮೂಡಿಸಿರುತ್ತಾರೆ. ಸಂಘದ ಎಲ್ಲ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವುದರ ಮೂಲಕ ಶಿಕ್ಷಕರ ಪ್ರೀತಿಗೆ ಪಾತ್ರರಾಗಿರುತ್ತಾರೆ. ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿಯಾಗಿ ಇಲಾಖೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ತಾಲೂಕಿನಾದ್ಯಂತ ಚಿರಪರಿಚಿತರಾಗಿದ್ದಾರೆ. ತ್ವರಿತವಾಗಿ ಕೆಲಸ ಮಾಡದೆ, ವಿವೇಕದಿಂದ ಕೆಲಸಮಾಡಿ ಸೈ ಎನಿಸಿಕೊಂಡ ಸುದೀಶ ನಾಯ್ಕ ರವರು ತಾಲೂಕು, ಜಿಲ್ಲಾಮಟ್ಟದಲ್ಲಿ ಉತ್ತಮ ನಿರೂಪಕರಾಗಿ ಹೆಸರು ಮಾಡಿರುತ್ತಾರೆ. ಒಂದು ಕಾರ್ಯಕ್ರಮವನ್ನು ಒಪ್ಪಿಸಿದರೆ ಅದನ್ನು ಅಚ್ಚುಕಟ್ಟಾಗಿ ಸಂಘಟಿಸುವುದರ ಮೂಲಕ ಅಧಿಕಾರಿಗಳ ಮೆಚ್ಚುಗೆಗೂ ಪಾತ್ರರಾಗಿರುತ್ತಾರೆ.
ತಾಲೂಕು, ಜಿಲ್ಲಾಮಟ್ಟದ ಯುವಜನ ಮೇಳ,ಯುವಜನೋತ್ಸವ, ಕ್ರೀಡಾಕೂಟ ಸಂಘಟಿಸಿ ಯುವಜನಾಂಗಕ್ಕೆ ಸ್ಪೂರ್ತಿಯ ಸೆಲೆಯಾಗಿರುತ್ತಾರೆ.ಜಿಲ್ಲಾಮಟ್ಟದ ಅತ್ಯುತ್ತಮ ವಾಲಿಬಾಲ್ ಕ್ರೀಡಾಪಟುವಾಗಿ ಅನೇಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರಿಗೆ ಒಲಿದ ಎಲ್ಲಾ ಸಾಧನೆಗಳು ಪ್ರಶಸ್ತಿ-ಪುರಸ್ಕಾರಗಳು ಸತತ ಪ್ರಯತ್ನದಿಂದ ಪ್ರಾಮಾಣಿಕತೆಯಿಂದ ಅವರನ್ನರಸಿ ಬಂದಿದೆ.
ಸದಾ ಹಸನ್ಮುಖಿಯಾಗಿ ಹೇಳಿದ ಕೆಲಸವನ್ನು ತಲೆಯಾಡಿಸಿ ಒಪ್ಪಿಕೊಂಡು, ಕ್ಷಣಾರ್ಧದಲ್ಲಿ ಮಾಡಿ ಮುಗಿಸುವ ಸುದೀಶ ನಾಯ್ಕರು ಯಾರೊಂದಿಗೂ ದ್ವೇಷ ಸಾಧಿಸದೇ ಸೌಹಾರ್ದತೆಯಿಂದ ಬಗೆ ಹರಿಸುವ ಜಾಣ್ಮೆಅರಿತು ನಡೆಯುವವರು. ಇತ್ತೀಚೆಗಷ್ಟೇ ಕಾರವಾರ ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾಗಿ ನೇಮಕ ಗೊಂಡಿದ್ದ ಇವರು ಇದೀಗ ಹೊನ್ನಾವರ ತಾಲೂಕಾ ಆರ್ಯ ಈಡಿಗ ನಾಮಧಾರಿ ನೌಕರರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.. ಇವರ ಕಾಲಾವಧಿಯಲ್ಲಿ ಶಿಕ್ಷಕರ ಹಾಗೂ ಎಲ್ಲ ನೌಕರರ ಸಮಸ್ಯೆಗಳು ಪರಿಹಾರವಾಗಿ ಸಮುದಾಯದಲ್ಲಿ ಹೊಸ ಆಶಾಭಾವನೆ ಮೂಡುವಂತಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ ಆಗಿದೆ.
Be the first to comment