ಒಳ್ಳೆಯತನವೇ ಸತ್ಯ ಸೌಂದರ್ಯವೆಂದು ದೃಢವಾಗಿ ನಂಬಿರುವ ಅಧ್ಯಾಪಕನ ಬಾಳಿನಲ್ಲಿ ಆಲಸ್ಯವೆಂದೂ ಸುಳಿಯಲಾರದು. ಸದಾ ಉತ್ಸಾಹ ಶೀಲ ಕಾರ್ಯತತ್ಪರತೆಯ ಮೂಲಕ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸುವಲ್ಲಿ ಇವರ ಮನಸ್ಸು ಜಾಗೃತವಾಗಿರುತ್ತದೆ. ಇಂತಹ ಜಾಗೃತ ಮನಸ್ಸಿನ ಸರದಾರ, ಸದಾ ಹೊಸ ಹೊಸ ಆಲೋಚನೆಗಳಿಗೆ, ಹೊಸತನಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ವಿಶಿಷ್ಟ ವ್ಯಕ್ತಿತ್ವ ಹೊಂದಿದವರು ಶ್ರೀ ಚೆನ್ನಕೇಶವ ಪ್ರೌಢಶಾಲಾ ಮುಖ್ಯಾಧ್ಯಾಪಕ ಲಂಬೋದರ ಮಂಜುನಾಥ ಹೆಗಡೆಯವರು.
“ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ” ಎಂಬ ಹಿರಿಯರ ಮಾತಿನಂತೆ ಲಂಬೋದರ ಹೆಗಡೆಯವರು ಬಹುದೂರದ ದಾರಿಯನ್ನು ಕ್ರಮಿಸಿದ್ದಾರೆ. ಅವರ ಶೈಕ್ಷಣಿಕ ಕಿರುದಾರಿ ತನ್ನ ಹೆಜ್ಜೆಗುರುತನ್ನು ದಾಖಲಿಸುತ್ತಾ ,ಹೆದ್ದಾರಿಯಾಗಿ ಶಿಕ್ಷಣಕ್ಕೂ ಸೈ, ಸಂಘಟನೆಗೂ ಸೈ ಎನ್ನುವಂತಾಗಿದೆ. ಇವರ ಸೇವಾವಧಿಯಲ್ಲಿ ಸತತ ಹನ್ನೆರಡು ವರ್ಷಗಳ ಕಾಲ ಎನ್.ಎಂ.ಎಂ.ಎಸ್. ವಿದ್ಯಾರ್ಥಿಗಳಿಗಾಗಿ ಸಮಪ೯ಣಾ ತರಬೇತಿ ಕೇಂದ್ರ ಪ್ರಾರಂಭಿಸಿ, ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ಉಚಿತ ತರಬೇತಿ ನೀಡಿ ಪ್ರತಿವರ್ಷ ೧೨ ರಿಂದ ೧೫ ವಿದ್ಯಾರ್ಥಿಗಳು ಶಿಷ್ಯ ವೇತನಕ್ಕೆ ಅರ್ಹತೆ ಪಡೆದಿರುವುದು ಇವರ ಶೈಕ್ಷಣಿಕ ಕಾರ್ಯಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಗ್ರಾಮೀಣ ಭಾಗದಿಂದ ಆಗಮಿಸುವ ೨೪೦ ಕ್ಕೂ ಹೆಚ್ಚು ಮಕ್ಕಳು ತೀರ ಹಿಂದುಳಿದ ಬಡಕುಟುಂಬದಿಂದ ಬಂದವರಾದರೂ ಎಸ್.ಎಸ್.ಎಲ್.ಸಿ.ಯಲ್ಲಿ ಈ ಶಾಲೆಯ ಫಲಿತಾಂಶ ಶೇಕಡಾ ೮೦ ಕ್ಕೂ ಅಧಿಕವಾಗಿರುತ್ತದೆ. ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಒಂದು ಪ್ರೌಢಶಾಲೆಯ ಸಹಾಯಕ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತ್ತಾ ಅವರ ಬದುಕಿನಲ್ಲಿ ನೆನಪುಳಿಯುವ ವ್ಯಕ್ತಿಯಾಗಿ, ಶಕ್ತಿಯಾಗಿ ತ್ರಿಭಾಷಾ ಬಲ್ಲವರಾದ ಲಂಬೋದರ ಹೆಗಡೆಯವರು ದೈತ್ಯ ಪ್ರತಿಭೆ. ಅದ್ಭುತವಾದ ಕೃತಿ ಶಕ್ತಿ. ಎಲ್ಲವನ್ನು ಬಾಚಿಕೊಳ್ಳುವ, ತಿಳಿಯುವ, ವ್ಯಾಖ್ಯಾನಿಸುವ ಅದಮ್ಯ ಜೀವನೋತ್ಸಾಹ. ಅವರದು ಪ್ರಯೋಗಶೀಲ ಪ್ರತಿಭೆ. ಪ್ರತಿಯೊಂದರಲ್ಲೂ ಹೊಸದನ್ನು ಕಾಣುವ, ಹೊಸತನವನ್ನು ಅನ್ವೇಷಿಸುವ ಚಿಕಿತ್ಸಕ ದೃಷ್ಟಿಕೋನದ ಅಧ್ಯಾಪಕ ತನ್ನ ಸಂಘಟನಾ ಚಾತುರ್ಯದಿಂದ ಜಿಲ್ಲೆಯಾದ್ಯಂತ ಪರಿಚಿತರಾಗುತ್ತಾರೆ.
ತಂದೆ ಅರ್ಚಕರಾದರೂ, ಆವೃತ್ತಿಯ ಕಡೆ ಚಿತ್ತ ಹರಿಸಿದೆ, ಸತತ ಅಧ್ಯಯನದ ಮೂಲಕ ಕೆರೆಮನೆ ಕುಟುಂಬದ ಕುಡಿಯೊಂದು ರಾಜ್ಯ ಪ್ರೌಢಶಾಲಾ ಮುಖ್ಯಾಧ್ಯಾಪಕ ಸಂಘದ ಉಪಾಧ್ಯಕ್ಷ ಹುದ್ದೆಗೆ ಏರಿರುವುದು ಇವರ ಸಂಘಟನಾ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಉತ್ತರ ಕನ್ನಡ ಜಿಲ್ಲಾ ಮುಖ್ಯಾಧ್ಯಾಪಕ ಸಂಘದ ಅಧ್ಯಕ್ಷರಾಗಿ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಕಾರ್ಯದರ್ಶಿಯಾಗಿ, ಡಾ. ಮಹಾಬಲ ಹೆಗಡೆ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ ಹಲವು ಸಂಘಟನೆಯಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕ ಸೇವೆ ಸಲ್ಲಿಸಿರುತ್ತಾರೆ. ತಂದೆ ಮಂಜುನಾಥ, ತಾಯಿ ಸರಸ್ವತಿಯವರ ಮಗನಾಗಿ ಕೆರೆಮನೆಯಲ್ಲಿ ಜನಿಸಿದ್ದು, ೧೯೬೮ ರಂದು. ತಂದೆಯವರು ಮುರುಡೇಶ್ವರ ದೇವಸ್ಥಾನದ ಅರ್ಚಕ ರಾಗಿರುವುದರಿಂದ ಅವರ ಪ್ರಾಥಮಿಕ, ಪ್ರೌಢಶಿಕ್ಷಣ ಮುರುಡೇಶ್ವರದಲ್ಲಿಯೂ, ಕಾಲೇಜು ಶಿಕ್ಷಣ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿಯೂ, ಧಾರವಾಡ ಮತ್ತು ಮೈಸೂರ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿ, ೧೯೯೧ ರಲ್ಲಿ ಭಟ್ಕಳದ ಇಸ್ಲಾಮಿಯೊ ಆಂಗ್ಲೊ ಉರ್ದು ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು. ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಆಳವಾದ ಅನುಭವದ ಹೊಂದಿದ ಲಂಬೋದರ ಹೆಗಡೆಯವರು ನಾಲ್ಕು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದರು. ನಂತರ ೧೯೯೫ ರಂದು ಕಕಿ೯ಯ ಚೆನ್ನಕೇಶವ ಪ್ರೌಢಶಾಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಅಧ್ಯಾಪಕರನಿಸಿಕೊಂಡರು. ತಮ್ಮ ವಾಕ್ಚಾತುರ್ಯದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವ ಕಲಾತ್ಮಕ ಜಾಣ್ಮೆ ಅರಿತ ನುರಿತ ಅಧ್ಯಾಪಕರು ಗಣಿತ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಪಡೆದು ಸತತ ಮೂರು ವರ್ಷಗಳ ಕಾಲ ಜಿಲ್ಲೆಯಾದ್ಯಂತ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ನೀಡಿರುತ್ತಾರೆ.ಇನ್ಫೋಸಿಸ್ ಮೈಸೂರಿನಲ್ಲಿ ೧೫ ದಿನಗಳ ಕಾಲ ಗಣಿತ ಮತ್ತು ವಿಜ್ಞಾನದ ಕಾರ್ಯಾಗಾರದಲ್ಲಿ ಭಾಗವಹಿಸಿದ ಅನುಭವ ಇವರಿಗಿದೆ. ದೆಹಲಿಯಲ್ಲಿ ನಡೆದ ಸಿ.ಸಿ.ಆರ್.ಟಿ. ಸಂಪನ್ಮೂಲ ವ್ಯಕ್ತಿಗಳಾಗಿ ೧೨ ದಿನಗಳ ಕಾಲ ಕಾರ್ಯಾಗಾರದಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿರುತ್ತಾರೆ.
ಇದು ದಿವ್ಯ ಲೋಕ, ಇದು ಭವ್ಯ ಲೋಕ
ಇರಬಹುದು ಆದರೇನು?
ಇಗೊ ನೆಲದೆ ತಾಯಿ ತೆರೆದಿಹಳು ಬಾಯಿ
ಪಯಣಿಗರು ಇಲ್ಲಿ ನಾವು!
ಚಿತ್ತಾಲರ ಈ ಕಾವ್ಯದ ತುಣುಕನ್ನು ತಮ್ಮ ಬದುಕಿನ ಒಂದು ಭಾಗವನ್ನಾಗಿಸಿ ವಿದ್ಯಾರ್ಥಿಗಳ ವೇದನೆಯನ್ನೆಲ್ಲ ಸಂವೇದನೆಯನ್ನಾಗಿಸಿದ ಲಂಬೋದರ ಹೆಗಡೆಯವರು ಅತ್ಯುತ್ತಮ ಅಧ್ಯಾಪಕರು, ಯಕ್ಷಗಾನ ಅರ್ಥಧಾರಿಗಳು, ಪ್ರಬುದ್ಧ ಚಿಂತಕರು, ಲೇಖಕರು ಹೌದು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಅವಕಾಶ ಕಲ್ಪಿಸಿ ವಿಭಾಗ ಮಟ್ಟದವರೆಗೆ ಇವರ ಪ್ರತಿಭೆ ಬೆಳಗಿದೆ.ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನೌಕರರ ಸಹಕಾರಿ ಪತ್ತಿನ ೨೫ ವರ್ಷದ ಬೆಳ್ಳಿಹಬ್ಬದ ಸವಿನೆನಪಿಗಾಗಿ ಸ್ವಂತ ನಿವೇಶನ ಕಟ್ಟಿದ ಹೆಗ್ಗಳಿಕೆ ಇವರದ್ದಾಗಿದೆ.
ಜ್ಞಾನದಿಂ ಮೇಲಿಲ್ಲ ಶ್ವಾನನಿಂ ಕೇಳಿಲ್ಲ
ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ
ಜ್ಞಾನವೇ ಅಧಿಕ ಎನ್ನುತ್ತಾರೆ ಸರ್ವಜ್ಞ.
ಜ್ಞಾನಿಯಾದವನು ಶ್ರದ್ಧೆ, ನಿರಹಂಕಾರ, ಸತತ ಪ್ರಯತ್ನದಿಂದ ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವಾದಂತೆ ಎಲ್ಲರನ್ನೂ ಸರಿದುಗಿಸಿಕೊಂಡು ಹೋಗುವ ಓರ್ವ ಅತ್ಯುತ್ತಮ ಸಂಘಟಕ ಲಂಬೋದರ ಹೆಗಡೆಯವರು ಶಿಕ್ಷಣ ಇಲಾಖೆಯಲ್ಲಿ ವಿಶಿಷ್ಟ ಹೆಜ್ಜೆಗುರುತನ್ನು ದಾಖಲಿಸಿದ ಸಾಧಕರು. ಇಂತಹ ಸಮಥ೯ ಸಾಧಕ ಶಿಕ್ಷಕ ನೂರ್ಕಾಲ ಬಾಳಿ ಬದುಕಲೆಂದು ತಾಲೂಕಿನ ಸಮಸ್ತ ಶಿಕ್ಷಕರ ಪರವಾಗಿ ಹಾರೈಸೋಣ….
Be the first to comment