ಯಲಕೊಟ್ಟಿಗೆ ಶಾಲೆಯಲ್ಲೊಂದು ಇತಿಹಾಸ ನಿರ್ಮಿಸಿದ ಹೊಳೆಗದ್ದೆ ಸುಬ್ರಾಯ ಶಾನಭಾಗ….. ತಾಳೆಗರಿಯಿಂದ ಆನ್ ಲೈನ್ ಪಾಠದವರೆಗೂ…

ತಾಲೂಕು ಕೇಂದ್ರ ಹೊನ್ನಾವರದಿಂದ ೩0 ಕಿಮೀ ದೂರದ ಮಹಿಮೆ ಗ್ರಾಮದ ಮಜರೆಯಲ್ಲಿರುವ ಪುಟ್ಟ ಊರು ಯಲಕೊಟ್ಟಿಗೆ. ಹಸಿರು ಕಾಡಿನಿಂದ ತುಂಬಿದ ಕುಗ್ರಾಮದಲ್ಲಿದಲ್ಲೊಂದು ಪುಟ್ಟ ಶಾಲೆ ಇದೆ. ಸುಮಾರು ೫೦ ಕುಟುಂಬಗಳಿರುವ ಮಜರೆ ಯು ಯಾವುದೇ ಮೂಲಭೂತ ಸೌಕರ್ಯ ಹೊಂದಿಲ್ಲದಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯೊಂದು ನಿರ್ಮಾಣ ಹಂತದಲ್ಲಿದೆ. ಆರ್ಥಿಕವಾಗಿ ಅಷ್ಟೊಂದು ಸದೃಢವಾಗದಿದ್ದರೂ, ಮಾನಸಿಕವಾಗಿ ಸಬಲರಾದ ಗೌಡ, ಮರಾಠಿ, ನಾಮಧಾರಿ ಸಮಾಜದ ಎರಡು ನೂರರಷ್ಟು ಜನಸಂಖ್ಯೆ ಇರುವ ಪುಟ್ಟ ಊರಿನಲ್ಲಿರುವ ಪುಟ್ಟದಾದ ಶಾಲೆಯ ಇತಿಹಾಸ ತುಂಬಾ ರೋಚಕವಾಗಿದೆ. ಈ ಶಾಲೆ ಪ್ರಾರಂಭವಾಗುವ ಪೂರ್ವದಲ್ಲಿ ಈ ಮಜರೆಯ ಮಕ್ಕಳು ಎರಡು ಕಿಲೋಮೀಟರ್ ವರೆಗೆ ಕಾಡಿನಲ್ಲಿಯೇ ನಡೆದು ಕೆಂಬಾಲ ಶಾಲೆಗೆ ಹೋಗಬೇಕಾಗಿತ್ತು. ಅಲ್ಲಿಯ ನಿವಾಸಿ ಹೊನ್ನಾ ರಾಜು ಗೌಡ ಮಕ್ಕಳ ಪರಿಸ್ಥಿತಿಯನ್ನು ಕಂಡು ಯಲಕೊಟ್ಟಿಗೆಯಲ್ಲಿ ಇರುವ ತನ್ನ ಜಮೀನಿನಲ್ಲಿ ಶಾಲೆಯನ್ನು ತೆರೆಯಲು ಅವಕಾಶ ಮಾಡಿಕೊಟ್ಟ ಪುಣ್ಯಾತ್ಮರು. ಶಿಕ್ಷಣದಿಂದ ವಂಚಿತರಾದ ಮಕ್ಕಳ ಪಾಲಿನ ದೇವರೆನಿಸಿಕೊಂಡರು.

ಊರಿನವರ ಸಹಕಾರದಿಂದ ೧೯೯೮ ರಲ್ಲಿ ತಾಳೆಗರಿಯಿಂದ ಕಟ್ಟಿದ ಶಾಲೆಯೊಂದು ಜನ್ಮತಳೆದು ಅಲ್ಲಿಯ ನಿವಾಸಿ ಲತಾ ನಾಗಪ್ಪ ನಾಯ್ಕರವರು ಅತಿಥಿ ಶಿಕ್ಷಕಿಯಾಗಿ ಸುಮಾರು ಐದು ವರ್ಷಗಳ ಕಾಲ ಶ್ರಮಿಕ ವರ್ಗದ ಪಾಲಕರ ಗೌರವಧನ ಪಡೆದು ಅಕ್ಷರ ಬೀಜ ಬಿತ್ತುವ ಮಹತ್ಕಾರ್ಯಕ್ಕೆ ಮುಂದಾದರು. ನಂತರ ೨೦೦೦ನೇ ಇಸವಿಯಲ್ಲಿ ಅದೊಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಸರಕಾರದ ಅಧಿಕೃತ ಆದೇಶವಾಯಿತು. ಸುಮಾರು ಒಂಬತ್ತು ವರ್ಷಗಳ ಕಾಲ ತಾಳೆ ಗರಿ ಹೊದ್ದ ಪುಟ್ಟ ಬಿಡಾರದಲ್ಲಿ ಮಕ್ಕಳ ಕಲಿಕೆ ಸಾಗುತ್ತಿತ್ತು. ನಂತರ ಒಂದು ಕೋಣೆ ಮಂಜೂರಿ ಆಯಿತು.೨೦೦೨ ರಲ್ಲಿ ಈ ಶಾಲೆಗೆ ಸರಕಾರದಿಂದ ನೇಮಕವಾದ ಅಕ್ಕಮ್ಮ ಎಂಬ ಶಿಕ್ಷಕಿ ಸೇವೆ ಆರಂಭಿಸಿದರು. ನಂತರ ಅಣ್ಣಪ್ಪ ನಾಯ್ಕ, ಮಂಜುನಾಥ ದೀಕ್ಷಿತ, ಪರಶುರಾಮ ಬೂದಿಹಾಳ, ವಿಜಯ ನಾಯ್ಕರವರು ಈ ಶಾಲೆಯಲ್ಲಿ ಸೇವೆ ಸಲ್ಲಿಸಿದರು.

೨೦೧೭ ರಿಂದ ಈ ಶಾಲೆಗೆ ಶುಕ್ರದೆಸೆ ಪ್ರಾರಂಭವಾಯಿತು. ಕುಮಟಾ ತಾಲೂಕಿನ ಶೇಡಿಗದ್ದೆ ಶಾಲೆಯ ವಿಜ್ಞಾನ ಶಿಕ್ಷಕರು ಹೆಚ್ಚುವರಿಯಾಗಿ ಯಲಕೊಟ್ಟಿಗೆ ಶಾಲೆಗೆ ವರ್ಗವಾಗಿ ಬಂದಾಗ ಶಾಲೆಯ ಚಿತ್ರಣವೇ ಬದಲಾಯಿತು. ಮಕ್ಕಳ ಕಲಿಕೆಯ ಸುಗಮ ಮಾರ್ಗ ಕಂಡುಕೊಂಡು ಕನ್ನಡದೊಂದಿಗೆ ಇಂಗ್ಲೀಷನ್ನು ಕಲಿಸುತ್ತಾ ಬಂದವರು ಸುಬ್ರಾಯ ನರಸಿಂಹ ಶಾನಭಾಗ. ಪಾಲಕ, ಬಾಲಕ, ಪರಿಸರ ಸ್ನೇಹಿ ಶಿಕ್ಷಕ ಸುಬ್ರಾಯ ಶಾನಭಾಗರು ಇಂಗ್ಲಿಷ್ ವಿಷಯದ ಸಂಪನ್ಮೂಲ ವ್ಯಕ್ತಿ ಕೂಡ. ಯಲಕೊಟ್ಟಿಗೆಯಂಥ ದಟ್ಟ ಅರಣ್ಯದ ಕುಗ್ರಾಮದ ಸುತ್ತೆಲ್ಲ ಓಡಾಡಿದ ತೆಳ್ಳಗಿನ, ಬೆಳ್ಳಗಿನ ಬಣ್ಣ ಹೊಂದಿದ ಪ್ರತಿಭಾವಂತ ಶಿಕ್ಷಕ ಇಡೀ ಜಿಲ್ಲೆಯ ಗಮನವನ್ನು ಯಲಕೊಟ್ಟಿಗೆ ಊರಿನತ್ತ ಸೆಳೆಯಲು ಮಾಡಿದ ಯೋಜನೆಯೇ ಅಂತರ್ಜಾಲ ಆಧಾರಿತ Teachmint ಕಲಿಕೆ.

ಕೊರೋನಾ ಸಂದರ್ಭದಲ್ಲಿ ನಮ್ಮಿಂದ ದೂರವಾಗುತ್ತಿರುವ ೧೪ ಮಕ್ಕಳಿಗೆ ಪರ್ಯಾಯ ಶಿಕ್ಷಣದ ಮೂಲಕ ನಿರಂತರ ಸಂಪರ್ಕದಲ್ಲಿರುವಂತೆ ೨೦೨೦ ರಿಂದಲೇ ಕಾನ್ಫರೆನ್ಸ್ ಕಾಲ್ ಮೂಲಕ ವಿದ್ಯಾರ್ಥಿ ಸ್ನೇಹಿ ಶಿಕ್ಷಕರಾಗಿ ಪಾಲಕರ,ಇಲಾಖೆಯ ಮೆಚ್ಚುಗೆಗೆ ಪಾತ್ರರಾದವರು.ಈ ಶಾಲೆಯ ಇನ್ನೊವ೯ ಶಿಕ್ಷಕಿ ಶೋಭಾ ಶಾನುಭಾಗರವರು ಯಾವುದೇ ಮಹಿಳಾ ಸಮಸ್ಯೆಯನ್ನು ತೋರ್ಪಡಿಸದೇ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದವರು. ಇವರಿಬ್ಬರ ಮಕ್ಕಳ ಮೇಲಿನ ನಿರಂತರ ಕಲಿಕಾ ಪ್ರೇಮವೇ ಪಾಲಕರ ಚಿತ್ರ ಶಾಲೆಯತ್ತ ಎನ್ನುವಂತಾಯಿತು.

ಶಿಕ್ಷಣ ಇಲಾಖೆ ನೂತನವಾಗಿ ಪರಿಚಯಿಸಿದ Teachmint ಕಲಿಕೆಯ ಬಗ್ಗೆ ಆಸಕ್ತಿ ತೋರಿದ ಶಿಕ್ಷಕರು ಕಾಡಿನೊಳಗೆ ನುಗ್ಗಿಬರುವ ಜಂಗಮಗಂಟೆಯ ಶಬ್ಧ ಕಟ್ಟಾಗುತ್ತಿರುವುದನ್ನು ಗಮನಿಸಿ,ಪಾಲಕರ- ಪೋಷಕರ ಸಭೆ ಕರೆದು ಮನವರಿಕೆ ಮಾಡಿಕೊಟ್ಟರು. ಒಂದಿಷ್ಟು ಸಾಹಸಿ ಪಾಲಕರು ತಲೆದೂಗಿಸಿ ಜಂಗಮಗಂಟೆಯ ನಿರಂತರ ಬಡಿತಕ್ಕೆ ಹೆಗಲಿಗೆ ಹೆಗಲು ಕೊಟ್ಟು ದುಡಿಯಲು ಪಣತೊಟ್ಟರು. ಬಿಎಸ್ಸೆನ್ನೆಲ್ ಗಣಪತಿ ಭಟ್ಟರನ್ನು ಸಂಪರ್ಕಿಸಿ ಮಾಹಿತಿ ಪಡೆದರು. ಅಂತರ್ಜಾಲದ ಫೈಬರ್ ಕೇಬಲ್ ಯಲಕೊಟ್ಟಿಗೆ ತಲುಪಲು ಎಂಟು ಕಿಲೋಮೀಟರ್ ಸಾಗಬೇಕು. ಇದಕ್ಕೆ ತಗಲುವ ಖರ್ಚುಸುಮಾರು ಒಂದುಮುಕ್ಕಾಲು ಲಕ್ಷ.ಆದರೂ ದೃತಿಗೆಡದೆ ಮುನ್ನುಗ್ಗಿದ ಯಲಕೊಟ್ಟಿಗೆಯ ಗೌಡ, ಮರಾಠಿ, ನಾಮಧಾರಿ ಸಮಾಜದವರೆಲ್ಲರೂ ಒಟ್ಟು ೪೦ ಮಕ್ಕಳ ಹಿತಕ್ಕಾಗಿ ಒಟ್ಟಾಗಿ ದುಡಿದುದರ ಫಲವಾಗಿ ಅಂತರ್ಜಾಲ ಆಧಾರಿತ ನೂತನ ಕಲಿಕೆ ಊರಿನ ಶಾಲೆಯ ಇತಿಹಾಸ ಪುಟದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವಂತಾಗಿದೆ.

ಜುಲೈ ಹದಿನೇಳರಂದು ಸತತ ನಾಲ್ಕು ದಿನಗಳ ಕಾಲ ಎಂಟು ಕಿಲೋಮೀಟರ್ ದೂರದಿಂದ ಫೈಬರ್ ಕೇಬಲ್ ಅನ್ನು ತಂದು ಪ್ರತಿ ಮನೆ, ಮನೆಗೂ ತಲುಪಿಸಿ ಇಪ್ಪತ್ತು ಮನೆಯಿಂದ ತಲಾ ೮೫೦೦ ರೂಪಾಯಿ ಪಡೆದು, ಕಡಿಮೆ ಬಿದ್ದ ಹಣವನ್ನು ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ ಗೌಡ ಮತ್ತು ಸ್ಥಳೀಯ ಸರಕಾರದ ಅನುದಾನ ಪಡೆದು ಜುಲೈ ೫ ರಂದು ಮಾನ್ಯ ಉಪ ನಿರ್ದೇಶಕರಿಂದ ಆನ್ಲೈನ್ ತರಗತಿ ಉದ್ಘಾಟನೆಗೊಂಡಿರುವುದೇ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸ್ಥಳೀಯ ಸರಕಾರದ ಗೌರವಾನ್ವಿತ ಜನಪ್ರತಿನಿಧಿಗಳು, ಶಿಕ್ಷಕ ಸಂಘಟನೆಯ ನೇತಾರರು, ಮಾಧ್ಯಮದವರು, ಒಡನಾಡಿಗಳು,ಹಿತೈಷಿಗಳು, ಪಾಲಕ-ಪೋಷಕರು ಹಾಜರಿದ್ದು ಕಾರ್ಯಕ್ರಮಕ್ಕೆ ಮೆರಗು ತಂದುಕೊಟ್ಟರು.



ಲೇಖನ : ಪಿ.ಆರ್. ನಾಯ್ಕ, ಹೊಳೆಗದ್ದೆ

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*