ನಮ್ ಕಥೆ…. ನಮ್ ವ್ಯಥೆ… ಹೊಳೆಗದ್ದೆ ಪಿ.ಆರ್. ನಾಯಕರ ಲೇಖನ ಮಾಲೆ – ೮

ಮಾರ್ನೆ ದಿನ ಬೆಳ್ಗಾಗೆ ಮಾರು, ವೆಂಕ್ಟೇಶನ ಮಾನಿಗೆ ಬಂದೇ ಬಿಟ್ಟ.ಇಬ್ರು ಸೇರ್ಕಂಡಿ ಆಬ್ಬಿ ಹಿಂದೆ ಮಾತಾಡ್ಕಂತ ಒಡಿಯ್ನನ್ಮನೀಗೆ ಹೋಗ್ತಾವ್ರೆ. ಅಷ್ಟ ಹೋತ್ಗೆ ಮಾರು ಆಪ್ಪ ದೊಡ್ಡ ಕೊಲ್ ಬೆನ್ನಿಂದೆ ಹಿಡ್ಕಂಡಿ ಕಳ್ಳ ಹೆಜ್ಜಿ ಹಾಕ್ತಾ ಬರ್ತಾ ಇದ್ದ. ಇದ ನೊಡ್ಕಂಡಿ ಮಾರು, ಯೆಂಕ್ಟೇಶ ಆಪ್ಪ ಬಂದ್ರೆ ನಮ್ಗೆ ಹಿಡ್ಕಂಡಿ ಬಡಿತಾ ಹೇಳಿ ಓಡ್ಹೋಗಿ ಒಡ್ನಮನೆ ಸೇರ್ಕ ಬಿಟ್ರು.

ಹೋದವ್ರೆ ಹೊರ್ಗಡೆ ಕುಂತೂ ಜಡ್ಡಿ ಕೀಳುಕೆ ಸುರು ಮಾಡ್ಬೀಟ್ರು. ಯೆಂಕ್ಟೇಶನ ಆಬ್ಬಿ ಬಂದ್ಕಂಡಿ ಆ ಜಡ್ಡೀಲಿ ಎಂತದರು ಹೊಕ್ಕಂಡಿ ಇರ್ತದೆ. ನೋಡ ಕೈ ಹಾಕಿ.ಜಡ್ಡಿ ಸಂತಿಗೆ ಮಣ್ಣ ಬಂದ್ರೆ ಅಲ್ಲೆ ಕೂಡ್ಗಾಕಿ. ಎಲ್ಲಾ ಕಾಳಿ ತೆಗ್ದಿ ಒಂದೇ ಬದಿಕೆ ರಾಶಿ ಹಾಕಿ. ಕಾಡಿಗೆ ತಾಕಂಡೊಗಿ ತೆಂಗಿನ ಮರ್ದ ಬುಡ್ಕೆ ಹಾಕ್ಬೇಕು.

ಮಾರು,ಆಬ್ಬಿ ವೈಸ್ತರ ತೊಳುಕೆ ಹೋಯ್ತು. ಬರೂಕೆ ರಾಶಿ ತಾಡ ಆಗ್ತದೆ.ಈಗೆ ಹತ್ಗೆಂಟಿಗೆ ಚಾ ಕೊಡ್ತುರು. ಅಲ್ನೋಡು ಆ ಬಾಗ್ಲ ಬದಿಕೆ ಟಿವಿ ಆದೆ.ಆ ಒಡ್ತಿ ಟಿವಿ ಹಚ್ಕಂಡೆ ಕೆಲ್ಸಾ ಮಾಡ್ತರ್ರು. ನಾವ್ ಚಾಕುಡ್ವಾಗ ಅಲ್ಲೆ ಜಗ್ಲಿ ಮ್ಯಾಲೆ ಕುತ್ಕಂಡಿ ಚಾ ಕೂಡ್ಕಂತ ಟಿವಿ ನೋಡ್ವಾ. ನಿನ್ನಾಗೆ ನಾ ಒಂದು ಸಿಲಿಮ್ ನೋಡ್ದೆ. ಪೂರಾ ಆಲ್ಲ.ಆರ್ದ ನೋಡ್ದೆ. ನಾಮ್ಮಬ್ಬಿ ಚಾಕ್ರಿ ಬ್ಯಾಗ್ ಮುಗ್ದರ್ರೆ ನಾವು ಬ್ಯಾಗ್ ಹೋಗುದು. ತಾಡ ಆದ್ರೆ ನಾವು ತಡ್ದೆ ಹೋಗುದು. ತಡ್ದ ಹೋದ್ರೆ ಟಿವಿ ನೋಡುಕೆ ಲಾಯ್ಕ ಆಗ್ತದೆ.

ಅಲ್ನೋಡು ಅದೇ ಕೊಟ್ಗೆ. ಅಲ್ಲಿ ಒಳ್ಗೆ ಏಣಿ ಆದೆ.ಏಣಿ ಹತ್ತಿ ಮ್ಯಾಲೋದ್ರೆ ಹುಲ್ಲು ಸೆರ್ದಿಟ್ಟರೆ. ಅಲ್ಲಿಂದ ಹಲ್ಲು ತೆಗ್ದಿ ದನಗೆ ಹಾಕ್ಬೇಕು. ಕಾಡಿಗೆ ತೋಟ್ದಲ್ಲಿ ಬಿದ್ದ ಆಡ್ಕಿ,ಕಾಯಿ ಹೆಕ್ಕದ್ರೆ ನಮ್ಕೆಲ್ಸ ಮುಗಿತು. ಇವತ್ತು ನೋಡ್ಬೇಕು ಒಡ್ತೀರು ಮತ್ತೆ ಏನ್ ಹೇಳ್ತಾರೆ ಅಂತ.

ಹೀಗೆ ಹೇಳ್ತಿರುವಾಗ್ಲೆ ಒಡ್ತಿ ಹೊರ್ಗಡೆ ಬಂದು, ವೆಂಕ್ಟೇಶ ಮತ್ಯಾರ್ನ ಕರ್ಕೊಂಡಿ ಬಂದ್ಯಾ. ಆವ್ನಕೇಲಿ ದಿನಾ ಬರುಕೆ ಹೇಳು.ತಿಂಬೂಕೆ ಕೊಡ್ತೆ. ಒಡ್ತಿ ಮಾತ ಕೇಳ್ದೇ ತಾಡ ಮಾರು ಅಲ್ಲೆ ಕುಣ್ದುಬ್ಬಿಟ್ಟ.

ಒಳ್ಗೋಳ್ಗೆ ನೆಗೀ ಆಡ್ತಿದ್ದ ಮಾರು ,ತೋಟ್ದ ನೀರ್ ಹೋಗುವ ಗಟಾರ್ ನೋಡಿ, ಯೆಂಕ್ಟೇಶ ಆ ನೀರು ಬಡ್ನಿ ಹೊಳಿಗೆ ಹೋಗಿ ಕುಡ್ತದ್ಯಾ. ಹೌದು ಬಡ್ನಿ ಹೊಳಿಗೆ ಎಂದಾಗ, ಮಾರುವಿನ ಕುತೂಹಲ ಹೆಚ್ಚಾಯ್ತು. ಹೊಳಿಗೆ ಸೆರ್ತದೆ ಆಂದ್ರೆ, ಅಲ್ಲಿಂದ ಮೀನು , ಏಡಿ,ಹೊಂಟ, ಮಂಡ್ಲಿ, ಮುರ್ಗುಂಡ, ದುಂಡ ಬಂದೇ ಬರ್ತದೆ.

ಯೆಂಕ್ಟೇಶ ನಾನು ಅಲ್ಲೋಗಿ ಉಚ್ಚಿ ಹೊಯ್ಕ ಬತ್ತೆ ಎಂದವ್ನೆ ಓಡೋಡಿ ಹೋದ.ನೀರ ಹೋಗುವ ಗಟಾರದಲ್ಲಿ ಉಚ್ಚಿ ಹೊಯ್ತಿರುವಾಗ್ಲೆ ಏಡಿ ನೋಡ್ದವ್ನು , ಯೆಂಕ್ಟೇಶ ಇಲ್ಬಾ. ಯೆಂಕ್ಟೇಶ್ನು ಬಂದ.ಇಬ್ರೂ ಸೇರಿ ಏಡಿ, ಹೊಂಟ ಹಿಡ್ದು, ಕೊಂಬು ಮುರ್ದು ಹಾಳಿ ಕೊಟ್ಟಿಲ ಕಟ್ಕಂಡಿ ಯಾರ್ಗೂ ಹೇಳ್ದೆ ಅಲ್ಲಿಂದ ಸೀದಾ ಮಾನಿಗೆ ಬಂದ್ಬಿಟ್ರು. ಮಗ ತಂದ ಏಡಿ ನೋಡಿ ಅಪ್ಪನ ಖುಷಿ ಹೇಳ್ತೀರ್ದು. ಮಗ ಸಾಲಿಗೆ ಹೋಗ್ದಿದ್ರು ಅಡ್ಡಿಲ್ಲ.ದಿನಾ ಹೊಂಟ್ನ ತರುದು ಮರಿಬ್ಯಾಡ.ಆಪ್ಪ ನಾಳಿಕು ನಾನು, ಯೆಂಕ್ಟೇಶ ಅಲ್ಲೆ ಹೋಗ್ತರ್ರು…….

ಪಿ.ಆರ್. ನಾಯ್ಕ,
ಹೊಳೆಗದ್ದೆ

ಇದು ಕೊರೊನಾ ಕಾಲಘಟ್ಟದಲ್ಲಿ ಶಿಕ್ಷಕ, ಸಾಹಿತಿ ಪಿ.ಆರ್. ನಾಯ್ಕರು ವಿಶೇಷವಾಗಿ ಮಕ್ಜಳಿಗಾಗಿಯೇ ಆರಂಭಿಸಿರುವ ಬರಹ ಮಾಲಿಕೆ… ಪ್ರತೀ ರವಿವಾರ ಪ್ರಕಟವಾಗಲಿದೆ…
ಕುಮಟಾ ತಾಲೂಕಿನ ಹೊಳೆಗದ್ದೆಯ ಪಿ.ಆರ್. ನಾಯ್ಕರು ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಒಬ್ಬ ಪ್ರಬುದ್ಧ ಬರಹಗಾರರು. ಸಕಾಲಿಕ ಚಿಂತನೆಗಳನ್ನು ಅಕ್ಷರ ರೂಪದಲ್ಲಿಳಿಸಿ ಜಾಗೃತಿ ಮೂಡಿಸಬಲ್ಲಂತಹ ಲೇಖಕರು. ಹಲವು ಕೃತಿಗಳನ್ನು ಪ್ರಕಟಿಸಿರುವ ಅವರು ಇದೀಗ ಒಬ್ಬ ಶಿಕ್ಷಕರಾಗಿ ಕೊರೊನಾ ಕಾಲದಲ್ಲಿ ತಾವೂ ಮಕ್ಕಳನ್ನು ಕಂಡಂತೆ… ಅವರೊಳಗಿನ ಭಾವನೆಗಳನ್ನ ಅರ್ಥ ಮಾಡಿಕೊಂಡಂತೆ… ಪಾಲಕರ ಮನಸ್ಥಿತಿಯನ್ನು ತಿಳಿದುಕೊಂಡಂತೆ… ಇವೆಲ್ಲವನ್ನೂ ಬರಹ ಹಾಗೂ ಕಾವ್ಯದ ಮೂಲಕ ಪ್ರಸ್ತುತ ಪಡಿಸಿ… ಆ ಮೂಲಕ ಮಕ್ಕಳಿಗಾಗಿಯೇ ಹೊಸ ಪ್ರಯೋಗಕ್ಕಿಳಿದಿದ್ದಾರೆ… (ಸಂ)
About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*