ಸರ್ಕಾರಿ ನೌಕರರಿಗೆ ಆಷಾಢದ ಉಡುಗೊರೆಯಿತ್ತ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು (ಜುಲೈ 20)ದಂದು ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿದ್ದು, ಇದು ರಾಜ್ಯ ಸರಕಾರಿ ನೌಕರರಲ್ಲಿ ಸಂತಸ ಮೂಡಿಸಿದೆ. ಇದು ಸರಕಾರಿ ನೌಕರರಿಗೆ  ಆಷಾಢ ಮಾಸದಲ್ಲಿ ಸಿಕ್ಕ ಅನಿರೀಕ್ಷಿತ ಉಡುಗೊರೆ ಎಂದೇ ಹೇಳಲಾಗುತ್ತಿದೆ.

ಜುಲೈ 1, 2021 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ನೌಕರರಿಗೆ ಶೇ 11ರಷ್ಟು ತುಟ್ಟಿಭತ್ಯೆ ನೀಡುವಂತೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ. ಅಧಿಕೃತ ಆದೇಶ ಶೀಘ್ರದಲ್ಲೇ ಪ್ರಕಟವಾಗಲಿದೆ. ಅಖಿಲ ಭಾರತ ಬೆಲೆ ಸೂಚ್ಯಂಕ (price index) ಆಧರಿಸಿ ಕೇಂದ್ರ ಸರ್ಕಾರ ನೌಕರರಿಗೆ ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಏರಿಕೆ ದರ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

  ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ದರ 11.25% ಇದ್ದು, 11% ಹೆಚ್ಚಳದಿಂದಾಗಿ ಒಟ್ಟು 22.25ರಷ್ಟು ತುಟ್ಟಿಭತ್ಯೆ ಸಿಗಲಿದೆ. ಇದರಿಂದ 1.50 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟಾರೆ 6 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.


 ಕೊವಿಡ್ 19 ಸಾಂಕ್ರಾಮಿಕದ ಕಾಲದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಕಳೆದ ಒಂದೂವರೆ ವರ್ಷಗಳಿಂದ ತುಟ್ಟಿಭತ್ಯೆ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಆದರೆ, ಈಗ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಶೇ 4ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಕೂಡಾ ಮುಂದಾಗಿದೆ. ಇದೇ ರೀತಿ ರಾಜ್ಯ ಸರ್ಕಾರಿ ನೌಕರರಿಗೂ ಮೂರು ಅವಧಿಯ ತುಟ್ಟಿಭತ್ಯೆ ಹೆಚ್ಚಳವನ್ನು ತಡೆ ಹಿಡಿಯಲಾಗಿತ್ತು. ಈಗ  ಅದನ್ನು ನೀಡಲಾಗಿದೆ.

ವಿವಿಧ ಬೇಡಿಕೆಗಳಿದ್ದ ಮನವಿ :  ಬಾಕಿಮೊತ್ತ ಸಹಿತ ತುಟ್ಟಿಭತ್ಯೆ ಹೆಚ್ಚಳ ಮಾಡಬೇಕು ಎಂದು ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗವು ಬಿ.ಎಸ್ . ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳಿದ್ದ ಮನವಿ ಪತ್ರ ಸಲ್ಲಿಸಿತ್ತು. ಮನವಿಗೆ ಯಡಿಯೂರಪ್ಪ ಸ್ಪಂದಿಸಿದ್ದು, ಸರ್ಕಾರಿ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರು, ರಾಜ್ಯ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುವವರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೂ ಈ ಹೆಚ್ಚಳ ಅನ್ವಯವಾಗಲಿದೆ.

ತುಟ್ಟಿ ಭತ್ಯೆ (dearness allowance) ತುಟ್ಟಿ ಭತ್ಯೆ (dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

ಸರ್ಕಾರಿ ನೌಕರರ ಬೇಡಿಕೆ ಏನಿತ್ತು? : ಕೇಂದ್ರ ಸರ್ಕಾರಿ ನೌಕರರಿಗೆ ನೀಡಿದಂತೆ ಮೂಲ ವೇತನದ 5ರಷ್ಟು ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ 4.25ರಷ್ಟು ಹೆಚ್ಚಳಕ್ಕೆ ಮನವಿ ಬಂದಿತ್ತು. ಆದರೆ, ಈ ಹಿಂದಿನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವು ಜನವರಿ 01, 2018ರಿಂದ ಪೂರ್ವಾನ್ವಯವಾಗುವಂತೆ ಶೇ 1.75ರಷ್ಟು ಹೆಚ್ಚಳ ಮಾಡಲಾಗಿತ್ತು. ನಂತರ ಶೇ 2ರಷ್ಟು ಹೆಚ್ಚಳವಾಗಿತ್ತು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರವು ಕಳೆದ ದೀಪಾವಳಿ ಹಬ್ಬದ ವೇಳೆಗೆ ಶೇ. 2ರಷ್ಟು ತುಟ್ಟಿಭತ್ಯೆ(ಡಿಎ) ಹೆಚ್ಚಿಸಿತ್ತು. ನಂತರ 2019ರ ದೀಪಾವಳಿ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸರ್ಕಾರಿ ನೌಕರರಿಗೆ ಶೇ.4.75 ತುಟ್ಟಿಭತ್ಯೆ ಹೆಚ್ಚಳ ಮಾಡಿದ್ದರು. ಈ ಮೂರು ಅವಧಿಯದ್ದು ಸೇರಿಸಿ ಶೇ. 11 ರಷ್ಟು  ಡಿಎ ಹೆಚ್ಚಳವಾಗಿದೆ. ಸರ್ಕಾರಿ ನೌಕರರ ಮೂಲ ವೇತನ 17, 000ರು ನಿಂದ 67,550ರು ತನಕ ಇರುತ್ತಿದ್ದು  ಸರಕಾರ ೀಗ ಮಾಡಿರುವ ತುಟ್ಟಿ ಭತ್ಯೆ ಹೆಚ್ಚಳದಿಂದ ಸರಕಾರಿ ನೌಕರರು ಖುಶಿಗೊಂಡಿದ್ದಾರೆ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*