ಸೇವಾನಿವೃತ್ತಿಗೊಂಡ ಸಂಘಟನಾ ಚತುರ ಶಿಕ್ಷಕ ಮಂಕಿಪುರದ ಎನ್.ಎಸ್. ನಾಯ್ಕ

ಹರಿವ ನದಿಗೆ ಮೈಯೆಲ್ಲ ಕಾಲು, ಉರಿವ ಬೆಂಕಿಗೆ ಮೈಯೆಲ್ಲಾ ನಾಲಿಗೆ… ಎಂದು ವಚನಕಾರರು ಪ್ರಕೃತಿಯ ವಾಸ್ತವವನ್ನು ಕೆಲವು ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ನೀರು ಮತ್ತು ಬೆಂಕಿಗೆ ಯಾವ ಬಗೆಯಿಂದಲೂ ಬಂಧವನ್ನು ಒದಗಿಸಲಾಗದು. ಬೆಂಕಿಯಿದ್ದಾಗ ನೀರು ಬಂದರೆ ಬೆಂಕಿ ಕಾಣದಾಗದು. ಇಲ್ಲಿ ಮುಖ್ಯವಾಗಿರುವುದು ನೀರು ಮತ್ತು ಬೆಂಕಿಗೆ ಇರುವ ಚಲನಶೀಲಗುಣ ಗಂಭೀರವಾದುದು. ಈ ಚಲನಶೀಲತೆ ಗುಣದ ಹಿಂದೆ ಒಂದು ವ್ಯಕ್ತಿತ್ವವಿದೆ. ಹರಿವ ನದಿಯಂತೆ, ಉರಿಯುವ ಬೆಂಕಿಯಂತೆ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕ ಸಂಘಟನೆಯಲ್ಲಿ ಒಮ್ಮೆ ಬೆಂಕಿಯಾಗಿ , ಇನ್ನೊಮ್ಮೆ ನದಿಯಾಗಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುತ್ತಾ ಹೆಜ್ಜೆ ಗುರುತನ್ನು ದಾಖಲಿಸಿದವರು ಮಂಕಿಪುರದ ನರಸಿಂಹ ಸುಬ್ರಾಯ ನಾಯ್ಕರವರು. ಕಳೆದ ನಾಲ್ಕು ಅವಧಿಗಳ ಕಾಲ ಶಿಕ್ಷಕ ಸಂಘದ ಅಧ್ಯಕ್ಷರಾಗಿ ತಾಲೂಕಿನಾದ್ಯಂತ ಪರಿಚಿತರು. ತನ್ನ ವೃತ್ತಿ ಬದುಕಿನ ಜೊತೆಗೆ ಶಿಕ್ಷಕ ಸಂಘಟನೆಯ ಮೂಲಕ ತಾಲೂಕಿನಲ್ಲಿ ನಡೆಯುವ ಪ್ರತಿಭಾ ಕಾರಂಜಿಯಿರಲಿ, ಕ್ರೀಡಾಕೂಟ ವಿರಲಿ, ಸಭೆ-ಸಮಾರಂಭಗಳಿರಲಿ ಅಲ್ಲೆಲ್ಲಾ ಇವರ ನಾಯಕತ್ವ ಇದ್ದದ್ದೇ.

ಮೂಲತ: ಹೊನ್ನಾವರ ತಾಲೂಕಿನ ಮಂಕಿ ಸಾರಸ್ವತ ಕೇರಿಯಲ್ಲಿ ತಂದೆ ಸುಬ್ರಾಯ ನಾಯ್ಕ, ತಾಯಿ ಮಂಜಮ್ಮ ರವರಿಗೆ ಮೂರನೇ ಮಗನಾಗಿ ೧೯೬೧ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣದವು ಹುಟ್ಟೂರಿನಲ್ಲಿಯೇ ಪೂರೈಸಿದರು. ವೃತ್ತಿ ಸಂಬಂಧಿತ ಪದವಿಯನ್ನು ಕುಮಟಾದಲ್ಲಿ ಪೂರೈಸಿ ೧೯೮೪ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಯಲ್ಲಾಪುರದ ದಬ್ಬೆಸಾಲಿನಲ್ಲಿ ಸೇವೆ ಪ್ರಾರಂಭಿಸಿದರು. ಸೇವೆಗೆ ಸೇರಿ ಮೂರು ವರ್ಷದಿಂದಲೇ ಶಿಕ್ಷಕ ಸಂಘದ ಪ್ರತಿನಿಧಿಯಾಗಿ ಆಯ್ಕೆಯಾದವರು ತಿರುಗಿ ನೋಡಲೇ ಇಲ್ಲ. ತಮ್ಮ ಸುದೀರ್ಘ ೩೭ ವರ್ಷಗಳ ಸೇವಾವಧಿಯಲ್ಲಿ ವಿವಿಧ ಹುದ್ದೆಗಳನ್ನು ಮುಡಿಗೇರಿಸಿಕೊಂಡು ತಾಲೂಕಿನಾದ್ಯಂತ ಎನ್. ಎಸ್. ಎಂದೇ ಪರಿಚಿತರಾದರು. ಪ್ರತಿಭಟನೆ – ಪ್ರತಿಕ್ರಿಯೆಗಳಿಂದ ಬದುಕಿನಲ್ಲಿ ಸ್ವಾರಸ್ಯ ಕಂಡುಕೊಂಡ ಇವರ ವ್ಯಕ್ತಿತ್ವ ಕೆಲವರಿಗೆ ಸಿಹಿ ಆದರೆ ಇನ್ನು ಕೆಲವರಿಗೆ ಕಟು ಕಹಿ. ಶಿಕ್ಷಕ ಸಂಘಟನೆ ಅನುಭವವೇ ಹಾಗೆ. ಆ ದೇವರೇ ಬಂದರೂ ಎಲ್ಲರನ್ನೂ ಸರಿತೂಗಿಸಲು ಅಸಾಧ್ಯ ಎಂಬ ಮಾತೊಂದಿದೆ. ಒಬ್ಬನಿಗೆ ಹಿತವಾಗುವ ಕೆಲಸದಲ್ಲಿ ಇನ್ನೊಬ್ಬರಿಗೆ ಒಂದು ಹಂತದಲ್ಲಿ ಅನ್ಯಾಯವಾಗುವುದಂತೂ ಸತ್ಯ. ಇವೆರಡನ್ನು ಸರಿದೂಗಿಸಿ ಎಲ್ಲಾ ಶಿಕ್ಷಕರಿಗೆ ನ್ಯಾಯಪರವಾಗಿ ನಿಲ್ಲುವ ವ್ಯಕ್ತಿ ಶಿಕ್ಷಕರ ಮನದಾಳದಲ್ಲಿ ನೆಲೆಸಲು ಸಾಧ್ಯ. ಒಬ್ಬನನ್ನು ಏರಿಸಿ,ಇನ್ನೊಬ್ಬನನ್ನು ಇಳಿಸುವಲ್ಲಿ ಆಗುವ ತಾರತಮ್ಯದಿಂದಾಗಿ ಕೆಲವು ವೇಳೆ ಅಪತ್ಯವಾಗುವುದಂತೂ ಸತ್ಯ.ನಿರಂತರ ಟೀಕಾಕಾರರ ನಡುವೆಯೇ ಬದುಕು ಕಟ್ಟಿಕೊಂಡು ಅದನ್ನೇ ಸವಾಲಾಗಿ ಸ್ವೀಕರಿಸಿ,ಬೇಕು ಎನ್ನುವುದು ಬದುಕು, ಸಾಕು ಎನ್ನುವುದು ಸಾವು ಎಂಬ ದಾಸರ ವಾಣಿಯನ್ನು ಬದುಕಿನುದ್ದಕ್ಕೂ ರೂಢಿಸಿಕೊಂಡ ವ್ಯಕ್ತಿತ್ವದವರು. ಬದುಕಿನ ಜೊತೆಯಲ್ಲಿ ಬರುವವರು ನೂರು ನೂರು, ಬದುಕು ಕಟ್ಟಿಕೊಡುವವರು ಮಾತ್ರ ಕೆಲವರು. ತಮ್ಮ ಸಂಘಟನೆಯ ಮೂಲಕ ಹಲವಾರು ಶಿಕ್ಷಕರ ಸಮಸ್ಯೆಗೆ ಪರಿಹಾರ ಒದಗಿಸಿ ಸಂಘಟನೆಯನ್ನು ಬಲಪಡಿಸಿದ ಹೆಗ್ಗಳಿಕೆ ಇವರದ್ದು.

ಸುಮಾರು ೧೧ ವರ್ಷಗಳ ಕಾಲ ಯಲ್ಲಾಪುರದಲ್ಲಿ ಶಿಕ್ಷಕ ಸೇವೆಯನ್ನು ಪೂರೈಸಿ ೧೯೯೫ ರಲ್ಲಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಂಕಿಗೆ ವರ್ಗವಾಗಿ ಬಂದರು. ಊರಿಗೆ ವರ್ಗವಾಗಿ ಬಂದವರು ಊರ ಉಸಾಬರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಮತ್ತೆ ಶಿಕ್ಷಕ ಸಂಘಕ್ಕೆ ಆಯ್ಕೆಯಾಗಿ ತಾಲೂಕ ಸಂಘದ ಕಾರ್ಯದರ್ಶಿ ಹುದ್ದೆಗೇರಿದರು. ಸಂಘದ ಚಟುವಟಿಕೆಗೆ ಹೆಚ್ಚಿನ ಒಲವು ತೋರಿಸಿ ಶಿಕ್ಷಕರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾದರು. ತಮ್ಮ ಶಾಲೆಯ ಶಿಕ್ಷಕರು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಮಕ್ಕಳ ಕಲಿಕೆಗೆ ಉತ್ತೇಜಿಸಲು ಮರೆಯಲಿಲ್ಲ. ೨೦೦೨ ರಂದು ಮಂಕಿಯ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ, ೨೦೦೩ ರಂದು ಕುಂಬಾರಕೇರಿ ಶಾಲೆಗೆ ವರ್ಗವಾದರು. ೨೦೨೦ ರಂದು ಚಿತ್ತಾರದ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಪದೋನ್ನತ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿ ಜೂನ್ ೩೦ ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ.

ಬೇವು-ಬೆಲ್ಲದ ಜೀವನದಲ್ಲಿ ಎರಡನ್ನು ಸವಿದ ಕಲಿ ಮಲ್ಲ ನಂತೆ ಯಾವುದೇ ಸಮಸ್ಯೆ ಎದುರಾದರೂ ಧೈರ್ಯಗುಂದದೇ ನಿಭಾಯಿಸಿದ ಹಲವು ನಿದರ್ಶನಗಳಿವೆ.ಅಧಿಕಾರಿಗಳ ಮನವೊಲಿಸಿ ಕಾರ್ಯ ಸಾಧನೆಯ ಬಗ್ಗೆ ಬೆಂಬಿಡದ ಬೇತಾಳನಂತೆ ಕಾಡಿ ಅದನ್ನು ಸಾಧಿಸಿಯೇ ತೀರುವ ಹಠಯೋಗಿ.ಹೊನ್ನಾವರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ನಾಲ್ಕು ಅವಧಿಗಳ ಕಾಲ, ಒಂದು ಅವಧಿ ಜಿಲ್ಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ ಅನುಭವವಿದೆ. ರಾಜ್ಯ ಸಂಘದ ನಾಮನಿರ್ದೇಶಿತ ಸದಸ್ಯರಾಗಿಯೂ ಆಯ್ಕೆಯಾಗಿರುತ್ತಾರೆ. ಕೆನರ ಡಿಸ್ಟ್ರಿಕ್ಟ್ ಪ್ರೈಮರಿ ಟೀಚರ್ಸ್ ಕೋಪರೇಟಿವ್ ಕ್ರೆಡಿಟ್ ಸೊಸೈಟಿ ಸದಸ್ಯರಾಗಿ ನಾಲ್ಕು ಬಾರಿ ಆಯ್ಕೆಯಾಗಿದ್ದು, ಒಮ್ಮೆ ಅಧ್ಯಕ್ಷರಾಗಿಯೂ, ಎರಡು ಬಾರಿ ಉಪಾಧ್ಯಕ್ಷರಾಗಿಯೂ ಅಧಿಕಾರ ಅನುಭವಿಸಿರುತ್ತಾರೆ. ಹೊನ್ನಾವರ ತಾಲೂಕಾ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

ತಮ್ಮ ಸುದೀರ್ಘ ಮೂರು ದಶಕಗಳಿಗೂ ಹೆಚ್ಚು ಕಾಲದ ಸೇವಾವಧಿಯಲ್ಲಿ ಶಿಕ್ಷಕ ಸಂಘದ ವಿವಿಧ ಹುದ್ದೆಗಳಲ್ಲಿ ಅಧಿಕಾರ ಅನುಭವಿಸಿ ತಮ್ಮ ಕಾರ್ಯತಂತ್ರಗಳ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ವಿರೋಧಿಸುವವರನ್ನು ಗಾವುದ ದೂರ ಸರಿಸುತ್ತಾ , ಜೀವನದ ಸುಂದರ ಮಗ್ಗಲುಗಳನ್ನು ತಮ್ಮ ಪರಿಶ್ರಮದ ಕೈಗಳಿಂದ ತಡವುತ್ತಾ ಮುನ್ನಡೆದವರು ಮಂಕಿ ನರಸಿಂಹ ನಾಯ್ಕರು ಮಕ್ಕಳಾದ ಪುನೀತಾ,ನಮೀತಾರೊಂದಿಗೆ ತುಂಬು ಜೀವನ ನಡೆಸುತ್ತಿದ್ದಾರೆ.

ಒಟ್ಟಾರೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕರಾದ ಮೇಲೆ ತಮ್ಮ ಸಂಘಟನಾ ಚಾತುರ್ಯದ ಮೂಲಕ ಹೊನ್ನಾವರ ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘಕ್ಕೆ ನಾಲ್ಕು ಅವಧಿಗಳ ಕಾಲ ಅಧ್ಯಕ್ಷರಾಗಿರುವುದು ಇವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ.

–ಪಿ.ಆರ್.ನಾಯ್ಕ.ಹೊಳೆಗದ್ದೆ ಕುಮಟಾ.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*