
1
ಸಾವ ತೊಟ್ಟಿಲಿನಲ್ಲಿ ಜೀವ ಶಿಶುವಿರಿಸಿ
ಆಗಸದ ತುಂಬೆಲ್ಲ ತೂಗಿ ತೂಗಿ
ಕಟ್ಟಿರುವ ಗುಬ್ಬಿಚಿಟ್ಟಿನ ತುಂಬ ಹೆಣೆದ ಮಣಿ ತಾರೆ-ಮಾಲೆ
ಚಂದ್ರಕಾಂತಿಯ ಗುಂಡು, ಹೊಳೆಹಿಳೆವ ಸೂರ್ಯ-ರತ್ನ
ಹಗಲು-ಇರುಳುಗಳ ಹಗ್ಗಕ್ಕೆ ಜರಿಯ ಲೇಪ
ಭರವಸೆಯ ಲಾಲಿ-ಜೋಗುಳದಲ್ಲಿ ಕಂಡ ಕಿರಣ
ಅರಳಗಣ್ಣಿಗೆ ಕಂಡು ಹಿಡಿಯ ಹೊರಟಿಹ ಬೆರಳು-ಮುಷ್ಠಿ
ಬೊಚ್ಚು ಬಾಯಿಗೆ ಸಿಕ್ಕರೂ ಜೊಲ್ಲು
ದಕ್ಕದಿದ್ದರೂ ಸುರಿದಿತ್ತು ಸತತ ಸೊಲ್ಲು
ತೂಗುತಿಹ ಕರವೆಲ್ಲೋ ವಿಜ್ಞಾನ-ದಾಸ?
2
ಸಂಗಮಿಸಬಲ್ಲವನ ಅಂಗ ವಿಚ್ಛೇದಿಸುತ
ರಂಗು-ರಂಗಿನಲಿ ಭಂಗಿಗೊಳಿಸಿದರಯ್ಯ
ಬಯಲು ಬಯಲಿನಲೆಲ್ಲ ವಿಷದ ಗಾಳಿಯ ತುಂಬಿ
ಮೊಗ್ಗುಗಳ ಸುಟ್ಟು ದರ್ಶನಕೆ ಇಟ್ಟರಯ್ಯ
ಮನ-ಮನವ ಮುರಿದು ಮನೆಯ ಕಟ್ಟಲೆಳಸುತಲೀಗ
ಅಡಿಪಾಯವನು ಸಹಿತ ಹುಡಿಗುಟ್ಟಿಸುತ ನಡೆದರಯ್ಯ
ಬೇರಿನಾ ಸಾರವದು ಬೇಡವೆಂದೆಂದು, ಕತ್ತರಿಸಿ ಕತ್ತರಿಸಿ
ಕೃತಕ-ಹೂಗಳ ಮಾಲೆ , ಹುಸಿಯ ಪರಿಮಳ ಸುರಿಸಿ
ಬಿತ್ತಿರುವ ಭ್ರಾಂತಿಗಿದೋ ಬಂದಿತ್ತು ಪ್ರಳಯ-ತೆನೆಯು
ಸಂಕರದ ಬೀಜಕ್ಕೆ ಶಂಕರನ ಭಾವ ಬರುವದುಂಟೇ ವಿಜ್ಞಾನ-ದಾಸ?


ಪುಟ್ಟು ಕುಲಕರ್ಣಿ ಸರ್ ವಚನ-ವಿಜ್ಞಾನ ಓದಿದೆ.ಬಹುಷಃ ಅವರು ಆಧುನಿಕ ವಚನ ರಚನೆಕಾರರನ್ನು ಉದ್ದೇಶಿಸಿದಂತೆ ತೋರುತ್ತದೆ. ಆದರೆ, ಶರಣರ ನಿಜ ವಚನಗಳು ಖಂಡಿತಾ ವಿಜ್ಞಾನ. ಶರಣರ ಪರಿಭಾಷೆ ಅರ್ಥ ಆಗದವರು ಧಾರ್ಮಿಕ ಪರಿವೇಶದಲ್ಲಿ ಗ್ರಹಿಸಿ, ಕಂಬಳಿಯಲ್ಲಿ ಕಣಕ ನಾದಿ ಹದಗೆಡಿ ಸುತ್ತಾರೆ. ಏನೇ ಆದರೂ ವಚನಗಳು ವೈಜ್ಞಾನಿಕ, ವೈಚಾರಿಕ, ನೈಸರ್ಗಿಕ, ನೈತಿಕ, ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಹೀಗೆ ಅನೇಕ ಆಯಾಮಗಳನ್ನು ಇಂಬಿಟ್ಪುಕೊಂಡಿವೆ. ಹಾಗಾಗಿ, ಈ ವಚನ -ವಿಜ್ಞಾನ ಹನಿ ಗಳು ಸೂರ್ಯನ ಕಡೆಗೆ ಉಗುಳಿದಂತೆ ಅನಿಸುತ್ತದೆ. ಮತ್ತು ಪುಟ್ಟು ಕುಲಕರ್ಣಿ ಸರ್ ಕಡೆಯಿಂದ ಇಂಥಾದ್ದನ್ನು ನಾನು ನಿರೀಕ್ಷಿಸುವುದಿಲ್ಲ. ಶರಣು ಶರಣಾರ್ಥಿಗಳು.