ಶ್ರೀ ಶಂಕರಾಚಾರ್ಯ ವಿರಚಿತ ಶಿವಾನಂದ ಲಹರೀ…

ಕಲೆಯ ರೂಪಿಗಳು, ಶಿರದಿ ಶಶಿಕಲೆಯು ಮಣಿಯಾಗಿ ಬಂದು ನಿಂದು
ಒಬ್ಬರೊಬ್ಬರನು ತಪಿಸಿ ಹೊಂದಲೆನೆ , ಭಕ್ತರಿಗೆ ರತ್ನಸಿಂಧು
ಮೂರುಲೋಕಗಳ ಮಂಗಳದ ರೂಪ , ಹೃದಯದಲಿ ಉದಿತ ಅಮೃತ
ಚಿದಾನಂದದಲಿ ಮತ್ತೆ ಸ್ಫುರಿಸುತಿಹ ದಂಪತಿಗೆ ನಮನ-ಸತತ //1//

ಮನದ ಕಶ್ಮಲದ ಪಾಪಧೂಲಿಯನು ತೊಳೆಯುತಿಹ ಸಲಿಲ ಚರಿತೆ
ಹೃದಯಗಾಲುವೆಯ ತುಂಬಿ ಪ್ರವಹಿಸುತ ಧುಮ್ಮಿಕ್ಕಿ ವಿಜಯ ಗಾಥೆ
ಸಂಸಾರ ಸಾರ ತಪ್ಪಿರಲು ಪೂರ , ಭ್ರಮಣಕ್ಕೆ ದಿಶೆಯನಿತ್ತು
ಚೇತನದ ಕೊಳದಿ ವಾಸಿಸಲಿ ಶಿವ, ಶಿವಾನಂದ ಲಹರಿ ಇತ್ತು //2//

ವೇದಗಳ ಸಾರ ,ತ್ರಿಪುರ ಸಂಹಾರ ತ್ರ್ಯಂಬಕನ ಅರಿಯಲಿಂದು
ಜಟೆಯ ಭಾರದಲಿ, ಉರಗದೊಡವೆಯಲಿ, ಮೃಗವ ಧರಿಸಿರುವನಿಂದು
ದೇವ-ದೇವನಿಹೆ , ಮಹಾದೇವನಿಹೆ , ಪಶುಪತಿಯೆ ನೀಡು ಸ-ದಯ
ಉಪಹಾಸ ರೂಪ-ಚೇತನದ ಮೂಲ, ಶಕ್ತಿಯೊಡಗೂಡೆ ಹೃದಯ //3//

ಚಣದ ಫಲಗಳನು ಚಣದಿ ಕರುಣಿಸುವ ಸಾವಿರದ ಪುಡಿಯ ದೈವ
ಕನಸಲೂ ಕಾಣೆ ಅವರನನುಸರಿಸೆ , ನೀನಿರಲು ನನ್ನ ದೈವ
ಹರಿ-ವಿರಿಂಚಗೂ ಸುಲಭದಲಿ ಸಿಗದ ಆ-ಚಿರದ-ಶಾಂತಿ-ಮೋದ
ಸೇವೆ ಮಾಡಲೆನೆ ಯಾಚಿಸುವೆ ಸತತ , ಕರುಣಿಸೋ ದಿವ್ಯ-ಪಾದ //4//

ಸ್ಮೃತಿ-ಶಾಸ್ತ್ರ-ವೈದ್ಯ-ಶಕುನ-ಕಾವ್ಯಾತ್ಮ-ಮಂತ್ರಗಳ ಪಠಣವರಿಯೆ
ಸ್ತುತಿ-ನಟನ-ಹಾಸ್ಯ-ಪ್ರತಿವಚನ ಚತುರ-ಅತಿಕಥೆಯ ಹೇಳಲರಿಯೆ
ಜಗದ ಮನ್ನಣೆಯು ದೊರೆವ ಪರಿಯೆಂತು? ಪಶುರೂಪಿಯಾಗಿ ನಾನು,
ಸರ್ವಜ್ಞ ನೀನು ಪಶುಪತಿಯು ನನಗೆ, ಕೃಪೆ ತೋರು ದೀನನಿಹೆನು //5//

ಘಟ-ಪಿಂಡ-ಮಣ್ಣು –ಅಣು-ಅಗ್ನಿ-ಬೆಟ್ಟ-ಪಟ-ನೂಲು-ಸಾಲು-ಧೂಮ
ದಿಟ ಜೀವ ನೀಡಿ , ಕಾಲನನು ತಡೆದು, ಶಮನವನು ತರದ ನಿಯಮ
ಒಣ ಮಾತು ಸೋತು ಕಂಠವದು ಹೂತು , ಪಠಿಸಿರಲು ಸಿಗದು ಸೌಖ್ಯ
ಶಂಭುವಿನ ಪಾದ-ಪದ್ಮಗಳ ಭಜಿಸೆ ಚಿರಸುಖದ ಅಮೃತ ಸಖ್ಯ //6//

ಪಾದಕಮಲದಲಿ ವಿಮಲ ಮನವಿರಲಿ , ಮಾತಿನಲಿ ಸ್ತೋತ್ರ ಪಠಣ
ಅರ್ಚನೆಗೆ ಕರವು, ಆಲಿಸೆನೆ ಕಥನ-ಶ್ರುತಿಗಾಗಿ ಯುಗಲ ಕರ್ಣ
ನಿನ್ನ ಧ್ಯಾನಿಸಲು –ಬುದ್ಧಿ-ನಯನದೊಳು ಮೂರ್ತಿಯೊಲು ನೆಲೆಯನೂರು
ಪರಭಾವವರಿಯೆ , ಪರಮತವ ತಿಳಿಯೆ , ಪರಮಶಿವ ಕೃಪೆಯ ತೋರು //7//

ಚಿಪ್ಪಿನಲಿ ರಜತ, ಗಾಜಿನಲಿ ಮುತ್ತು ಕಣಕದಲಿ ಕಂಡ ಹಾಲು
ನೀರಗುದುರೆಯನು ನೀರಡಿಕೆಗೆಂದು ಅನುಸರಿಸಿ ಬೆಂದ ಕಾಲು
ಚಿರದ ಶಾಂತಿಯನು ಅನ್ಯಭಾ್ರಾಂತಿಯಲಿ ಅರಸುತಿಹ ಪರಿಯಲಿಂತು
ಮಹದೇವ ತತ್ತ್ವ ದೂರಿಡುತ ಬರಿಯ ಭ್ರಾಂತಿಯಲಿ ಭಜಿಪೆನಿಂತು//8//

ಮಂದಮಂದದಲಿ ಆಳಕೊಳ ಹೊಕ್ಕು ತರಲೆಣಿಸಿ ಪೂಜೆಹೂವ
ಅರಿಯದಲೆ ಭಾವ ಅಲೆವಲೆವ ಗುಡ್ಡ-ಗಿರಿ-ಬೆಟ್ಟ ಘೋರ ಭವವ
ಚಿನ್ಮಯದ ಕುಮುದ ಸನ್ಮತಿಯಲೊಡನೆ ಉಮೆಪತಿಯ ಅಡಿಗೆ ಇಡದೆ
ಮರೆಯುತಲಿ ಸತ್ಯ, ಬುಗುರಿಯೊಲು ತಿರುಗಿ, ಸುಖಕಾಗಿ ನೆಲೆಯು ಸಿಗದೆ //9//

ಪಶು-ಕೀಟರೂಪಿ-ವಿಪಿನ-ಗಿರಿ-ಜನನ-ನರ-ದೇವ –ವಿಹಗವಾಸಿ
ಬಂದಿರಲು ಜನುಮ, ಬೆದರದಿಹೆ, ನಿತ್ಯ ತವಪಾದ ಪದ್ಮವಾಸಿ
ಪಾದಕಮಲಗಳ ನಿತ್ಯ ಭಜಿಸಲೆನೆ ಸ್ಮರಣೆಯಲಿ ಭಾವ-ದೀಪ
ಅನುಪಮಾನಂದ ಲಹರಿಯಲಿ ಚಿತ್ತವಿರುತಿರಲು, ಯಾವ ರೂಪ//10//


[ ಪದ್ಯಾನುವಾದ; ಪುಟ್ಟು ಕುಲಕರ್ಣಿ ]

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*