ಆದಿವಾಸಿ ಕುಣಬಿಗಳ ಕಂಬಳಿಪ್ರಿಯ ಖಾಪ್ರಿ ದೇವರು

ಬುಡಕಟ್ಟುಗಳ ಬದುಕು, ಅವರ ಉಡಿಗೆ-ತೊಡಿಗೆ, ಅವರ ಆಹಾರ ಪದ್ದತಿ, ಅವರ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಆಚರಣೆಗಳೇ ವಿಶಿಷ್ಠವಾದುದು. ಒಂದು ರೀತಿಯಲ್ಲಿ ಬಡಕಟ್ಟುಗಳದ್ದು ಜನಪದೀಯ ಸೊಗಡು ಹಾಗೂ ಸಂಸ್ಕøತಿಗಳನ್ನು ಮೇಳೈಸಿಕೊಂಡಿರುವ ಒಟ್ಟಂದದ ಬದುಕು. ಭಾಗಶಃ ಕಾಡ ನಡುವೆಯೇ ವಾಸಿಸುವ ಈ ಆದಿವಾಸಿಗಳು ಸಾಮಾಜಿಕವಾಗಿ ಒಂದಿಷ್ಟು ಬಡವರಾಗಿದ್ದರೂ, ಸಂಸ್ಕøತಿಯಿಂದ ಶ್ರೀಮಂತರು ಎನ್ನಬಹುದು. ಶ್ರಮ ಸಂಸ್ಕøತಿಯ ಪ್ರತೀಕ ಎನ್ನಬಹುದು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ-ದಾಂಡೇಲಿ-ಜೋಯಿಡಾದಲ್ಲಿ ಸಾಕಷ್ಟಿರುವ ಸಿದ್ದಿ-ಗೌಳಿ, ಕುಣಬಿ ಸಮುದಾಯದ ಬುಡಕಟ್ಟುಗಳು ಈ ಭಾಗದ ಸಂಸ್ಕøತಿಯ ಶ್ರೀಮಂತಿಕೆ ಎನ್ನಬಹುದು. ಇವರ ಹಲವು ಆರಾಧನೆ, ಆಚರಣೆಗಳಲ್ಲಿ ತುಳಸಿ ವಿವಾಹದ ಸಂದರ್ಭದ ಆಸು ಪಾಸಿನಲ್ಲಿ ವಿಶೇಷವಾಗಿ ತಮ್ಮ ಹೊಲ ಹಾಗೂ ಗಡಿ ಕಾವಲಿಗಾಗಿ ಆರಾಧಿಸುವ ಆಚರಣೆ ವಿಭಿನ್ನ ಮತ್ತು ವಿಶಿಷ್ಠವಾದುದು. ಎಲ್ಲ ಸಮುದಾಯಗಳ ಆರಾಧನೆಯ ಆಶಯ ಒಂದೇ ಆಗಿದ್ದರೂ ಆಚರಣೆಗಳು ಮಾತ್ರ ಸಮುದಾಯದಿಂದ ಸಮುದಾಯಕ್ಕೆ ವಿಭಿನ್ನ.

ಕಂಬಳಿ ಹೊದ್ದು ನಡೆಯುವ ಕುಣಬಿಗಳ ಖಾಪ್ರಿ ಜಾತ್ರೆ


ಬುಡಕಟ್ಟುಗಳಲ್ಲಿಯೇ ಕುಣಬಿಗಳು ವಿಶಿಷ್ಟವಾದ ಸಂಸ್ಕøತಿಗಳನ್ನು ಹೊಂದಿದವರು. ಗೋವಾ ಸೇರಿದಂತೆ ವಿವಿದೆಡೆ ಇರುವ ಇವರು ಉತ್ತರ ಕನ್ನಡದಲ್ಲಿ ಹೆಚ್ಚಾಗಿದ್ದಾರೆ. ಇವರ ಪುಗಡಿ, ಸುಗ್ಗಿ ಸೇರಿದಂತೆ ಹಲವು ಜಾನಪದೀಯ ಆಚರಣೆಗಳು ಆಕರ್ಷಣಿಯ. ಮತ್ತೆ ಸಾಂಸ್ಕøತಿಕ ಕೊಡುಗೆ ಕೂಡಾ. ಇವುಗಳಲ್ಲಿ ತುಳಸಿ ಹಬ್ಬದ ಮರುದಿನ ಜೋಯಿಡಾದಲ್ಲಿ ನಡೆಯುವ ಖಾಪ್ರಿ ಎಂಬ ದೇವರ ಆರಾಧನೆ ಪ್ರಮುಖವಾದುದು. ಈಗೀಗ ಹೆಚ್ಚೆಚ್ಚು ಜನರು ಸೇರುವುದರಿಂದ ಇದನ್ನು ಖಾಪ್ರಿ ಜಾತ್ರೆ ಎಂದೇ ಕರೆಯಲಾಗುತ್ತದೆ. ಕುಣಬಿಗಳಲ್ಲಿ ಅವರು ಆರಾಧಿಸುವ ಹಾಗೂ ಅವರ ಗಡಿ ಕಾಯುವ ಹಲವು ಶಕ್ತಿ ದೇವತೆಗಳಿವೆ. ಅವುಗಳಲ್ಲಿ ಕಾಪ್ರಿ ಕೂಡಾ ಒಂದು.

ಖಾಪ್ರಿ ಜಾತ್ರೆಯ ಒಂದು ನೋಟ…

ತುಳಸಿ ಹಬ್ಬದ ದಿನ ಜೋಯಿಡಾದ ಈ ಶಕ್ತಿ ಸ್ಥಳದಲ್ಲಿ ತುಳಸಿ ಪೂಜೆ ನರೆವೇರಿಸಲಾಗುತ್ತದೆ. ಅದರ ಮರುದಿನ ಇದೇ ಸ್ಥಳದಲ್ಲಿ ಕಾಪ್ರಿ ಆರಾಧನೆ ನಡೆಯುತ್ತದೆ. ತುಳಸಿಯನ್ನು ವಿಶೇಷವಾಗಿ ಸಿಂಗರಿಸಲಾಗುತ್ತದೆ. ಖಾಪ್ರಿಗೆ ಕಂಬಳಿ ಎಂದರೆ ಇಷ್ವವತೆ. ಇದಕ್ಕೆ ಎಂದು ಕಥೆಯೇ ಇದೆ.

ಬಹಳ ವರ್ಷಗಳ ಹಿಂದೆ ಈ ಸ್ಥಳದಲ್ಲಿದ್ದ ಅಂಗಡಿಯವನೊಬ್ಬನಲ್ಲಿ ಸಮುದಾಯದ ಮಿರಾಸೀ ರೂಪದಲ್ಲಿದ್ದ ವ್ಯಕ್ತಿಯೊಬ್ಬ ಕಂಬಳಿಯನ್ನು ಪಡೆದು ಹರಕೆ ನೀಡುತ್ತಿದ್ದ ಎನ್ನಲಾಗಿದೆ. ಎರಡು ವರ್ಷ ಅಂಗಡಿಯವನೂ ಉಚಿತವಾಗಿ ಕಂಬಳಿ ನೀಡಿದ್ದ. ಆದರೆ ಮೂರನೆಯ ವರ್ಷ ನೀಡಲಿಲ್ಲ. ಅಂಗಡಿಯವ ಕೊಡುವುದಿಲ್ಲ ಎಂದಾಗ ಕೇಳಲು ಬಂದ ವ್ಯಕ್ತಿ ನಿಜ ರೂಪ ತೋರಿಸಿ ಮರೆಯಾಗಿದ್ದ. ನಂತರ ಆ ಅಂಗಡಿಯವರು ತಪ್ಪಿನರಿವಾಗಿ ಪಶ್ಚಾತಾಪ ಪಟ್ಟಿದ್ದರು ಎಂಬ ಕಥೆ ಜನಪದೀಯವಾಗಿದೆ.

ತದ ನಂತರದಲ್ಲಿ ಪ್ರತೀ ವರ್ಷ ಈ ದೇವರಿಗೆ ಕಂಬಳಿ ಹರಕೆಯೊಪ್ಪಿಸಿ ಆಚರಿಸಲಾಗತ್ತದೆ. ತಮ್ಮ ಮೈಗೆ ಕಂಬಳಿ ಸುತ್ತಿಕೊಂಡ, ಗೊಂಡೆ ಹೂವಿನಿಂದ ಅಲಂಕರಿಸಿಕೊಂಡ ಮಿರಾಶಿ ಕುಟುಂಭದ ಒಬ್ಬರು ಅವರ ಮನೆಯಿಂದ, ಮತ್ತೊಬ್ಬರು ಕಾಡಿನಿಂದ ಬಂದು ಶೃಂಗರಿಸಿದ ತುಳಸಿ ಕಟ್ಟಯನನ್ನು ತಮ್ಮದೇ ಆದ ಪದ ಹೇಳುತ್ತ ಐದು ಸುತ್ತು ಸುತ್ತುತ್ತಾರೆ. ಭಕ್ತರು ಕಂಬಳಿ ಹರಕೆಯೊಪ್ಪಿಸುತ್ತಾರೆ. ಇಲ್ಲಿಯೂ ಕೂಡಾ ತಮ್ಮ ಜನರನ್ನು ಹಾಗೂ ಸರ್ವ ಸಮುದಾಯದವರನ್ನು ರಕ್ಷಿಸುವಂತೆ, ಯಾರಿಗೂ ತೊಂದರೆಯಾಗದಂತೆ, ರೋಗ ರುಜಿನಗಳು ಬರದಂತೆ, ಪ್ರಾಣಿಗಳಿಗೂ ಬೇನೆಯಾಗದಂತೆ, ಹೊಲ, ಗದ್ದೆಗಳ ರಕ್ಷಣೆ ಮಾಡವಂತೆ ಪ್ರಾರ್ಥಿಸಲಾಗುತ್ತದೆ.

ಬುಡಕಟ್ಟು ಕುಣಬಿಗಳಲ್ಲಿ ಇದು ವಿಶಿಷ್ಠವಾದ ಹಾಗೂ ಆ ಸಮುದಾಯದ ಅತ್ಯಂತ ಭಕ್ತಿ ಪ್ರಧಾನವಾದ ಆರಾಧನೆಯಾಗಿದ್ದು, ಖಾಪ್ರಿ ದೇವರು ತಮ್ಮನ್ನು ಕಾಯುತ್ತಾನೆ ಎಂಬ ಬಲವಾದ ನಂಬಿಕೆಯಲ್ಲಿ ಇದನ್ನು ಪ್ರತೀ ವರ್ಷದ ತುಳಸಿ ವಿವಾಹದ ಮರು ದಿನ ಆಚರಿಸುತ್ತ ಬರಲಾಗುತ್ತಿದೆ. ಇದು ಕುಣಬಿಗಳ ಧಾರ್ಮಿಕ ಪರಂಪರೆಯಾಗಿದೆ.

  • ಬಿ.ಎನ್.‌ ವಾಸರೆ

ಖಾಪ್ರಿ ಜಾತ್ರೆಯ ಒಂದು ವಿಡಿಯೋ ಇಲ್ಲಿದೆ ನೋಡಿ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*