ದಾಂಡೇಲಿ: ಗ್ರಾಮ ಪಂಚಾಯತ ಚುನಾವಣೆ ನಿಮಿತ್ತ ಹಳಿಯಾಳ, ದಾಂಡೇಲಿ, ಜೋಯಿಡಾದ ಎಲ್ಲ ಗ್ರಾಮ ಪಂಚಾಯತಗಳ ಚುನಾವಣಾಧಿಕಾರಿಗಳಿಗೆ ಹಾಗೂ ಸಹಯಕ ಚುನಾವಣಾಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿಯವರು ದಾಂಡೇಲಿ ನಗರಸಭೆ ಸಭಾಭವನದಲ್ಲಿ ಸಭೆ ನಡೆಸಿ ತರಬೇತಿ ನೀಡಿದರು.
ಗ್ರಾಮ ಪಂಚಾಯತಗಳ ಚುನಾವಣೆಯಲ್ಲಿ ನಿರ್ವಹಿಸಬೇಕಾದ ಕಾರ್ಯಗಳು ಹಾಗೂ ಪಾಲಿಸಬೇಕಾದ ಚುನಾವಣಾ ಆಯೋಗದ ನಿಯಮಗಳ ಬಗ್ಗೆ ತಿಳಿಸಿದರಲ್ಲದೇ, ಈ ಬಾರಿ ಆನ್‍ಲೈನ್ ಮೂಲಕ ನಾಮಪತ್ರ ಪಡೆಯುವ ಬಗ್ಗೆಯೂ ಮಾಹಿತಿ ನೀಡಿದರು. ಚುನಾವಣೆಯ ಪ್ರಕ್ರಿಯೆಯ ವಿಚಾರವಾಗಿ ಅಧಿಕಾರಿಗಳಲ್ಲಿ ಇರುವ ಸಂಶಯಗಳ ಬಗ್ಗೆ ಉತ್ತರಿಸಿದರಲ್ಲದೇ, ಪ್ರತೀ ಮತಗಟ್ಟೆಗಳಲ್ಲಿ ಕೈಗೊಳ್ಳಬೇಕಾದ ಕೆಲಸಗಳು ಹಾಗೂ ಮತದಾರರ ಯಾದಿ ಮತ್ತಿತರ ವಿಚಾರಗಳ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾದ ಎಲ್ಲ ಗ್ರಾಮ ಪಂಚಾಯತಿಗಳಿಗೆ ನೇಮಿಸಲಪಟ್ಟ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಭಾಗವಹಿಸಿದ್ದರು.
ಹಳಿಯಾಳ ತಹಶೀಲ್ದಾರ ವಿದ್ಯಾಧರ ಗುಳಗುಳಿ ಸ್ವಾಗತಿಸಿದರು. ದಾಂಡೇಲಿ ತಹಶೀಲ್ದಾರ ಶೈಲೇಶ್ ಪರಮಾನಂದ ವಂದಿಸಿ, ನಿರ್ವಹಿಸಿದರು.
Be the first to comment