ಹಳಿಯಾಳ ತಾಲೂಕಿನ ಹಿರಿಯ ಹಾಗೂ ಬಹುಭಾಷಾ ಪತ್ರಕರ್ತ ಬಿ.ಆರ್. ವಿಭೂತೆ (79) ರವಿವಾರ ಮುಂಜಾನೆ ಕೊನೆಯುಸಿರೆಳೆದರು.
ಸುಮಾರು ನಾಲ್ಕು ದಶಕಗಳಿಗೂ ಹೆಚ್ಚುಕಾಲ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಕನ್ನಡ, ಇಂಗ್ಲೀಷ, ಮರಾಟಿ ಪತ್ರಿಕೆಗಳಿಗೆ ಸುದ್ದಿ ನೀಡುತ್ತಿದ್ದರು. ಮರಾಠಿ ಯಲ್ಲಿ ಅಕ್ಷರಾಭ್ಯಾಸ ಮಾಡಿದ್ದರಾದರೂ ಇಂಗ್ಲೀಷ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು.
ತಾಲೂಕಿನ ರಾಜಕೀಯ, ಸಾಮಾಜಿಕ, ಸಾಹಿತ್ಯ ಮತ್ತು ಸಾಂಸ್ಕ್ರತಿಕ ಹಾಗೂ ವರ್ತಮಾನ ಸಂಗತಿಗಳ ಬಗ್ಗೆ ಒಳ ಸುಳಿವಿನ ಅರಿವಿದ್ದ ವಿಭೂತೆಯವರು ಪ್ರಭುದ್ದ ಬರಹಗಾರರಾಗಿದ್ದರು. ಪತ್ರಿಕಾ ಬದುಕಿನ ಜೊತೆಗೆ ಕೆಲ ಕಾಲ ಮನೆಯಲ್ಲೇ ಟ್ಯೂಶನ್ ಕ್ಲಾಸ ನಡೆಸಿದ್ದ ಇವರು ಹಲವಾರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಿದ್ದರು.
ಹಳೆಯ ಹಿಂದಿ ಚಿತ್ರಗೀತೆಗಳ ಅಭಿಮಾನಿಗಳಾಗಿದ್ದ ಇವರು ಹಲವಾರು ವರ್ಷಗಳ ಕಾಲ ರಸಮಂಜರಿ ಕಾರ್ಯಕ್ರಮ ಆಯೊಜಿಸಿ ಸಾಂಸ್ಕ್ರತಿಕವಾಗಿಯೂ ಕೊಡುಗೆ ನೀಡಿದವರಾಗಿದ್ದರು.
ಇವರ ಪತ್ರಿಕಾ ಜೀವನದ ಸೇವೆಗಾಗಿ ರಾಜ್ಯ ಮಟ್ಟದ ಮಾದ್ಯಮ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ಮಟ್ಟದ ಶಾಮರಾವ ಪ್ರಶಸ್ತಿ, ಕಸಾಪ ಗೌರವ ಸನ್ಮಾನ ಸೇರಿದಂತೆ ಹಲವಾರು ಗೌರವಗಳು ಸಂದಿವೆ.
ಮೃತರು ಮಡದಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ: ಬಿ.ಆರ್. ವಿಭೂತೆಯವರ ನಿಧನಕ್ಕೆ ಶಾಸಕ ಆರ್. ವಿ. ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್, ಮಾಜಿ ಶಾಸಕ ಸುನೀಲ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ. ಹೆಗಡೆ ಹಾಗೂ ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ.
Be the first to comment