ದಾಂಡೇಲಿ ನಗರಸಭಾ ಅಧ್ಯಕ್ಷರಾಗಿ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ

ನಿರೀಕ್ಷೆಯಂತೆ ಕಾಂಗ್ರೆಸ್ ಮಡಿಲಿಗೆ ನಗರಾಡಳಿತ

ದಾಂಡೇಲಿ: ದಾಂಡೇಲಿ ನಗರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ನ ಸರಸ್ವತಿ ರಜಪೂತ, ಉಪಾಧ್ಯಕ್ಷರಾಗಿ ಸಂಜಯ ನಂದ್ಯಾಳಕರ ಬಹುಮತದಿಂದ ಆಯ್ಕೆಯಾಗಿದ್ದಾರೆ.

ನಿರೀಕ್ಷೆಯಂತೆಯೇ ಕಾಂಗ್ರೆಸ್ ಪಕ್ಷ ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದಿದೆ.

ನಗರಸಭೆ ಸಭಾಭವನದಲ್ಲಿ ರವಿವಾರ ಸಂಜೆ 5 ಗಂಟೆಯಿಂದ 8.30 ರವರೆಗೂ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಎಮ್. ರವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
31 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 16 ಸದಸ್ಯರನ್ನು ಗೆದ್ದು ಕೊಂಡಿತ್ತು. ಪಕ್ಷೇತರ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದರೊಂದಿಗೆ ಕಾಂಗ್ರೆಸ್ 20 ಸದಸ್ಯ ಬಲ ಹೊಂದಿತ್ತು. ಭಾ.ಜ.ಪ. 11 ಸದಸ್ಯ ಬಲ ಹೊಂದಿತ್ತು.
ಅಧ್ಯಕ್ಷ , ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸರಸ್ವತಿ ರಜಪೂತ್ ಅಧ್ಯಕ್ಷ ಹುದ್ದೆಗೆ, ನಂದ್ಯಾಳಕರ ಉಪಾಧ್ಯಕ್ಷ ಹುದ್ದೆಗೆ ನಾಮ ಪತ್ರ ಸಲ್ಲಿಸಿದ್ದರು. ಭಾ.ಜ.ಪ. ದಿಂದ ಅಧ್ಯಕ್ಷ ಹುದ್ದೆಗೆ ಪದ್ಮಜಾ ಜನ್ನು, ಉಪಾಧ್ಯಕ್ಷ ಹುದ್ದೆಗೆ ವಿಷ್ಣು ವಾಜ್ವೆ ನಾಮಪತ್ರ ಸಲ್ಲಿಸಿದ್ದರು.
ಕೈ ಎತ್ತುವ ಮೂಲಕ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನ ಸರಸ್ವತಿ ರಜಪೂತ್ ಹಾಗೂ ಸಂಜಯ ನಂದ್ಯಾಳಕರವರು ಪಕ್ಷೇತರರ ಶಾಸಕ ಆರ್.ವಿ. ದೇಶಪಾಂಡೆಯವರ ಮತವೂ ಸೇರಿದಂತೆ 21 ಮತಗಳನ್ನು ಪಡೆದು ಬಹುಮತದಿಂದ ಆಯ್ಕೆಯಾದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಭಾ.ಜ.ಪ. ದಿಂದ ಸ್ಪರ್ದಿಸಿದ್ದ ಪದ್ಮಜಾ ಜನ್ನು ಹಾಗೂ ವಿಷ್ಣು ವಾಜ್ವೆ 11 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.
ಶಾಸಕ ಆರ್.ವಿ. ದೇಶಪಾಂಡೆಯವರೂ ಸಹ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಚುನಾವಣಾ ಅಧಿಕಾರಿಗಳಾಗಿ ಉಪ ವಿಭಾಗಾಧಿಕಾರಿ ಪ್ರಿಯಾಂಗಾ ಎಮ್. ಕಾರ್ಯನಿರ್ವಹಿಸಿದ್ದರು. ತಹಶೀಲ್ದಾರ ಶೈಲೇಶ ಪರಮಾನಂದ, ಪೌರಾಯುಕ್ತ ಡಾ. ಸಯ್ಯದ್ ಜಾಹೇದ್ ಅಲಿ ಸಹಕರಿಸಿದರು.
ಡಿ.ವೈ.ಎಸ್.ಪಿ. ಶಿವಾನಂದ ಚಲವಾದಿ, ಸಿ.ಪಿ.ಐ. ಪ್ರಭು ಗಂಗನಳ್ಳಿ, ಪಿ.ಎಸ್.ಐ. ಯಲ್ಲಪ್ಪ ಎಸ್., ಹನುಮಂತ ಬಿರಾದರ, ಮಹಾದೇವಿ ನಾಯ್ಕೋಡಿ ಹಾಗೂ ಸಿಬ್ಬಂದಿಗಳು ಬಂದೋಬಸ್ತ ನೀಡಿದ್ದರು. ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಸಯ್ಯದ್ ತಂಗಳ ಹಾಗೂ ಭಾಜಪ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ ಹಾಗೂ ಕಾರ್ಯಕರ್ತರು ನಗರಸಭೆ ಆವರಣದೆದುರು ಸೇರಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಗೆಲುವಿನ ನಂತರ ಕಾಂಗ್ರೆಸ್ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ವಿರೋಧ ಪಕ್ಷವಾದ ಭಾ.ಜ.ಪ. ನಗರ ಸಭಾ ಸದಸ್ಯರೂ ಸಹ ಅಭಿನಂದಿಸಿದ್ದು ಗಮನಾರ್ಹವಾಗಿತ್ತು.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

2 Comments

  1. ನಗರ ಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಸರಸ್ವತಿ ರಜಪೂತ.ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಆದ ಶ್ರೀ ಸಂಜಯ ನಂದ್ಯಾಳ್ಕರ ಅವರಿಗೆ ಹಾರ್ದಿಕ ಅಭಿನಂದನೆಗಳು.💐🙏🏻💐🙏🏻

  2. ದೇಶ್ ಪಾಂಡೆ ಸಾಹೇಬರು ಬಹಳ ಸರಿಯಾದ ನಿರ್ಣಯವನ್ನು ತೆಗೆದು ಕೊಂಡಿದ್ದಾರೆ ಎಲ್ಲ ಕಾಂಗ್ರೆಸ್ಸಿಗರಿಗೆ ಸಂತೊಷ ಆಗಿದೆ

Leave a Reply

Your email address will not be published.


*