ದಾಂಡಿಯಾವೂ ಇಲ್ಲ: ದಾಂಡೇಲಪ್ಪ ಜಾತ್ರೆಯೂ ಇಲ್ಲ: ರಾಮಲೀಲಾ, ರಸಮಂಜರಿಯೂ ನಡೆಯುವುದಿಲ್ಲ..!

ಇತಿಹಾದಲ್ಲೇ ಮೊದಲ ಬಾರಿಗೆ ದಾಂಡೇಲಿ ದಸರಾದ ಮೇಲೆ ಕೊರೊನಾದ ಕರಿನೆರಳು

ದಾಂಡೇಲಿ: ಮಹಾಮಾರಿ ಕೊರೊನಾದ ಕರಿನೆರಳು ದಾಂಡೇಲಿ ದಸರಾದ ಮೇಲೂ ಬಿದ್ದಿದ್ದು, ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಂಡೇಲಿಯಲ್ಲಿ ದಸರಾದ ಸಡಗರವಾಗಿದ್ದ ದಾಂಡಿಯಾ( ಕೋಲಾಟ) ಹಾಗೂ ಇಲ್ಲಿಯ ಗ್ರಾಮದೇವರೇ ಆಗಿರುವ ಸತ್ಪುರುಷ ದಾಂಡೇಲಪ್ಪ ಜಾತ್ರೆ ನಡೆಯುವುದು ಬಹುತೇಕ ಅನಿಶ್ಚಿತವಾಗಿದೆ.

ಪ್ರತೀ ವಿಜಯದಶಮಿಯಂದು ದಾಂಡೇಲಿಯಲ್ಲಿ ದಾಂಡೇಲಪ್ಪ ಜಾತ್ರೆಯನ್ನು ಅತೀ ವಿಜ್ರಂಬಣೆಯಿಂದ ಆಚರಿಸುತ್ತ ಬಂದಿರುವುದು ವಾಡಿಕೆ. ದಾಂಡೇಲಪ್ಪ ಇಂದು ಕೇವಲ ದಾಂಡೇಲಯದ್ದಷ್ಟೇ ಅಲ್ಲ. ಈ ಈ ಭಗದ ಸುತ್ತ ಮುತ್ತಲ ಜನರ ಆರಾದ್ಯ ದೈವ. ಭಾಗಶಹ ದಾಂಡೇಲಪ್ಪನನ್ನು ಈ ಭಾಗದ ಸರ್ವ ಧರ್ಮಿಯರೂ ಆರಾಧಿಸುತ್ತಾರೆ. ಇಲ್ಲಿಯ ಯಾವುದೇ ಮನೆಯಲ್ಲಿ ಏನೇ ಶುಭ ಕಾರ್ಯ ನಡೆದರೂ ದಾಂಡೇಲಪನ್ನು ನೆನೆಸಿಕೊಳ್ಳುವುದು ಒಂದು ಸಂಪ್ರದಾಯವೇ ಆಗಿದೆ.

ದಾಂಡೇಲಪ್ಪ ಜಾತ್ರೆಯ ಒಂದು ನೋಟ

ಆ ಕಾರಣಕ್ಕಾಗಿಯೇ ದಾಂಡೇಲಪ್ಪ ಜಾತ್ರೆ ಕೂಡಾ ಮಹತ್ವ ಪಡೆದುಕೊಳ್ಳುತ್ತದೆ. ಪ್ರತೀ ವಿಜಯದಶಮಿಯಂದೇ ನಡೆಯುವ ಈ ಜಾತ್ರೆಯಲ್ಲಿ ಸಹಸ್ರಾರು ಜನರು ಭಾಗವಹಿಸುತ್ತಿದ್ದರು. ಆದರೆ ಕೊರೊನಾ ಕಾಣಕ್ಕಾಗಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಂಡೇಲಪ್ಪ ಜಾತ್ರೆ ವರ್ಷಂಪ್ರತಿಯಂತೆ ನಡೆಯದೇ, ಕೇವಲ ಸಾಂಪ್ರದಾಯಿಕವಾಗಿ, ಸರಳವಾಗಿ ನಡೆಯಲಿದೆ. ಮಿರಾಶಿಗಲ್ಲಿ ಹಾಗೂ ಹಾಲಮಡ್ಡಿಯಲ್ಲಿ ರುಂಡ ಹಾಗೂ ಮುಂಡಗಳ ಎರಡು ಪ್ರತ್ಯೇಕ ಗುಡಿಯನ್ನು ಹೊಂದಿರುವ ಈ ದಾಂಡೇಲಪ್ಪನ ಜಾತ್ರೆ ನಡೆಯುವುದು ಹಾಲಮಡ್ಡಿಯಲ್ಲಿ. ಈಬಾರಿ ಮಿರಾಶಿಗಲ್ಲಿಯ ದಾಂಡೇಲಪ್ಪನ ಗುಡಿಯಿಂದ ಹಾಲಮಡ್ಡಿವರೆಗೆ ಕೇವಲ ಪಲ್ಲಕ್ಕಿ ಮೆರವಣಿಗೆ ನಡೆದು ಜಾತ್ರೆ ಸರಳವಾಗಿ ನಡೆಯಲಿದೆ. ಇದು ಮಿರಾಶಿ ಕುಟುಂಭದವರ ತೀರ್ಮಾನವೂ ಆಗಿದೆಯಂತೆ.

ಪ್ರತೀ ವರ್ಷ ನಡೆಯುವ ಜನ ಜಾತ್ರೆಯಾಗಲೀ, ಹಣ್ಣಿನ ಹಾಗೂ ಇತರೆ ಆಟಿಕೆ ಮತ್ತು ವಾಣಿಜ್ಯ ಸಾಮಗ್ರಿಗಳ ಅಂಗಡಿಗಳಾಗಲೀ ಜಾತ್ರೆಯಲ್ಲಿ ಇರುವುದಿಲ್ಲ. ಹಿಂದಿನ ವರ್ಷಗಳಲ್ಲಿ ನಡೆಯುವ ಯಾವುದೇ ಸಡಗರ ಹಾಗೂ ಮನರಂಜನೆಗಳೂ ಇರುವುದಿಲ್ಲ. ಜಾತ್ರೆಗಾಗಿ ಜನರೂ ಸಹ ಸೇರುವ ಹಾಗಿಲ್ಲ. ಇದು ಈ ಭಾಗದ ಸಹಸ್ರಾರು ಭಕ್ತರ ಮನಸ್ಸಿಗೆ ಬೇಸರವನ್ನುಂಟು ಮಾಡಿದೆಯಾದರೂ ಅನಿವಾರ್ಯ ವೆನ್ನುತ್ತಾರೆ ಆಡಳಿತದವರು.

ದಾಂಡಿಯಾ

ದಾಂಡಿಯಾವೂ ಇಲ್ಲ: ಗುಜರಾತದಲ್ಲಿ ‘ಗರ್ಬ’ ಎಂದು ಕರೆಯಲ್ಪಡುವ ದಾಂಡಿಯಾ, ದಾಂಡೇಲಿಯ ಜನರ ಆಮದು ಸಂಸ್ಕøತಿಯಾಗಿಬಿಟ್ಟಿದೆ. ಹೊರರಾಜ್ಯದ ಕಂಪನಿ ಉದ್ಯೋಗಿಗಳ ಕಾರಣಕ್ಕೆ ದಾಂಡಿಯಾ ರಾಜ್ಯದಲ್ಲಿ ಮೊದಲು ಆರಂಭವಾಗಿದ್ದೇ ದಾಂಡೇಲಿಯಲ್ಲಿ ಎನ್ನಲಾಗುತ್ತಿದೆ. ಇಲ್ಲಿಯ ಹತ್ತಾರು ಪ್ರದೇಶದಲ್ಲಿ ಅತ್ಯಂತ ವಿಜ್ರಂಬಣೆಯಿಂದ ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆಯಲ್ಪಡುತ್ತಿದ್ದ ಈ ದಾಂಡೇಲಿಯಾ ಈ ಭಾಗದ ದಸರಾದ ಪ್ರಮುಖ ಅಕರ್ಷಣೆಯಾಗಿತ್ತು. ಆದರೆ ಈವರ್ಷ ಈ ಕೊರೊನಾ ಕಾರಣಕ್ಕಾಗಿ ದಾಂಡಿಯಾ ಕೂಡಾ ನಡೆಯುತ್ತಿಲ್ಲ. ಅದಕ್ಕೆ ಆಡಳಿತ ಪರವಾನಿಗೆ ನೀಡದು ಎಂಬ ಮಾಹಿತಿ ಲಭ್ಯವಾಗಿದೆ. ಇದು ಈ ಭಾಗದ ಹಲವಾರು ಸಂಘಟಕರ ಬೇಸರಕ್ಕೆ ಕಾರಣವಾಗಿದೆ.

ರಾಮಲೀಲಾ, ರಸಮಂಜರಿಯೂ ಇಲ್ಲ : ದಾಂಡೇಲಿಯ ದಸರಾದಲ್ಲಿ ಇಲ್ಲಿಯ ವೆಸ್ಟ್‍ಕೋಸ್ಟ್ ಪೇಪರ್ ಮಿಲ್‍ನವರಿಂದ ಡಿಲಕ್ಸ್ ಮೈದಾನದಲ್ಲಿ ನಡೆಯುತ್ತಿದ್ದ ರಾಮಲೀಲಾ ವಿಶೇಷ ಮೆರಗು ತರುತ್ತಿತ್ತು. ಕೆಲ ವರ್ಷಗಳಿಂದ ಇಲ್ಲಿ ಸಿಡಿಮದ್ದಿನ ಕಾರ್ಯಕ್ರಮ ರದ್ದಾಗಿತ್ತಾದರೂ, ಮನೋರಂಜನಾ ಮಳಿಗೆ ಹಾಗೂ ರಸಮಂಜರಿ ಕಾರ್ಯಕ್ರಮ, ದುಷ್ಠರ ಸಂಹಾರಾರ್ಥ ರಾವಣ, ಕುಂಬಕರ್ಣ, ಮೇಘನಾಥರ ಪುತ್ಥಳಿ ದಹಿಸಲಾಗುತ್ತಿತ್ತು. ಈಬಾರಿ ಕೊರೊನಾ ಈ ಸಂಭ್ರಮಕ್ಕೂ ಕುತ್ತು ತಂದಿದೆ. ಒಟ್ಟಾರೆ ಕೊರೊನಾ ಕಾರಣಕ್ಕೆ ದಾಂಡೇಲಿಯ ದಸರಾ ತನ್ನ ಮೆರಗನ್ನು ಕಳೆದುಕೊಂಡಂತಾಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹದ್ದೊಂದು ದುಸ್ಥಿತಿಯನ್ನು ಈ ತಲೆಮಾರಿನ ಜನ ಅನುಭವಿಸುವಂತಾಗಿದೆ.

ಭಕ್ತರ ಸಹಕಾರವಿರಲಿ…
ದಾಂಡೇಲಪ್ಪ ಜಾತ್ರೆ ಈ ಬಾರಿ ಕೊರೊನಾ ಕಾರಣಕ್ಕೆ ಅದ್ದೂರಿಯಾಗಿ ನಡೆಯುವುದಿಲ್ಲ. ಈಬಗ್ಗೆ ದೇವಸ್ಥಾನದವರ ಹಾಗೂ ಆಲೂರು ಗ್ರಾ.ಪಂ ನವರ ಜೊತೆ ಸಭೆ ನಡೆಸಿ ಚರ್ಚಿಸಲಾಗಿದೆ. ಅವರೂ ಸಹ ಸ್ವಯಂ ಪ್ರೇರಣೆಯಿಂದ ಒಪ್ಪಿದ್ದಾರೆ. ಜನ ಸೇರದಂತೆ ಅವರೂ ಸಹ ಕರ ಪತ್ರ ಮುದ್ರಿಸಿ ಮನವಿ ಮಾಡಲಿದ್ದಾರೆ. ಭಕ್ತರ ಸಹಕಾರ ಕೂಡಾ ಅಗತ್ಯ ಎಂದು ತಹಶೀಲ್ದಾರ ಶೈಲೇಶ ಪರಮಾನಂದ ಮನವಿ ಮಾಡಿದ್ದಾರೆ.

ಮೆರವಣಿಗೆಯಷ್ಟೇ…
ಕೊರೊನಾ ಕಾರಣಕ್ಕೆ ಆಡಳಿತದ ಮನವಿ ಪಾಲಿಸುತ್ತೇವೆ. ಪ್ರತೀ ವರ್ಷ ವಿಜ್ರಂಬಣೆಯಿಂದ ನಡೆಯುತ್ತಿದ್ದ ಈ ಜಾತ್ರೆ ಈವರ್ಷ ಕೇವಲ ಸರಳವಾಗಿ ನಡೆಯಲಿದೆ. ಮಿರಾಶಿಗಲ್ಲಿಯಿಂದ ಹಾಲಮಡ್ಡಿಯವರೆಗೆ ಪಲ್ಲಕ್ಕಿ ಮೆರವಣಿಗೆಯಷ್ಟೇ ನಡೆಯಲಿದೆ. ಬೇರೆ ಜನ ಜಾತ್ರೆ ನಡೆಯುವುದಿಲ್ಲ. ಭಕ್ತರು ಸಹಕರಿಸಬೇಕು ಎಂದು ಅರ್ಕಚರಾದ ಗೋಪಾಲ ಮಿರಾಸೀ ಮನವಿ ಮಾಡಿದ್ದಾರೆ.

ದಾಂಡಿಯಾ ನಡೆಯುವುದಿಲ್ಲ…
ಪ್ರತೀವರ್ಷ ದಸರಾದಲ್ಲಿ ನಡೆಯುವ ದಾಂಡಿಯಾ ಈಬಾರಿ ಕೊರೊನಾ ಕಾರಣಕ್ಕೆ ನಡೆಯುವುದಿಲ್ಲ. ಯಾರಿಗೂ ಸಹ ದಾಂಡಿಯಾ ನಡೆಸಲು ಪರವಾನಿಗೆ ನೀಡುವುದಿಲ್ಲ. ದಸರಾ ಸಂದರ್ಭದಲ್ಲಿ ಜನ ಸೇರುವಂತಹ ಯಾವುದೇ ಕಾರ್ಯಕ್ರಮಗಳಿಗೂ ಅವಕಾಶವಿಲ್ಲ ಎಂದು ಡಿ.ವೈ.ಎಸ್.ಪಿ ಶಿವಾನಂದ ಚಲವಾದಿ ತಿಳಿಸಿದ್ದಾರೆ.

ಮನರಂಜನಾ ಮಳಿಗೆ, ಹಣ್ಣಿನಂಗಡಿಗಳಿಲ್ಲ…
ಪ್ರತೀವರ್ಷ ದಾಂಡೇಲಪ್ಪ ಜಾತ್ರೆಯ ದಿನ ಜಾತ್ರೆ ನಡೆಯುವ ದೇವಸ್ಥಾನದ ಸುತ್ತಲೂ ಹೂವು, ಹಣ್ಣಿನಂಗಡಿಗಳು, ಮನರಂಜನೆಯ ಮಳಿಗೆಗಳು ಹಾಕಲ್ಪಡುತ್ತಿದ್ದವು. ಇದನ್ನು ಆಲೂರು ಪಂಚಾಯತ್ ನೋಡಿಕೊಳ್ಳುತ್ತಿತ್ತು. ಆದರೆ ಕೊರೊನಾ ಕಾರಣಕ್ಕೆ ಈಬಾರಿ ಅದಕ್ಕೆ ಅವಕಶವಿಲ್ಲ ಎಂದು ಆಲೂರು ಗ್ರಾ.ಪಂ. ಆಡಳಿತಾಧಿಕಾರಿ ಡಾ. ಸಯ್ಯದ್‌ ಜಾಹೇದ್‌ ಅಲಿ ತಿಳಿಸಿದ್ದಾರೆ.

ರಾಮಲೀಲಾ, ರಸಮಂಜರಿಯಿಲ್ಲ…
ಕೊರೊನಾ ಕಾರಣಕ್ಕೆ ಈಬಾರಿ ರಾಮಲೀಲಾ ಉತ್ಸವವವಿಲ್ಲ. ಸಣ್ಣ ಆಕಾರದ ರಾವಣ, ಕುಂಬಕರ್ಣ, ಮೇಘನಾಥರ ಪುತ್ಥಳಿ ನಿರ್ಮಿಸಿ ಸಾಂಕೇತಿಕವಾಗಿ ದಹಿಸಲಿದ್ದೇವೆ. ಯಾವುದೇ ರಸಮಂಜರಿ ಹಾಗೂ ಮನರಂಜನೆಗಳಿರುವುದಿಲ್ಲ ಎಂದು ಕಾಗದ ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದ್ದಾರೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಕೊರೋನಾದ ಕರಿನೆರಳು…ಉತ್ಸಾಹ ಕುಗ್ಗುವಂತೆ ಮಾಡಿದೆ….ಮೊದಲು ಆರೋಗ್ಯ. ಬದುಕು..

Leave a Reply

Your email address will not be published.


*