ವಿಚಾರಣೆಯ ಹೆಸರಲ್ಲಿ ದಲಿತನ ಎದೆಯ ಮೇಲೆ ಬೂಟುಗಾಲಿಟ್ಟು ಅಮಾನೀಯವಾಗಿ ಥಳಿಸಿದ ಅರಣ್ಯಾಧಿಕಾರಿಗಳು

ಜೋಯಿಡಾ ತಾಲೂಕಿನ ವಿರ್ನೋಲಿ ವಲಯ ಅರಣ್ಯ ವ್ಯಾಪ್ತಿಯ ಪಣಸೋಲಿಯಲ್ಲಿ ಉಸುಕು ದಾಸ್ತಾನು ಮಾಡಿದ ಪ್ರಕರಣಕ್ಕೆ ಸಂಬಂದಿಸಿ ಅರಣ್ಯ ಸಿಬ್ಬಂದಿಗಳು ವ್ಯಕ್ತಿಗಳೀರ್ವರ ಮೇಲೆ ನಡೆಸಿದ ದೌರ್ಜನ್ಯ ಪ್ರಕರಣ ಇನ್ನೂ ಚರ್ಚೆಯಲ್ಲಿರುವಾಗಲೇ ಇದೇ ಅರಣ್ಯ ವಲಯದಲ್ಲಿ ಮತ್ತೊಂದು ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿದೆ.

ಜಿಂಕೆ ಬೇಟೆ ಮಾಡಿದ್ದಾರೆಂಬ ಆರೋಪದಡಿ ಬಂಧಿಸಲ್ಪಟ್ಟ ಆರೋಪಿಗಳನ್ನು ಮಾರಣಾಂತಿಕವಾಗಿ ಥಳಿಸಿರುವುದಷ್ಟೇ ಅಲ್ಲದೇ, ಬಂಧಿಸಿದ ಓರ್ವ ಆರೋಪಿಯನ್ನು ಬಿಟ್ಟು ಉಳಿದವರ ಮೇಲೆ ಪ್ರಕರಣ ದಾಖಲಿಸಿರುವುದು ಗೊತ್ತಾಗಿದೆ.
ಸೆಪ್ಟಂಬರ 24 ರಂದು ಈ ಘಟನೆ ನಡೆದಿತ್ತು. ಜಿಂಕೆ ಬೇಟೆಯಾಡಿದ್ದ ಮೂವರನ್ನು ಬಂದಿಸಿದ್ದೇವೆ ಎಂದು ವಿರ್ನೋಲಿ ವಲಯ ಅರಣ್ಯ ಅಧಿಕಾರಿಗಳು ಆರೋಪಿಗಳ ಹಿಂದೆ ನಿಂತು ಪೋಟೋ ತೆಗೆಯಿಸಿ ಮಾದ್ಯಮದವರಿಗೂ ಮಾಹಿತಿ ನೀಡಿದ್ದರು. ಆದರೆ ಅಸಲಿಗೆ ಆ ಮಾಹಿತಿ ಅಪೂರ್ಣವಾಗಿತ್ತೆಂಬುದು, ನ್ಯಾಯಾಲಯಕ್ಕೂ, ಮೇಲಧಿಕಾರಿಗಳಿಗೂ ಹಾಗೂ ಮಾದ್ಯಮದವಿರಿಗೂ ಸಹ ತಪ್ಪು ಮಾಹಿತಿ ನೀಡಿದ್ದರೆಂಬುದು ತಡವಾಗಿ ಗೊತ್ತಾಗಿದೆ.

ಹಾಗಾದರೆ ನಡೆದಿದ್ದೇನು : ಸೆ. 24 ರಂದು ಮದ್ಯಾಹ್ನದ ಹೊತ್ತಿಗೆ ಜನತಾ ಕಾಲನಿಯ ಬಳಿ ಶ್ವಾನವೊಂದು ಜಿಂಕೆಯನ್ನು ಅಟ್ಟಿಸಿಕೊಂಡು ಬಂದು ಜನರೆದುರೇ ಬೇಟೆಯಾಡಿತ್ತು. ಗಾಯಗೊಂಡ ಜಿಂಕೆಯನ್ನು ರಕ್ಷಿಸಲು ಅಲ್ಲಿಯ ಗ್ರಾಮಸ್ಥರು ಮುಂದಾಗಿದ್ದರು. ಆದರೆ ಅದು ಸಾದ್ಯವಾಗಲಿಲ್ಲ. ಆಗ ತಕ್ಷಣ ಅಲ್ಲಿಯ ಗ್ರಾಮಸ್ಥರು ವಿರ್ನೋಲಿ ಅರಣ್ಯದ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಜಿಂಕೆಯೊಂದನ್ನು ನಾಯಿ ಬೇಟೆಯಾಡಿದ್ದು, ಬಂದು ಪರಿಶೀಲಿಸುವಂತೆ ಹೇಳಿದ್ದರು. ಆದರೆ ವಿರ್ನೋಲಿ ವಲಯದ ಯಾವೊಬ್ಬ ಸಿಬ್ಭಂದಿಯಾಗಲಿ ರಾತ್ರಿಯವರೆಗೂ ಸ್ಥಳಕ್ಕೆ ಬರಲೇ ಇಲ್ಲ.

ರಾತ್ರಿಯಾಗುವುದನ್ನೇ ಕಾಯುತ್ತಿದ್ದವರೆಂಬಂತೆ ವಿರ್ನೋಲಿ ಅರಣ್ಯ ಸಿಬ್ಬಂದಿಗಳು ಕೆಲವರ ಮನೆ ಮನೆಗೆ ನುಗ್ಗಿ ‘ನೀವು ಜಿಂಕೆ ಬೇಟೆಯಾಡಿದ್ದೀರಿ’ ಎನ್ನುತ್ತ ಹಿಡಿದುಕೊಂಡು ಹೋದರು. ರಾತ್ರಿಯಿಡೀ ಬೈಲಪಾರನಲ್ಲಿರುವ ವಿರ್ನೋಲಿ ವಲಯ ಅರಣ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ನಾಲ್ವರನ್ನು ಇಟ್ಟುಕೊಂಡು ಹಿಗ್ಗಾ ಮುಗ್ಗಾ ಥಳಿಸಿದರು. ಅಷ್ಟೇ ಅಲ್ಲ ಬೇರೆ ಮತ್ಯಾರು ಇದ್ದಾರೆ, ಅವನಿದ್ದನೇ, ಇವನಿದ್ದನೇ ಎನ್ನುತ್ತ, ಬೇರೆಯವರ ಹೆಸರು ಹೇಳುವಂತೆ ಒತ್ತಾಯಿಸುತ್ತ, ತಂದೆ-ತಾಯಿಗಳ ಮೇಲೆ ಅವಾಚ್ಯ ಶಬ್ದಗಳಿಂದ ಬೈಯುತ್ತ ಅಮಾನೀಯವಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲ ಒಂದಿಬ್ಬರು ಅರಣ್ಯಸಿಬ್ಬಂದಿಗಳು ಸಂದೀಪ ಜಾಧವ್ ಎಂಬ ವ್ಯಕ್ತಿಯ ಎದೆಯ ಮೇಲೆ ತನ್ನ ಬೂಟುಗಾಲಿಟ್ಟು ಒದ್ದಿದ್ದಾನಲ್ಲದೇ, ದೇಹದ ಬೇರೆ ಬೇರೆ ಮರ್ಮಾಂಗಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಕಿವಿ, ತಲೆ ಭಾಗದಲ್ಲಿಯೂ ಗಾಯಗಳಾಗಿವೆ. ಮನೆಯವರು ಬಂದು ಹೊಡೆಯದಂತೆ ಗೋಗರೆದರೂ ಬಾಗಿಲು ಮುಚ್ಚಿ ಥಳಿಸಿದ್ದಾರೆ.

ಮುಂಜಾನೆ ನಾಲ್ವರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನಂತರ ಅವರನ್ನು ಧಾರವಾಡ ಜೈಲಿಗೆ ಸಾಗಿಸುವಾಗ ಓರ್ವನನ್ನು ಬಿಟ್ಟು ಕಳುಹಿಸಿದ್ದಾರೆ. ಧಾರವಾಡ ಜೈಲಿನಲ್ಲಿ ಎರಡು ದಿನ ಇದ್ದ ಸಂದೀಪ ಜಾಧವ್, ಪರಶುರಾಮ ಜಾಧವ್ ಹಾಗೂ ಗೋಪಾಲ ಮೇದಾರ ಇವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅರಣ್ಯ ಸಿಬ್ಬಂದಿಗಳ ಥಳಿತದಿಂದ ಗಾಯಗೊಂಡ ಇವರಿಗೆ ಎಲ್ಲಯೂ ಆರೋಗ್ಯ ತಪಾಸಣೆ ನೀಡದಿರುವುದೂ ಸಹ ಅರಣ್ಯ ಇ;ಆಖೆಯ ಅಮಾನವೀಯತೆಯೇ ಆಗಿದೆ. ಜಾಮೀನಿನ ಮೇಲೆ ಮನೆಗೆ ಬಂದ ಇವರು ಆರೋಗ್ಯ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಲ್ಲಿ ಸಂದೀಪ ಜಾಧವ್ ಎಂಬ ವ್ಯಕ್ತಿ ಈಗಲೂ ಎದ್ದು ನಡೆದಾಡಲಾಗದೇ ಮನೆಯಲ್ಲಿಯೇ ನಿತ್ರಾಣನಾಗಿ ಮಲಗಿಕೊಂಡು ನೋವಿನಿಂದ ನರಳಾಡುತ್ತಿದ್ದಾನೆ. ಬೂಟುಗಾಲಿನಿಂದ ಎದೆಯ ಮೇಲೆ ಒತ್ತಿದ ಕಾರಣಕ್ಕೆ ಎದೆ ನೋವು ಎನ್ನುತ್ತಿದ್ದಾನೆ. ಕಾಲು, ಕಿವಿ ಹಾಗೂ ಮರ್ಮಾಂಗದ ಸಂಧಿಭಾಗಗಳಲ್ಲಿ ಉರಿಯಿದೆ ಎನ್ನುತ್ತಿದ್ದಾನೆ.

ಅರಣ್ಯ ಸಿಬ್ಬಂದಿಗಳ ದೌಜನ್ಯ ಆಕ್ಷೇಪಿಸುತ್ತಿರುವ ಗ್ರಾಮಸ್ಥರು

ಗ್ರಾಮಸ್ಥರರ ಆಕ್ಷೇಪ: ನಮ್ಮ ಪ್ರತಿನಿಧಿ ಶುಕ್ರವಾರ ಜನತಾ ಕಾಲನಿಯ ಗಾಯಾಳು ಮನೆಗೆ ಬೇಟಿ ನೀಡಿದಾಗಲೂ ಅರಣ್ಯ ಸಿಬ್ಬಂದಿಗಳಿಂದ ಥಳಿತಕ್ಕೊಳಗಾದ ಸಂದೀಪ ಜಾಧವ್ ನೋವಿನಿಂದ ನರಳುತ್ತಲೇ ಇದ್ದ. ಜೊತೆಗೆ ಅಲ್ಲಿ ಸೇರಿದ್ದ ಮತ್ತೀರ್ವರು ಆರೋಪಿಗಳಾದ ಪರಶುರಾಮ ಜಾಧವ್ ಹಾಗೂ ಗೋಪಾಲ ಮೇದಾರವರು ಅರಣ್ಯ ಸಿಬ್ಬಂದಿಗಳು ತಮಗೆ ನೀಡಿದ ದೈಹಿಕ ಹಿಂಸೆಯ ಬಗ್ಗೆ ಹೇಳಿಕೊಂಡರಲ್ಲದೇ, ತಮ್ಮ ಜೊತೆಯೇ ಇದ್ದ ಮೊತ್ತೋರ್ವ ಆರೋಪಿಯನ್ನು ಬಿಟ್ಟು ಕಳುಹಿಸಿದ ಬಗ್ಗೆಯೂ ತಿಳಿಸಿದರು. ಅಲ್ಲಿ ಸೇರಿದ್ದ ಗ್ರಾಮಸ್ಥರೂ ಸಹ ಅರಣ್ಯ ಸಿಬ್ಬಂದಿಗಳು ಈ ಪ್ರಕರಣವೂ ಸೇರಿ ಕ್ಷುಲ್ಲಕ ಕಾರಣಗಳಿಗಾಗಿ ನಿರಂತರವಾಗಿ ತಮ್ಮ ಮೇಲೆ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಅಳಲು ತೋಡಿಕೊಂಡರು. ಹಾಗೂ ಈ ಪ್ರಕರಣದಲ್ಲಿ ಇನ್ನೂ ಮೂವರ ಹೆರಸರಿದ್ದು ಅವರನ್ನೂ ಬಂಧಿಸದೇ ಬಿಟ್ಟಿರುವ ಬಗ್ಗೆಯೂ ಆಕ್ಷೇಪಿಸಿದರು.

ಮಾಹಿತಿ ನೀಡಿದರೂ ಬಾರದ ಅರಣ್ಯ ಸಿಬ್ಬಂದಿಗಳು
ಜನತಾ ಕಾಲನಿಯಲ್ಲಿ ನಾಯಿಯೊಂದು ಜಿಂಕೆಯನ್ನು ಅಟ್ಟಿಸಿಕೊಂಡು ಬಂದು ಬೇಟೆಯಾಡಿ ಕೊಂದಿರುವ ಮಾಹಿತಿಯನ್ನು ವಿರ್ನೋಲಿ ಅರಣ್ಯ ಸಿಬ್ಬಂದಿಗಳಿಗೆ ನೀಡಿದರೂ ಸಹ ಯಾವೊಬ್ಬ ಸಿಬ್ಬಂದಿಯೂ ಸ್ಥಳಕ್ಕೆ ಬಾರದೇ ನಿರ್ಲಕ್ಷಿಸಿದ್ದಾರೆ. ಆದರೆ ರಾತ್ರಿಯಾದ ಮೇಲೆ ಕೆಲವರ ಮನೆ ಮನೆಗೆ ಬಂದು ಜಿಂಕೆಯನ್ನು ನೀವೇ ಜಿಂಕೆ ಕೊಂದಿರುವಿರೆಂದು ಆರೋಪಿಸಿ ಬಲತ್ಕಾರದಿಂದ ಎಳೆದೊಯ್ದು ಪ್ರಕರಣ ದಾಖಲಿಸಿ ಪೌರುಷ ಮೆರೆದಿದ್ದಾರೆ. ಇದು ಗ್ರಾಮಸ್ಥರ ಆರೋಪವಾಗಿದೆ.

ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೊಳಗಾಗಿ ನಿತ್ರಾಣನಾಗಿರುವ ಸಂದೀಪ್

ದಲಿತ ವ್ಯಕ್ತಿಯ ಮೇಲೆ ಅರಣ್ಯಾಧಿಕಾರಿಗಳ ದೌರ್ಜನ್ಯ
ವಿಚಾರಣೆಯ ವೇಳೆ ಅರಣ್ಯ ಸಿಬ್ಬಂದಿಗಳಿಂದ ಥಳಿತಕೊಳಗಾದ ಸಂದೀಪ ಜಾಧವ್ ಎಂಬವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಜೊರೆ ಮತ್ತೊರ್ವ ಆರೋಪಿಯಾಗಿ ತಳಿತಕ್ಕೊಳಗಾದ ಗೋಪಾಲ ಮೇದಾರ ಕೂಡಾ ಪರಿಶಿಷ್ಠ ಪಂಗಡಕ್ಕೆ ಸೇರಿದವರಾಗಿದ್ದಾರೆ. ಈ ಪ್ರಕರಣ ಸಮಗ್ರವಾಗಿ ತನೀಖೆಯಾದರೆ ದಲಿತ ದೌರ್ಜನ್ಯ ಕಾಯಿದೆಗೊಳಪಡುತ್ತದೆ ಎನ್ನುತ್ತಾರೆ ಕಾನೂನು ತಜ್ಞರು.

ಒಪ್ಪಿಕೊಂಡರೂ ಹೊಡೆಯವುದು ಬಿಡಲಿಲ್ಲ
ನಾವು ಜಿಂಕೆಯನ್ನು ಕೊಂದಿಲ್ಲ. ಆದರೆ ಅರಣ್ಯ ಸಿಬ್ಬಂದಿಗಳು ನಮ್ಮನ್ನು ಕರೆದುಕೊಂಡು ಹೋಗಿ ರಾತ್ರಿಯಿಡೀ ಕೋಣೆಯಲ್ಲಿಟ್ಟು ಥಳಿಸಿದ್ದಾರೆ. ಅವರ ಥಳಿತ ಭಯಕ್ಕೆ ನಾವು ಆರೋಪ ಒಪ್ಪಿಕೊಂಡರೂ ಥಳಿಸುವುದನ್ನು ಬಿಡಲಿಲ್ಲ. ನನ್ನ ಎದೆಯ ಮೇಲೆ ಬೂಟು ಕಾಲು ಇಟ್ಟು ಹೊಡೆದರು. ನನಗೆ ಈಗಲೂ ಎದ್ದು ನಡೆದಾಡಲು ಆಗುತ್ತಿಲ್ಲ. ನಾಲ್ವರನ್ನು ಹಿಡಿದುಕೊಂಡು ಹೋದರು. ಆದರೆ ಮೂವರ ಮೇಲೆ ಮಾತ್ರ ಪ್ರಕರಣ ದಾಖಲಿಸಿದ್ದಾರೆ. ನಾವು ಕಾಡಿಗೆ ಅಣಬೆ ತರಲು ಹೋದರೂ ಹಿಡಿದು ಹೊಡೆಯುತ್ತಾರೆ. ಹಿಂದೆಯೂ ಇದೇ ರೀತಿ ಥಳಿಸಿದ್ದಿದೆ. ನಮಗೆ ಅರಣ್ಯ ಇಲಾಖೆಯವರ ದೌರ್ಜನ್ಯ ಸಾಕಾಗಿ ಹೋಗಿದೆ. ಅವರ ಹಿಂಸೆಯಿಂದ ಬದುಕುವುದೇ ಕಷ್ಟವಾಗುತ್ತಿದೆ ಎನ್ನುತ್ತಾನೆ ಥಳಿತಕ್ಕೊಳಗಾದ ಸಂದೀಪ ರಾಮಾ ಜಾಧವ್.

ನನ್ನ ಗಮನಕ್ಕಿಲ್ಲ, ಪರಿಶೀಲಿಸುತ್ತೇನೆ
ಜನತಾ ಕಾಲನಿಯಲ್ಲಿ ಜಿಂಕೆ ಸಾವಿನ ಪ್ರಕರಣದಲಿ ಆರೋಪಿಗಳ ಬಂಧನದ ಬಗ್ಗೆ ಮಾಹಿತಿಯಿದೆ. ಆದರೆ ಬಂಧಿತರಲ್ಲಿ ಕೆಲವರನ್ನು ಬಿಟ್ಟಿರುವ ಬಗ್ಗೆ ಹಾಗೂ ವಿಚಾರಣೆಯ ವೇಳೆ ಅರಣ್ಯ ಸಿಬ್ಬಂದಿಗಳು ಬಂಧಿತರ ಮೇಲೆÀ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿಯಿಲ್ಲ. ವಿಚಾರಣೆಯ ಹೆಸರಲ್ಲಿ ಥಳಿಸಿದ್ದರೆ ಅದು ತಪ್ಪು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ತಪ್ಪಾಗಿದ್ದರೆ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*