ಪ್ರಯೋಗಶೀಲ, ಪ್ರತಿಭಾವಂತ ಶಿಕ್ಷಕ ಪಿ.ಆರ್.‌ ನಾಯ್ಕ

ಈ ಮತ್ಸರ ಎನ್ನುವುದು ಪ್ರತಿಯೊಬ್ಬನಿಗೂ ಅಂಟಿದ ಮಹಾಶಾಪ. ತನಗಿಲ್ಲ ತನಗಿಲ್ಲ ಎಂದು ಬಾಯಲ್ಲಿ ಹೇಳಿದರೂ ಅಲ್ಲೆಲ್ಲೋ ನಮ್ಮೊಳಗೆ ಅದು ಅಡಗೇ ಇದೆ. ಎಂತೆಂತಹ ಮೇಧಾವಿಗಳನ್ನೂ, ಖ್ಯಾತ ವ್ಯಕ್ತಿಗಳ ಜೀವನವನ್ನೂ ಹತ್ತಿರದಿಂದ ನೋಡಿದಾಗಲೂ ನನಗೆ ಇದರ ಎಳೆಯೊಂದು ಗೋಚರಿಸದೇ ಇರುವುದಿಲ್ಲ. ಅಧ್ಯಯನ ಮತ್ತು ಅನುಭವ ಇದನ್ನು ಕಡಿಮೆಗೊಳಿಸಬಹುದಾದರೂ ಬುಡಸಮೇತ ಕಿತ್ತೆಸೆಯಲಾರದು. ದಾಯಾದಿ ಮಾತ್ಸರ್ಯ, ವೃತ್ತಿ ಮಾತ್ಸರ್ಯ, ಜಾತಿ ಮಾತ್ಸರ್ಯ, ಹೀಗೆ ಅವುಗಳಲ್ಲೇ ನಾನಾ ಬಗೆಗಳುಂಟು. ಅದು ಹಿರಿಕಿರಿಯರೆನ್ನುವ ಭೇದವಿಲ್ಲದೇ ಬರುವ ಮಹಾರೋಗ. ಒಂದು ಲೆಕ್ಕಕ್ಕೆ ಕೊರೋನಾಕ್ಕಿಂತಲೂ ಅದು ಭೀಕರವಾದದ್ದು. ಮಾತ್ಸರ್ಯಕ್ಕೆ ಮದ್ದಿಲ್ಲ ಎಂಬ ಗಾದೆ ಮಾತೇ ಇದೆಯಲ್ಲ. ವೃತ್ತಿ ಒಂದೇ ಆದರೂ ಜಾತಿ ಬೇರೆ ಆದರೂ ನನ್ನನ್ನು ಅಪಾರವಾಗಿ ಪ್ರೀತಿಸುವ, ಗೌರವಿಸುವ, ಕಾಳಜಿಯ ಕಣ್ಣುಗಳಲ್ಲಿ ನೋಡುವ, ಯಾರೇನೇ ಅಂದುಕೊಂಡರೂ ನಾಲ್ಕು ಜನರೆದುರಿಗೆ ಧೈರ್ಯದಿಂದ ಹೇಳುವ ಖ್ಯಾತ ಸಾಹಿತಿ ಶಿಕ್ಷಕರಾದ ಪಿ.ಆರ್.ನಾಯ್ಕ ಹೊಳೆಗದ್ದೆ ಇವರು ನನ್ನ ಇಂದಿನ ಅಕ್ಷರ ಅತಿಥಿ.

ಎಷ್ಟೋ ದಿನವಾಗಿ ಹೋಯಿತು ನಿಮ್ಮದೊಂದು ಸುಂದರ ಭಾವಚಿತ್ರ ನನಗೆ ಬೇಕಿತ್ತು ಅಂತ. ಆದರೆ ಸಂದೀಪ್ ನೀವು ಸುಮ್ಮನಿರಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಸಾಧನೆಯ ಯಶೋಗಾಥೆ ಹೀಗೆ ಮುಂದುವರೆಯಲಿ…ಅಂತ ಬೆನ್ನು ತಟ್ಟುವವರೇ ವಿನಹ ನನಗಿಂದಿಗೂ ಒಂದು ಭಾವಚಿತ್ರ ಳುಹಿಸಿಕೊಡದ ಪಿ.ಆರ್.ನಾಯ್ಕರು ಮೊನ್ನೆ ಮೊನ್ನೆ ಶಿಕ್ಷಕರ ದಿನಾಚರಣೆಯ ದಿನ ನನ್ನ ಭಾವಚಿತ್ರವನ್ನೇ ಹಾಕಿ ನಗುಮೊಗದ ಸಂದೇಶ ಬಿತ್ತುವ ಶಿಕ್ಷಕ ಸಂದೀಪ ಎಂದು ನನ್ನ ಬಗೆಗೇ ದೊಡ್ಡದೊಂದು ಲೇಖನವನ್ನು ಕರಾವಳಿ ಮುಂಜಾವಿನಲ್ಲಿ ಪ್ರಕಟಿಸಿಬಿಟ್ಟರು. ಅವರೊಂದು ಲೇಖನ ಬರೆದರು ಎಂದು ಒಂದು ಸಣ್ಣ ಪ್ರತಿಕ್ರಿಯೆಯನ್ನೂ ಅವರ ಬಗ್ಗೆ ಬರೆಯಲಿಲ್ಲ. ಯಾಕೆಂದರೆ ನಾನು ಬರೆಯುವ ಮುಂಚೆಯೇ ಅವರು ನನ್ನನ್ನು ಗೌರವಾಕ್ಷರಗಳಿಂದ ಸನ್ಮಾನಿಸಿದ್ದು ಮುಜುಗರ ತಂದಿತು. ವಯಸ್ಸು, ಅನುಭವ, ಹಾಗೂ ಆತ್ಮಶಃ ಹಿರಿಯರಾದ ವ್ಯಕ್ತಿಯೊಬ್ಬರು ನನ್ನ ಕುರಿತಾಗಿ ಶಿಕ್ಷಕರ ದಿನಾಚರಣೆಯ ದಿನವೇ ಹೀಗೊಂದು ಲೇಖನ ಬರೆದಾಗ ನನಗಿಂತ ನನ್ನ ತಂದೆ ತಾಯಿಗಳಿಗೆ ಹೆಚ್ಚು ಖುಷಿಯಾಗಿತ್ತು.

ಕಲಾವಿದನಾಗಿ ಪಿ.ಆರ್.‌ ನಾಯ್ಕ

ಪಿ.ಆರ್ ನಾಯ್ಕರು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹೊಳೆಗದ್ದೆಯವರು. ವೃತ್ತಿಯಿಂದ ಶಿಕ್ಷಕರು. ಪ್ರವೃತ್ತಿಯಿಂದ ಲೇಖಕರು. ಖಾಲಿ ಕುಳಿತುಕೊಳ್ಳುವ ಜನವೇ ಅಲ್ಲ ಅವರು. ನಿರಂತರ ಕ್ರಿಯಾಶೀಲತೆ, ಹಿಡಿದ ಕೆಲಸದಲ್ಲಿ ಬದ್ಧತೆ, ಪ್ರಾಮಾಣಿಕತೆ ಮತ್ತು ನಿಷ್ಠೆ, ಸಹೃದಯತೆ, ಅಧ್ಯಯನಶೀಲತೆ, ನಾಯಕತ್ವ, ಸ್ನೇಹಪರತೆ ಹೀಗೆ ಪ್ರತಿಯೊಂದರಲ್ಲೂ ಪಿ.ಆರ್.ನಾಯ್ಕರು ವಿಶೇಷ ಎನಿಸಿಕೊಳ್ಳುತ್ತಾರೆ. ಉತ್ತರ ಕನ್ನಡ ಜಿಲ್ಲೆ ಕಂಡ ಅತ್ಯುತ್ತಮ ಸಾಹಿತಿಗಳ ಸಾಲಿನಲ್ಲಿ ಪಿ.ಆರ್ ನಾಯ್ಕರೂ ಒಬ್ಬರು. ಉತ್ತಮ ಸಂಘಟಕರಾಗಿ, ಕಥೆಗಾರರಾಗಿ, ಕವಿಯಾಗಿ, ನಾಡಿನ ಪ್ರಸಿದ್ಧ ದೈನಿಕ ಸಂಯುಕ್ತ ಕರ್ನಾಟಕದ ಜನಪ್ರಿಯ ಅಂಕಣದ ಮೂಲಕ ನಮ್ಮ ಜಿಲ್ಲೆಯ 41 ಜನಾಂಗಗಳ ಅಧ್ಯಯನ ನಡೆಸಿ ನಾಡಿನ ಜನತೆಗೆ ನೀಡಿದವರು. ಭಟ್ಕಳ ತಾಲೂಕಿನ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷ ಸ್ಥಾನಕ್ಕೆ ಭಾಜನರಾದವರು. ಜಿಲ್ಲೆಯ ಹಾಗೂ ನಾಡಿನ ಅನೇಕ ಸಾಹಿತ್ಯಕ ಸಂಘಟನೆಗಳಲ್ಲಿ ಅವಿಶ್ರಾಂತವಾಗಿ ದುಡಿದವರು.‌ ತಿಮ್ಮ ಎನ್ನುವ ಕಥಾ ಸಂಕಲನ, ಸಾಹಿತಿ ವಿಷ್ಣು ನಾಯ್ಕರ ವ್ಯಕ್ತಿಚಿತ್ರವಿರುವ ವಿಷ್ಣು- 75 ಮುಂತಾದ ಹತ್ತಾರು ಕೃತಿಗಳನ್ನು ಹೊರತಂದು ಕನ್ನಡ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದವರು. ಇಂಥ ಪಿ.ಆರ್. ನಾಯ್ಕರು ನನ್ನಂಥ ಕಿರಿಯನನ್ನೂ ಅತ್ಯಂತ ಪ್ರೀತಿಯಿಂದ ಮಾತನಾಡಿಸುವುದೇ ನನಗೊಂದು ಹೆಮ್ಮೆ.

ಒಬ್ಬ ಶಿಕ್ಷಕನಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ಪಿ.ಆರ್. ನಾಯ್ಕರು ಮಾಡುವ ಕೆಲಸ ಅನನ್ಯವಾದದ್ದು. ಮಕ್ಕಳನ್ನು ಅತಿಯಾಗಿ ಪ್ರೀತಿಸುವ ಅವರು ಕೊರೋನಾ ಸಂದರ್ಭದಲ್ಲೂ ಮನೆಮನೆಗೆ ತೆರಳಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ಪ್ರೇರೇಪಿಸಿದರು. ತೀರಾ ಹಿಂದುಳಿದ ಕಡುಬಡ ಕುಟುಂಬದ ಮನೆಬಾಗಿಲಲ್ಲಿ ಕುಳಿತು ಅತಿಶೃದ್ಧೆಯಿಂದ ಪಾಠ ಬೋಧನೆ ಮಾಡಿದ, ಕಥೆ, ನಾಟಕಾಭಿನಯ ಹೇಳಿಕೊಟ್ಟ ಪಿ.ಆರ್ ನಾಯ್ಕರನ್ನು ಮಕ್ಕಳ ಹಕ್ಕುಗಳ ಆಯೋಗ ಕೂಡಾ ಶ್ಲಾಘಿಸಿದ್ದನ್ನು ನಾವಿಲ್ಲಿ ಜ್ಞಾಪಿಸಿಕೊಳ್ಳಬಹುದು. ಇಲಾಖಾ ಅಧಿಕಾರಿಗಳಿಗೂ ಪಿ.ಆರ್.ನಾಯ್ಕರು ಅಚ್ಚುಮೆಚ್ಚಿನ ಜನ. ಯಾಕೆಂದರೆ ಅವರು ಇಲಾಖೆಯ ಯಾವ ಕೆಲಸವನ್ನೂ ಅತ್ಯಂತ ಶೃದ್ಧೆಯಿಂದ ಹಾಗೂ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ. online ಆಧಾರಿತ ಶಿಕ್ಷಣದಲ್ಲೂ ಅವರು ಹಿಂದೆ ಬಿದ್ದವರಲ್ಲ.
ಅನೇಕ ವೇಳೆ ನಾನು ಗಮನಿಸಿದ ಹಾಗೆ ಕೆಲವರಿಗೆ ನಮ್ಮ ಪರಿಚಯವೂ ಇರುತ್ತದೆ. ಸಾಧನೆಯೂ ಗೊತ್ತಿರುತ್ತದೆ. ಆದರೆ ಅವರು ಅದನ್ನು ಮುಚ್ಚಿಡುತ್ತಾರೆ. ಮತ್ತು ತೆರೆದ ಹೃದಯದಿಂದ ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಆದರೆ ಪಿ.ಆರ್ ನಾಯ್ಕರು ನನ್ನ ಜೀವನದಲ್ಲಿ ತೆರೆಮರೆಯ ಮುಖವಾಡ ಧರಿಸದ ಸಜ್ಜನರಾಗಿ ದೊರೆತ ಕೆಲವೇ ಕೆಲವರಲ್ಲಿ ಒಬ್ಬರು. ನಿರ್ಬಿಡೆಯಿಂದ ಅವರು ಗುಣಗಳನ್ನು ನೂರಾರು ಜನರ ಎದುರಿಗೂ ಹೇಳುತ್ತಾರೆ. ಇಂತಹ ಪಾರದರ್ಶಕ ಗುಣವೇ ಅವರಿಗೆ ಸಾಹಿತ್ಯಿಕ ವಲಯದಲ್ಲೂ ಶಿಕ್ಷಣ ಕ್ಷೇತ್ರದಲ್ಲೂ ಸಾವಿರಾರು ಸ್ನೇಹಿತರನ್ನು, ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ.

ಸ್ನೇಹಿತ ಸುರೇಶರ ಮನೆಗೆ ಹೋದಾಗ ನಮಗಾಗಿ ಕಾದು ನಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಆತಿಥ್ಯ ಮಾಡಿದ ಪಿ ಆರ್ ಸರ್ ಸರಳ ಸ್ವಭಾವದ ಸೌಮ್ಯವ್ಯಕ್ತಿ. ಅವರ ಅಂತಃಕರಣ ಶುದ್ಧವಾದದ್ದು ಮತ್ತು ಭಾವನಾಜೀವಿ ಅವರು. ಅವರ ಮನೆಯಲ್ಲೊಂದು ಓದುವ ಮನೆ ಸಿದ್ಧವಾಗಬೇಕೆಂಬ ಅಪೇಕ್ಷೆ ನನ್ನದು. ಯಾಕೆಂದರೆ ಹೊಳೆಗದ್ದೆ ಕಂಡ ಅಪರೂಪದ ಸಾಹಿತ್ಯ ರತ್ನ ಅವರು.
ನನ್ನ ಸಾಹಿತ್ಯಿಕ ಚಟುವಟಿಕೆಗಳನ್ನು ಅತ್ಯಂತ ಆದರದಿಂದ ಕಾಣುವ ಸರ್ ನಮ್ಮ ಮನೆಯಂಗಳದಲ್ಲಿ ಕುಳಿತು ನನ್ನ ಗಾನ, ದಾನ, ಯಾನ ಕಾರ್ಯವನ್ನು ಚಂದಗಾಣಿಸಿಕೊಟ್ಟಿದ್ದನ್ನು ನಾನು ಮರೆತಿಲ್ಲ. ಒಮ್ಮೆಯಂತೂ ನಾನು ಪುಸ್ತಕದ ಓದುಗ ಎಂದು ತಿಳಿದದ್ದೇ ಹತ್ತಾರು ಪುಸ್ತಕಗಳನ್ನು ನನ್ನ ಕೈಗೆ ತಂದು ಹಿಡಿಸಿ ನಿಮ್ಮ ಅಧ್ಯಯನಕ್ಕೆ ನನ್ನದೊಂದು ಕಿರುಕಾಣಿಕೆ ಇದು ಎಂದು ನನ್ನ ಬೆನ್ನು ತಟ್ಟಿದರು. ಕೊಟ್ಟ ಹಣ ಖರ್ಚಾಗಿ ಹೋಗುತ್ತದೆ. ಆದರೆ ಅವರು ಕೊಟ್ಟ ಪುಸ್ತಕಗಳು ನನ್ನ ಬಳಿ ಈಗಲೂ ಇವೆ.

ನಾನು ಗೆಲುವು ಕಂಡಾಗಷ್ಟೇ ಜೈ ಎನ್ನುವುದಿಲ್ಲ ಅವರು……ನಾನು ಸೋತಾಗಲೂ ನನ್ನನ್ನು ಗೆಲ್ಲಿಸುವುದಕ್ಕೆ ತನ್ನಿಂದಾಗಲಿಲ್ಲವಲ್ಲ ಎಂದು ಅವರು ಕೊರಗುತ್ತಾರೆ. ಮಮತೆ ತುಂಬಿದ ಅವರ sorry ಎನ್ನುವ ಒಂದು ಮೆಸೇಜ್ ಅವರ ಸಂಪೂರ್ಣ ಕಾಳಜಿಯನ್ನು ಅರ್ಥಮಾಡಿಸುತ್ತದೆ.

ಪಿ.ಆರ್.ನಾಯ್ಕರು ಗುರುಗಳೇ ಎಂದೇ ಮಾತನಾಡಿಸುವ ಸ್ವಭಾವ ಉಳ್ಳವರು. ಬಹುತೇಕ ಯಾರ ಹೆಸರನ್ನೂ ಅವರು ಸಂಭೋದಿಸುವುದಿಲ್ಲ. ತಾನಿನ್ನೂ ಕಲಿಯುವುದಿದೆ ಎಂಬ ಸೌಜನ್ಯವೇ ಅವರನ್ನು ಇಷ್ಟು ಎತ್ತರದ ಸ್ಥಾನ ತಲುಪುವಂತೆ ಮಾಡಿದೆ. ತಾಯಿ ನಾಗಮ್ಮ, ಮಡದಿ, ಪ್ರತಿಭಾಶಾಲಿ ಮಕ್ಕಳು, ಹೊಳೆಗದ್ದೆಯ ಮನೆ, ಹಳಸದ ಮನಸ್ಸು ಮತ್ತೇನು ಬೇಕು ಅವರ ಸಿರಿವಂತಿಕೆಗೆ?!
‌‌‌‌‌‌ ಪಿ.ಆರ್.ನಾಯ್ಕರನ್ನು ಹಲವಾರು ಪ್ರಶಸ್ತಿಗಳು ಗೌರವ ಸನ್ಮಾನಗಳು ಅರಸಿ ಬರಬೇಕು. ಅವರ ಸಂಭ್ರಮಾಚರಣೆಯಲ್ಲಿ ನಾನೂ ಕೊನೆಯಲ್ಲಿ ಕುಳಿತು ಕಣ್ತುಂಬಿಕೊಳ್ಳಬೇಕು. ಅಂಥ ಕ್ಷಣಗಳಿಗಾಗಿ ಕಾಯುವೆ. ನಿರಾಡಂಬರ ಸೇವೆ ಗೈಯುವ, ಸೃಜನಶೀಲ ಸ್ನೇಹಮಯಿ ಪಿ.ಆರ್ ನಾಯ್ಕರಿಗೆ ಜಯವಾಗಲಿ. ಜಯವಾಗುತ್ತಲೇ ಇರಲಿ.

ಸದ್ಗುರು ಶ್ರೀಧರರ ಆಶೀರ್ವಾದ ಪಿ.ಆರ್. ನಾಯ್ಕರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟ ದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಸಂದೀಪ ಎಸ್.‌ ಭಟ್ಟ

ಲೇಖಕರ ಪರಿಚಯ: ಲೇಖಕರು ಮೂಲತಹ ಹೊನ್ನಾವರ ತಾಲೂಕಿನ ಹೊಸಾಕುಳಿಯವರು. ವೃತ್ತಿಯಿಂದ ಸೀಕ್ಷಕರಾಗಿರುವ ಇವರು ಪೃವೃತ್ತಿಯಲಗಲಿ ಒಬ್ಬ ಪ್ರಬೂದ್ದ ಬರಹಗಾರರು. ಈಗಾಗಲೇ ೨೨ ಕೃತಿಗಳನ್ನು ನೀಡಿರುವ ಇವರು ತಮ್ಮ ಚಿಂತನಶೀಲ ಬರಹಗಳ ಮೂಲಕ ಬೆಳೆಯುತ್ತಿರುವವರು. ಒಬ್ಬ ಆಕರ್ಷಕ ನಿರೂಪಕರಾಗಿ, ಆದರ್ಶ ಗುರುವಾಗಿ, ಕ್ರೀಡಾಪಟುವಾಗಿ ಬಹುಮುಖಿ ವಯಕ್ತಿತ್ವ ಹೊಂದಿದವರು. ಹಲವು ಪ್ರಶಸ್ತಿಗಳ ಗೌರವಕ್ಕೂ ಭಾಜನರಾದವರು.

About ಬಿ.ಎನ್‌. ವಾಸರೆ 580 Articles
ಬಿ.ಎನ್‌. ವಾಸರೆ (ಮೊ-9480043450)

1 Comment

  1. ಕ್ರಿಯಾಶೀಲ ಶಿಕ್ಷಕರನ್ನು ತುಂಬು ಪ್ರೀತಿಯಿಂದ ಪರೋಕ್ಷವಾಗಿ ಅವರ ಕಾರ್ಯ ವೈಖರಿಯನ್ನು ಗುರುತಿಸಿ ಬರೆಯುವುದು ಸಾಮಾನ್ಯವಲ್ಲ.ನೀವು ಪಿ.ಆರ್.ನಾಯ್ಕ ಕುರಿತು ಬರೆದುದು ಹೆಮ್ಮೆಯೆನಿಸಿತು.ಇಡೀ ಶಿಕ್ಷಕ ಸಮುದಾಯಕ್ಕೆ ಗೌರವ…..ಅಭಿನಂದನೆಗಳು..

Leave a Reply

Your email address will not be published.


*