ಬೆಂಗಳೂರು ವಾಹನದಲ್ಲಿ ಅಕ್ರಮ ಗೋವಾ ಸರಾಯಿ : ರಾಜಕೀಯ ಪ್ರಬಾವಕ್ಕೆ ಮಣಿದು ಚಾಲಕನನ್ನು ಬದಲಾಯಿಸಿ ಆರೋಪಿಗಳಿಗೆ ಸಹಕರಿಸಿದ ಅಬಕಾರಿ ಅಧಿಕಾರಿ…!

ಅನಮೋಡ: ಗೋವಾದಿಂದ ಅಕ್ರಮ ಮದ್ಯ ತುಂಬಿಕೊಂಡು ಕರ್ನಾಟಕದೆಡೆಗೆ ಬರುತ್ತಿದ್ದ ಬೆಂಗಳೂರಿನ ವಾಹನ ವಶಪಡಿಸಿಕೊಂಡ ಅನಮೋಡ ತನಿಖಾ ಠಾಣೆಯ ಅಬಕಾರಿ ಅಧಿಕಾರಿಗಳು, ಬೆಂಗಳೂರು ಸಾಹುಕಾರನಿಗೆ ಸಹಕರಿಸಲೋಸುಗ ಅಸಲಿ ಆರೋಪಿಗಳನ್ನು ಬಿಟ್ಟು, ವಾಹನ ಚಾಲಕನನ್ನೇ ಬದಲಾಯಿಸಿ ಪ್ರಕರಣ ದಾಖಲಿಸಿರುವ ಗೋಲಮಾಲ್ ಘಟನೆ ಬೆಳಕಿಗೆ ಬಂದಿದೆ.

ಸೋಮವಾರ ಈ ಘಟನೆ ನಡೆದಿದೆ. ಬೆಂಗಳೂರಿನ ನಾಲ್ವರಿದ್ದ ಇನೋವಾ ವಾಹನ (ಕೆ.ಎ. ೦೫-ಎಮ್. ಝೆಡ್ ೧೧೨೫) ಅಕ್ರಮ ಗೋವಾ ಸರಾಯಿ ಇಟ್ಟುಕೊಂಡು ಗೋವಾದಿಂದ ಮರಳಿದ್ದರೆನ್ನಲಾಗಿದೆ. ಈ ವಾಹನವನ್ನು ಅನಮೋಡ್ ಅಬಕಾರಿ ತನಿಖಾ ಠಾಣೆಯಲ್ಲಿ ತಡೆದಾಗ ಅಲ್ಲಿ ಅಕ್ರಮ ಮದ್ಯ ಇರುವುದು ಪತ್ತೆಯಾಗಿದೆ. ವಾಹನದಲ್ಲಿದ್ದವರು ರಾಜಕೀಯವಾಗಿ ಪ್ರಭಾವಿಗಳಾಗಿದ್ದರಿಂದ ಅವರು ತಕ್ಷಣ ತಮ್ಮ ಬೆಂಗಳೂರಿನ ರಾಜಕೀಯ ಮುಖಂಡರಿಗೆ ಪೋನಾಯಿಸಿ ವಿಷಯ ತಿಳಿಸಿದ್ದಾರೆ. ಈಪ್ರಕರಣಕ್ಕೆ ಆಡಳಿತ ಹಾಗೂ ವಿರೊಧ ಪಕ್ಷದ ರಾಜಕೀಯ ಮುಖಂಡರೀರ್ವರ ಆಪ್ತ ಸಹಾಯಕರು ಸಹಕರಿಸಿ ಅಬಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಪ್ರಕರಣ ದಾಖಲಿಸದೇ ಬಿಡುವಂತೆ ಒತ್ತಡ ತಂದಿದ್ದಾರೆ. ಆದರೆ ಈ ಒತ್ತಡವನ್ನು ಧಾರವಾಡದ ಅಬಕಾರಿ ಆಯಕ್ತರು ಒಪ್ಪದೇ ಪ್ರಕರಣ ದಾಖಲಿಸುವಂತೆ ತಮ್ಮ ಅಧಿನ ಆಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಆದರೆ ಈ ರಾಜಕೀಯ ಪ್ರಭಾವಿಗಳು ಅಬಕಾರಿ ಉಪ ನಿರೀಕ್ಷಕಿ ರೇಷ್ಮಾ ಬಾನಾವಳಿಕರವರಿಗೆ ಪೋನಾಯಿಸಿ ಒತ್ತಡ ತಂದಿದ್ದರಲ್ಲದೇ, ಪ್ರಕರಣಕ್ಕೆ ಸಂಬAದಿಸಿ ಸಹಕರಿಸದೇ ಇದ್ದರೆ ಬೇರೆಡೆ ವರ್ಗಾಯಿಸುವ ಧಮಕಿಯನ್ನೂ ಹಾಕಿದ್ದಾರೆಂಬ ಮಾಹಿತಿಯಿದೆ. ಹೆದರಿದ ಅಬಕಾರಿ ಉಪ ನಿರೀಕ್ಷಕಿ ಆರೋಪಿಗಳಿಗೆ ಸಹಕರಿಸಲು ಒಪ್ಪಿದ್ದಾರೆ.

ಬೆಂಗಳೂರಿನ ಪ್ರಭಾವಿಗಳ ನಿರ್ದೇಶನದಂತೆ ವಾಹನದ ಮೇಲಿರುವ ಜನರ ಮೇಲೆ ಪ್ರಕರಣ ದಾಖಲಿಸದೇ ಬಿಡಲಾಗಿದೆ. ಜೊತೆಗೆ ಚಾಲಕನನ್ನು ಬದಲಾಯಿಸಿ ದಾಂಡೇಲಿಯ ವ್ಯಕ್ತಿಯೊಬ್ಬರ ಸಹಾಯ ಪಡೆದ ಅಬಕಾರಿ ಅಧಿಕಾರಿಗಳು ದಾಂಡೇಲಿಯ ಚಾಲಕನೋರ್ವನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಚಾಲಕನಿಗೆ ಹೀಗೆ ಒಪ್ಪಿಕೊಳ್ಳಲು ಹಾಗೂ ಪ್ರಕರಣದ ಆರೋಪಿಯಾಗಲು ಆಮಿಷ ಒಡ್ಡಲಾಗಿದೆ ಎಂಬ ಮಾಹಿತಿಯಿದೆ.

ಅಕ್ರಮ ಮದ್ಯ ಸಾಗಾಟ ಮಾಡಲಾಗುತ್ತಿದ್ದ ಇನೋವಾ ಕಾರ್‌

ನಂತರ ಈ ಪ್ರಕರಣ ನ್ಯಾಯಾಲಯದ ಮುಂದೆ ಬಂದಿದೆ. ಆನ್‌ಲೈನ್‌ನಲ್ಲಿ ಪ್ರಕರಣದ ದಾಖಲೆ ಪರಿಶೀಲಿಸಿದ ನ್ಯಾಯಾದೀಶರು ಆರೋಪಿಗೆ ಜಾಮೀನನ್ನೂ ನೀಡಿದ್ದಾರೆ. ಆದರೆ ನ್ಯಾಯಾಲಯದೊಳಗಿರುವ ನ್ಯಾಯವಾದಿಗಳಿಗೆ ಈ ಸಂಗತಿ ಅನುಮಾನ ಹುಟ್ಟಿಸಿದೆ. ಬೆಂಗಳೂರಿನ ವಾಹನಕ್ಕೆ ದಾಂಡೇಲಿಯಲ್ಲಿ (ಪರಿಚಯವಿರುವ) ಈ ಚಾಲಕ ಹೇಗೆ ಆರೋಪಿಯಾಗಲು ಸಾದ್ಯ ಎಂದು ತಮ್ಮೊಳಗೇ ಗುಸುಗುಸು ಆಡಿಕೊಂಡಿದ್ದಾರೆ. ಇದರಲ್ಲಿ ಗೋಲ್‌ಮಾಲ್ ನಡೆದಿರುವ ಸಂಶಯ ವ್ಯಕ್ತಪಡಿಸಿ, ಈ ವಿಚಾರವನ್ನು ನ್ಯಾಯಾದೀಶರ ಗಮನಕ್ಕೂ ತಂದಿದ್ದಾರೆನ್ನಲಾಗಿದೆ.

ನಂತರ ಅಬಕಾರಿ ಕಾಯಾಲಯಕ್ಕೇ ಬೇಟಿ ನೀಡಿದ್ದ ವಕೀಲರ ತಂಡ ಈ ಬಗ್ಗೆ ಅಧಿಕಾರಿಗಳ ಕಾರ್ಯ ವೈಖರಿಯನ್ನು ಆಕ್ಷೇಪಿಸಿದ್ದಾರೆಂಬ ಮಾಹಿತಿಯಿದೆ. ಇಷ್ಟೇ ಅಲ್ಲದೇ ಅಬಕಾರಿ ಅಧಿಕಾರಿಗಳು ಮೊದಲು ಓರ್ವ ಚಾಲಕನೋರ್ವನಲ್ಲಿ ಮೋಬೈಲನಲ್ಲಿ ಸಂಭಾಷಣೆ ನಡೆಸಿದ ಹಾಗೂ ಆರೋಪಿಯಾಗಲು ಒತ್ತಡ ತಂದ ವೈಸ್ ರೆಕಾರ್ಡ (ಧ್ವನಿಮುದ್ರಿಕೆ) ಲಭ್ಯವಾಗಿದ್ದು, ಈ ಆಡಿಯೋ ರೆಕಾರ್ಡ ಹಾಗೂ ಈಗ ಬಂದನಕ್ಕೊಳಗಾಗಿರುವ ದಾಂಡೇಲಿಯ ಚಾಲಕ ಮೊಬೈಲ್ ಟಾವರ್ ಮಾಹಿತಿ ತನಿಖೆಯಾದರೆ ಈ ಪ್ರಕರಣ ಗಂಭಿರತೆಯನ್ನು ಪಡೆದುಕೊಳ್ಳುವ ಸಾದ್ಯತೆಯಿದೆ ಎನ್ನಲಾಗಿದೆ. ಚಾಲಕನನ್ನು ಬದಲಾಯಿಸಿ ಪ್ರಕರಣ ದಾಖಲಿಸಲು ಬೆಂಗಳುರು ಸಾಹುಕಾರರು ಅಬಕಾರಿ ಅಧಿಕಾರಿಗಳ ಜೊತೆ ಲಕ್ಷ ಲಕ್ಷದ ಮಾತುಕತೆ ನಡೆಸಿದ್ದಾರೆಂಬ ಆರೋಪವಿದೆ. ಜೊತೆಗೆ ಅಕ್ರಮ ಮದ್ಯ ವಶಪಡಿಸಿಕೊಂಡರೂ ಮಾದ್ಯಮದವರಿಗೆ ಸುದ್ದಿ ನೀಡದೇ ಗಪ್‌ಚುಪ್ ಇರುವುದೂ ಕೂಡಾ ಅಬಕಾರಿ ಅದೀಕಾರಿಗಳ ನಡೆಯ ಬಗ್ಗೆ ಇನ್ನಷ್ಟು ಸಂಶಯ ಮೂಡುವಂತೆ ಮಾಡಿದೆ.

ಕಾಂಗ್ರೆಸ್- ಭಾ.ಜ.ಪ. ಶಾಸಕರ ಆಪ್ತ ಸಹಾಯಕರಿಂದ ಒತ್ತಡ ?

ಬೆಂಗಳೂರಿನ ವಾಹನ ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸಚಿವ, ಶಾಸಕನ ಸಂಬಂದಿಗಳದೆಂದು ಹೇಳಲಾಗಿದ್ದು ಈತನ ಆಪ್ತ ಸಹಾಯಕ ಅಬಕಾರಿ ಆಯುಕ್ತರಿಗೆ ಕರೆ ಮಾಡಿ ಪ್ರಕರಣ ದಾಖಲಿಸದಿರುವಂತೆ ಸಾಹೇಬರು ಹೇಳಿದ್ದಾರೆಂದು ಒತ್ತಡ ತಂದಿದ್ದಾರೆ. ಆದರೆ ಆಯುಕ್ತರು ಮಾತು ಕೇಳದಿದ್ದಾಗ ಈ ಕಾಂಗ್ರೆಸ್ ಶಾಸಕನ ಆಪ್ತ ಸಹಾಯಕ ಭಾ.ಜ.ಪ. ಸಚಿವನೋರ್ವನ ಆಪ್ತ ಸಹಾಯಕನಿಗೆ ದೂರವಾಣಿ ಕರೆ ಮಾಡಿ ಸಹಕರಿಸುವಂತೆ ಹೇಳಿದ್ದಾರೆ. ಆಗ ಭಾ.ಜ.ಪ. ಸಚಿವನ ಆಪ್ತ ಸಹಾಯಕ ಕೂಡಾ ಆಯುಕ್ತರಿಗೆ ಕರೆ ಮಾಡಿ ಪ್ರಕರಣ ದಾಖಲಿಸದಿರುವಂತೆ ಹೇಳಿದ್ದಾರೆ. ಅವರ ಮಾತನ್ನೂ ಕೇಳದ ಆಯುಕ್ತರು ಪ್ರಕರಣ ದಾಖಲಿಸುವಂತೆ ಅಧಿನ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಅಬಕಾರಿ ಸಚಿವರ ಆಪ್ತ ಸಹಾಯಕರಿಂದಲೂ ಕೂಡಾ ಒತ್ತಡದ ದೂರವಾಣಿ ಕರೆ ಬಂದಿದ್ದು, ಇವೆಲ್ಲ ಅನಮೋಡ ಅಬಕಾರಿ ಉಪ ನಿರೀಕ್ಷಕರಿಗೆ ಧರ್ಮಸಂಕಟವಾಗಿದೆ.
ಒಂದುಕಡೆ ಮೇಲಾಧಿಕಾರಿಗಳಿಂದ ಪ್ರಕರಣ ದಾಖಲಿಸುವಂತೆ ಒತ್ತಡ, ಪ್ರಕರಣ ದಾಖಲಿಸದಂತೆ ಕಾಂಗ್ರೆಸ್-ಭಾ.ಜ.ಪ ರಾಜಕೀಯ ಶಕ್ತಿಗಳ ಒತ್ತಡ ಇದರಿಂದ ಅಬಕಾರಿ ಉಪ ನಿರೀಕ್ಷಕಿ ರೇಷ್ಮಾ ಬಾನಾವಳಿಕರ ಉಭಯಸಂಕಟಕ್ಕೊಳಗಾಗಿದ್ದು, ಕೊನೆಗೂ ರಾಜಕೀಯ ಒತ್ತಡಕ್ಕೆ ಮಣಿದು ಚಾಲಕನನ್ನು ಬದಲಾಯಿಸಿದ, ಮೂಲ ಆರೋಪಿಗಳನ್ನು ರಕ್ಷಿಸಿ ಬಿಟ್ಟು ಕಳುಹಿಸಿದ ಘಟನೆ ಇದೀಗ ಅವರ ಕೊರಳನ್ನೇ ಸುತ್ತಿಕೊಳ್ಳುವ ಸಾದ್ಯತೆಯಿದೆ. ಅಸಲಿ ಘಟನೆ ಹೊರಬೀಳಲಿದೆಎನ್ನುತ್ತಾರೆ ನ್ಯಾಯವಾದಿಯೋರ್ವರು. ಇದರ ಸಮಗ್ರ ತನಿಖೆಯಾಗಬೇಕೆಂಬುದು ಜನಾಗ್ರಹವಾಗಿದೆ.

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

Be the first to comment

Leave a Reply

Your email address will not be published.


*