ನಿಮ್ಮ ಮನೆಗೂ ಬಂದಿರುವನೇ….? ಶಿವಲೀಲಾ ಹುಣಸಗಿಯವರ ಲಹರಿ…

ಅಮ್ಮಾ…ಅಮ್ಮಾ..ಎಂದು ಹಸುಗೂಸೊಂದು ನನ್ನ ಸೀರೆ ಎಳೆಯುತ್ತಿರುವಾಗ ಕರುಳು ಚುರ್ ಆಗಿ ಅಯ್ಯೋ ಪುಟ್ಟಾ ನೋಡಲಿಲ್ಲ ಕಣೋ..ಎಂದು ಕಣ್ಣರಳಿಸಿ ನೋಡಿದರೆ ನನಗೆ ನಂಬಲು‌ ಆಗದಂತ ಅನುಭವ. ಆ ಮುದ್ದು ಬಾಲಕ ಸಾಕ್ಷಾತ್ ಬಾಲ ಗಣೇಶ… ಬಾರೋ ಕಂದಾ ನಿನ್ನ ಆಗಮನವನ್ನು ನಿರೀಕ್ಷಿಸಿದ್ದೆ. ತುಂಬಾ ಬಳಲಿರುವೆ. ಬಾ… ಎಂದು ಎತ್ತುಕೊಂಡು ಅಡಿಗೆ ಮನೆಗೆ ಹೋದರೆ ಅಲ್ಲಿ‌ ಅವನಿಗಿಷ್ಟವಾದ ತಿಂಡಿಗಳು, ಲಡ್ಡು,ಮೋದಕ, ಕಡುಬು ಅರೇ ಇದನ್ನೆಲ್ಲ ನಾನ್ಯಾವಾಗ ಮಾಡಿದೆ ಎಂಬ ಚಿಂತೆ ಕಾಡ ತೊಡಗಿತು.ಇರಲಿ ಬಾಲ ಗಣೇಶ ಹಸಿದಿರುವ ಮೊದಲು ಅವನಿಗೆ ಮೋದಕ ತಿನ್ನಿಸೋಣ ಎಂದು ಕಂಕುಳಲ್ಲಿ ಕುಳಿತ ಬಾಲ ಗಣೇಶನ ಡೈನಿಂಗ್ ಟೇಬಲ್ ಮೇಲೆ ಕುಳ್ಳಿಸಿ ಬೆಳ್ಳಿ ತಟ್ಟೆಯಲ್ಲಿ ಓರಣವಾಗಿ ಜೋಡಿಸಿ ತಂದು ತಿನ್ನು ಮಗಾ ಎಂದು ಮೋದಕವ ಮುದ್ದಾದ ಬಾಯಿಗೆ ನೀಡಿದ್ದೇ ತಡ. ಗಣೇಶ, ಅಮ್ಮಾ ನಿನ್ನ ಕೈ ತುತ್ತು ರುಚಿಯಾಗಿದೆ. ನನ್ನಮ್ಮ ಮಾಡುವುದಕ್ಕಿಂತ ರುಚಿಯಾಗಿದೆ ಅನ್ನುತ್ತ ತಿನ್ನುವ ಗಣೇಶನ ನೋಡುತ್ತಿದ್ದಂತೆ ನನಗರಿವಿಲ್ಲದೆ ಕಣ್ಣಲ್ಲಿ ನೀರು ಜಿನುಗುತ್ತಿತ್ತು.

ಪುಟ್ಟ ಕೈಗಳು ಕಣ್ಣೀರ ಒರೆಸುತ್ತ ಅಮ್ಮಾ ಯ್ಯಾಕೆ ಅಳುವೆ? ನಾನೀಗ ಬಂದಿರುವೆನಲ್ಲ. ನಾನಿಲ್ಲವೆಂದು ಕೊರಗುವುದ ಬಿಡು…. ಅಮ್ಮಾ ಲಡ್ಡು ಕೊಡೆ…ಚಕ್ಕುಲಿ ಕೊಡೆ ಎನ್ನುವಾಗ, ಮಗಾ ನಿನಗಾಗಿಯೇ ಎಲ್ಲ ಕಣೋ, ಆದರೆ ಅತಿಯಾಗಿ ಬೇಡ. ನಿಧಾನವಾಗಿ ತಿನ್ನು. ಅಯ್ಯೋ.. ಅಮ್ಮಾ ನಿನಗೆ ಗೊ ತ್ತಿಲ್ಲ ನಾನು ತಿನ್ನಲಿಲ್ಲ ಅಂದ್ರೆ ನನ್ನ ಮಿತ್ರ ಹಾಗೂ ವಾಹನ ಮೂಷಿಕ ತಿಂದು ಹಾಕುವನು. ಅದಕ್ಕೆ ನನಗೆ ಪ್ರೀಯವಾದ ಲಡ್ಡು, ಚಕ್ಕುಲಿ, ಮೋದಕ, ಕಡುಬು ತಿಂತಿನಿ ಕೊಡಮ್ಮಾ ಎಂದು ಹಟ ಹಿಡಿದ ಬಾಲ ಗಣೇಶನ ನೋಡುವುದೇ ಕಣ್ಣಿ ಗೆ ಹಬ್ಬ. ಬೇಗ ಕೊಡಮ್ಮ ಒಂದೇ ಸಮನೆ ಹಟ ಹಿಡಿದಿದ್ದಕ್ಕೆ ಹೊಟ್ಟೆ ಕೆಡುವುದೆಂಬ ಭಯವಿದ್ದರು ಸ್ವಲ್ಪ ಕೊಡೋಣ ವೆಂದು ಎದ್ದೆ.

ಅಷ್ಟೇ…, ಏನಮ್ಮಾ ಮಕ್ಕಳು ಕೇಳಿದ ತಕ್ಷಣ ಕೊಟ್ಟ ಬಿಡೋದಾ? ನಿನಗಾದರೂ ಮಗುವಿನ ಬಗ್ಗೆ ಕಾಳಜಿ ಬೇಡವಾ? ಅನ್ನುತ್ತ ನಾನೆಂದೂ ನೋಡದ ಸುಂದರ ಯುವತಿ ನನ್ನ ಅನುಮತಿಯಿಲ್ಲದೆ ನನ್ನ ಮನೆಯಳಗೆ ಬಂದು ನನಗೆ ಹೇಳುವುದು ಕೇಳಿ ತಲೆ ಗಿರಕ್ ಆಗಿ ಇನ್ನೆನು ಬೈಯ್ಯ ಬೇಕು ಅನ್ನುವಷ್ಟರಲ್ಲಿ ಬಾಲ ಗಣೇಶ ಗಾಬರಿಯಿಂದ ನನ್ನ ಅಪ್ಪಿ ಕೊಂಡಿದ್ದ. ಮಗು ಹೆದರಿದೆ ಅಂತ ನಿಧಾನವಾಗಿ ಯಾರಮ್ಮ ನೀನು? ಹೀಗೆ ಹೇಳದೆ ಕೇಳದೆ ಮನೆಯೋಳಗೆ ಬರ ಬಾರದು. ಬಂದಿದ್ದು ಅಲ್ಲದೆ ಹೀಗೆ ಮಗು ಹೆದರೋ ತರ ಮಾತಾಡುತ್ತಿಯಲ್ಲ ಅಂದೆ. ಆಕೆ ನಸುನಗುತ್ತ. ನಾನು ನಿಮಗೆ ಪರಿಚಿತಳೇ, ಒಡನಾಡಿ, ನಾವು ನಿನ್ನ ಬಗ್ಗೆ ತಿಳಿದಿದ್ದೆವೆ. ನನ್ನ ಮಗ ಯಾವಾಗಲೂ ನಿನ್ನ ನೆನೆಸುತ್ತಾನೆ. ಅಂದಾಗ ನನಗೆ ಅನುಮಾನ ಮಕ್ಕಳ ಕಳ್ಳಿನಾ ಅಂತ. ಹೀಗೆ ಎಷ್ಟು ಮಕ್ಕಳನ್ನು ಕದ್ದು ಮಾರಿರಬಹುದು? ಆದರೆ ಕಳ್ಳಿತರ ಕಾಣುತ್ತಿಲ್ಲ.ಗ್ಯಾಂಗ್ ದೊಡ್ಡದಿರಬೇಕು? ಯಾವುದಕ್ಕೂ ನಾನು ಬಾಲ ಗಣೇಶ ಹುಷಾರಾಗಿರಬೇಕು.ಅನ್ನುವಾಗಲೇ ಅವಳೇ ಮಾತು ಮುಂದುವರೆಸುತ್ತ. ನೋಡು ತಾಯಿ ಇಲ್ಲಿಯ ವರೆಗೆ ನನ್ನ ಮಗನ ನೋಡಿಕೊಂಡಿದ್ದಕ್ಕೆ ಧನ್ಯವಾದಗಳು. ಈ ತುಂಟನನ್ನು ಹುಡುಕುವುದೇ ಕೆಲಸವಾಗಿದೆ ನನಗೆ. ಅವರಪ್ಪ ಮೊದಲೇ ಮೂಗಿನ ಮೇಲೆ ಸಿಟ್ಟನ್ನು, ಹಣೆಯ ಕಣ್ಣಲ್ಲಿ ಬೆಂಕಿಯನ್ನು ಹೊದ್ದು ಕುತಿರುವ ಪತಿಗೆ ಮಗನನ್ನು ಕಾಣದಿದ್ದರೆ ಅರೆಗಳಿಗೆ ನೆಮ್ಮದಿಯಿಲ್ಲ.ಅವರು ಕರೆಯೋ ಮೊದಲೇ ಊರು ಸೇರಿಕೊಳ್ಳಬೇಕು. ಅನ್ನುವಾಗ ನನಗೆ ಸಮಾಧಾನವಿಲ್ಲ.ಹೇಗೆ ಮಗುವ ಕಳಿಸಲಿ? ಕೊರಳಿಗೆ ಉಂಗುರ ಹಾಕಿದಂತೆ ಬಿಗಿದಪ್ಪಿರುವ ಬಾಲನನ್ನು ಹೇಗೆ ಕಳಿಸಲಿ?

ಆದರೂ ನಂಬಿಕೆ ಬರದೆ..ನೋಡಮ್ಮ ನಿಮ್ಮ ಪರಿಚಯ ವಿಲ್ಲ,ಪರಿಚಯದ ಗುರುತು ತೋರಿಸಿ ಎಂದೆ. ಆ ಯುವತಿ ನಕ್ಕು ನಮಗೆ ಆಧಾರ ಕಾರ್ಡ ಇಲ್ಲ.ಪಾನ್ ಕಾರ್ಡ ಇಲ್ಲ. ಎಂದಳು. ಅಷ್ಟು ಅಂದ ಮೇಲೆ ನಾನು ಬಾಲನನ್ನು ನಿಮ್ಮೊಂದಿಗೆ ಕಳಿಸಲಾರೆ. ನೀವು ಹೋಗಿ ಅಂದೆ. ಬಾಲ ಗಣೇಶ ನಸುನಕ್ಕು ಅಮ್ಮಾ‌….ನಾನು ಹೋಗಲಾರೆ..ಇಲ್ಲೆ ಇರುವೆ ಅನ್ನುವಾಗ ನನಗೂ ಹೌದೆನ್ನಿಸಿ‌ ನೋಡಿ ನೀವು ಪರಿಚಯದ ಚೀಟಿ ಕೊಡುವ ತನಕ ನಂಬಲಾರೆ. ನೀವಿನ್ನು ಹೊರಡಿ ಅಂದೆ. ಯ್ಯಾಕೋ ಆ ಯುವತಿ ಅರೆಮನಸ್ಸಿನಿಂ ದ ಹೋದಂತಾಗಿ ಬಾಲಾ ಚಿಂತೆ ಮಾಡಬೇಡ ನಿನ್ನ ಎಲ್ಲಿಯು ಕಳಿಸಲಾರೆ ಬಂಗಾರಾ ಅನ್ನುತ್ತಾ ಮಡಿಲಲಿ ಕುಳ್ಳಿಸಿಕೊಂಡು ತಲೆ ಸವರುತ್ತಾ ಲಡ್ಡು ತಿನ್ನಿಸುತ್ತಿದ್ದೆ. ನನ್ನ ಮನೆಯೋ ಬಾಲನ ಆಗಮನದಿಂದ ಸಂಭ್ರಮದ ನವಿಲು ಗರಿಬಿಚ್ಚಿ ಕುಣಿಯುತ್ತಿತ್ತು ಎಂದೂ ಕಾಣದ ಸುಖವ ಅನುಭವಿಸುತ್ತಿತ್ತು.

ಏನಮ್ಮಾ ನಮ್ಮ ಮಗುನ ನಮಗೆ ಕೊಡಲು ನಿನಗೆ ಗುರುತಿನ ಚೀಟಿ ಬೇಕಾ? ಎಂದು ಯ್ಯಾರೋ ಗಡಸು ಧ್ವನಿಯಲ್ಲಿ ಕೇಳಿದಾಗ ನಿಜಕ್ಕೂ ನಾನು ತಪ್ಪು ಮಾಡುತ್ತಿದ್ದೆನಾ? ಪಾಪ ಅವರ ಮಗುವನ್ನು ನನ್ನ ಮಗುವೆಂದು ತಿಳಿದೆನೇ? ಅಮ್ಮಾ ಎಂದಾಗ ಕರುಳು ಹಿಂದು ಮುಂದು ನೋಡದೇ ಅಪ್ಪಿರುವುದು ಸತ್ಯ. ನೋಡಿದರೆ ಅಜಾನುಬಾಹು ತಲೆ ಗೂದಲು ಬಾಚಿಲ್ಲ, ಕೈಯಲ್ಲೊಂದು ಕೋಲು, ಛದ್ಮವೇಷ ಧರಿಸಿದಂತೆ ಬಂದು ನಿಂತವನ ಮಗನಾಗಲೂ ಸಾಧ್ಯವಿಲ್ಲ ಎನೋ ಯ್ಯಾರೋ ಪ್ಲ್ಯಾನ್ ಮಾಡುತ್ತಿರಬೇಕು.
ಯಾವುದಕ್ಕೂ ನಂಬಬಾರದೆಂದು ತೀರ್ಮಾನಕ್ಕೆ ಬಂದಿದ್ದೆ. ಬಾಲ ಯಾವುದರ ಪರಿವೆಯಿಲ್ಲದೆ ಮಡಿಲಲ್ಲಿ ಚಕ್ಕುಲಿ ತಿನ್ನುತ್ತಿದ್ದ.

ಆ ವ್ಯಕ್ತಿಯನ್ನು ನೋಡಿಯು ಭಯಪಡದ ಬಾಲ ಪೋರ ನ ಕಂಡು ನನಗೂ ಆಶ್ಚರ್ಯ.ನೋಡಿ ನೀವು ಪೋಲೀಸ್ ಕಂಪ್ಲೆಂಟ್ ಕೊಡಿ.ನಾನು ನಿಮ್ಮೊಂದಿಗೆ ಕಳಿಸಲಾರೆ‌ ವಿಚಿತ್ರ ವೇಷ ನಿಮ್ಮದು.ಹೋಗಿಯೆಂದು ಹೇಳಿದೆ.ನೋಡಮ್ಮ ನಮ್ಮ ಮಗುವನ್ನು ಕಳಿಸಿ ಬಿಡಿ ತುಂಬಾ ಜನ ಕಾಯುತ್ತಿ ದ್ದಾರೆ.ಅಯ್ಯೋ ದೊಡ್ಡ ಗ್ಯಾಂಗ್ ಕಟ್ಟಿಕೊಂಡು ಬಂದಿದ್ದಾ ರೆಂದು ಹೆದರಿ ನೀವು ಹೊರಡಿ ಎಂದು ಗದರಿಸುತ್ತಲೇ ಹೊರಹಾಕಿ ಬಾಗಿಲ ಚಿಲಕ ಹಾಕಿ ಬಂದೆ. ಈಗ ಯ್ಯಾರು ಒಳಗೆ ಬರಲಾರರು ಎಂದು ಧೈರ್ಯ ತಂದುಕೊಂಡು ಗಣೇಶನ ಮುದ್ದ ಡುತ್ತ ಮಡಲಿಲಿ ಮಲಗಿದ ಮುಗ್ದ ಬಾಲನ ಮೈ ಬಡಿಯುತ್ತ ಮಗನಿಲ್ಲದ ನೋವ ನೀಗಿದಂತಾಗಿತ್ತು. ಮನೆಯೋ ನಂದ ಗೋಕುಲವಾದಂತಿತ್ತು…

ಮನೆತುಂಬ ಬಾಲನ ಹೆಜ್ಹೆ ಗುರುತು ಅಚ್ಚಳಿಯದಂತೆ ಕಾಣುತ್ತಿತ್ತು.ದೇವರ ಕೋಣೆಯಲ್ಲಿ ಪ್ರಕಾಶಮಾನವಾದ ಬೆಳಕು ಹೌಹಾರಿದೆ. ಮನೆಯಿಂದ ಹೊರ ಕಳಿಸಿದವರು ಹೊರ ಬಂದಂತಾಗಿ ನನಗೆ ದಿಗಿಲು ಬಾಗಿಲು ಹಾಕಿದಂತಿದೆ ಇವರಿಬ್ಬರೂ ಬಂದರೆಲ್ಲಿಂದ? ಎಲ್ಲಿ ಬಾಲನ ಕರೆದೊಯ್ಯುವರೋ ಎಂದು ಸೆರಗ ಹೊಚ್ಚಿ ಮರೆಮಾಚಿದೆ. ನನ್ನ ಮಗನ ಕಳಿಸೆಂದು ಕೇಳಿದರೂ ನಾನು ಕೊಡಲೊಪ್ಪದಿರುವುದನ್ನು ಕಂಡು ಬಲವಂತದಿಂದ ಎತ್ತಿಕೊಳ್ಳುವುದನ್ನು ತಪ್ಪಿಸಲು ಕೊಸರಾಡುವ ಭರದಲ್ಲಿ ಅಮ್ಮಾ ಎಂಬ ಕೂಗಿಗೆ ಎಚ್ಚರಗೊಂಡು ನೋಡಿದರೆ, ನನ್ನ ಮಗಳು ಮಂಚದಿಂದ ಕಳಗೆ ಬಿದ್ದಿದ್ದನ್ನು ಕಂಡು, ನನ್ನನ್ನು ಒಮ್ಮೆ ಚಿವುಟಿಕೊಂಡು ನೋಡಿದೆ.ಅಂದ್ರೆ ಇಲ್ಲಿಯ ತನಕ ಆಗಿದ್ದು ನನ್ನ ಕನವರಿಕೆ. ದೇವರ ಜಗುಲಿಯಲಿ ನಂದಾದೀಪ ಬೆಳಗುತ್ತಿತ್ತು. ಗೌರಿ ಜಗಲಿಯಲಿ ವಿರಾಜಮಾನವಾಗಿದ್ದಳು. ಬಾಲ ಗಣೇಶ ನಾ ತಿನ್ನಿಸಿದ ಲಡ್ಡು ಕೈಯಲ್ಲಿ ಹಿಡಿದು ಕೂತಂತಿತ್ತು. ವಿಘ್ನೇಶ್ವರನ ತಾಯಿಯಾಗೋ ಭಾಗ್ಯ. ತಾಯ್ತನದ ಸುಖ ಅನುಭವಿಸುವ ಸೌಭಾಗ್ಯ ನೀಡಿದ ಗಳಿಗೆ ಕನಸಾದರೂ ನೈಜವಾದಂತೆ ಭಾಸವಾಗಿದ್ದು ನನ್ನ ಅದೃಷ್ಟವೇ ಮನಸ್ಸಿಂದ ಬಯಸೋ ಮಮತೆಗೆ ಒಲಿಯದ ಭಾವವಿಲ್ಲ. ದೇವರೆಂಬುವವನು ತಾಯೋಡಲ ಶಿಶುವೇ ತಾನೆ…… ಬೊಲೊ ಗಜಾನನ ಮಹಾರಾಜ ಕೀ ಜೈ, ಗಣಪತಿ ಬಪ್ಪಾ ಮೊರಯಾ… ಪುಂಡಿಪಲ್ಯಾ ಸೋರಯಾ‌ ಎಂಬುದು ಮಾರ್ದನಿಸುತ್ತಿತ್ತು….

-ಶಿವಲೀಲಾ ಹುಣಸಗಿ, ಯಲ್ಲಾಪುರ

About ಬಿ.ಎನ್‌. ವಾಸರೆ 583 Articles
ಬಿ.ಎನ್‌. ವಾಸರೆ (ಮೊ-9480043450)

8 Comments

  1. ಉತ್ತಮವಾದ ಕನಸಿನ ಗಣಪನ ಕಥೆ 💐💐

  2. ನಿಮ್ಮ ಮನೆಗೆ ಬಂದಿರುವನೆ ಲಹರಿ ಮನಸ್ಸಿಗೆ ಖುಷಿ ಕೊಡುತ್ತೆ ಆ ಶಬ್ಧ ಜೋಡಣೆ,ಹಾಗೂ ನಿರೂಪಣೆಯ ಶೈಲಿ ಓದುಗನಿಗೆ ಓದಬೇಕೆನಿಸುವಷ್ಟು ಆಪ್ತವೆನಿಸುತ್ತದೆ.ನೋಡಿದ್ದು ಕನಸಾದರೂ,ಅನುಭಸಿದ ಸನ್ನಿವೇಶ ಕೋಟಿ ಕೊಟ್ಟರೂ ಸಿಗದು ಏನೇ ಆಗಲಿ ಶ್ರೀಕೃಷ್ಣನ ಬಾಲ್ಯ ನೆನಪಾಯ್ತು ಅಭಿನಂದನೆಗಳು

    • ಬಾಲ ಗಣಪನ ಕತೆಯ ನಿರೂಪಣೆ ಚೆನ್ನಾಗಿ ಮೂಡಿಬಂದಿದೆ

Leave a Reply

Your email address will not be published.


*